ಪ್ರವಾಸದ ಸೂಕ್ತ ಸ್ಥಳಗಳು:
ಮಳೆಗಾಲ ಆರಂಭವಾಗಿದೆ. ಈ ಮುಂಗಾರಿನಲ್ಲಿ ಜಾಲಿ ರೈಡ್ ಹೋಗಿ ಒಂದಿಷ್ಟು ದಿನ ಪ್ರವಾಸದ ( Places To Visit In July ) ಮೂಡ್‌ನಲ್ಲಿದ್ದುಬರಬೇಕು ಎನ್ನುತ್ತದೆ ಅನೇಕರ ಮನಸ್ಸು. ಎಲ್ಲೆಡೆ ಹಸಿರು ಕಂಗೊಳಿಸುವ ಈ ಸಮಯದಲ್ಲಿ ಯಾವ್ಯಾವ ಸ್ಥಳಗಳಿಗೆ ಪ್ರವಾಸ ಹೋಗಬಹುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಇದ್ದಿರಬಹುದು. ಅದಕ್ಕೆಂದೇ ನಾವಿಲ್ಲಿ ಒಂದಿಷ್ಟು ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.
ಲೇ ಲಡಾಕ್
ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಲೇ ಲಡಾಕ್‌ನ್ನು ಭೇಟಿ ನೀಡುವುದಕ್ಕೆ ಇದು ಸೂಕ್ತ ಸಮಯ. ಟಿಬೆಟಿಯನ್ ಬೌದ್ಧ ಮಠಗಳಿಂದ ತುಂಬಿರುವ ಲಡಾಕ್‌ನಲ್ಲಿ ಪಾಂಗಾಂಗ್ ಸರೋವರ, ಪರ್ವತ ಶ್ರೇಣಿ ಎಲ್ಲವೂ ನಿಮ್ಮನ್ನು ಸೆಳೆಯುತ್ತದೆ. ಅದರ ಜತೆಗೆ ನುಬ್ರಾ ಕಣಿವೆಗ ಕೂಡ ಲೇ ಲಡಾಕ್ ಸನಿಹದಲ್ಲೇ ಇದ್ದು, ಅದಕ್ಕೂ ಕೂಡ ನೀವು ಭೇಟಿ ನೀಡಬಹುದು. ಟ್ರೆಕ್ಕಿಂಗ್, ಮೌಂಟೇನ್ ಬೈಕಿಂಗ್, ಜೀಪ್ ಸಫಾರಿ, ಮೋಟಾರ್ ಸೈಕಲ್ ರೋಡ್ ಟ್ರಿಪ್ ಸೇರಿ ಇನ್ನಷ್ಟು ರೀತಿಯ ಸಾಹಸಮಯ ಕೆಲಸಗಳನ್ನು ನೀವಿಲ್ಲಿ ಮಾಡಬಹುದು. ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಜೂನ್‌ನಿಂದ ಸೆಪ್ಟೆಂಬರ್.
