Site icon Vistara News

Tirupati Temple: ತಿರುಪತಿ ತಿರುಮಲ ದರ್ಶನ ಮಾಡಬೇಕೇ?: ಇಲ್ಲಿವೆ ಮಾಹಿತಿ

tirupathi balaji

ಪ್ರವಾಸದಲ್ಲಿ ಆಸಕ್ತಿ ಇರಲಿ ಇಲ್ಲದಿರಲಿ, ಬಹಳಷ್ಟು ಮಂದಿಗೆ ಎಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ ತಿರುಪತಿಯ ಬಾಲಾಜಿ (Tirupati Temple) ದರ್ಶನವನ್ನಾದರೂ ಮಾಡಿ ಬರಬೇಕೆಂಬ ಆಸೆಯಿರುತ್ತದೆ. ಈಗಷ್ಟೇ ಕೆಲಸಕ್ಕೆ ಸೇರಿ ದುಡಿಯಲು ಶುರು ಮಾಡಿದ ಮಕ್ಕಳಿಗೆ ತಮ್ಮ ಹೆತ್ತವರನ್ನೊಮೆ ತಿರುಪತಿ ದರ್ಶನ ಮಾಡಿಸಿ ಬರುವ ಮೂಲಕ ತಮ್ಮ ಹೆತ್ತವರ, ಹಿರಿಯ ಜೀವಗಳ ಮುಖದಲ್ಲಿ ನಗು ನೋಡುವಾಸೆ ಇರುತ್ತದೆ. ಹಲವರಿಗೆ ಪ್ರವಾಸ, ಧಾರ್ಮಿಕ ಕ್ಷೇತ್ರಗಳ ದರ್ಶನದ ಆಸೆಯಿದ್ದರೂ, ಜೀವನದ ಹಲವಾರು ಒತ್ತಡಗಳ ನಡುವಲ್ಲಿ ವರ್ಷಾನುಗಟ್ಟಲೆ ಪ್ರವಾಸ ಮಾಡಲೂ ಸಾಧ್ಯವಾಗಿರುವುದಿಲ್ಲ. ಮಧ್ಯಮ, ಕೆಳ ಮಧ್ಯಮ ವರ್ಗದ ಮಂದಿ ಜೀವನದ ಜಂಜಡದಲ್ಲಿ ಇಂತಹ ಸಣ್ಣ ಸಣ್ಣ ಖುಷಿಗಳು ಮರೆತೇ ಹೋಗಿರುತ್ತವೆ. ಇಂತಹ ಸಮಯದಲ್ಲಿ ಕಡೇಪಕ್ಷ ತಿರುಪತಿ ಬಾಲಾಜಿ ದರ್ಶನ ಎಂಬುದು ಹಲವರ ಕನಸು. ಹಾಗಾದರೆ ಬನ್ನಿ, ತಿರುಪತಿಗೆ ಹೇಗೆ ಹೋಗಿ ಬರಬಹುದು ಎಂಬುದನ್ನು ನೋಡೋಣ.

ತಿರುಪತಿ ಬಾಲಾಜಿ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ವರ್ಷದ ಎಲ್ಲ ಋತುಗಳಲ್ಲಿಯೂ ಜನನಿಬಿಡವಾಗಿ ಇರುವ ದೇವಸ್ಥಾನಗಳಲ್ಲಿಯೂ ಇದು ಪ್ರಮುಖ ಸ್ಥಾನದಲ್ಲಿಯೇ ನಿಲ್ಲುತ್ತದೆ. ಪ್ರತಿದಿನವೂ ತಿರುಪತಿ ಬಾಲಾಜಿಯ ದರ್ಶನಕ್ಕೆ ಬರುವ ಮಂದಿ ಅಂದಾಜು ಸರಾಸರಿ 50,000ದಿಂದ ಒಂದು ಲಕ್ಷದವರೆಗೆ!  ಹೀಗಾಗಿ ಇಷ್ಟು ಅಪಾರ ಸಂಖ್ಯೆಯಲ್ಲಿ ಈ ದೇವಾಲಯದ ದರ್ಶನ ಮಾಡಬಯಸುವ ಭಕ್ತಾದಿಗಳಿಗೆ ದೇವಸ್ಥಾನದ ಟ್ರಸ್ಟ್‌ ಟಿಟಿಡಿ ಸಾಕಷ್ಟು ಸಿದ್ಧತೆಗಳನ್ನೂ, ಸೌಲಭ್ಯಗಳನ್ನೂ ವ್ಯವಸ್ಥೆ ಮಾಡಿದೆ. ಹಾಗಾಗಿ, ಯಾವ ಗಡಿಬಿಡಿ, ಗೊಂದಲಗಳೂ ಇಲ್ಲದಂತೆ ಸಾವಕಾಶವಾಗಿ ದರ್ಶನ ಪಡೆದುಕೊಂಡು ಬರಬಹುದು.

ಆಂಧ್ರಪ್ರದೇಶದ ತಿರುಪತಿ ಎಂಬ ಬೆಟ್ಟ ಪ್ರದೇಶದಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ಈ ಸನ್ನಿಧಿ ಇದೆ. ಏಳುಮಲೆಗಳ ಮೇಲಿರುವ ಈ ದೇವಾಲಯದಲ್ಲಿ ಪವಡಿಸಿರುವ ಶ್ರೀ ವೆಂಕಟೇಶ್ವರನ ದರ್ಶನ ಅಂಥ ಕಷ್ಟದ್ದೇನಲ್ಲ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದಲೂ ಜನರು ಸುಲಭವಾಗಿ ಸಾರ್ವಜನಿಕ ವಾಹನಗಳ ಮೂಲಕವೂ ಬಂದು ದರ್ಶನ ಮಾಡಿಕೊಂಡು ಹೋಗಬಹುದು. ಬಸ್‌, ರೈಲು ಹಾಗೂ ವಿಮಾನ ಸೇವೆಗಳನ್ನು ಹತ್ತಿರದಲ್ಲೇ ಹೊಂದಿರುವುದರಿಂದ ಭಕ್ತಾದಿಗಳಿಗೆ ತಿರುಪತಿ ದರ್ಶನ ಈಗ ಸರಳವಾಗಿದೆ.

