ಬಹುತೇಕ ಎಲ್ಲರೂ ಮದುವೆಯಾದ ಕೂಡಲೇ, ಸೆಟಲ್ ಆಗಲು ಯೋಚಿಸುತ್ತಾರೆ. ಮನೆ, ಕಾರು, ಪೀಠೋಪಕರಣ, ಆಸ್ತಿ… ಹೀಗೆ ಹಲವು ವಸ್ತುಗಳನ್ನು ಖರೀದಿಸಲು, ಬದುಕಿನಲ್ಲಿ ಸೀರಿಯಸ್ ಆಗುತ್ತಾರೆ. ಮಗುವೊಂದರ ಆಗಮನವಾದರೆ ಮುಗೀತು. ಆಮೇಲೆ ಬದುಕು ಎನ್ನುವುದು ಸಂಸಾರವಾಗಿ ಹೆಚ್ಚು ಗಂಭೀರವಾಗತೊಡಗುತ್ತದೆ. ಮಗುವಿನ ವಿದ್ಯಾಭ್ಯಾಸ ಸೇರಿದಂತೆ ಹಲವು ಮುಂದಾಲೋಚನೆಗಳಿಗೆ ದುಡ್ಡು ಹೊಂದಿಸುವ ಕಾಯಕದಲ್ಲಿ ಬೇರೆ ಯೋಚನೆಗಳಿಗೆ ತಲೆ ಓಡುವುದಿಲ್ಲ. ಬಹುತೇಕರ ಜೀವನ ಹೀಗೇ ಆಗಿ ಬದಲಾಗುತ್ತಿರುವಾಗ ಇಲ್ಲೊಬ್ಬರು ಅವರೂಪದ ದಂಪತಿಗಳಿದ್ದಾರೆ. ಇವರ ಪ್ರಪಂಚ ಪರ್ಯಟನೆಯ ನಡುವೆ ಮಗು ಹುಟ್ಟಿದರೂ ಇವರು ಮಗುವಿನೊಂದಿಗೇ ತಮ್ಮ ಪಯಣ ಮುಂದುವರಿಸಿದ್ದಾರೆ! ಅದೂ ತಮ್ಮೆಲ್ಲ ಆಸ್ತಿಪಾಸ್ತಿ ಮಾರಿ, ಬಂದ ಹಣದಲ್ಲಿ!
ಪ್ರವಾಸ ಮಾಡಲು ಆಸ್ತಿ ಮಾರುವುದಾ? ಹೀಗೂ ಉಂಟೇ ಎಂದು ಆಶ್ಚರ್ಯಪಡಬೇಡಿ. ಇರುವ ಅಮೂಲ್ಯ ಜೀವನದಲ್ಲಿ ಆಸ್ತಿ, ಮನೆ ಖರೀದಿಸುದಕ್ಕಿತ ಹೆಚ್ಚು ಬೆಲೆಬಾಳುವುದು ನೆನಪಿನಲ್ಲಿ ಉಳಿಯುವುದು ಪ್ರಪಂಚ ಸುತ್ತುವುದು ಎಂದು ಇವರಿಗೆ ಅನಿಸಿದ್ದರಿಂದಲೇ ಇವರು ಎಲ್ಲ ಮಾರಿದ್ದಾರೆ!
ಯುಎಸ್ ನಿವಾಸಿಗಳಾದ ೨೮ರ ಹರೆಯದ ಖ್ಲೋಯ್ ಎಗ್‌ಬರ್ಟ್ ಹಾಗೂ ಆಕೆಯ ಗಂಡ ೩೧ರ ಹರೆಯದ ಜೋರ್ಡನ್ ತಮ್ಮ ಕೆಲಸವನ್ನು ಬಿಟ್ಟದ್ದಲ್ಲದೆ, ಮನೆ, ಕಾರು ಹಾಗೂ ತಮ್ಮೆಲ್ಲ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿ, ೫೧,೦೦೦ ಪೌಂಡ್ ಮೊತ್ತ ಕಲೆ ಹಾಕಿ ಉಟ್ಟಬಟ್ಟೆಯಲ್ಲಿ ಎದ್ದು ಪ್ರಪಂಚ ಸುತ್ತಲು ಹೊರಟಿದ್ದಾರೆ.