ಇದನ್ನೂ ಓದಿ: Tiger Sighting: ಹುಲಿಯ ಲಂಗೂರ್ ಬೇಟೆ, ಪ್ರವಾಸಿಗರಿಗೆ ಕಂಡ ಅಪರೂಪದ ದೃಶ್ಯ
ಸ್ಪಿತಿ ಕಣಿವೆ
ಹಿಮಾಚಲ ಪ್ರದೇಶದಲ್ಲಿರುವ ಸ್ಪಿತಿ ಕಣಿವೆ ಕೂಡ ಈ ತಿಂಗಳಲ್ಲಿ ಪ್ರವಾಸಕ್ಕೆ ಉತ್ತಮ ಆಯ್ಕೆಯಾಗಿದೆ. ಹಿಮಗಳಿಂದ ಆವೃತವಾಗಿರುವ ಪರ್ವತಗಳ ವಿಹಂಗಮ ನೋಟವನ್ನು ನೀವು ಇಲ್ಲಿಂದ ಕಾಣಬಹುದು. ವರ್ಷದ ಆರು ತಿಂಗಳುಗಳ ಕಾಲ ಮಾತ್ರವೇ ಇಲ್ಲಿಗೆ ಭೇಟಿ ನೀಡಲು ಸಾಧ್ಯ. ಉಳಿದ ಆರು ತಿಂಗಳು ಇಲ್ಲಿಗೆ ರಸ್ತೆ ಸಂಪರ್ಕವೇ ಕಡಿತವಾಗಿರುತ್ತದೆ. ಕಡಿಮೆ ಜನಸಂಖ್ಯೆಯಿರುವ ಈ ಕಣಿವೆಯಲ್ಲಿ ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ನೀವು ಇಲ್ಲಿ ಟ್ರೆಕ್ಕಿಂಗ್ ಮಾಡಬಹುದಾಗಿದೆ. ಅದಷ್ಟೇ ಅಲ್ಲದೆ ಕ್ಯಾಂಪಿಂಗ್, ಮೋಟಾರ್ ಬೈಕ್ ರೋಡ್ ಟ್ರಿಪ್, ರಿವರ್ ರಾಫ್ಟಿಂಗ್, ಯಾಕ್ ಸಫಾರಿ ಸೇರಿ ವಿವಿಧ ರೀತಿಯ ಸಾಹಸಗಳನ್ನು ಮಾಡಬಹುದು. ಸ್ಥಳೀಯ ಟೀ ಶಾಪಿಂಗ್, ಹಿಮ ಚಿರತೆಗಳನ್ನು ನೋಡುವುದನ್ನು ಕೂಡ ಮಿಸ್ ಮಾಡಿಕೊಳ್ಳಬಾರದು. ಇಲ್ಲಿಗೆ ಭೇಟಿ ನೀಡಲು ಮೇ ಇಂದ ಅಕ್ಟೋಬರ್‌ವರೆಗೆ ಸೂಕ್ತ ಸಮಯವಾಗಿದೆ.
ಕೊಡೈಕೆನಾಲ್
ತಮಿಳುನಾಡಿನ ಪ್ರಸಿದ್ಧ ಕೊಡೈಕೆನಾಲ್ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಹನಿಮೂನ್ ತಾಣಗಳಲ್ಲಿ ಒಂದಾಗಿದೆ. ಲೇಕ್‌ಸೈಡ್ ರೆಸಾರ್ಟ್‌ಗಳಿಂದಲೇ ತುಂಬಿಕೊಂಡಿರುವ ಈ ಪಟ್ಟಣದಲ್ಲಿ ನೀವು ಮಂಜು ತುಂಬಿದ ಬೆಟ್ಟಗಳನ್ನು, ಜಲಪಾತಗಳನ್ನು ಕಾಣಬಹುದು. ಪಳನಿ ಬೆಟ್ಟಗಳ ಇಳಿಜಾರಿನಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ. ಇಲ್ಲಿ ನೀವು ಬೆಟ್ಟಗಳನ್ನು ಹತ್ತುವುದರೊಂದಿಗೆ ಸೈಕ್ಲಿಂಗ್, ಹೈಕಿಂಗ್, ಟ್ರೆಕ್ಕಿಂಗ್ ಮಾಡಬಹುದಾಗಿದೆ.
ಇದನ್ನೂ ಓದಿ: Free Bus Service: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು; ಪ್ರವಾಸೋದ್ಯಮಕ್ಕೆ ಸಿಕ್ಕಿತು ʼಶಕ್ತಿʼ
ಕೊಡಗು
ಕರ್ನಾಟಕದಲ್ಲಿ ನೀವು ಜುಲೈ ತಿಂಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಲ್ಲಿ ಒಂದೆಂದರೆ ಅದು ಕೊಡಗು. ಹಸಿರೇ ತುಂಬಿರುವ ಈ ಪುಟ್ಟ ಪಟ್ಟಣದಲ್ಲಿ ನೀವು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪುಟ್ಟ ಪುಟ್ಟ ಬೆಟ್ಟಗಳು, ಅದನ್ನು ಆವರಿಸಿಕೊಂಡಿರುವ ಮಂಜು ಎಲ್ಲವೂ ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಅತ್ಯದ್ಭುತ ರೆಸಾರ್ಟ್‌ಗಳೂ ಇದ್ದು, ನೀವು ಒಂದೆರೆಡು ದಿನಗಳ ಮಟ್ಟಿಗೆ ಅರಾಮಾವಾಗಿ ಇಲ್ಲಿದ್ದುಬರಬಹುದು. ಇಲ್ಲಿ ಆನೆ ಸವಾರಿ, ರಿವರ್ ರಾಫ್ಟಿಂಗ್, ಟ್ರೆಕ್ಕಿಂಗ್, ಕ್ಯಾಂಪಿಂಗ್, ಬೋಟಿಂಗ್, ಜೀಪ್ ಸಫಾರಿಯನ್ನು ನೀವು ಮಾಡಬಹುದು.
