Site icon Vistara News

Life tips: 30 ವರ್ಷ ಆಗೋ ಮೊದಲು ಇವಿಷ್ಟನ್ನು ಮಾಡಿಬಿಡಿ!

to do things

ನಿಮಗೆ ಮೂವತ್ತಾಗುತ್ತಿದೆಯೇ? ಜೀವನದ ಕೆಲವು ಸಂಗತಿಗಳು ನಮಗಾಗಿ, ನಿಮಗಾಗಿ ಕಾದಿವೆ. ತಾರುಣ್ಯದಲ್ಲಿಯೇ ಅವುಗಳನ್ನು ಮಾಡಿಬಿಡಬೇಕು. ಕೈಯಲ್ಲಿ ಇನ್ನೊಂದಿಷ್ಟು ಹಣ ಸೇರಲಿ, ಸಂಗಾತಿ ಸಿಗಲಿ, ಬದುಕು ಒಂದು ದಡಕ್ಕೆ ಹತ್ತಲಿ ಅಂತೆಲ್ಲಾ ಯೋಚಿಸುತ್ತಾ ಇದ್ದರೆ ಈಗಿರುವ ಗಳಿಗೆಗಳೂ ನಮ್ಮ ಕೈಯಿಂದ ಆಚೆಗೆ ನುಸುಳಿಬಿಡುತ್ತವೆ. ಮೂವತ್ತರ ಮೆಟ್ಟಿಲು ಹತ್ತುವ ಮುನ್ನ ಇವುಗಳಲ್ಲಿ ಕೆಲವಾದರೂ ನಿಮ್ಮ ಅನುಭವದ ಜೋಳಿಗೆಯಲ್ಲಿ ಇರಲಿ.

1. ಏಕಾಂಗಿ ಸಂಚಾರಿ: ಇದಕ್ಕೆ ಮೊದಲನೇ ಸ್ಥಾನ ಕೊಡಬಹುದು. ಸುಖಾಸುಮ್ಮನೆ ಎದ್ದು ಬ್ಯಾಗು ತುಂಬ ಬಟ್ಟೆ ತುಂಬಿ ಗೊತ್ತಿಲ್ಲದೂರಿಗೆ ಒಬ್ಬರೇ ಪ್ರಯಾಣ ಮಾಡೋದರಲ್ಲಿ ಏನು ಸಿಕ್ಕೀತು ಅಂತ ಯೋಚನೆಯೇ? ಹಾಗಿದ್ದರೆ ಆ ಯೋಚನೆಯನ್ನು ಮೊದಲು ಬಿಸಾಕಿ ಬ್ಯಾಗ್‌ ಪ್ಯಾಕ್‌ ಮಾಡಿ. ಯಾರಿಗ್ಗೊತ್ತು, ಇದೇ ನಿಮ್ಮ ಬದುಕಿಗೆ ಹೊಸ ತಿರುವು ಕೊಡಲೂಬಹುದು!

2. ನಿಮ್‌ ಬರ್ತ್‌ಡೇ, ನಿಮ್ದೇ ಖುಷಿ: ಕತ್ತೆಗೆ ವಯಸ್ಸಾದಂಗೆ ಆಯ್ತಲ್ಲಪ್ಪ, ಯಾಕೆ ಈಗ ಇದೆಲ್ಲ ಅಂತ ಯಾರೇನೇ ಕಾಲೆಳೆದ್ರೂ, ತಲೆಕೆಡಿಸದೆ ಹುಟ್ಟುಹಬ್ಬದ ನೆಪದಲ್ಲೊಂದು ಪಾರ್ಟಿ ಮಾಡಿಬಿಡಿ. ಹಿತೈಷಿಗಳೆಲ್ಲರೊಂದಿಗೆ ಬೆರೆಯಲು ಇದಕ್ಕಿಂತ ಒಳ್ಳೆ ಸಂದರ್ಭ ಯಾವುದಿದೆ?