೧೨ ವಾರಗಳ ಮಗುವಿದ್ದಾಗಿನಿಂದಲೇ ಈ ದಂಪತಿಗಳು ತಮ್ಮ ಮಗುವನ್ನು ಕಟ್ಟಿಕೊಂಡು ತಿರುಗಾಡಲು ಹೊರಟಿದೆ. ಈ ಕುಟುಂಬ ಸದ್ಯಕ್ಕೆ ೧೦೬ ದೇಶಗಳನ್ನು ಸುತ್ತಿದೆ. ಸದ್ಯಕ್ಕೆ ಇವರು ಅಂಡೋರಾದಲ್ಲಿದ್ದು, ಮುಂದೆ ಮೊನೇಕಾಕ್ಕೆ ತೆರಳಲಿದ್ದಾರೆ. ಇದಕ್ಕೂ ಮೊದಲೇ ೨೦೧೯ರಲ್ಲಿಯೇ ಈ ದಂಪತಿ ಇಬ್ಬರೇ ಆಸ್ತಿ ಪಾಸ್ತಿ ಮಾರಿ ಪ್ರವಾಸ ಹೊರಟಿದ್ದರು. ಆದರೆ, ಕೋವಿಡ್ ವಕ್ಕರಿಸಿದ್ದರಿಂದ ಅದು ಅರ್ಧದಲ್ಲೇ ನಿಂತುಹೋದರೂ, ಇವರು ಛಲ ಬಿಡದೆ ಮತ್ತೆ ಮತ್ತೆ ಅದನ್ನು ನನಸಾಗಿಸಲೇಬೇಕೆಂದು ಪಣತೊಟಿದ್ದಾರೆ.
ಮೂಲತಃ ಲಾಸ್ ವೇಗಾಸ್‌ನವಳಾದ ಖ್ಲೋಯ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಪ್ರವಾಸ ಹೊರಟಿದ್ದಂತೆ. ನಮ್ಮ ಭವಿಷ್ಯವನ್ನು ನಾವೇ ಬರೆಯಬೇಕೆಂದು ತೀರ್ಮಾನಿಸಿರುವ ನಾವು ಈಗ ನಮ್ಮ ಮಗು ಹುಟ್ಟಿದ ಮೇಲೆ ಅವನಿಗೂ ನಮ್ಮ ಜೊತೆ ಎಲ್ಲ ದೇಶಗಳನ್ನೂ ತೋರಿಸಬೇಕೆಂದು ಕನಸು ಕಂಡಿದ್ದೇವೆ. ಅದರಂತೆ ಒಂದೊಂದೇ ದೇಶಗಳನ್ನು ಸುತ್ತುತ್ತಿದ್ದೇವೆ. ಈಗ ೧೦೬ ದೇಶಗಳನ್ನು ಸುತ್ತಿದ್ದು, ಇನ್ನೂ ೮೯ ದೇಶಗಳಿಗೆ ಭೇಟಿಕೊಡುವ ಉದೇಶವಿದೆ ಎಂದಿದ್ದಾಳೆ.
ಈಕೆ ಹೇಳುವಂತೆ, ಪತಿ ಜೋರ್ಡನ್ ೨೦೧೮ರಲ್ಲಿ ಆಸ್ಟ್ರಿಯಾದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರಿಂದ ಎರಡು ವರ್ಷ ಆಸ್ಟ್ರಿಯಾದಲ್ಲಿರಲು ಯೋಜನೆ ರೂಪಿಸಿದ್ದರು. ಆದರೆ, ಆ ಸಂಸ್ಥೆ ಮುಚ್ಚಿತು. ಹೀಗಾಗಿ ಕೆಲಸಕ್ಕಾಗಿ ಒಂದೇ ದೇಶದಲ್ಲಿರದೆ ಬೇರೆ ಬೇರೆ ದೇಶವನ್ನು ನೋಡಬೇಕೆಂದು ಗುರಿಯಿಟ್ಟೆವು ಎನ್ನುತ್ತಾರೆ.