ಪುಷ್ಪಗಳ ಕಣಿವೆ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪುಷ್ಪಗಳ ಕಣಿವೆಯಿದೆ. ಇದು ಪ್ರಸಿದ್ಧ ಋಷಿಕೇಶದಿಂದ ಸರಿಸುಮಾರು 300 ಕಿ.ಮೀ ದೂರದಲ್ಲಿದೆ. ಜುಲೈ ತಿಂಗಳಲ್ಲಿ ಈ ಕಣಿವೆ ಹೂವುಗಳಿಂದ ತುಂಬಿರುತ್ತದೆ. ಈ ಸಮಯದಲ್ಲಿ ಕಣಿವೆ ನೋಡುವುದಕ್ಕೆ ರತ್ನಗಂಬಳಿ ಹೊದ್ದುಕೊಂಡಂತೆ ಕಾಣಿಸುತ್ತದೆ. ಕಾಡು ಗುಲಾಬಿ, ನೀಲಿ ಕೋರಿಡಾಲಿಸ್, ಸ್ಯಾಕ್ಸಿಫ್ರೇಜ್, ಜೆರೇನಿಯಂನಂತಹ ಹೂವುಗಳನ್ನು ನೀವಿಲ್ಲಿ ಕಾಣಬಹುದು. ಪರ್ವತಾರೋಹಿ ಫ್ರಾಂಕ್ ಎಸ್ ಸ್ಮಿತ್ ಅವರು 1931ರಲ್ಲಿ ಈ ಕಣಿವೆಯನ್ನು ಮೊದಲಿಗೆ ಕಂಡುಕೊಂಡರು. ನಂತರ ಅದನ್ನು ವಿಶ್ವ ಪರಂಪರೆಯ ತಾಣ ಎಂದು ಘೋಷಿಸಲಾಯಿತು. ಇದು ಔಷಧೀಯ ಗಿಡಮೂಲಿಕೆಗಳ ವಿಲಕ್ಷಣ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ. ಈ ಕಣಿವೆಯಿಂದ ಹನುಮಂತನು ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣನಿಗೆ ಸಂಜೀವನಿಯನ್ನು ತಂದನು ಎಂದು ನಂಬಲಾಗಿದೆ.
ಇದನ್ನೂ ಓದಿ: Scotland Tour: ಸರ್ಕಾರಿ ವಿವಿಯ 15 ವಿದ್ಯಾರ್ಥಿಗಳಿಗೆ ಸ್ಕಾಟ್ಲೆಂಡ್ ಪ್ರವಾಸ ಭಾಗ್ಯ!
ಲೋನಾವಾಲಾ
ವಾಣಿಜ್ಯ ನಗರಿ ಮುಂಬೈನಲ್ಲಿರುವವರಿಗೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಲೋನಾವಾಲಾ. ಜಲಪಾತಗಳು, ಸರೋವರಗಳು ಮತ್ತು ಬೆಟ್ಟಗಳಿರುವ ಸ್ಥಳವಿದು. ಇಲ್ಲಿ ನೀವು ಕ್ಯಾಂಪಿಂಗ್, ಟ್ರೆಕ್ಕಿಂಗ್ ಜತೆ ಹಲವು ಸಾಹಸ ಕ್ರೀಡೆಗಳನ್ನು ಆಡಬಹುದಾಗಿದೆ. ಭಾಜಾ ಗುಹೆಗಳು, ಬುಶಿ ಅಣೆಕಟ್ಟು, ಕಾರ್ಲಾ ಗುಹೆಗಳು, ರಾಜ್ಮಾಚಿ ಕೋಟೆ, ರೈವುಡ್ ಸರೋವರ ಇತ್ಯಾದಿಗಳು ಲೋನಾವಾಲಾದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಇಲ್ಲಿನ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ವ್ಯಾಕ್ಸ್ ಮ್ಯೂಸಿಯಂ ಅನ್ನು ನೀವು ವೀಕ್ಷಿಸಲೇಬೇಕು. ವರ್ಷ ಪೂರ್ತಿ ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದಾಗಿದೆ.
