Site icon Vistara News

Year Ender 2023: ಕ್ರಿಸ್‌ಮಸ್‌ ಆಚರಣೆಯನ್ನು ನೋಡಲೇಬೇಕಾದ ಜಗತ್ತಿನ ಟಾಪ್‌ 10 ನಗರಗಳಿವು

christmas destinations Year Ender 2023

ಜಗತ್ತು ಸುತ್ತುವ ಆಸೆ ಪ್ರತಿ ಪ್ರವಾಸೀ ಪ್ರಿಯರಿಗೂ ಇದ್ದೇ ಇರುತ್ತದೆ. ಅದರಲ್ಲೂ ಕೆಲವು ನಿರ್ಧಿಷ್ಟ ಸಮಯಗಳಲ್ಲಿ, ಒಂದು ಜಾಗದಲ್ಲಿ ನಡೆಯುವ ವಿಶೇಷ ಆಚರಣೆಗಳು, ಸಂದರ್ಭಗಳು, ಆ ಸ್ಥಳದ ನಿಜವಾದ ಪರಿಚಯವನ್ನೂ ಮಾಡಿಸುತ್ತದೆ. ಆಹಾಋ, ಸಂಸ್ಕೃತಿ, ಆಚರಣೆಗಳು ಪ್ರತಿ ಪ್ರದೇಶದ ವಿಶೇಷವಾದ ಆಕರ್ಷಣೆಗಳು. ಇಂಥ ಪ್ರಮುಖ ಹಬ್ಬಗಳ ಪೈಕಿ ಕ್ರಿಸ್‌ಮಸ್‌ ಕೂಡಾ ಒಂದು. ಕ್ರಿಸ್‌ಮಸ್‌ ಸಂದರ್ಭ (Year Ender 2023) ವಿದೇಶ ಯಾತ್ರೆ ಮಾಡಿದರೆ, ಅಲ್ಲಿನ ವಿಶೇಷ ಪರಿಚಯವೇ ಆಗುತ್ತದೆ. ಹಾಗಾದರೆ, ಕ್ರಿಸ್‌ಮಸ್‌ನ ವಿಶೇಷ ಸಂದರ್ಭದಲ್ಲಿ ಭೇಟಿ ಕೊಟಡಬಹುದಾದ ಪ್ರಪಂಚದ ಟಾಪ್‌ 10 ನಗರಗಳಾವುವು ಎಂಬುದನ್ನು ನೋಡೋಣ ಬನ್ನಿ.

ಕೋಪನ್‌ಹೇಗನ್‌, ಡೆನ್ಮಾರ್ಕ್

ಕ್ರಿಸ್‌ಮಸ್‌ನ ಸಂದರ್ಭ ಕೋಪನ್‌ಹೇಗನ್‌ ನೋಡಬೇಕು. ತೀರಾ ದುಬಾರಿಯಲ್ಲದ ಡೆನ್ಮಾರ್ಕ್‌ನ ಪಟ್ಟಣಗಳಲ್ಲಿ ಕೋಪನ್‌ಹೇಗನ್‌ ಕೂಡಾ ಒಂದು. ಈ ಪುರಾತನ ಪಟ್ಟಣದ ಕೋಟೆ ಕೊತ್ತಲಗಳು, ಕ್ರಿಸ್‌ಮಸ್‌ ಸಂದರ್ಭ ಓಂದು ವಿಶೇಷ ಕಳೆಯಿಂದ ಮಿನುಗುತ್ತವೆ.

ಡಬ್ಲಿನ್‌, ಐರ್ಲ್ಯಾಂಡ್‌

ಕ್ರಿಸ್‌ಮಸ್‌ ಸಂದರ್ಭ ನಿಜವಾದ ಕ್ರಿಸ್‌ಮಸ್‌ನ ಅನುಭವ ಪಡೆಯಬೇಕೆಂದರೆ ಡಬ್ಲಿನ್‌ಗೆ ಹೋಗಬೇಕು. ಡಬ್ಲಿನ್‌ ಹಬ್ಬದ ವಾತಾವರಣ, ಅಲ್ಲಿ ಪುರಾತನ ಕೊತ್ತಲಗಳು, ಪಬ್‌ಗಳು ಹೀಗೆ ಒಂದೇ ಎರಡೇ, ಇಡಿಯ ಊರಿಗೆ ಊರೇ, ಕ್ರಿಸ್‌ಮಸ್‌ನ ಬಣ್ಣಗಳಿಂದ ಕಂಗೊಳಿಸುತ್ತವೆ. ಇಲ್ಲಿ ನಡೆವ ೧೨ ಪಬ್‌ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಎಲ್ಲಿಲ್ಲದ ಬೇಡಿಕೆ. ಕ್ರಿಸ್‌ಮಸ್‌ನ ರಾತ್ರಿಯೊಳಗೆ ೧೨ ಪಬ್‌ಗಳಿಗೆ ಭೇಟಿ ನೀಡುವ ಈ ಸ್ಪರ್ಧೆ ಕಿಕ್ಕೇರಿಸುವಂಥದ್ದು.