ಕೋವಿಡ್‌ಗಿಂತ ಮೊದಲು ನ್ಯೂಗಿನಿ, ಸಮೋವಾ, ಟೋಂಗಾಗಳನ್ನು ಸುತ್ತಿದ್ದು ಮಾರ್ಚ್ ೨೦೨೦ರಲ್ಲಿ ಇವರ ಈ ತಿರುಗಾಟಕ್ಕೆ ಕಡಿವಾಣ ಬಿತ್ತು. ದಕ್ಷಿಣ ಫೆಸಿಫಿಕ್ ಭಾಗಕ್ಕೆ ಬಂದಿಳಿದಾಗ, ನಮ್ಮನ್ನು ಒಳಗೆ ಬಿಡಲಿಲ್ಲ. ನಾವು ಅಮೆರಿಕನ್ನರಾದ್ದರಿಂದ ಪ್ರವೇಶವಿಲ್ಲ ಎಂದರು. ನಮಗೆ ಕೊರೋನಾ ಬಂದಿರಬಹುದಾ ಎಂದು ಭಯವಾದರೂ, ನಾವು ಯುಎಸ್‌ಗೆ ಹೋಗದೆ ತಿಂಗಳುಗಟ್ಟಲೆ ಸಮಯವಾಯಿತು ಎಂದು ಸಾಬೀತುಪಡಿಸಲು ಸಾಕಷ್ಟು ಸಮಯ ಹಿಡಿಯಿತು. ನಮ್ಮನ್ನು ಒಳಗೆ ಬಿಟ್ಟರಾದರೂ, ನಾವು ಕೂಡಲೇ ಅಲ್ಲಿಂದ ಹೊರಡಬೇಕು ಎಂದರು. ಆಮೇಲೆ ನಾವು ಫಿಲಿಫೈನ್ಸ್‌ಗೆ ಹೋಗಬೇಕಾಯಿತು. ಅಲ್ಲಿ ಮನಿಲಾಕ್ಕೆ ಬಂದಿಳಿದ ನಮ್ಮಂಥ ಎಲ್ಲ ವಿದೇಶೀಯರೂ ೭೨ ಗಂಟೆಗಳೊಳಗಾಗಿ ಅವರ ದೇಶ ಬಿಡಬೇಕೆಂದರು. ವಿಮಾನಗಳು ಇದ್ದಕ್ಕಿದ್ದಂತೆ ಕ್ಯಾನ್ಸಲ್ ಆಗಿದ್ದೂ ಅಲ್ಲದೆ, ಆ ಕೋವಿಡ್ ಸಂದರ್ಭ ನಿಜಕ್ಕೂ ಬಹಳ ತೊಂದರೆಗಳನ್ನು ಅನುಭವಿಸಬೇಕಾಯ್ತು. ಹಾಗಾಗಿ, ಕೋವಿಡ್ ಮುಗಿವವರೆಗೂ ತಮ್ಮ ಪ್ರವಾಸದ ಯೋಜನೆಯನ್ನು ಮೊಟಕುಗೊಳಿಸಿ ಮತ್ತೆ ಯುಎಸ್‌ಗೆ ಹೋಗಿ ಇರಲು ತೀರ್ಮಾನಿಸಿದೆವು ಎನ್ನುತ್ತಾರೆ.
ಇದನ್ನೂ ಓದಿ: Amritha JOSH! ತಂದೆ ಆಸೆ ಈಡೇರಿಸಲು ಬೈಕಲ್ಲಿ ದೇಶ ಸುತ್ತಿದ ಮಗಳು, 5 ತಿಂಗಳಲ್ಲಿ 23,000 ಕಿ.ಮೀ ಪ್ರಯಾಣ
ಕೋವಿಡ್ ಸಂದರ್ಭ ಹವಾಯ್‌ನಲ್ಲಿಯೇ ಈ ದಂಪತಿ ಇದ್ದ ಸಂದರ್ಭ ಈಕೆ ಗರ್ಭಿಣಿಯೂ ಆದರು. ಫೆಬ್ರವರಿ ೨೦೨೧ರಲ್ಲಿ ಮಗ ಲೆಲೆನ್ ಹುಟ್ಟಿದ. ಮಗ ಹುಟ್ಟಿದರೂ ತಮ್ಮ ಕನಸನ್ನು ಬಿಡಲು ಸಿದ್ಧವಿಲ್ಲದ ಈ ದಂಪತಿ ಪುಟ್ಟ ಮಗುವಿನೊಂದಿಗೆ ಮತ್ತೆ ತಮ್ಮ ಕನಸಿಗೆ ನೀರೆರೆದರು. ಸೆಪ್ಟೆಂಬರ್ ತಿಂಗಳಲ್ಲಿ ಮಗುವಿನೊಂದಿಗೆ ದಕ್ಷಿಣ ಅಮೆರಿಕಾಕ್ಕೆ ಬಂದಿಳಿದರು. ಆದರೆ, ಬಹಳಷ್ಟು ದೇಶಗಳಲ್ಲಿ ಕೋವಿಡ್ ಬಿಗಿ ನಿಯಮಾವಳಿಗಳಿಂದಾಗಿ ಎಲ್ಲೂ ತಿರುಗಾಡಲು ಹಾಗೆಯೇ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ದಂಪತಿಗಳು ತಮ್ಮ ದೇಶಕ್ಕೇ ಮರಳುವ ಯೋಚನೆಯನ್ನು ಮಾಡಿ, ಎಪ್ರಿಲ್ ೨೦೨೨ರಲ್ಲಿ ಮತ್ತೆ ತಮ್ಮ ದೇಶಕ್ಕೆ ಮರಳಿದರು.
