Site icon Vistara News

Solo Travel: ಮೊದಲ ಬಾರಿಗೆ ಸೋಲೋ ಹೊರಟರೆ ಇವು ಭಾರತದ ಟಾಪ್‌ 5 ಸುರಕ್ಷಿತ ಪ್ರವಾಸಿ ತಾಣಗಳು!

solo travel

ಒಬ್ಬರೇ ಎದ್ದುಕೊಂಡು ಪ್ರವಾಸ (Solo travel) ಹೋಗುವುದರಲ್ಲಿ ಮಜಾ ಏನಿದೆ ಎಂದು ಕೆಲವರು ಕೇಳಬಹುದು. ಪ್ರವಾಸ ಎಂದರೆ ಖುಷಿ, ಎಲ್ಲರ ಜೊತೆಗಿದ್ದು ಖುಷಿಪಡುವುದು, ಒಬ್ಬರೇ ತಿರುಗಾಡುವುದರಲ್ಲಿ ಖುಷಿ ಏನಿದೆ ಎಂಬುದು ಈ ಮನಸ್ಥಿತಿಯವರ ಪ್ರಶ್ನೆ. ಹೌದು. ವಿಷಯ ಸರಿಯಾಗಿಯೇ ಇರಬಹುದು. ಕೆಲವರಿಗೆ, ಬೇರೆಯವರ ಜೊತೆಗಿದ್ದರಷ್ಟೇ ಖುಷಿ, ಒಬ್ಬರೇ ಇದ್ದರೆ ಬೇಸರ. ಹಾಗಾಗಿ ಅಂತಹ ಮಂದಿಗೆ ಸೋಲೋ ಪ್ರವಾಸ ಖಂಡಿತ ಖುಷಿ ಕೊಡಲಿಕ್ಕಿಲ್ಲ. ಅವರು, ಸೋಲೋ ಪ್ರವಾಸದ ಸುದ್ದಿಗೆ ಹೋಗದಿದ್ದರಾಯಿತು.

ಆದರೆ, ಒಬ್ಬರೇ ಇದ್ದರೂ ಖುಷಿಯಾಗಿರುತ್ತೇನೆ ಎಂಬ ಮಂದಿ ಇದ್ದಾರಲ್ಲ, ಅವರು ಖಂಡಿತ ಜೀವನದಲ್ಲೊಮ್ಮೆ ಸೋಲೋ ಪ್ರವಾಸ ಪ್ರಯತ್ನಿಸಬೇಕು. ಒಬ್ಬರೇ ಶಾಪಿಂಗ್‌ ಹೋಗುವುದು, ಒಬ್ಬರೇ ಎದ್ದುಕೊಂಡು ಡ್ರೈವ್‌ ಮಾಡಿ ಬರುವುದು, ಯಾವ ಕೆಲಸಗಳಿಗಾದರೂ ನನ್ನ ಜೊತೆಗೆ ಯಾರಾದರೂ ಇರಬೇಕು ಎಂದು ಬಯಸದ, ಒಬ್ಬರೇ ಇದ್ದರೂ ಖುಷಿಪಡುವ, ಇತರರ ಜೊತೆಗೂ ಖುಷಿಪಡುವ ಮಂದಿ ಖಂಡಿತವಾಗಿಯೂ ಸೋಲೋ ಪ್ರವಾಸವನ್ನು ಎಂಜಾಯ್‌ ಮಾಡಬಲ್ಲರು.

ಕೆಲಸ ಬೋರಾಯಿತು ಎಂದು ನಾಲ್ಕು ದಿನ ಬ್ಯಾಕ್‌ಪ್ಯಾಕ್‌ ಎತ್ತಿಕೊಂಡು ಎಲ್ಲಾದರೂ ಹೋಗಿ ಬರೋಣ ಎಂದುಕೊಳ್ಳುವ ಮಂದಿ, ಲ್ಯಾಪ್‌ಟಾಪ್‌ ಎತ್ತಿಕೊಂಡು ಎಲ್ಲಾದರೂ ಹೋಗಿ ಅಲ್ಲಿಂದಲೇ ಕೆಲಸ ಮಾಡುವ ಮನಸ್ಸಿರುವ ಮಂದಿಗೆ ಸೋಲೋ ಪ್ರವಾಸ ಹೇಳಿ ಮಾಡಿಸಿದ್ದು. ಒಮ್ಮೆಯಾದರೂ ಸೋಲೋ ಪ್ರಯತ್ನಿಸಬೇಕು ಆದರೆ, ಮನೆಯಲ್ಲಿ ಹೀಗೆಲ್ಲ ಹೋದರೆ ಬೈತಾರೆ, ಗಾಬರಿ ಬೀಳ್ತಾರೆ, ಹೀಗಾಗಿ ತುಂಬ ಸೇಫ್‌ ಆಗಿರುವ, ಯಾವುದೇ ಭಯವಿಲ್ಲದೆ, ಹೆಣ್ಣುಮಕ್ಕಳೂ ಕೂಡಾ ಆರಾಮವಾಗಿ ಚಿಂತೆಯಿಲ್ಲದೆ ಹೋಗಿ ಬರುವ ತಾಣಗಳೇನಾದರೂ ಇವೆಯಾ ಎಂದೆಲ್ಲ ಹುಡುಕುವ (travel guide) ಮಂದಿಗೆ ಇಲ್ಲಿ ಭಾರತದ ಟಾಪ್‌ 5 ಸೋಲೋ ಪ್ರವಾಸಿ ತಾಣಗಳು (solo travel destinations) ಇಲ್ಲಿವೆ. ಮೊದಲ ಬಾರಿಗೆ ಸೋಲೋಗೆ ರೆಡಿಯಾಗಿರುವ ಮಂದಿ ಖಂಡಿತ ಈ ತಾಣಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಬಹುದು.

