Site icon Vistara News

Tourism Students Conclave : ಪ್ರವಾಸೋದ್ಯಮ ಶಿಕ್ಷಣದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಳ

tourisum

ಬೆಂಗಳೂರು: ದೇಶಾದ್ಯಂತ ಪ್ರವಾಸೋದ್ಯಮ ವಲಯ ವ್ಯಾಪಕವಾಗಿ ವಿಸ್ತರಣೆಯಾಗುತ್ತಿರುವುದರಿಂದ, ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ( Tourism Students Conclave ) ಭವಿಷ್ಯದ ದಿನಗಳಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂದು ಇಂಡಸ್ಟ್ರಿಯ ತಜ್ಞರು ಹೇಳಿದ್ದಾರೆ.

ಹೇಸನ್ಸ್‌ ಅಕಾಡೆಮಿ (Haysans Academy) ಹಾಗೂ ಟ್ರಾವೆಲ್ಸ್‌ ವಲಯದ ಸಂಘಟನೆ ಕೆಎಸ್‌ಟಿಒಎ, ಕಾಮತ್‌ ಗ್ರೂಪ್‌ ಆಫ್‌ ಹೋಟೆಲ್ಸ್‌, ಹ್ಯಾಪಿ ವೆಕೇಶನ್‌, ಸತ್ಯ ಆಯಿ ಟೂರಿಸ್ಟ್‌ ಮೊದಲಾದ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ವಿದ್ಯಾರ್ಥಿಗಳಿಗೋಸ್ಕರ ಸಮಾವೇಶ ಹಾಗೂ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಲಾಯಿತು. ಆನ್‌ಲೈನ್‌ ಮೂಲಕವೂ ರಾಜ್ಯದ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: Vande Bharat Express Train: ಆಗಸ್ಟ್ 25ಕ್ಕೆ ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ?

ಪ್ರವಾಸೋದ್ಯಮ ವಲಯದ ಹ್ಯಾಪಿ ವೆಕೇಶನ್ಸ್‌ ಸಂಸ್ಥೆಯ ಸಿಇಒ ಮುರಳಿ ಕೃಷ್ಣ ಅವರು ಮಾತನಾಡಿ, ಪ್ರವಾಸೋದ್ದಿಮೆಯ ಪರಿಕಲ್ಪನೆ ಅತ್ಯಂತ ಪ್ರಾಚೀನ ಕಾಲದ್ದು, ನಾಗರಿಕತೆಯ ಉದಯ ಕಾಲದ ಕಾಲಘಟ್ಟದಿಂದಲೂ ಮಾನವ ಹೊಸ ಪ್ರದೇಶಗಳಿಗೆ ಸಂಚರಿಸುವುದು, ನಿಸರ್ಗದ ಅನ್ವೇಷಣೆಯಲ್ಲಿ ತೊಡಗುತ್ತಿದ್ದ. ಅಂದಿನಿಂದ ಇಲ್ಲಿಯವರೆಗೆ ಹಾಗೂ ಭವಿಷ್ಯದಲ್ಲೂ ಪ್ರವಾಸೋದ್ಯಮ ಚಿರಂತನವಾಗಿ ಉಳಿಯಲಿದೆ. ಕೋವಿಡ್‌ ಸಂದರ್ಭ ನಿರ್ಬಂಧಗಳಿಂದಾಗಿ ಟೂರಿಸಂ ವಲಯಕ್ಕೆ ಅಡೆತಡೆ ಆಗಿದ್ದರೂ ಬಳಿಕ ಅಭೂತಪೂರ್ವವಾಗಿ ಹಾಗೂ ವೇಗವಾಗಿ ಬೆಳೆದಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ಉದ್ಯೋಗಾವಕಾಶಗಳೂ ಇದೆ. ಯುವಜನತೆ ಅದನ್ನು ಬಳಸಿಕೊಳ್ಳಬೇಕು ಎಂದು ವಿವರಿಸಿದರು.

ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಏವಿಯೇಶನ್‌ ಆಂಡ್‌ ಲಾಜಿಸ್ಟಿಕ್ಸ್‌ನ ಮ್ಯಾನೇಜಿಂಗ್‌ ಪಾರ್ಟ್‌ನರ್‌ ಆದ ವಿ.ಎನ್‌.ಬಿ ನಾಯರ್‌ ಅವರು ಮಾತನಾಡಿ, ಭಾರತದಲ್ಲಿ ಟೂರಿಸಂ ಹಿಂದೆಂದಿಗಿಂತ ಹೆಚ್ಚು ವೈವಿಧ್ಯಮಯವಾಗಿ ಬೆಳೆಯುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಮತ್‌ ಹೋಟೆಲ್‌ ಗ್ರೂಪ್‌ನ ಸಿಇಒ ವೀರೇಂದ್ರ ಕಾಮತ್‌ ಅವರು ಮಾತನಾಡಿ, ಹೋಟೆಲ್‌ ಉದ್ದಿಮೆಯಲ್ಲಿ ಯುವಜನತೆಗೆ ಉತ್ತಮ ಗಳಿಕೆಗೆ ದಾರಿಗಳಿವೆ. ಆದರೆ ಶ್ರದ್ಧೆ, ಪ್ರಾಮಾಣಿಕತೆ, ಉತ್ಸಾಹ ಮತ್ತು ತಾಳ್ಮೆಯಿಂದ ಕೆಲಸ ಕಲಿಯಬೇಕು ಹಾಗೂ ದುಡಿಯಬೇಕು. ಒಬ್ಬ ವ್ಯಕ್ತಿ ಒಂದು ಹೋಟೆಲ್‌ನಲ್ಲಿ ಕನಿಷ್ಠ 10 ವರ್ಷ ದುಡಿದರೆ ಹನ್ನೊಂದನೆಯ ವರ್ಷಕ್ಕೆ ಆತ ಸ್ವಂತ ಹೋಟೆಲ್‌ ಸ್ಥಾಪಿಸಲು ಬೇಕಾದ ಬಂಡವಾಳ ಹಾಗೂ ವೃತ್ತಿಪರ ಅನುಭವವನ್ನು ಪಡೆಯಬಲ್ಲ. ಅಂಥ ಅನೇಕ ಉದಾಹರಣೆಗಳು ನಮ್ಮಲ್ಲಿವೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕೆಎಸ್‌ಟಿಒಎ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಸನ್ಸ್‌ ಅಕಾಡೆಮಿಯ ನಿರ್ದೇಶಕ ಡಾ. ತನುಜ್‌ ದೇವ್‌ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸತ್ಯ ಸಾಯಿ ಟೂರಿಸ್ಟ್‌ನ ಸಿಎಫ್‌ಒ ಗೀತಾ ಚಿದಂಬರಂ, ಹೇಸನ್ಸ್‌ ಅಕಾಡೆಮಿಯ ನಿರ್ದೇಶಕ ಬಾಬು ಕೋಶಿ, ಕೆಎಸ್‌ಟಿಒಎ ಉಪಾಧ್ಯಕ್ಷ ನರೇಶ್‌ ಉಡುಪ, ಕಾರ್ಯಕಾರಿ ಸದಸ್ಯ ತಂತ್ರಿ ಮೊದಲಾದವರು ಭಾಗವಹಿಸಿದ್ದರು.

Exit mobile version