ಜೋಗ ಜಲಪಾತ
ಮಲೆನಾಡಿನ ಮಡಿಲು ಶಿವಮೊಗ್ಗದ ಸಾಗರದಲ್ಲಿರುವ ಜೋಗವನ್ನು ಈ ತಿಂಗಳಲ್ಲಿ ನೀವು ಭೇಟಿ ನೀಡಬಹುದು. ಭಾರತದ ಅತಿ ಎತ್ತರದ ಜಲಪಾತವಾಗಿರುವ ಇಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಾಳೆ. 830 ಅಡಿಗಳಷ್ಟು ಆಳಕ್ಕೆ ಬೀಳುವ ನೀರನ್ನು ನೋಡುವುದಕ್ಕೇ ಸುಂದರವಾಗಿರುತ್ತದೆ. ಮಳೆಗಾಲ ಶುರುವಾದ ನಂತರ ಶರಾವತಿಯಲ್ಲಿ ನೀರು ಹೆಚ್ಚಾಗುವುದರಿಂದ ಜಲಪಾತದ ಸೌಂದರ್ಯ ನೋಡುವುದಕ್ಕೆ ಸುಂದರವಾಗಿರುತ್ತದೆ. ಜೋಗ ಸುತ್ತಲೂ ಹಸಿರೇ ತುಂಬಿರುವುದರಿಂದ ನಿಸರ್ಗ ಪ್ರಿಯರಿಗೆ ಈ ಜಾಗ ತುಂಬಾನೇ ಇಷ್ಟವಾಗುತ್ತದೆ.
ಅಮರನಾಥ
ಶಿವ ಭಕ್ತರಿಗೆ ಅತ್ಯಂತ ಪ್ರಿಯವಾದ ದಿವ್ಯ ಕ್ಷೇತ್ರವೆಂದರೆ ಅದು ಅಮರನಾಥ. ಇಲ್ಲಿ ಮಂಜುಗಡ್ಡೆಯಿಂದಲೇ ಶಿವಲಿಂಗದಂತರ ರೂಪ ನಿರ್ಮಾಣವಾಗುತ್ತದೆ. ಭಾರತದ ಪ್ರಮುಖ ತೀರ್ಥಯಾತ್ರೆಯ ಸ್ಥಳಗಳಲ್ಲಿ ಇದೂ ಒಂದು. ಇದನ್ನು ನೋಡುವುದಕ್ಕೆ ಮೇ ತಿಂಗಳಿಂದ ಸೆಪ್ಟೆಂಬರ್ ಸೂಕ್ತವಾದ ಸಮಯವಾಗಿದೆ.