pondycherry

1. ಋಷಿಕೇಶ: ಋಷಿಕೇಶ ಉತ್ತರಾಖಂಡದ ಬಹುಪ್ರಸಿದ್ಧ ತಾಣ. ಗಂಗಾನದಿಯನ್ನು ಕಣ್ತುಂಬಿಕೊಂಡು, ಗಂಗಾರತಿಯನ್ನು ನೋಡಿಕೊಂಡು ಭಾರತದ ಯೋಗ, ಆಧ್ಯಾತ್ಮದ ವೈಭವವನ್ನು ಕಣ್ತುಂಬಿಕೊಳ್ಳಲು ಇದು ಹೇಳಿ ಮಾಡಿಸಿದ ತಾಣ. ಅಷ್ಟೇ ಅಲ್ಲ. ಹಾಗಂತ ಇದು ಕೇವಲ ವಯಸ್ಸಾದವರಿಗೆ ಇರುವ ಜಾಗ ಎಂದರೆ ತಪ್ಪಾದೀತು. ದೇಶವಿದೇಶಗಳಿಂದ ಸಾಕಷ್ಟು ಯುವಮಂದಿಯನ್ನೇ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಜಾಗಕ್ಕಿದೆ. ಇಲ್ಲಿ ಯೋಗ ಸಾಧನೆಯಷ್ಟೇ ಅಲ್ಲ, ಸಾಹಸೀ ಪ್ರವೃತ್ತಿಯ ಯುವಕರಿಗೆ ಬೇಕಾದ ಎಲ್ಲ ಸಾಹಸಕ್ರೀಡೆಗಳೂ ಇವೆ. ಗಂಗಾನದಿಯಲ್ಲಿ ರಿವರ್‌ ರ್ಯಾಫ್ಟಿಂಗ್‌, ಪಾರಾಗ್ಲೈಡಿಂಗ್‌, ಬಂಜೀ ಜಂಪಿಗ್‌ ಇತ್ಯಾದಿ ಎಲ್ಲವನ್ನೂ ಇಲ್ಲಿ ಟ್ರೈ ಮಾಡಬಹುದು.

pondycherry

2. ಗೋವಾ: ಗೋವಾ ಎಂದರೆ ಸಮುದ್ರತೀರ, ನೈಟ್‌ಲೈಫ್‌. ಗೆಳೆಯರೊಂದಿಗೆ, ಸಂಗಾತಿಯೊಂದಿಗೆ ಹೋಗಲು ಇದು ಪ್ರಶಸ್ತ ತಾಣವಾದರೂ, ಸೋಲೋ ಹೋಗುವುದಕ್ಕೂ ಇದು ಅಷ್ಟೇ ಪ್ರಶಸ್ತ ತಾಣ. ಯಾವುದೋ ಕೆಫೆಯಲ್ಲೋ, ಬೀಜ್‌ ರೆಸಾರ್ಟಿನಲ್ಲೋ, ಮರಳುದಿಣ್ಣೆಯಲ್ಲಿ ಕುಳಿತೋ ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡಲು ಕೂಡಾ ಗೋವಾ ಒಳ್ಳೆಯ ಜಾಗ. ಜನಜಂಗುಳಿಯಿದ್ದರೂ ಏಕಾಂತವನ್ನೂ ಅನುಭವಿಸಬಹುದಾದ ತಾಣ.

