Site icon Vistara News

Astro tourism: ರಾಜಸ್ಥಾನಕ್ಕೆ ಪ್ರವಾಸ ಮಾಡಿ: ರಾತ್ರಿಗಳಲ್ಲಿ ನಕ್ಷತ್ರ ಪುಂಜ ಕಣ್ತುಂಬಿಕೊಳ್ಳಿ!

astro tourism

ಪ್ರವಾಸದಲ್ಲಿ ಆಸಕ್ತಿಯಿರುವ ಯಾರಿಗೇ ಆದರೂ ಬೆಳದಿಂಗಳ ರಾತ್ರಿಯ ಪಯಣ ಇಷ್ಟವಾಗದೆ ಇರದು. ಬೆಳದಿಂಗಳೆಂದರೆ ಹಾಗೆಯೇ. ರಾತ್ರಿಗಳನ್ನು ಇನ್ನಷ್ಟು ಚೆಂದವಾಗಿಸುವ, ಬದುಕನ್ನು ರಮ್ಯವಾಗಿಸುವ ಗುಣ ಬೆಳದಿಂಗಳಿಗಿದೆ. ಭಾವುಕ ಮಂದಿಗೆ ಈ ಬೆಳದಿಂಗಳ ರಾತ್ರಿಗಿಂತ ಚಂದದ ಸುಖ ಇನ್ನೊಂದಿರಲಿಕ್ಕಿಲ್ಲ. ಹಾಗಾಗಿ, ಈ ಬೆಳದಿಂಗಳ ರಾತ್ರಿಯಲ್ಲೇ ನೋಡಬಹುದಾದ ಪ್ರವಾಸೀ ತಾಣಗಳೇ ಒಂದಿಷ್ಟಿವೆ. ಇವು ಹಗಲಿನಲ್ಲಿ ಕಂಡದ್ದಕ್ಕಿಂದ ದುಪ್ಪಟ್ಟು ಸೌಂದರ್ಯವನ್ನು ರಾತ್ರಿಗಳಲ್ಲಿ ತೋರಿಸುತ್ತವೆ. ಇನ್ನು ಹುಣ್ಣಿಮೆಯ ಚಂದ್ರ ಆಗಸದಲ್ಲಿದ್ದರೆ ಕೇಳಬೇಕೇ? ಇವುಗಳ ಸೌಂದರ್ಯಕ್ಕೆ ಕಳಶಪ್ರಾಯವೆಂಬಂತೆ ಚಂದ್ರನೂ ಆಗಸದಲ್ಲಿ ನಳನಳಿಸುತ್ತಾನೆ.

ರಾಜಸ್ಥಾನದ ಕೋಟೆ ಕೊತ್ತಲಗಳನ್ನು ಚಳಿಗಾಲದ ಬೆಳದಿಂಗಳಲ್ಲಿಯೇ ನೋಡಬೇಕು. ಜೈಪುರ, ಜೋಧ್‌ಪುರ, ಕುಂಬಲ್‌ಘಡ್‌, ಉದಯಪುರ, ಜೈಸಲ್ಮೇರ್‌ ಹೀಗೆ ಸಾಲು ಸಾಲು ರಾಜಸ್ಥಾನದ ಊರುಗಳಲ್ಲಿರುವ ಅರಮನೆಗಳು, ಕೋಟೆ ಕೊತ್ತಲಗಳು, ಹವೇಲಿಗಳು ಎಲ್ಲವೂ ಚಂದ್ರನ ಬೆಳದಿಂಗಳಲ್ಲಿ ಹೊಳೆಯುವುದನ್ನು ನೋಡುವುದೇ ಚಂದ. ರಾಜಸ್ಥಾನದ ಬಣ್ಣಗಳೂ ರಾತ್ರಿಯಲ್ಲಿ ಹೇಳುವ ಕಥೆಗಳೇ ಬೇರೆ. ಜೊತೆಗೆ, ಹೇಳಿ ಕೇಳಿ, ಅಕ್ಟೋಬರ್‌ ದಾಟುತ್ತಿದ್ದಂತೆಯೇ ಹಗಲಿನ ಸಮಯ ಕಡಿಮೆಯಾಗಿ ರಾತ್ರಿಗಳು ದೀರ್ಘವಾಗತೊಡಗುತ್ತವೆ. ರಾಜಸ್ಥಾನದಂತಹ ಮರಳುಗಾಡಿನಲ್ಲಿ ಅಕ್ಟೋಬರ್‌ ದಾಟಿದ ನಂತರ ಬಿಸಿಲಿನಬ್ಬರವೂ ಕಡಿಮೆಯಾಗಿ ತಣ್ಣನೆ ಹಿತವಾದ ಗಾಳಿ ಬೀಸಲಾರಂಭಿಸುತ್ತದೆ. ರಾತ್ರಿಗಳಲ್ಲಿ ಚಳಿ ಆರಂಭವಾಗುತ್ತದೆ. ರಾಜಸ್ಥಾನವನ್ನು ಸುತ್ತಬೇಕೆಂದಿದ್ದರೆ ಚಳಿಗಾಲಕ್ಕಿಂತ ಚಂದದ ಸಮಯ ಬೇರೆ ಇಲ್ಲ. ಅದರಲ್ಲೂ, ಹುಣ್ಣಿಮೆಯ ರಾತ್ರಿಯೂ ಸಿಕ್ಕಿಬಿಟ್ಟರೆ ಈ ಮರುಭೂಮಿಯ ಸುಖ ಯಾರಿಗುಂಟು ಯಾರಿಗಿಲ್ಲ!