ಇದನ್ನೂ ಓದಿ: Travel Tips: Beach Tourism: ಬ್ಲೂ ಸರ್ಟಿಫಿಕೇಶನ್ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)
ಉದಯ್‌ಪುರ
ರಾಜಸ್ಥಾನ ದೇಶದಲ್ಲೇ ಅತ್ಯಂತ ಕಡಿಮೆ ಮಳೆ ಕಾಣುವ ರಾಜ್ಯಗಳಲ್ಲಿ ಒಂದು. ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಸರೋವರಗಳ ನಗರವಾರ ಉದಯಪುರದ ರೊಮ್ಯಾಂಟಿಕ್ ನಗರ ಎಂದು ಕರೆಸಿಕೊಂಡಿದೆ. ಸಮುದ್ರ ಮಟ್ಟದಿಂದ 3100ಅಡಿ ಎತ್ತರದಲ್ಲಿರುವ ಸಜ್ಜನ್‌ಗಡ ಅರಮನೆಯನ್ನು ನೀವಿಲ್ಲಿ ಕಾಣಬಹುದು. ಈ ಅರಮನೆಯನ್ನು ಮಾನ್ಸೂನ್ ಪ್ಯಾಲೇಸ್ ಎಂದೂ ಕರೆಯಲಾಗುತ್ತದೆ. ಅಲ್ಲಿಂದ ನಗರ ಮತ್ತು ಸರೋವರಗಳ ವಿಹಂಗಮ ನೋಟವನ್ನೂ ಕಾಣಬಹುದು. ಇಲ್ಲೊ ಬೋಟಿಂಗ್, ಕೇಬಲ್ ಕಾರ್ ರೋಪ್‌ವೇ ಕೂಡ ಇವೆ. ಇಲ್ಲಿ ನೀವು ಕರಕುಶಲ ವಸ್ತುಗಳನ್ನು ಶಾಪಿಂಗ್ ಮಾಡಬಹುದು.
ಕೇರಳ
ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳಕ್ಕೆ ಈ ಸಮಯದಲ್ಲಿ ನೀವು ಭೇಟಿ ನೀಡಬೇಕು. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಮಳೆಗಾಲದ ಸಮಯದಲ್ಲಿ ಪೂರ್ತಿ ರಾಜ್ಯವೇ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿ ಬೋಟಿಂಗ್ ಮಾಡಬಹುದು. ಹಾಗೆಯೇ ಆಯುರ್ವೇದ ಸ್ಪಾಗಳು ಕೂಡ ಇರುವುದರಿಂದ ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನೂ ನೀಡಬಹುದು. ಇಲ್ಲಿನ ಆಹಾರ ಪದ್ಧತಿ ಕೂಡ ನಿಮಗೆ ಇಷ್ಟವಾಗುತ್ತದೆ. ಬ್ಯಾಕ್‌ವಾಟರ್ ಕ್ರೂಸ್, ಹೌಸ್‌ಬೋಟ್ ಸ್ಟೇಗೆ ಕೇರಳ ಪ್ರಸಿದ್ಧ.
ಪಶ್ಚಿಮ ಸಿಕ್ಕಿಂ
ಪಶ್ಚಿಮ ಸಿಕ್ಕಿಂ ಕಾಂಚನಜುಂಗಾ ಪರ್ವತದ ತಪ್ಪಲಿನಲ್ಲಿರುವ ಸುಂದರ ಭೂಮಿ. ಬೌದ್ಧ ಮಠವಿರುವ ಈ ಪ್ರದೇಶದಲ್ಲಿ ದಟ್ಟವಾದ ಕಾಡನ್ನು ನೀವು ಕಾಣಬಹುದು. ಸುತ್ತಲೂ ಬೆಟ್ಟಗಳಿಂದ ತುಂಬಿರುವ ಈ ಪ್ರದೇಶ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇಲ್ಲಿ ಕಾಡಿನ ನಡುವೆ ಕ್ಯಾಂಪಿಂಗ್ ಮಾಡಬಹುದು. ಹಾಗೆಯೇ ಟ್ರೆಕ್ಕಿಂಗ್ ಮಾಡುವುದಕ್ಕೂ ಇಲ್ಲಿ ಸೂಕ್ತವಾದ ಸ್ಥಳಗಳಿವೆ. ಜುಲೈ ತಿಂಗಳಲ್ಲಿ ಪ್ರವಾಸ ಮಾಡುವುದಕ್ಕೆ ಸೂಕ್ತವಾದ ಸ್ಥಳವಿದು.
ಇದನ್ನೂ ಓದಿ: Actor Dhanush: ತಲೆ ಬೊಳಿಸಿಕೊಂಡ ಸೂಪರ್ ಸ್ಟಾರ್ ಧನುಷ್; ಹೊಸ ಲುಕ್ ಯಾತಕ್ಕಾಗಿ?
