Site icon Vistara News

Uttarakhand Tourism: ಉತ್ತರಾಖಂಡದ ಹಿಮಾಲಯದ ಸೌಂದರ್ಯವನ್ನು ಇನ್ನು ಏರ್‌ ಸಫಾರಿ ಮೂಲಕವೂ ಸವಿಯಬಹುದು!

Uttarakhand Air Safari

ಉತ್ತರಾಖಂಡವೆಂಬ ದೇವಭೂಮಿಯ (Uttarakhand Tourism) ಚೆಲುವು ಕಣ್ತುಂಬಿಕೊಂಡರೆ ಎಂತಹ ಅರಸಿಕನೂ ಕವಿಯಾದಾನು! ಇಲ್ಲಿನ ಹಿಮಚ್ಛಾದಿತ ಪರ್ವತ ಶ್ರೇಣಿ. ಹಸಿರು ಪರ್ವತಗಳು, ಗದ್ದೆ ಬಯಲುಗಳು, ಕಣಿವೆ ನದಿಗಳು ಎಲ್ಲವೂ ಅಪರಿಮಿತ ಸೌಂದರ್ಯದ ಗಣಿ. ಪ್ರವಾಸಪ್ರಿಯರು ಕಾಶ್ಮೀರದ ಸೌಂದರ್ಯವನ್ನು ಆಸ್ವಾದಿಸುವಂತೆಯೇ, ನಮ್ಮ ಭಾರತದ ಉತ್ತರಾಖಂಡವನ್ನೂ ಮನದಣಿಯೆ ನೋಡಲು ಇಚ್ಛೆಪಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಚಲ ಹಾಗೂ ಉತ್ತರಾಖಂಡ ರಾಜ್ಯಗಳೆಡೆಗೆ ಹೆಚ್ಚು ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ಸ್ವರ್ಗಸದೃಶ ದೃಶ್ಯ ಮಾತ್ರವೇ ಅಲ್ಲ, ಇಲ್ಲಿನ ಜನರ ನಡೆನುಡಿ, ಆಚಾರ ವಿಚಾರಗಳು ಸೇರಿದಂತೆ ಅನೇಕ ವಿಚಾರಗಳು ಜನರನ್ನು ಈ ದೇವಭೂಮಿಯತ್ತ ಎಳೆದು ತರುತ್ತಿದೆ. ಉತ್ತರಾಖಂಡದ ಪ್ರವಾಸೋದ್ಯಮ ಇಲಾಖೆಯೂ ಕೂಡಾ, ತನ್ನ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈಗ ಅವುಗಳ ಪೈಕಿ ಏರ್ ಸಫಾರಿಯೂ ಒಂದು.

ಹೌದು. ಉತ್ತರಾಖಂಡ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಹಿಮಾಲಯ ಪರ್ವತ ಪ್ರದೇಶಗಳನ್ನು ಆಕಾಶದಿಂದ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಇನ್ನೂ ಒಂದು ಹೊಸ ಅವಕಾಶವನ್ನು ಸೃಷ್ಠಿಸಲಿದೆ. ಇದು ಏರ್‌ ಸಫಾರಿ. ವಾಯುಯಾನದ ಮೂಲಕ ಹಿಮಾಲಯದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅಪರೂಪದ, ದೇಶದಲ್ಲೇ ಮೊದಲ ಬಾರಿಗೆ ಲಭ್ಯವಾಗಲಿರುವ ಸೇವೆಯಿದು.

ಗೈರೋಕಾಪ್ಟರ್‌ ಹೆಸರಿನ ಪುಟಾಣಿ ವಿಮಾನಗಳಲ್ಲಿ ಕೂರಿಸಿಕೊಂಡು ಉತ್ತರಾಖಂಡದ ಯಾವ ಪ್ರವಾಸಿಗನೂ ನೋಡಲು ಸಾಧ್ಯವಾಗದ, ಅಷ್ಟಾಗಿ ತಿಳಿಯದ ಹಲವು ಪ್ರದೇಶಗಳನ್ನು ಈ ವಿಮಾನಯಾನದ ಮೂಲಕ ತೋರಿಸುವ ಉದ್ದೇಶ ಸರ್ಕಾರದ್ದು. ಹರಿದ್ವಾರದ ಬೈರಾಗಿ ಕ್ಯಾಂಪ್‌ನಲ್ಲಿ ಇತ್ತೀಚೆಗೆ ಮೊದಲ ಗೈರೋಕಾಪ್ಟರ್‌ ಯಾನದ ಪರೀಕ್ಷಣಾ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.

ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ರಜಸ್‌ ಏರೋ ಸ್ಪೋರ್ಟ್ಸ್‌ ಅಂಡ್‌ ಅಡ್ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಉತ್ತರಾಖಂಡದ ಹಿಮಾಲಯ ಶ್ರೇಣಿಯ ಅತ್ಯದ್ಭುತ ಗಿರಿಶಿಖರಗಳ ಸೊಬಗನ್ನು ಪ್ರವಾಸಿ ಪ್ರಿಯರ ಕಣ್ತುಂಬಿಸಲಿದೆ!

ಈಗಾಗಲೇ ಪರೀಕ್ಷಣಾ ಹಾರಾಟವನ್ನು ನಡೆಸಿರುವ ಅಧಿಕಾರಿಗಳು, ಈ ಏರ್‌ ಸಫಾರಿ ಯೋಜನೆ ಶೀಘ್ರದಲ್ಲೇ, ಜನರಿಗೆ ಲಭ್ಯವಾಗಲಿದ್ದು, ಗೈರೋಕಾಪ್ಟರ್‌ ತನ್ನ ಹಾರಾಟವನ್ನು ಶುರು ಮಾಡಲಿದೆ. ಈ ನಿಟ್ಟಿನಲ್ಲಿ ರಕ್ಷಣೆಯ ವಿಚಾರವಾಗಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಜರ್ಮನಿಯಿಂದ ನುರಿತ ಪೈಲೆಟ್‌ಗಳನ್ನೂ ಇದಕ್ಕಾಗಿ ಕರೆತಂದಿದೆ. ಈ ವಿಶೇಷ ಗೈರೋಕಾಪ್ಟರ್‌ಗಳ ಚಾಲನೆಗೆ ವಿಶೇಷ ತರಬೇತಿ ಇರುವ ನುರಿತ ಪೈಲಟ್‌ಗಳನ್ನೇ ನೇಮಿಸಲಿದ್ದು, ಅವರು, ಉತ್ತರಾಖಂಡದ ಅದ್ಭುತ ಸೊಬಗನ್ನು ಏರ್‌ ಸಫಾರಿ ಮೂಲಕ ತೋರಿಸಲಿದ್ದಾರೆ. ಇದೊಂದು ಅತ್ಯಂತ ಆಶಾದಾಯಕವಾದ ಯೋಜನೆಯಾಗಿದ್ದು ಪ್ರವಾಸೋದ್ಯಮದಲ್ಲಿ ಉತ್ತರಾಖಂಡ ರಾಜ್ಯವು ಮೊದಲ ಬಾರಿಗೆ ಈ ವಿಶೇಷ ಹೆಜ್ಜೆಯನ್ನಿಟ್ಟಿದೆ. ಯೋಜನೆಯು ಯಶಸ್ವಿಯಾಗುವ ಭರವಸೆಯನ್ನೂ ಅದು ವ್ಯಕ್ತಪಡಿಸಿದೆ.

ಬಹುಮುಖ್ಯವಾಗಿ, ಉತ್ತರಾಖಂಡದ ಅಷ್ಟು ಸುಲಭವಾಗಿ ತಲುಪಲಾರದ ಪ್ರದೇಶಗಳ ಸೊಬಗನ್ನೂ ಈ ಏರ್‌ ಸಫಾರಿ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ನೋಡಬಹುದಾಗಿದ್ದು, ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಈವರೆಗೆ ಲಭ್ಯವಾಗದ ಅಪರೂಪದ ಅವಕಾಶ ಇದಾಗಿದೆ. ಆಕಾಶದ ಮೂಲಕ ಈವರೆಗೆ ನೋಡಿರದ ಅತ್ಯದ್ಭುತ ದೃಶ್ಯಗಳನ್ನು ಇದರ ಮೂಲಕ ಕಾಣಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರೇಕ್‌ಫಾಸ್ಟ್‌ ಟೂರಿಸಂ ಹೆಸರಿನಡಿಯಲ್ಲಿ ಈ ಅವಕಾಶ ಆಸಕ್ತ ಪ್ರವಾಸಿಗರಿಗೆ ಸದ್ಯದಲ್ಲೇ ಸಿಗಲಿದೆ.

ಇದನ್ನೂ ಓದಿ: Submarine Tourism In Dwarka: ಇನ್ನು ಶ್ರೀಕೃಷ್ಣನ ದ್ವಾರಕೆಯ ಗತವೈಭವವನ್ನು ಸಮುದ್ರದಾಳದಲ್ಲಿ ಸಬ್‌ಮರೀನ್‌ ಮೂಲಕ ನೋಡಿ!

Exit mobile version