ಇಂತಹ ಪ್ರವಾಸ ಪ್ರಿಯರಿಗೀಗ ಇನ್ನೊಂದು ಸಿಹಿ ಸುದ್ದಿಯೂ ಇದೆ. ನಿಮಗೆ ಆಕಾಶದಲ್ಲಿ ತಾರೆಗಳನ್ನು ನೋಡುವುದು ಪ್ರಿಯವಾದ ಕೆಲಸವಾಗಿದ್ದರೆ, ಖಗೋಳವಿಜ್ಞಾನದಲ್ಲಿ ಆಸಕ್ತಿ ಇದ್ದರೆ, ಅಂಥವರ ಪ್ರವಾಸ ಈ ಬಾರಿ ಇನ್ನೂ ಮಧುರವಾಗಲಿದೆ. ಯಾಕೆಂದರೆ, ರಾಜಸ್ಥಾನ ಸರ್ಕಾರ ಪ್ರವಾಸೋದ್ಯಮವನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದೆ.  ಅಲ್ಲಿನ ಕೋಟೆ ಕೊತ್ತಲಗಳಲ್ಲಿ ಆಕಾಶಕಾಯಗಳನ್ನು ಪ್ರವಾಸಿಗರು ವೀಕ್ಷಿಸಲು ಇದೀಗ ದೂರದರ್ಶಕಗಳನ್ನು ಇರಿಸಿದೆ. ಖಗೋಳ ಪ್ರವಾಸೋದ್ಯಮವನ್ನೂ ತನ್ನ ಪಟ್ಟಿಯಲ್ಲೀಗ ಸರ್ಕಾರ ಸೇರಿಸಿಕೊಂಡಿದ್ದು, ಕೆಲವೊಂದು ಆಯ್ದ ಜಾಗಗಳಲ್ಲಿ ಪ್ರವಾಸಿಗರಿಗೆಂದೇ ದೂರದರ್ಶಕಗಳ ಸೌಲಭ್ಯ ಕಲ್ಪಿಸಿದೆ.

ಇದನ್ನೂ ಓದಿ: Solo travel | ಮಹಿಳೆಯರೇ, ಈ ಸ್ಥಳಗಳು ನಿಮ್ಮ ಸೋಲೋ ಪ್ರವಾಸಕ್ಕೆ ಸುರಕ್ಷಿತ!

