ನಗರದ ಬ್ಯುಸಿ ಬದುಕಿನಲ್ಲಿ ಸಿಕಿ ಹಾಕಿಕೊಂಡು ಬಹಳಷ್ಟು ಮಂದಿ ಎಲ್ಲ ಬಿಟ್ಟು ಮತ್ತೆ ಮರಳಿ ಪ್ರಕೃತಿಯ ಮಡಿಲಿಗೆ ಮರಳುವ ಬಗ್ಗೆ ಆಗಾಗ ಯೋಚಿಸುವುದುಂಟು. ಆದರೆ, ಒಮ್ಮೆ ನಗರದ ಅಪ್ಪುಗೆಯಲ್ಲಿ ಸಿಕ್ಕಿ ಬಿದ್ದರೆ ಮತ್ತೆ ಬಿಡಿಸಿಕೊಳ್ಳುವುದು ಕಷ್ಟ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೂ, ಕೆಲವು ಯುವ ಉತ್ಸಾಹಿ ಮಂದಿ ನಗರದ ಜೀವನ ಸಾಕು ಎಂದು ಗಟ್ಟಿ ಮನಸ್ಸು ಮಾಡಿ ಹಳ್ಳಿಯ ಕಡೆ ಮುಖ ಮಾಡಿ ಹೊಸ ಜೀವನ ಶುರು ಮಾಡಿದ ಉದಾಹರಣೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೋವಿಡ್ ಸಮಯದಲ್ಲಿ ಬಹಳಷ್ಟು ಮಂದಿ ತಮ್ಮ ಲಕ್ಷಾಂತರ ಸಂಬಳ ಸಿಗುವ ಐಟಿಯಂತಹ ಉದ್ಯೋಗಗಳನ್ನೇ ಬಿಟ್ಟು ಮತ್ತೆ ತಮ್ಮ ಹಳೆಯ ಗೂಡಿಗೆ ಮರಳಿ ಕೃಷಿಗೆ ಕೈ ಹಾಕಿದ ಉದಾಹರಣೆಗಳೂ ಇವೆ. ಮಧ್ಯಪ್ರದೇಶದ ಯುವ ಉತ್ಸಾಹಿ ಜೋಡಿಯೊಂದೂ ಇಂಥದ್ದೇ ಇನ್ನೊಂದು ಸಾಹಸ ಮಾಡಿದೆ.
ನಿಖಿಲ್ ಹಾಗೂ ಪರಿಧಿ ಎಂಬ ಮಧ್ಯಪ್ರದೇಶದ ಯುವ ಜೋಡಿ ಇದೀಗ ಮನಾಲಿಯಿಂದ ಶ್ರೀನಗರದವರೆಗೆ ೩,೨೦೦ ಕಿಮೀ ದೂರ ಕಾಲ್ನಡಿಗೆಯ ಪಯಣ ಕೈಗೊಂಡಿದ್ದಾರೆ! ಪರಿಸರ ಸಂಬಂಧೀ ಜಾಗೃತಿ ಮೂಡಿಸುವ ಗುರಿಯನ್ನು ಹೊತ್ತುಕೊಂಡು ಈ ಜೋಡಿ ತಮ್ಮ ಕಾರ್ಪೋರೇಟ್ ಉದ್ಯೋಗವನ್ನು ಬಿಟ್ಟು ಈ ಸಾಹಸ ಯಾತ್ರೆ ಮಾಡಿದ್ದಾರೆ. ಲಡಾಕ್‌ನಲ್ಲಿದ್ದ ಕುಟುಂಬದ ಮದುವೆ ಸಮಾರಂಭಕ್ಕಾಗಿ ಈ ಜೋಡಿ ತಮ್ಮ ಪಯಣಕ್ಕೊಂದು ಬ್ರೇಕ್ ನೀಡಿ ಮತ್ತೆ ಪಯಣ ಮುಂದುವರಿಸಿದ್ದಾರೆ.
ʻಕಡಿಮೆ ಜಾಗ ಹೆಚ್ಚು ಸಮಯʼ ಇವರ ಈ ಪಯಣದ ಹೈಲೈಟ್ ಆಗಿದ್ದು, ಲಡಾಕ್‌ನಲ್ಲಿ ಕೆಲಕಾಲ ತಂಗಿ ಅಲ್ಲಿನ ಅನುಭವಗಳನ್ನು ಗಳಿಸಲು ಯೋಜಿಸಿದ್ದರು. ಹಾಗಾಗಿ ಮನಾಲಿಯಿಂದ ಶ್ರೀನಗರದವರೆಗೆ ಲಡಾಕ್ ಮಾರ್ಗವಾಗಿ ಕಾಲ್ನಡಿಗೆಯ ಯೋಜನೆ ರೂಪಿಸಿಕೊಂಡು ಪಯಣ ಆರಂಭಿಸಿದ್ದರು. ಪರಿಧಿ ಹೇಳುವ ಪ್ರಕಾರ, ʻನಾವು ೩೨೦೦ ಕಿಮೀ ನಡೆದುಕೊಂಡು ಲಾಲ್ ಚೌಕ್ ತಲುಪಲು ಒಟ್ಟು ೧೯ ಪಾಸ್‌ಗಳನ್ನು ದಾಟಿದ್ದೇವೆ. ಜನರಿಗೆ ಪರಿಸರದ ಬಗೆಗೆ ಕಾಳಜಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆʼ ಎನ್ನುತ್ತಾರೆ.