ದೇವಸ್ಥಾನ ತಿರುಪತಿ ಪಟ್ಟಣದಿಂದ 22 ಕಿಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಪಯಣಿಸಲು ಸಾಕಷ್ಟು ಜೀಪುಗಳೂ ದೊರೆಯುತ್ತವೆ. ಆಗಾಗ ಬಸ್‌ ಸೌಲಭ್ಯವೂ ಇವೆ. ದೇಶದ ಎಲ್ಲ ಪ್ರಮುಖ ನಗರಗಳಿಂದಲೂ ತಿರುಪತಿಗೆ ಬಸ್‌ ಸೌಲಭ್ಯದ ವ್ಯವಸ್ಥೆ ಇದೆ. ರೈಲಿನಲ್ಲಿ ತಿರುಪತಿಗೆ ಪ್ರಯಾಣ ಬಯಸುವವರಿಗೂ ಚೆನ್ನೈ, ಬೆಂಗಳೂರು, ಮಧುರೈ, ವಿಶಾಖಪಟ್ಟಣ, ಮುಂಬೈ ಮತ್ತಿತರ ದೇಶದ ಪ್ರಮುಖ ನಗರಗಳಿಂದಲೂ ಸಂಪರ್ಕ ಕಲ್ಪಿಸುತ್ತದೆ. ತಿರುಪತಿ ಬಾಲಾಜಿ ದೇವಸ್ಥಾನ ತಿರುಪತಿ ರೈಲ್ವೇ ಸ್ಟೇಷನ್‌ನಿಂದ 22 ಕಿಮೀ ದೂರದಲ್ಲಿದೆ. ಅಷ್ಟೇ ಅಲ್ಲ, ಸಿಕಂದರಾಬಾದ್‌ನಿಂದ ನೂತನ ವಂದೇ ಭಾರತ್‌ ರೈಲು ಕೂಡ ತಿರುಪತಿಗೆ ಸಂಪರ್ಕ ಕಲ್ಪಿಸಿದೆ. ಇನ್ನು, ವಿಮಾನದಲ್ಲಿ ಹೋಗುವವರಿಗೆ ತಿರುಪತಿ ಏರ್‌ಪೋರ್ಟ್‌/ ರೇಣಿಗುಂಟ ಏರ್‌ಪೋರ್ಟ್‌ ಸೌಲಭ್ಯವೂ ಇದೆ.

ನಿತ್ಯವೂ ಸಾವಿರಗಟ್ಟಲೆ ಭಕ್ತಾದಿಗಳು ತಿರುಪತಿ ದರ್ಶನ ಬಯಸುವುದರಿಂದ ಸುಲಭವಾಗಿ ಎಲ್ಲರಿಗೂ ದರ್ಶನ ಪ್ರಾಪ್ತಿಯಾಗಲು ದೇವಸ್ಥಾನ ಟ್ರಸ್ಟ್‌ ಸಾಕಷ್ಟು ಏರ್ಪಾಡುಗಳನ್ನೂ ಮಾಡಿದೆ. ವಿವಿಧ ವಿಭಾಗಗಳ ದರ್ಶನ ಸೇವೆಗಳು ಲಭ್ಯವಿದ್ದು, ಅವರವರ ಅನುಕೂಲಕ್ಕೆ ಅನುಗುಣವಾಗಿ ದೇವರ ದರ್ಶನ ಮಾಡಬಹುದು. ಇವುಗಳ ಪೈಕಿ ಧರ್ಮ ದರ್ಶನ, ಶೀಘ್ರದರ್ಶನ, ಸರ್ವದರ್ಶನ ಹಾಗೂ ದಿವ್ಯ ದರ್ಶನ ಎಂಬ ನಾಲ್ಕು ಬಗೆಯ ದರ್ಶನಗಳಿವೆ. ಭಾರತದ ಮೂಲೆ ಮೂಲೆಯಲ್ಲಿರುವ ಟಿಟಿಡಿ ಕೌಂಟರ್‌ಗಳ ಮೂಲಕ ಹಾಘೂ ಆನ್‌ಲೈನ್‌ ಮೂಲಕ ದರ್ಶನವನ್ನು ನಿಮಗೆ ಬೇಕಾದ ದಿನಕ್ಕೆ ಕಾದಿರಿಸಬಹುದು. ದೇವರ ದರ್ಶನಕ್ಕೆ ಕಡಿಮೆ ಎಂದರೂ ಮೂರು ಗಂಟೆಗಳು ಹಿಡಿಯಬಹುದಾಗಿದ್ದು, ಹೆಚ್ಚೆಂದರೆ 10 ಗಂಟೆಗಳೂ ಆಗಬಹುದು. ಹಾಗಾಗಿ ಒಂದು ದಿನವಿಡೀ ದರ್ಶನಕ್ಕೆ ಮೀಸಲಿಡುವುದು ಉತ್ತಮ. 

ಇದನ್ನೂ ಓದಿ: Tirupati Temple: ಮಾರ್ಚ್ 1ರಿಂದ ತಿರುಪತಿ ದೇಗುಲದಲ್ಲಿ ಫೇಸ್‌ ರಿಕಗ್ನೇಷನ್ ವ್ಯವಸ್ಥೆ

Exit mobile version