3. ಅಡುಗೆ ಕಲೀರಿ: ಮನೇಲಿ ಬೇಯಿಸಿ ಹಾಕೋರಿದ್ದಾರಪ್ಪ, ನಮಗ್ಯಾಕೆ ಈ ಉಸಾಬರಿ ಅಂತ ಮೈಚೆಲ್ಲಿ ಸೋಫಾದಲ್ಲಿ ಮೂರೂ ಹೊತ್ತು ಬಿದ್ದಿರುತ್ತೀರಾದ್ರೆ, ಮೊದಲು ಮೈಕೊಡವಿ ಎದ್ದು, ಕಡೇ ಪಕ್ಷ ಒಂದು ಚಹಾ ಮಾಡೋದನ್ನಾದ್ರೂ ಕಲಿಯಿರಿ. ಅನ್ನ ಬೇಯಲು ಅಕ್ಕಿಗೆ ಎಷ್ಟು ನೀರು ಹಾಕಬೇಕು ಅನ್ನುವ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ, 30 ಆಗಿ ಏನು ಪ್ರಯೋಜನ?

4. ಇನ್ನೊಂದು ಭಾಷೆ: ನಮ್ಮ ಮಾತೃಭಾಷೆಯೇ ನಮಗೆ ಮುಖ್ಯ ಅನ್ನೋದೇನೋ ನಿಜವೇ. ಮಾತೃಭಾಷೆಯ ಹೊರತು, ವ್ಯಾವಹಾರಿಕ ಭಾಷೆಯ ಜ್ಞಾನ ಚೆನ್ನಾಗಿದ್ದರೂ, ಪಕ್ಕದ ರಾಜ್ಯದ್ದೋ, ದೇಶದ್ದೋ ಮಾತೃಭಾಷೆ ಕಲಿಯೋದರಲ್ಲಿ ತಪ್ಪೇನಿದೆ? ಭಾಷೆ ಕಲಿತಷ್ಟೂ ನಮ್ಮ ಜಗತ್ತು ವಿಸ್ತರಿಸುತ್ತದೆ.

5. ಮತ್ತೊಂದು ವಿದ್ಯೆ: ಅಯ್ಯೋ 30 ಆಯ್ತು, ಇನ್ನೇನಿದ್ರೂ ಕಲಿಯೋದು ಬಿಟ್ಟು ಗಳಿಸೋದು ಮಾತ್ರ ಅಂತ ಅಂದುಕೊಂಡಿದ್ರೆ, ಅದಕ್ಕೆ ಆಗಾಗ ಅಲ್ಪವಿರಾಮ ಹಾಕ್ತಾ ಇರಿ. ಇವೆಲ್ಲವುಗಳ ಜೊತೆಗೆ, ಹೊಸತೊಂದು ವಿದ್ಯೆ ಕಲಿಯಿರಿ. ಅದು ಕುದುರೆ ಸವಾರಿಯೂ ಆಗಿರಬಹುದು ಅಥವಾ ತೀರಾ ಮೀನು ಹಿಡಿಯೋದು ಕೂಡಾ ವಿದ್ಯೆಯೇ!

6. ಮಾರ್ಗದರ್ಶಿ: ಶಾಲೆ ಕಾಲೇಜು ಜೀವನ ಮುಗಿದ ಮೇಲೂ ಮಾರ್ಗದರ್ಶಕರೊಬ್ಬರು ನಿಮ್ಮ ಜೊತೆ ಇದ್ದರೆ ಅದಕ್ಕಿಂತ ದೊಡ್ಡ ವರ ಇನ್ನೊಂದಿಲ್ಲ. ನಿಮ್ಮ ಗುರಿಗಳಿಗೆ ಸಂಬಂಧಿಸಿದಂತೆ, ಗುರಿ ತಪ್ಪದೆ ಸರಿ ಮಾರ್ಗದಲ್ಲಿ ನಡೆಯಲೊಬ್ಬ ಹಿರಿಯ ಜೀವವನ್ನು ಮಾರ್ಗದರ್ಶಿಯಾಗಿ ಇಟ್ಟುಕೊಳ್ಳಿ.

7. ಆರೋಗ್ಯ ಜೋಪಾನ: ಇರೋದೊಂದೇ ಜೀವನ. ಗಳಿಕೆ-ಖರ್ಚಿನ ನಡುವೆ ಒಂದು ಆರೋಗ್ಯ ವಿಮೆಯನ್ನೂ ಮಾಡಿಸಿಕೊಳ್ಳೋದನ್ನು ಮರೆಯಬೇಡಿ.

ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು

8. ಚಂದದ ಔಟ್‌ಲುಕ್:‌ ಅದೇ ಆಫೀಸು, ಅವೇ ರಸ್ತೆ, ಅವೇ ಚಪ್ಪಲಿ, ಅವೇ ಬ್ಯಾಗು, ಅವವೇ ದಿರಿಸು! ಬದುಕಿನಲ್ಲಿ ಬದಲಾವಣೆ ಬೇಕು. ಒಂದು ಚೆಂದದ ಒಳ್ಳೆಯ ಬ್ಯಾಗು, ಒಳ್ಳೆಯ ಜೊತೆಯ ಚಪ್ಪಲಿ, ನಿಮ್ಮ ವ್ಯಕ್ತಿತ್ವಕ್ಕೊಪ್ಪುವ ದಿರಿಸು ಖರೀದಿಸಿ ಹಾಕಿಕೊಂಡು ಬಿಡಿ. ಜವಾಬ್ದಾರಿ ಮಣ್ಣು ಮಸಿ ಅಂತೆಲ್ಲ ನೆಪಗಳಿಂದಾಗಿ ಬದುಕಿನ ಇಂತಹ ಸಣ್ಣ ಸಣ್ಣ ಖುಷಿಗಳಿಂದ ದೂರ ಓಡಬೇಡಿ.

9. ಗೆಳೆಯರು ಬೇಕು: ಮೂವತ್ತಾಯ್ತು, ಇನ್ನೇನು 20ರಂತೆ ಬೀದಿ ಸುತ್ತೋಕಾಗತ್ತೇನು ಅಂತ ಹೇಳಿಕೊಂಡು ಖುಷಿಯ ಕ್ಷಣಗಳಿಗೂ ಕಲ್ಲು ಹಾಕಿಕೊಳ್ಳಬೇಡಿ. ಆಗೀಗ ಗೆಳೆಯರ ಜೊತೆ ಪಾರ್ಟಿ, ತಿರುಗಾಟಗಳೆಲ್ಲ ಇದ್ದರಷ್ಟೆ ಬದುಕಿಗೆ ಚೈತನ್ಯ!

10. ಧ್ಯಾನದ ಸಮಯ: ಏಕಾಗ್ರತೆ ಗಳಿಸೋದು ಕೂಡಾ ಒಂದು ವಿದ್ಯೆಯೇ. ನಂಗೇನು 60 ಆಗಿಲ್ಲ ಧ್ಯಾನ ಮಾಡೋಕೆ ಎಂದು ಉಢಾಫೆ ಮಾಡಬೇಡಿ! ಒಂದೇ ವಿಷಯದ ಬಗ್ಗೆ ಮನಸ್ಸು ಕೇಂದ್ರೀಕರಿಸಿ ನಮ್ಮದೇ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದೇನೂ ಸಣ್ಣ ವಿಚಾರವಲ್ಲ. ಅದಕ್ಕೇ ಧ್ಯಾನ ಅಭ್ಯಾಸ ಮಾಡಿಕೊಳ್ಳಿ.

11. ಮತ ಹಾಕಿ: ರಾಜಕೀಯ ನಮಗ್ಯಾಕೆ ಅಂತ ಮೂಗು ಮುರಿದು, ಓಟು ಯಾರಿಗಾದರೂ ಹಾಕಿದರಾಯ್ತು ಅನ್ನೋ ಧೋರಣೆ ತೆಗೆದುಹಾಕಿ ಜವಾಬ್ದಾರಿಯುವ ಪ್ರಜೆಯಾಗುವತ್ತ ಇನ್ನಾದರೂ ಮನಸ್ಸು ಮಾಡಿ. ಅದಕ್ಕೇ ರಾಜಕೀಯ ಅರಿಯಲು ಪ್ರಯತ್ನಿಸಿ. ಕಡೇ ಪಕ್ಷ ದೇಶ-ವಿದೇಶ, ರಾಜ್ಯಗಳ ಆಗುಹೋಗುಗಳು ಗೊತ್ತಿರಲಿ.‌

