ಬೆಂಗಳೂರು: ಬೇಸಿಗೆಯ ಬೇಗೆಯನ್ನು ತಣಿಸಲು ಜನರು ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿಯೂ ನಿಮಗೆ ಆಹ್ಲಾದಕರ ವಾತಾವರಣವನ್ನು ಒದಗಿಸುವಂತಹ ಸುಂದರ ತಾಣಗಳಿವೆ. ಸುಂದರವಾದ ಗಿರಿಧಾಮಗಳು, ಸಮುದ್ರ ತೀರಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಐತಿಹಾಸಿಕ ಪರಂಪರೆಯನ್ನು ಸಾರುವಂತಹ ದೇವಾಲಯಗಳು, ತಾಣಗಳನ್ನು ಹೊಂದಿರುವ ನಮ್ಮ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಕಡಿಮೆಯಿಲ್ಲ. ಹಾಗಾಗಿ ಬೇಸಿಗೆಯಲ್ಲಿ (Summer Tour) ನೀವು ತಾಜಾ ಅನುಭವವನ್ನು ಪಡೆಯಲು ಈ ಸ್ಥಳಗಳಿಗೆ ಭೇಟಿ ನೀಡಬಹುದು.
- 1. ಚಿಕ್ಕಮಗಳೂರು
- ಇದು ಕಾಫಿ ಪ್ರಿಯರಿಗೆ ಉತ್ತಮ ಸ್ಥಳ. ಇಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯನ್ನು ಮಾಡಲಾಗುತ್ತದೆ. ಹಾಗಾಗಿ ಚಿಕ್ಕಮಗಳೂರಿಗೆ ‘ಕಾಫಿ ನಾಡು’ ಎಂದು ಹೆಸರು. ಇಲ್ಲಿ ಬೆರಗುಗೊಳಿಸುವಂತಹ ಬೆಟ್ಟಗಳು, ಕಣಿವೆಗಳಿವೆ. ಪ್ರಕೃತಿಯ ಮಡಲಿನಲ್ಲಿರುವ ಈ ಸ್ಥಳಕ್ಕೆ ಪ್ರಕೃತಿ ಪ್ರಿಯರು ಭೇಟಿ ನೀಡಲೇಬೇಕು. ಹಾಗೇ ಗದ್ದಲದಿಂದ ಹೊರಬರಲು ಬಯಸುವಂತಹ ವ್ಯಕ್ತಿಗಳಿಗೆ ಇದು ಉತ್ತಮ ಸ್ಥಳವಾಗಿದೆ. ಇಲ್ಲಿ ಮುಳ್ಳಯ್ಯನಗಿರಿಗೆ ಟ್ರೆಕ್ಕಿಂಗ್, ಭದ್ರಾ ನದಿಯಲ್ಲಿ ರಿವರ್ ರಾಪ್ಟಿಂಗ್ ಸೇರಿದಂತೆ ಹಲವು ಚಟುವಟಿಕೆಗಳನ್ನು ಮಾಡಬಹುದು.
2. ಮಡಿಕೇರಿ
ಬೃಹತ್ ಆದ ಅರಣ್ಯ ಪ್ರದೇಶ, ಕಮರಿಗಳು, ಜಲಪಾತಗಳು, ಮನಮೋಹಕ ಕಾಫಿ ಮತ್ತು ಮಸಾಲೆ ತೋಟಗಳು ಮಂಜಿನ ಪರ್ವತಗಳನ್ನು ಹೊಂದಿರುವ ಮಡಿಕೇರಿಯನ್ನು ‘ಭಾರತದ ಸ್ಕಾಟ್ಲೆಂಡ್’ ಹಾಗೂ ‘ದಕ್ಷಿಣದ ಕಾಶ್ಮೀರ’ ಎಂದು ಕರೆಯಲಾಗುತ್ತದೆ. ಇಲ್ಲಿ ಅಬೈ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿಯನ್ನು ಹೊಂದಿರುವ ಮಡಿಕೇರಿ ಪ್ರವಾಸಿಗರಿಗೆ ಒಂದು ಉತ್ತಮ ತಾಣವಾಗಿದೆ.
3. ನಂದಿ ಬೆಟ್ಟ
ಇದು ಚಿಕ್ಕಬಳ್ಳಾಪುರದಲ್ಲಿ ಗಂಗಾ ರಾಜವಂಶಸ್ಥರು ನಿರ್ಮಿಸಿದ ಪ್ರಾಚೀನ ಗಿರಿಧಾಮವಾಗಿದೆ. ಪ್ರವಾಸಿಗರಿಗೆ ಉತ್ತಮ ತಾಣವಾದ ನಂದಿಬೆಟ್ಟದಲ್ಲಿ ನೀವು ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಮತ್ತು ಇವುಗಳನ್ನು ವೀಕ್ಷಿಸಲು ನೀವು ಬೆಟ್ಟದ ತುದಿಗೆ ಚಾರಣ ಮಾಡಬಹುದು. ಇಲ್ಲಿ ಪ್ರಶಾಂತವಾದ ಸರೋವರ, ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಆಕರ್ಷಕವಾದ ಭೂದೃಶ್ಯವನ್ನು ಸವಿಯಬಹುದು.
ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ
4. ಕಬಿನಿ
ಬೆಂಗಳೂರಿನಿಂದ 200ಕಿ.ಮೀ ಮತ್ತು ಮೈಸೂರಿನಿಂದ 60ಕಿ.ಮೀ ದೂರದಲ್ಲಿರುವ ಕಬಿನಿ ಅದ್ಭುತ ಭೂದೃಶ್ಯಗಳು ಮತ್ತು ವನ್ಯಜೀವಿಗಳ ಭೂಮಿಯಾಗಿದೆ. ವನ್ಯಜೀವಿ ಉತ್ಸಾಹಿ, ಪ್ರಕೃತಿ ಪ್ರೇಮಿ, ಪ್ರಶಾಂತ ವಾತಾವರಣವನ್ನು ಇಷ್ಟಪಡುವ ವ್ಯಕ್ತಿ ಕಬಿನಿಗೆ ಭೇಟಿ ನೀಡಿ. ಇಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲಕ್ರೀಡೆಗಳು ಅಥವಾ ದಡದಲ್ಲಿ ಕ್ಯಾಂಪಿಂಗ್ ಮಾಡಲು ಬಯಸುವವರಿಗೆ ಇದು ಸೂಕ್ತ ಸ್ಥಳವಾಗಿದೆ.