ಮರಳಿದ ಮೇಲೆ ಬದುಕು ಅಕ್ಷರಶಃ ಬದಲಾಯಿತಂತೆ. ಈಕೆಯ ಆರೋಗ್ಯದಲ್ಲಿ ವ್ಯತ್ಯಯವಾಗಿ ಪರೀಕ್ಷೆ ಮಾಡಿದಾಗ ಕಿಡ್ನಿಯಲ್ಲಿ ೨೦ ಕಲ್ಲುಗಳಿವೆ ಎಂದು ತಿಳಿದು ಅದನ್ನು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ನಂತರ ಈಕೆಗೆ ಬದುಕು ತುಂಬ ಚಿಕ್ಕದಿದೆ ಅನಿಸತೊಡಗಿದ್ದೂ ಅಲ್ಲದೆ, ಮತ್ತೆ ತಮ್ಮ ಕನಸಿನ ಯೋಜನೆ ಮುಂದುವರಿಸಬೇಕೆಂದು ವಿಶ್ರಾಂತಿಯ ನಂತರ ಈ ಕುಟುಂಬ ಪರ್ಯಟನೆಗೆ ಹೊರಟಿದೆ. ತಮ್ಮ ಮಗನೊಂದಿಗೆ ಜೂನ್ ೨೦೨೨ರಲ್ಲಿ ಹೊರಟ ಇವರು ಯುಎಸ್‌ನಿಂದ ಲಂಡನ್‌ಗೆ ಹಾರಿದ್ದಾರೆ. ಆಗ ಈ ದಂಪತಿ ಮೊದಲು ನೋಡಿದ್ದು ವಿಂಬಲ್ಡನ್!
ಸದ್ಯಕ್ಕೀಗ ಮತ್ತೆ ಈ ದಂಪತಿ ತಿರುಗಾಟದಲ್ಲಿಯೇ ಇದ್ದು, ವಿವಿಧ ಬ್ರ್ಯಾಂಡ್‌ಗಳಿಗೆ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆಗಾಗ ತೊಂದರೆಗಳಾದರೂ ಸದ್ಯ ೧೧೦ ದೇಶಗಳಿಗೆ ಈಕೆ ಭೇಟಿ ಕೊಟ್ಟಿದ್ದಾಳೆ. ಹೋದ ಎಲ್ಲ ದೇಶಗಳಲ್ಲಿ ಇಷ್ಟವಾದದ್ದು ನ್ಯೂಜಿಲ್ಯಾಂಡ್ ಅಂತೆ. ಆ ದೇಶದಲ್ಲೊಂದು ಎನರ್ಜಿ ಫೀಲ್ ಆಯ್ತು. ಕಿವಿ ಜನರು ಸಾಹಸ ಪ್ರಿಯರು. ಬದುಕನ್ನು ಸರಳವಾಗಿ ಸ್ವೀಕರಿಸಿ ಸದಾ ಖುಷಿಯಾಗಿರಲು ಬಯಸುವ ಲೈಟ್ ಹಾರ್ಟೆಡ್ ಮಂದಿ. ಅದು ಬಿಟ್ಟರೆ ಜಪಾನ್ ಹಾಗೂ ಅಂಡೋರಾದಲ್ಲೂ ಒಳ್ಳೆಯ ಎನರ್ಜಿ ಇದೆ. ಒಟ್ಟಾರೆ ಎಲ್ಲ ದೇಶಗಳಲ್ಲೂ ಬಹಳಷ್ಟು ಒಳ್ಳೆಯದನ್ನು ಕಂಡೆವು. ಕಡಿಮೆ ಪ್ರಮಾಣದ ಕೆಟ್ಟದ್ದರ ಅನುಭವವಾಯ್ತು ಎನ್ನುತ್ತಾಳೆ.
ಇದನ್ನೂ ಓದಿ: ವಿಶ್ವದ ವೇಗದ ಪಯಣಿಗರು: ಐದೇ ದಿನದಲ್ಲಿ 50 ರಾಜ್ಯ ಸುತ್ತಿ ಬಂದವರು!