ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.
ಕಚೋಡಿ ಸಬ್ಜಿ
ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.
ಟಮಾಟರ್ ಚಾಟ್
ಕಾಶಿಯ ಜನಪ್ರಿಯ ಚಾಟ್ ಎಂದರೆ ಟಮಾಟರ್ ಚಾಟ್. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್ ಚಾಟ್ ಮಾತ್ರ ಕಾಶಿಯ ಸ್ಪೆಷಲ್. ಇಲ್ಲಿ ಟಮಾಟರ್ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್ ಪ್ರಿಯರು.
ಮಲೈಯೋ
ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.
ರಬ್ಡಿ ಜಿಲೇಬಿ
ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.
ಬನಾರಸಿ ಪಾನ್
ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.
ಲಸ್ಸೀ
ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!
ಇದನ್ನೂ ಓದಿ: Baking Powder: ಬೇಕಿಂಗ್ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