ಸಾಲ್ಸ್‌ಬರ್ಗ್‌, ಆಸ್ಟ್ರಿಯಾ

ಕ್ರಿಸ್‌ಮಸ್‌ ಹಬ್ಬದ ವಾತಾವರಣ ಅದ್ಭುತವಾಗಿರುವ ಇನ್ನೊಂದು ಊರೆಂದರೆ ಆಸ್ಟ್ರಿಯಾದ ಸಾಲ್ಸ್‌ಬರ್ಗ್.‌ ಇಲ್ಲಿನ ಹಳೆಯ ವಾಸ್ತುಶಿಲ್ಪಗಳು, ಹಿಮಮುಚ್ಚಿದ ಪರ್ವತಗಳ ಮನಮೋಹಕ ದೃಶ್ಯ, ಸಂಗೀತ ಕಾರ್ಯಕ್ರಮಗಳು ಎಲ್ಲವೂ ಕ್ರಿಸ್‌ಮಸ್‌ಗೆ ಕಳೆಯನ್ನೇ ನೀಡುತ್ತವೆ. ಇಲ್ಲಿ ಯುರೋಪ್‌ನ ಅತ್ಯಂತ ಹಳೆಯ ಕ್ರಿಸ್‌ಮಸ್‌ ಮಾರುಕಟ್ಟೆಯೂ ಇದ್ದು, ಸಾಂಪ್ರದಾಯಿಕವಾಗಿ ಕ್ರಿಸ್‌ಮಸ್ ಆಚರಣೆಯನ್ನೂ ಇಲ್ಲಿ ಕಾಣಬಹುದು.

ನ್ಯೂರೆಮ್‌ಬರ್ಗ್‌, ಜರ್ಮನಿ

ಜರ್ಮನಿಯ ಈ ಮುದ್ದಾದ ಪಟ್ಟಣದಲ್ಲಿ ಕ್ರಿಸ್‌ಮಸ್‌ ಸಂದರ್ಭ 180ಕ್ಕೂ ಹೆಚ್ಚು ಕ್ರಿಸ್‌ಮಸ್‌ ಸ್ಟಾಲ್‌ಗಳು ಮಾರುಕಟ್ಟೆಯನ್ನು ಅಲಂಕರಿಸಿರುತ್ತವೆ. ಬಗೆಬಗೆಯ ಆಟಿಕೆಗಳಿಂದ ಹಿಡಿದು ಜಿಂಜರ್‌ಬ್ರೆಡ್‌ವರೆಗೆ ಬೇಕುಬೇಕಾದ್ದೆಲ್ಲ ಈ ಮಾರುಕಟ್ಟೆಯಲ್ಲಿ ಸಿಗುತ್ತದೆ. ಈ ಜಾತ್ರೆಯಂತಿರುವ ಮಾರುಕಟ್ಟೆಯಲ್ಲಿ ಸುತ್ತಾಡುವುದೇ ಕ್ರಿಸ್‌ಮಸ್‌ನ ಪ್ರಮುಖ ಆಕರ್ಷಣೆಗಳಲ್ಲೊಂದು. ಇಲ್ಲಿ ೧೩ನೇ ಶತಮಾನದಲ್ಲಿ ಮೊದಲ ಬಾರಿಗೆ ಮಾಡಿದ್ದರೆನ್ನಲಾದ ಪ್ರಸಿದ್ಧ ಲೆಬ್‌ಕುಚೆನ್‌ ಜಿಂಜರ್‌ ಬ್ರೆಡ್ಡಿನ ರುಚಿ ನೋಡಿವುದನ್ನು ಮರೆಯಬೇಡಿ.

