Site icon Vistara News

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

South Indian Monsoon Destinations

ಚಾರಣ ಪ್ರಿಯರಿಗೆ ಮಳೆಗಾಲ ಹತ್ತಿರ ಬರುತ್ತಿದ್ದಂತೆ ಸುಗ್ಗಿ. ಒಂದೆರಡು ಮಳೆ ಬರುತ್ತಿದ್ದಂತೆ ಚಿಗುರುವ ಬೆಟ್ಟಗಳು ಹಸಿರಾಗಿ ನಳನಳಿಸಲು ಆರಂಭಿಸುತ್ತವೆ. ಹಸಿರ ಸ್ವರ್ಗದಲ್ಲಿ ನಡೆಯುತ್ತಾ ನೆಲಕ್ಕೆ ಮುತ್ತಿಕ್ಕುವ ಮಂಜಿನ ಹನಿಗಳು, ಮೋಡಗಳ ಜೊತೆ ಹೆಜ್ಜೆ ಹಾಕುತ್ತಾ ಸಾಗುವುದು ಪ್ರಕೃತಿ ಪ್ರಿಯರಿಗೆ ದೈವಿಕ ಅನುಭೂತಿ ನೀಡುವ ಕ್ಷಣಗಳಲ್ಲಿ ಒಂದು. ಅದಕ್ಕಾಗಿಯೇ, ಮಳೆಗಾಲ ಹತ್ತಿರ ಬರುತ್ತಿದ್ದಂತೆ ಈ ಚಾರಣಿಗರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಒಂದಲ್ಲ ಒಂದು ಚಾರಣಕ್ಕೆ ತಯಾರಾಗುತ್ತಾರೆ. ಹಿಮಾಲಯದ ಚಾರಣ ಕನಸಾದರೂ, ಹತ್ತಿರದಲ್ಲೇ ಸಿಗುವ ಕಡಿಮೆ ಅವಧಿಯಲ್ಲಿ ಮಾಡಿ ಬರಬಹುದಾದ ಚಾರಣಗಳು ಇಂತಹ ಸಂದರ್ಭ ನೆಮ್ಮದಿಯ ಅನುಭವ ನೀಡುತ್ತವೆ. ಬನ್ನಿ, ದಕ್ಷಿಣ ಭಾರತದಲ್ಲಿ ಮಳೆಗಾಲ ಸಮೀಪಿಸುತ್ತಿದ್ದಂತೆ ಮಾಡಬಹುದಾದ ಚಾರಣಗಳು (South Indian monsoon destinations) ಇಲ್ಲಿವೆ.

ಮೀಸಪುಲಿಮಲ ಚಾರಣ, ಕೇರಳ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಈ ಚಾರಣ ಅತ್ಯಂತ ಸುಂದರ ಚಾರಣಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿ ರೋಡೋಡೆಂಡ್ರಾನ್‌ ಅರಳಿರುವುದನ್ನು ನೋಡಬೇಕಾದರೆ ಈ ಚಾರಣ ಮಾಡಬೇಕು. ಅಣ್ಣಾಮಲೈ ಹಾಗೂ ಪಳನಿ ಪರ್ವತ ಪ್ರದೇಶಗಳ ನಡುವೆ ಇರುವ ಈ ಪ್ರದೇಶದಲ್ಲಿ ಮೋಡಗಳನ್ನು ನೀವು ಮುಟ್ಟಬಹುದು. ಅತ್ಯಂತ ಚಂದದ ಹುಲ್ಲುಗಾವಲ ಮಧ್ಯದಲ್ಲಿ ಮಾಡುವ ಈ ಚಾರಣ ಸುಮಾರು ೧೮ ಕಿಮೀಗಳ ಅತ್ಯಂತ ಸುಮಧುರ ಅನುಭವ ನೀಡಬಹುದಾದದ್ದೇ ಆಗಿದೆ.

ಕುದುರೆಮುಖ ಚಾರಣ

ಕುದುರೇಮುಖ ಬೆಟ್ಟಗಳ ಚಾರಣಕ್ಕೆ ಇಂಥದ್ದೇ ಎಂಬ ಸಮಯ ಇಲ್ಲದಿದ್ದರೂ ಮಳೆಗಾಲ ಅತ್ಯಂತ ಸೂಕ್ತ. ಮಳೆಗಾಲದಲ್ಲಿ ಈ ಬೆಟ್ಟದ ಸಾಲುಗಳು ಈಗಷ್ಟೇ ಮಿಂದೆದ್ದು ಹಸಿರು ಸೀರೆಯುಟ್ಟ ನವತರುಣಿಯಂತೆ ಶೋಭಿಸುತ್ತದೆ. ಸುಮಾರು ೨೦ ಕಿಮೀ ಅಂತರದ ಈ ಚಾರಣ ಶೋಲಾ ಕಾಡುಗಳ ಮದ್ಯದಿಂದ ಹಾದುಹೋಗಬೇಕಾಗುತ್ತದೆ. ಮಂಜು ಕವಿದ, ಮೋಡಗಳು ದಿನವಿಡೀ ಬೆಟ್ಟ ಚುಂಬಿಸುವ ಈ ಚಾರಣದ ಹಾದಿಯೇ ಒಂದು ಸುಮಧುರ ಅನುಭೂತಿ. ಚಾಋಣ ಪ್ರಿಯರಾರೂ ಈ ಚಾರಣವನ್ನು ಮಿಸ್‌ ಮಾಡಲು ಬಯಸುವುದಿಲ್ಲ.