pondycherry

3. ಹಂಪಿ: ನಮ್ಮದೇ ಕರ್ನಾಟದಲ್ಲಿರುವ ಹಂಪಿಗೆ ಹೋದರೆ, ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಕಣ್ಣಾರೆ ಕಂಡು ಆನಂದಿಸಬಹುದು. ಇಲ್ಲಿಯೂ ದೇಶ ವಿದೇಶಗಳ ಮಂದಿ ಪ್ರವಾಸಿಗರು, ಸೋಲೋ ಪ್ರವಾಸಿಗರು ಬರುವುದರಿಂದ ಹಂಪಿಲ್ಲಿದ್ದುಕೊಂಡು ಮೂರ್ನಾಲ್ಕು ದಿನವೋ, ಒಂದು ವಾರವೋ ಆರಾಮವಾಗಿ ಇಡೀ ಹಂಪಿಯನ್ನು ಒಬ್ಬರೇ ನೋಡಿಕೊಂಡು ಬರಬಹುದು. ಕುಳಿತು ಕೆಲಸ ಮಾಡುವುದಕ್ಕೂ ಹಂಪಿಯಲ್ಲಿ ಸಾಕಷ್ಟು ಕೆಫೆಗಳು ಇರುವುದರಿಂದ ಇದು ಸೋಲೋ ಪ್ರವಾಸಕ್ಕೆ ತಕ್ಕ ಜಾಗ.

pondycherry

4. ಮನಾಲಿ: ಹಿಮಾಚಲ ಪ್ರದೇಶದ ಮನಾಲಿಯೂ ಅಷ್ಟೇ, ಸೋಲೋಗೆ ಹೇಳಿ ಮಾಡಿಸಿದ್ದು. ಚಾರಣದಲ್ಲಿ ಆಸಕ್ತಿಯಿರುವ ಮಂದಿ ಇಲ್ಲಿಂದ ಗುಂಪಿನ ಜೊತೆ ಸೇರಿಕೊಂಡು ಚಾರಣವನ್ನೂ ಮುಗಿಸಿ ಬರಬಹುದು. ಚಾರಣ ಬೇಡವೆಂದರೆ, ಎಷ್ಟು ದಿನ ಬೇಕಾದರೂ ಇಲ್ಲಿನ ಹೋಮ್‌ಸ್ಟೇಗಳಲ್ಲೋ, ಹೊಟೇಲಿನಲ್ಲೋ ಇದ್ದುಕೊಂಡು, ಕೆಲಸ ಮಾಡಿಕೊಂಡು ಸುತ್ತಮುತ್ತಲ ಜಾಗಗಳಿಗೆ ಬೇಟಿಕೊಡುತ್ತಾ, ಹೊಸಬರ ಪರಿಚಯ ಮಾಡಿಕೊಳ್ಳುತ್ತಾ ಬದುಕಿನ ಬೇರೆಯದೇ ಒಂದು ಆಯಾಮವನ್ನು ಇಲ್ಲಿ ಅನುಭವಿಸಬಹುದು. ಇಲ್ಲಿನ ಸಂಸ್ಕೃತಿ, ಆಹಾರ, ಜನಜೀವನ ಇದನ್ನೆಲ್ಲ ನೋಡುತ್ತಾ ಕೆಲದಿನಗಳು ಇಲ್ಲೇ ಇದ್ದುಕೊಂಡು ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುತ್ತಾ ಇರಬಹುದು.

pondycherry

5. ಪಾಂಡಿಚೇರಿ: ಕರ್ನಾಟಕದಲ್ಲಿದ್ದುಕೊಂಡು ಹತ್ತಿರದ ಜಾಗವೇ ಬೇಕು ಎನ್ನುವ ಮಂದಿಗೆ ಈ ಜಾಗ ಸೂಕ್ತ. ನಮ್ಮ ದೇಶದಲ್ಲಿದ್ದರೂ ಬೇರೆಯದೇ ದೇಶದ ತುಣುಕೋ ಎಂಬಂತೆ ಅನಿಸುವ ಪಾಂಡಿಚೇರಿ ಎಂಬ ಪುಟ್ಟ ಮುದ್ದಾದ ಪಟ್ಟಣ ನಿಜಕ್ಕೂ ಸೋಲೋ ಆಸಕ್ತಿಯೊರುವ ಮಂದಿಗೆ ಹೇಳಿ ಮಾಡಿಸಿದ್ದು. ಇಲ್ಲಿನ ಅರವಿಂದ ಆಶ್ರಮ, ಸ್ವಚ್ಛವಾದ ರಸ್ತೆಗಳು, ಹಳಯ ಕಟ್ಟಡಗಳು, ಸಮುದ್ರ ತೀರ ಹೀಗೆ ದಿನ ಕಳೆಯಲು ಇಲ್ಲಿ ಕಷ್ಟಪಡಬೇಕಾಗಿಲ್ಲ.

ಇದನ್ನೂ ಓದಿ: Solo Travel: ಏಕಾಂಗಿ ಪ್ರವಾಸಿ ಮಧುರವಾಗಬೇಕಾದರೆ ಈ 15 ಸೂತ್ರ ಪಾಲಿಸಿ!

Exit mobile version