ನ್ಯೂಯಾರ್ಕ್‌, ಯುಎಸ್‌ಎ

ಕ್ರಿಸ್‌ಮಸ್‌ನ ನಿಜವಾದ ಅದ್ದೂರಿಯ ಮೆಟ್ರೋಪಾಲಿಟನ್‌ ನಗರವೊಂದರಲ್ಲಿನ ಆಚರಣೆ ನೋಡಬೇಕೆಂದಿದ್ದರೆ ನ್ಯೂಯಾರ್ಕ್‌ ಬೆಸ್ಟ್‌ ಆಯ್ಕೆ. ಅತ್ಯದ್ಭುತವಾಗಿ ಅಲಂಕೃತಗೊಂಡ ಕ್ರಿಸ್‌ಮಸ್‌ ಟ್ರೀಗಳು ಎಲ್ಲೆಡೆ ನಳನಳಿಸುತ್ತವೆ. ನ್ಯೂಯಾರ್ಕ್‌ ಗಾರ್ಡನ್‌ ಗ್ಲೋ ಎಂಬ ಹೊಸ ಮಾರ್ಗದ ತುಂಬ ಕ್ರಿಸ್‌ಮಸ್‌ ಲೈಟಿಂಗ್ಸ್‌ ಹಾಗೂ ಅಲಂಕಾರಗಳಿಂದ ಸಜ್ಜಾಗಿರುತ್ತೆ. ನೃತ್ಯಗಳು, ಸಂಗೀತ, ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ಈ ಸಂದರ್ಭ ಎಲ್ಲೆಡೆ ನಡೆಯುತ್ತಿರುತ್ತದೆ. ಇಡೀ ನಗರವೇ ಅದ್ಭುತವಾಗಿ ಅಲಂಕಾರಗೊಂಡಿರುವುದನ್ನು ನೋಡುವುದಕ್ಕೆ ಕ್ರಿಸ್‌ಮಸ್‌ ಸಮಯದಲ್ಲೇ ಇಲ್ಲಿಗೆ ಭೇಟಿ ಕೊಡಬೇಕು.

ಬರ್ಲಿನ್‌, ಜರ್ಮನಿ

ಬರ್ಲಿನ್‌ ಸುತ್ತಮುತ್ತ ಸುಮಾರು 50ಕ್ಕೂ ಹೆಚ್ಚ ಕ್ರಿಸ್‌ಮಸ್‌ ಮಾರುಕಟ್ಟೆಗಳು, ನೈಟ್‌ಲೈಫ್‌ ಎಲ್ಲವೂ ಕ್ರಿಸ್‌ಮಸ್‌ನ ಪ್ರಮುಖ ಆಕರ್ಷಣೆ. ನವೆಂಬರ್‌ನಿಂದಲೇ ಬರ್ಲಿನ್‌ ಬೊಟಾನಿಕಲ್‌ ಗಾರ್ಡನ್‌ ಜಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕಾರಗೊಳ್ಳಲು ಆರಂಭವಾಗುತ್ತದೆ. ಜನವರಿ ಅಂತ್ಯದವರೆಗೂ ಈ ಸಂಭ್ರಮ ಮುಂದುವರಿಯುವುದರಿಂದ, ಇಲ್ಲಿ ಸಂಜೆಯ ವಾಕ್‌ ಮುದ ನೀಡುತ್ತದೆ.

ರೋಮ್‌, ಇಟಲಿ

ಮ್ಯೂಸಿಯಂಗೆ ಪ್ರಸಿದ್ಧವಾದ ನಗರಿ ರೋಮ್‌ ಕೂಡಾ ಕ್ರಿಸ್‌ಮಸ್‌ನ ಸಂದರ್ಭ ನೋಡಲು ಕಣ್ಣಿಗೆ ಹಬ್ಬ. ಬಗೆಬಗೆಯ ಇಟಾಲಿಯನ್‌ ಆಹಾರಗಳು ಹಾಗೂ ಇಲ್ಲಿನ ಸಂಸ್ಕೃತಿಯನ್ನು ಅನುಭವಿಸಲು ಆಸಕ್ತಿಯಿರುವ ಮಂದಿಗೆ ಇದು ಬೆಸ್ಟ್‌ ಕಾಲ. ವ್ಯಾಟಿಕನ್‌ ಮಿಡ್‌ನೈಟ್‌ ಮಾಸ್‌ ಕೂಡಾ ಅತ್ಯಂತ ಜನಪ್ರಿಯ.