ಇದನ್ನೂ ಓದಿ | World Tourism Day 2022 | ಇಂದು ವಿಶ್ವ ಪ್ರವಾಸೋದ್ಯಮ ದಿನ. ಈ ವರ್ಷದ ಧ್ಯೇಯವೇನು?
ʻನಾವು ಮಧ್ಯ ಪ್ರದೇಶದಿಂದ ಮನಾಲಿಗೆ ಬಸ್‌ನಲ್ಲಿ ಪಯಣ ಮಾಡಿದ್ದು ಅಮೇಲೆ ಮನಾಲಿಯಿಂದ ನಡಿಗೆ ಶುರು ಮಾಡಿದ್ದೆವು. ಮನಾಲಿಯಿಂದ ಲೇಹ್ ದಾರಿಯ ಎಲ್ಲಾ ಐದು ಕಣಿವೆಗಳನ್ನೂ ಕಾಲ್ನಡಿಗೆಯಿಂದಲೇ ದಾಟಿದೆವು. ಲೇಹ್‌ನಿಂದ ಖಲ್ಸರ್, ಸಿಯಾಚಿನ್, ಹಂಡರ್, ಟುರ್ಟುಕ್‌ಗಳಿಗೂ ಹೋಗಿ ಬಂದಿದ್ದೇವೆ. ಹಾದಿಯಲ್ಲಿ ನಮಗೆ ಹಿಮಚಿರತೆಯೂ ದರ್ಶನ ನೀಡಿದ್ದು ರೋಮಾಂಚಕ ಅನುಭವʼ ಎಂದು ಪರಿಧಿ ತಮ್ಮ ಪಯಣದ ಅದ್ಭುತ ಗಳಿಗೆಗಳನ್ನು ನೆನೆಯುತ್ತಾರೆ.
ಈ ಕಾಲ್ನಡಿಗೆಯ ಪಯಣಕ್ಕೆ ಸುಮಾರು ಆರು ತಿಂಗಳ ಮೊದಲಿನಿಂದಯೇ ಸಾಕಷ್ಟು ತಯಾರಿ ಮಾಡಲು ಆರಂಭಿಸಿದ್ದು, ಇಬ್ಬರೂ ದೈಹಿಕ ಕ್ಷಮತೆಗೂ ವ್ಯಾಯಾಮದ ಮೂಲಕ ತಯಾರಿ ನಡೆಸಿದ್ದಾರೆ. ʻನಡೆಯುವ ಮೂಲಕ ದೇಹಕ್ಕೆ ವ್ಯಾಯಾಮವೂ ಸಿಗುತ್ತದೆʼ ಎಂದು ಯೋಚಿಸಿದ ಈ ಜೋಡಿ ತಾವು ಹೋದೆಡೆಯಲ್ಲೆಲ್ಲಾ ಒಂದು ಗಿಡ ನೆಟ್ಟು ಬಂದಿದ್ದಾರೆ. ಜೊತೆಗೆ ಹೋಗುವ ದಾರಿಯಲ್ಲೆಲ್ಲಾ, ಕಸವನ್ನೂ ಹೆಕ್ಕಿ ಸ್ವಚ್ಛ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಮೂಲಕ ʻಪ್ರಕೃತಿಗೆ ನಮ್ಮ ಅಳಿಲು ಸೇವೆ, ನಮ್ಮ ಸುತ್ತಮುತ್ತಲಿನ ಸ್ಥಳಗಳನ್ನು ನಮ್ಮ ಮುತುವರ್ಜಿಯಿಂದ ಚೆನ್ನಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ನಾವೇ ವಹಿಸಬೇಕುʼ ಎಂದು ಹೇಳಿದ್ದಾರೆ.
ಹಾದಿ ಮಧ್ಯೆ ಸಾಕಷ್ಟು ತೊಂದರೆಗಳನ್ನೂ ಈ ಜೋಡಿ ಅನುಭವಿಸಿದ್ದು, ಭೂಕುಸಿತದಂತಹ ಸವಾಲುಗಳೂ ಎದುರಾಗಿವೆ. ಆದರೆ, ಇವೆಲ್ಲವನ್ನು ಮೆಟ್ಟಿನಿಂತು ಈ ಹಾದಿಯನ್ನು ಪೂರ್ಣಗೊಳಿಸಿದ್ದು ಇನ್ನಿಲ್ಲದಂತೆ ಬದುಕಿನ ಮೇಲೆ ಪ್ರೀತಿ ಬಂದಿದೆ. ಎಲ್ಲ ಜನರಿಂದ ಸಿಕ್ಕಿದ ಪ್ರೀತಿ ವಿಶ್ವಾಸ ಸಹಾಯಗಳು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಲ್ಲದೆ, ಈ ಎಲ್ಲ ತೊಂದರೆಗಳು ತೊಂದರೆ ಎಂಬ ಭಾವ ತರಿಸಲೇ ಇಲ್ಲ ಎಂದಿದ್ದಾರೆ ಪರಿಧಿ.
ಇದನ್ನೂ ಓದಿ | ನೀಲಕುರಿಂಜಿ | ಬೆಟ್ಟ ಹೊದ್ದ ನೀಲಿ ಹೊದಿಕೆ: ಹೊಸಕಬೇಡಿ, ಆನಂದಿಸಿ