ಇದನ್ನೂ ಓದಿ: ಮೊಬೈಲ್‌ ಹೆಚ್ಚು ನೋಡಿದರೆ ಆಯುಷ್ಯ ಕಡಿಮೆ ಆಗುತ್ತೆ; ಆತಂಕಕಾರಿ ವರದಿ ನೀಡಿದ ಸಂಶೋಧನೆ

12. ಸಮಾಜ ಸೇವೆ: ನಾವು ಉದ್ಧಾರವಾದರೆ ಸಾಕಪ್ಪಾ, ಉಳಿದವರ ಉಸಾಬರಿ ನಮಗ್ಯಾಕೆ ಅನ್ನೋದನ್ನು ಬಿಟ್ಟು ಒಂದಿಷ್ಟು ನಿಮ್ಮ ಸುತ್ತಮುತ್ತಲಿನವರನ್ನು ಗಮನಿಸಿ. ನಿಮ್ಮೂರಿನ ಪಾರ್ಕೋ, ರಸ್ತೆಯೋ, ಸಮುದ್ರ ತೀರವನ್ನೋ ಸ್ವಯಂಪ್ರೇರಣೆಯಿಂದ ಒಂದಿಷ್ಟು ಮಂದಿಯನ್ನು ಸೇರಿಸಿ ಅಥವಾ ಅಂಥ ಗುಂಪಿನೊಡನೆ ಸೇರಿಕೊಂಡು ಸ್ವಚ್ಛ ಮಾಡಿ!

13. ಒಂದು ವಿದೇಶ ಪ್ರಯಾಣ: ದೇಶ ಸುತ್ತಿ, ಕೋಶ ಓದಿ ಅನ್ನೋದು ನಿಜವೇ. 30ರೊಳಗೊಮ್ಮೆ ವಿದೇಶವೊಂದನ್ನಾದರೂ ಸುತ್ತಿ ಅಥವಾ ಇದ್ದು ಬನ್ನಿ!

14. ಭಯ ಮೀರಿ: ಯಾವುದು ಭಯವೋ ಅದನ್ನೇ ಮಾಡಿ! ನೀರು ಕಂಡರೆ ಭಯವೋ, ಹಾಗಾದರೆ ಈಜು ಕಲೀರಿ. ಎತ್ತರದಲ್ಲಿರೋದು ಭಯವೋ, ಹಾಗಿದ್ದರೆ ಸ್ಕೈ ಡೈವಿಂಗ್‌ ಮಾಡಿ. ಕಡೇ ಪಕ್ಷ, ಜಿರಲೆ ಕಂಡು ಕಿಟಾರನೆ ಕಿರುಚಿ ಆಕಾಶ ಭೂಮಿ ಒಂದು ಮಾಡುತ್ತೀರೋ, ಅದೇ ಜಿರಲೆಯನ್ನು ಕೈಯಲ್ಲಿ ಹಿಡಿದು ಕಿಟಕಿಯಿಂದ ಹೊರಗೆಸೆಯೋದನ್ನು ಕಲಿತರೂ ಸಾಕು!

15. ಮುಂಜಾನೆ ವಾಕಿಂಗ್: ಹಾಸಿಗೆ ಬಿಟ್ಟು ಬೇಗ ಏಳೋದನ್ನು ಅಭ್ಯಾಸ ಮಾಡಿಕೊಳ್ಳಿ. ಸೂರ್ಯೋದಯವನ್ನು ಸವಿಯುತ್ತಾ ಒಂದರ್ಧ ಗಂಟೆ ನಡೆಯಿರಿ. ಒಂದಿಷ್ಟು ವ್ಯಾಯಾಮ ಆದ್ರೂ ಮಾಡಿ. 30ರಲ್ಲಿ ಇನ್ನೂ 25ರಂತೆ ದೇಹವನ್ನೂ ಮನಸ್ಸನ್ನೂ ಇರಿಸಿಕೊಂಡರೆ, ಇನ್ನೂ ‌30 ವರ್ಷ ಆರಾಮವಾಗಿ ಗಾಡಿ ಮುಂದಕ್ಕೋಡಬಹುದು!

ಇದನ್ನೂ ಓದಿ: 88ರ ಹರೆಯದ Ruskin bond ಬದುಕಿನ ಬಗ್ಗೆ ಹೇಳೋದೇನು?

Exit mobile version