ಈವರೆಗೆ ರಾಜ್ಯ ಸರ್ಕಾರ ೩೩ ಜಿಲ್ಲೆಗಳಲ್ಲಿ ತನ್ನ ಕ್ಯಾಂಪ್‌ ಸಿದ್ಧಗೊಳಿಸಿದ್ದು, ಇದರಲ್ಲಿ ನಾಲ್ಕು ದೂರದರ್ಶಕಗಳು ಪಿಂಕ್‌ ಸಿಟಿ ಜೈಪುರದಲ್ಲಿಯೇ ಇದೆ. ಆಮೇರ್‌ ಕೋಟೆ, ಜಂಥರ್‌ ಮಂಥರ್‌, ಮಹಾರಾಜ ವಿಶ್ವವಿದ್ಯಾನಿಲಯ ಹಾಗೂ ಜವಹರ ಕಲಾ ಕೇಂದ್ರ ಹೀಗೆ ನಾಲ್ಕು ಕೇಂದ್ರಗಳಲ್ಲಿ ಈಗ ದೂರದರ್ಶಕಗಳನ್ನು ಇಡಲಾಗಿದೆ. ಉಳಿದಂತೆ ಇತರ ಊರುಗಳಲ್ಲೂ ಸೇರಿ ಸರ್ಕಾರ ಒಟ್ಟಾರೆ ೩೮ ದೂರದರ್ಶಕಗಳನ್ನು ರಾಜ್ಯದೆಲ್ಲೆಡೆ, ಪ್ರವಾಸೀ ಸ್ಥಳಗಳಲ್ಲಿರುವ ತನ್ನ ಕ್ಯಾಂಪ್‌ಗಳಲ್ಲಿ ಇಡುವ ಯೋಜನೆ ರೂಪಿಸಿಕೊಂಡಿದ್ದು, ಶೀಘ್ರದಲ್ಲೇ, ಆಕಾಶಕಾಯಗಳ ವೀಕ್ಷಣೆ ಸಂಬಂಧ ತರಬೇತಿ ಶಿಬಿರಗಳು, ಖಗೋಳ ಛಾಯಾಗ್ರಹಣ ತರಬೇತಿಗಳು ಹಾಗೂ ಆಕಾಶ ವೀಕ್ಷಣೆಯ ರಾತ್ರಿ ಶಿಬಿರಗಳನ್ನು ಯೋಜಿಸಲು ಉದ್ದೇಶಿಸಲಾಗಿದೆ.

#image_title

ಹೀಗಾಗಿ ಈಗ ಥಾರ್‌ ಮರುಭೂಮಿಯಲ್ಲಿ ಎಲ್ಲೇ ತಿರುಗಾಡಿದರೂ ರಾಜ್ಯಾದ್ಯಂತ ಪ್ರವಾಸಿಗರು ಆಸಕ್ತಿಯಿದ್ದರೆ ರಾತ್ರಿಗಳಲ್ಲಿ ಇಂಥದ್ದೊಂದು ಅಪರೂಪದ ಅನುಭವ ಪಡೆಯಬಹುದು. ಕೇವಲ ರಾಜಸ್ಥಾನ ಮಾತ್ರವಲ್ಲ, ದೆಹಲಿಯ ಬಿಕಾನೇರ್‌ ಹೌಸ್‌ನಲ್ಲೂ ಇಂಥದ್ದೊಂದು ವ್ಯವಸ್ಥೆ ಮಾಡಲಾಗಿದೆ. ಜೈಸಲ್ಮೇರ್‌, ಮೌಂಟ್‌ ಅಬು, ಬಾಡ್‌ಮೇರ್‌, ಸರಿಸ್ಕಾ ಮತ್ತಿತರ ಯಾವುದೇ ಜಾಗಕ್ಕೆ ಹೋದರೂ, ಅದರಲ್ಲೂ, ಈ ಚಳಿಗಾಲದಲ್ಲಿ ಹೋದರೆ ಇಂಥದ್ದೊಂದು ಅಪೂರ್ವ ಅವಕಾಶವನ್ನು ಮಿಸ್‌ ಮಾಡಬೇಡಿ. ಯಾವ ಮಾಲಿನ್ಯವೂ ಇಲ್ಲದ, ನೀಲಾಕಾಶದಲ್ಲಿ ಝಗಮಗಿಸುವ ನಕ್ಷತ್ರ ಪುಂಜಗಳು, ಗ್ರಹಗಳ ಅದ್ಭುತ ಲೋಕವನ್ನೇ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸದಲ್ಲಿ ಸಿಕ್ಕರೆ, ಅದರಷ್ಟು ಚಂದದ ಅನುಭವ ಇನ್ನೊಂದಿದ್ದೀತೇ ಹೇಳಿ!

ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!

Exit mobile version