ಲ್ಯಾಪ್‌ಲ್ಯಾಂಡ್‌, ಫಿನ್‌ಲ್ಯಾಂಡ್‌

ಇಲ್ಲಿನ ಜಗತ್ಪ್ರಸಿದ್ಧ ಸಾಂಟಾ ಕ್ಲಾಸ್‌ ಹಳ್ಳಿಗೆ ಭೇಟಿ ನೀಡುವುದರಿಂದ ಹಿಡಿದು ಕ್ರಿಸ್‌ಮಸ್‌ನ ಮಜವಾದ ಹಬ್ಬದ ವಾತಾವರಣವನ್ನು ಇಲ್ಲಿ ಸವಿಯಬಹುದು. ಇಲ್ಲಿನ ಹಿಮಚ್ಛಾದಿತ ಪರಿಸರ ಈ ಹಬ್ಬವನ್ನು ಇನ್ನಷ್ಟು ಮತ್ತಷ್ಟು ಸೊಗಸಾಗಿಸುತ್ತದೆ. ಡಿಸೆಂಬರ್‌ನಲ್ಲಿ ಇಲ್ಲಿ ನಾರ್ದರ್ನ್‌ ಲೈಟ್ಸ್‌ ಕಾಣುವ ಸಂಭವವೂ ಹೆಚ್ಚಿದೆ. ಆರ್ಕ್ಟಿಕ್‌ ಸರ್ಕಲ್‌ ಭೇಟಿ ಇತ್ಯಾದಿಗಳನ್ನೂ ಮಾಡಬಹುದು.

ಎಡಿನ್‌ಬರ್ಗ್‌, ಸ್ಕಾಟ್‌ಲ್ಯಾಂಡ್‌

ಕ್ರಿಸ್‌ಮಸ್‌ನ ಸಂದರ್ಭ ಎಡಿನ್‌ಬರ್ಗ್‌ನ ಬೀದಿಗಳಲ್ಲಿ ಸುತ್ತಾಡಿದರೆ ಸಾಕು ನಿಜವಾದ ಕ್ರಿಸ್‌ಮಸ್‌ ಅನುಭವ ನಿಮ್ಮದಾಗುತ್ತದೆ. ಇಲ್ಲಿನ ಬೀದಿಯಲ್ಲಿ ನಡೆಯುವ ಹೊಸವರ್ಷದ ಪಾರ್ಟಿ ಜಗತ್ಪ್ರಸಿದ್ಧ ಕೂಡಾ. ಹ್ಯಾರಿ ಪಾಟರ್‌ ಕಥಾ ಜಗತ್ತು ಉದ್ಭವವಾದ ಜಾಗವೂ ಕೂಡಾ ಇದೇ. ಹಾಗ್‌ವರ್ಟ್‌ ಹೌಸ್‌, ಟಾಮ್‌ ರಿಡಲ್‌ ಗ್ರೇವ್‌ ಇತ್ಯಾದಿಗಳಿಗೆ ಭೇಟಿ ಕೊಡಬಹುದು.

ಮಾಂಟ್ರಿಯಲ್‌, ಕೆನಡಾ

ಕೆನಡಾದ ಎರಡೇ ಅತೂ ದೊಡ್ಡ ನಗರ. ಸ್ಕೀಯಿಂಗ್‌ನಿಂದ ಹಿಡಿದು ಐಸ್‌ ರಿಂಕ್‌ವರೆಗಿನ ಎಲ್ಲ ಆಟಗಳನ್ನೂ ಇಲ್ಲಿ ಪ್ರಯತ್ನಿಸಬಹುದು. ಇಲ್ಲಿ ಸಾಂಟಾ ಕ್ಲಾಸ್‌ ಪೆರೇಡ್‌ ಕೂಡಾ ನಡೆಯುತ್ತಿದ್ದು ಇದಕ್ಕೆ ಸುಮಾರು ೧೦೦ ವರ್ಷಗಳ ಇತಿಹಾಸವಿದೆ. ಕ್ರಿಸ್‌ಮಸ್‌ ಪಟಾಕಿಗಳು, ತೇಲುವ ಪ್ರತಿಮೆಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಇದನ್ನೂ ಓದಿ: Winter Travel Destinations: ಚಳಿಗಾಲದಲ್ಲಿ ಪ್ರವಾಸ ಮಾಡಬಹುದಾದ ದೇಶದ ಟಾಪ್ 11 ತಾಣಗಳು

Exit mobile version