ನಾಗಲಾಪುರಂ ಚಾರಣ, ಆಂಧ್ರಪ್ರದೇಶ

ಚಿತ್ತೂರು ಜಿಲ್ಲೆಯಲ್ಲಿರುವ ನಾಗಲಾಪುರಂ ಅತ್ಯಂತ ಸುಂದರ ತಾಣ. ಈ ಜಾಗ ಜಲಪಾತಗಳದದ್ದೇ ಕಾರುಬಾರು. ಚಾರಣದುದ್ದಕ್ಕೂ ಸಿಗುವ ಬಗೆಬಗೆಯ ಜಲಪಾತಗಳು ಚಾರಣಿಗರ ಮನೋಲ್ಲಾಸ ಹೆಚ್ಚಿಸುತ್ತದೆ. ದಣಿವು ಆರಿಸುತ್ತದೆ. 12 ಕಿಮೀ ದೂರದ ಈ ಚಾರಣ ಮಳೆಗಾಲದಲ್ಲಷ್ಟೇ ಅತ್ಯಂತ ಸೊಗಸಾದ ಅನುಭವ ನೀಡುತ್ತದೆ.

ಕೊಡಚಾದ್ರಿ ಚಾರಣ

ಚಾರಣದ ಹುಚ್ಚು ಹತ್ತಿಸಿಕೊಂಡ ಮಂದಿ ಆರಂಭದ ದಿನಗಳಲ್ಲಿ ಮಾಡಬಹುದಾದ, ಮತ್ತಷ್ಟು ಚಾರಣದ ಹುಚ್ಚನ್ನು ಹತ್ತಿಸಿಕೊಳ್ಳಬಹುದಾದ ಎಲ್ಲ ಲಕ್ಷಣಗಳ್ನೂ ಹೊಂದಿದ ತಾಣ. ಮಳೆಗಾಲದಲ್ಲಿ ಈ ಜಾಗದ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು. ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಿಂದ ಮಾಡಬಹುದಾದ ಈ ಚಾರಣ ಮೂಕಾಂಬಿಕಾ ರಕ್ಷಿತಾರಣ್ಯದ ಒಳಗೆಯೇ ಇದೆ. ಆದಿ ಶಂಕರರು ಧ್ಯಾನ ಮಾಡಿದ ಸ್ಥಳದವರೆಗೆ ಚಾರಣ ಮಾಡಿ ಧ್ಯಾನವನ್ನೂ ಮಾಡಿ, ಮೋಡಗಳನ್ನು ಬೊಗಸೆ ತುಂಬಾ ಹಿಡಿದು ಮರಳಬಹುದು.

ಚೆಂಬಾರ ಪೀಕ್‌ ಚಾರಣ, ವಯನಾಡು

ವಯನಾಡಿನ ಚೆಂಬಾರ ಪೀಕ್‌ ಚಾರಣ ಕೂಡಾ ಮಳೆಗಾಲದ ಅದ್ಭುತಗಳಲ್ಲಿ ಒಂದು. ದಟ್ಟಾರಣ್ಯದ ಮಧ್ಯದಲ್ಲಿರುವ ಈ ಚಾರಣಕ್ಕೆ ಅರಣ್ಯಾಧಿಕಾರಿಗಳ ಅನುಮತಿ ಬೇಕು. ಸರಳವಾದ, ಆದರೆ ಮನಮೋಹಕ ದೃಶ್ಯಗಳನ್ನು ಅನುಭವಗಳನ್ನು ಕಣ್ತುಂಬಿಕೊಳ್ಳಬಹುದಾದ ನಾಲ್ಕೈದು ಗಂಟೆಗಳಲ್ಲಿ ಮುಗಿಸಬಹುದಾದ ಚಾರಣವಿದು. ಆರಂಭಿಕ ಚಾರಣಿಗರಿಗೆ ಬೆಸ್ಟ್‌.

ಒಂಭತ್ತು ಗುಡ್ಡ ಚಾರಣ

ಏಳೆಂಟು ಗಂಟೆಗಳ ಈ ಚಾರಣ ಸ್ವಲ್ಪ ಸವಾಲೇ ಆದರೂ, ಅತ್ಯಂತ ಸುಂದರ ಚಾಋಣಗಳಲ್ಲಿ ಒಂದು. ಹಾಸನ ಹಾಗೂ ಚಿಕ್ಕಮಗಳೂರಿನ ಸರಹದ್ದಿನಲ್ಲಿ ಬರುವ ಈ ಸ್ಥಳದಲ್ಲಿ ಬಗೆಬಗೆಯ ಸಸ್ಯವೈವಿಧ್ಯವನ್ನೂ ಕಣ್ತುಂಬಿಕೊಳ್ಳಬಹುದು. ರೋಮಾಂಚಕ ಹಾಗೂ ನಿಗೂಢವಾದ ಅನುಭವಗಳನ್ನು ನೀಡಬಲ್ಲ ಈ ಚಾರಣದಲ್ಲಿ ಈ ಅನುಭವಗಳನ್ನು ಪಡೆಯಲು ಮಳೆಗಾಲದಲ್ಲೇ ಚಾರಣ ಮಾಡಬೇಕು.

Exit mobile version