ಮೌಂಟ್ ಅಬು
ರಾಜಸ್ಥಾನದ ಏಕೈಕ ಗಿರಿಧಾಮವೆಂದರೆ ಅದು ಮೌಂಟ್ ಅಬು. ಈ ಗಿರಿಧಾಮದಲ್ಲಿ ವೈವಿಧ್ಯಮಯ ಸಸ್ಯಗಳನ್ನು ಕಾಣಬಹುದು. ಶ್ರೀಮಂತ ಇತಿಹಾಸವನ್ನು ಹೊಂದಿರುವ ಈ ಸ್ಥಳದಲ್ಲಿ ನೀವು ಅತ್ಯಂತ ಅದ್ಭುತವಾದ ವಾಸ್ತುಶಿಲ್ಪವನ್ನು ನೋಡಬಹುದು. ಪ್ರಾಚೀನ ಕಟ್ಟಡಗಳಿರುವ ಈ ಸ್ಥಳದಲ್ಲಿ ಸಾಹಸಮಯ ಕ್ರೀಡೆಗಳಿಗೂ ಅವಕಾಶವಿದೆ. ಬೋಟಿಂಗ್, ಹೈಕಿಂಗ್, ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಕ್ಯಾಂಪಿಂಗ್ ಅನ್ನು ನೀವಿಲ್ಲಿ ಮಾಡಬಹುದು. ಹಾಗೆಯೇ ವಿಶೇಷ ರೀತಿಯ ವಸ್ತುಗಳ ಶಾಪಿಂಗ್ ಅನ್ನೂ ಮಾಡಬಹುದಾಗಿದೆ.
ಓರ್ಚಾ
ಮಧ್ಯಪ್ರದೇಶದ ಓರ್ಚಾ ಕೂಡ ಪ್ರವಾಸಿಗರು ನೋಡಬೇಕಾದ ಒಂದು ಅದ್ಭುತ ಸ್ಥಳ. ಐತಿಹಾಸಿಕ ಅರಮನೆಗಳು ಮತ್ತು ದೇವಾಲಯಗಳಿಂದ ತುಂಬಿರುವ ಈ ನಗರ ಮಳೆಗಾಲದ ಸಮಯದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಹಳ್ಳಿಗಾಡಿನ ಸೊಬಗಳನ್ನು ನೀವಿಲ್ಲಿ ಕಾಣಬಹುದು. ಏಳು ಹೊಳೆಗಳು ಈ ಓರ್ಚದಲ್ಲಿ ಸಂಗಮಿಸುತ್ತವೆ. ಇಲ್ಲಿ ರಿವರ್ ರಾಫ್ಟಿಂಗ್, ಜಂಗಲ್ ಸಫಾರಿ, ಕಯಾಕಿಂಗ್, ಬೋಟಿಂಗ್ ಮಾಡಬಹುದು. ಹಾಗೆಯೇ ಇಲ್ಲಿನ ಲೈಟ್ ಮತ್ತು ಸೌಂಡ್ ಶೋಗೂ ಭೇಟಿ ಕೊಟ್ಟು ಬರಬಹುದು.
ಮಲ್ಶೆಜ್ ಘಾಟ್
ಮಹಾರಾಷ್ಟ್ರದ ಮಲ್ಶೆಜ್ ಘಾಟ್ ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಗಿರಿಧಾಮವಾಗಿದೆ. ಮುಂಬೈಗೆ ಸಮೀಪದಲ್ಲಿರುವ ಈ ಗಿರಿಧಾಮದಲ್ಲಿ ಮಳೆಗಾಲದ ಸಮಯದಲ್ಲಿ ಹಸಿರು ತುಂಬಿದ ನಿಸರ್ಗ ಹಾಗೂ ಜಲಪಾತಗಳನ್ನು ಕಾಣಬಹುದು. ಇದು ಹಲವು ರೀತಿಯ ಸಸ್ಯಗಳು ಮತ್ತು ಪ್ರಾಣಿಗಳ ನೆಲೆಯೂ ಹೌದು. ಫ್ಲೆಮಿಂಗೋಗಳು ಮಳೆಗಾಲದಲ್ಲಿ ಯುರೋಪ್‌ನಿಂದ ಇಲ್ಲಿಗೆ ಬರುತ್ತವೆ. ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಹೈಕಿಂಗ್ ಮಾಡುವುದಕ್ಕೂ ಇಲ್ಲಿ ಅವಕಾಶವಿದೆ. ಇಲ್ಲಿ ಒಂದೆರೆಡು ದಿನ ನೆಮ್ಮದಿಯಾಗಿ ಇದ್ದು ಹೋಗುತ್ತೇವೆ ಎನ್ನುವಂತವರಿಗೆ ಹಲವಾರು ರೆಸಾರ್ಟ್‌ಗಳು ಕೂಡ ಇವೆ.
ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತಕ್ಕೆ ಮಾನವ ಪ್ರಮಾದವೇ ಕಾರಣ ಎಂದ ತನಿಖೆ, ಯಾರು ಆ ವ್ಯಕ್ತಿ?
ಪಂಚಗನಿ
ಮಹಾರಾಷ್ಟ್ರದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಪಂಚಗನಿ. ಪಂಚಗನಿ ಮಹಾಬಲೇಶ್ವರ ದೇಗುಲದ ಸಮೀಪದಲ್ಲಿರುವ ಜನಪ್ರಿಯ ಗಿರಿಧಾಮವಿದು. ಇಲ್ಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದಾಗಿದೆ. ಭಾರೀ ಮಳೆ ಬೀಳುವ ಪ್ರದೇಶವಾಗಿರುವ ಈ ಸ್ಥಳ ಮಂಜಿನಿಂದ ಮುಚ್ಚಿಕೊಂಡಿರುತ್ತದೆ. ಆ ರೀತಿಯ ವಾತಾವರಣವನ್ನು ಇಷ್ಟಪಡುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್, ಸ್ಟ್ರಾಬೆರಿ ಶಾಪಿಂಗ್ ಸೇರಿ ಅನೇಕ ಕೆಲಸಗಳನ್ನು ನೀವಿಲ್ಲಿ ಮಾಡಬಹುದು.
ಚಿರಾಪುಂಜಿ
ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳ ಮೇಘಾಲಯದ ಚಿರಾಪುಂಜಿ. ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿರುವ ಇದು ಅತ್ಯಂತ ಸ್ವಚ್ಛ ಸ್ಥಳವೂ ಹೌದು. ಹಚ್ಚ ಹಸಿರು, ಅಲ್ಲಲ್ಲಿ ಕಾಣುವ ಜಲಪಾತಗಳನ್ನು ನೋಡುವುದೇ ಚಂದ. ಮಳೆಗಾಲದಲ್ಲಿ ಈ ಚಿರಾಪುಂಜಿಯ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಇಲ್ಲಿ ಟ್ರೆಕ್ಕಿಂಗ್ ಮಾಡುವುದಕ್ಕೂ ಅವಕಾಶವಿರುತ್ತದೆ.
ಶಿಲ್ಲಾಂಗ್
ಮೇಘಾಲಯದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಶಿಲ್ಲಾಂಗ್. ಈಸ್ಟ್‌ನ ಸ್ಕಾಟ್‌ಲ್ಯಾಂಡ್ ಎಂದೂ ಇದನ್ನು ಕರೆಯಲಾಗುತ್ತದೆ. ಇಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವುದರಿಂದಾಗಿ ನಿಸರ್ಗ ದೇವತೆ ಹಸಿರು ಹೊದ್ದು ಮಲಗಿರುತ್ತಾಳೆ. ಬೆಟ್ಟಗಳು, ಅವುಗಳಿಂದ ಹರಿಯುವ ಜಲಪಾತಗಳನ್ನು ನೀವಿಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಹಲವಾರು ಸರೋವರಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿ ನೀವು ಬೋಟ್ ರೈಡ್, ಆಂಗ್ಲಿಂಗ್, ಟ್ರೆಕ್ಕಿಂಗ್, ಮೌಂಟೇನ್ ಕ್ಲೈಂಬಿಂಗ್ ಮಾಡಬಹುದು. ಅದಷ್ಟೇ ಅಲ್ಲದೆ ವಿಶೇಷವಾದ ಬಟರ್‌ಫ್ಲೈ ಮ್ಯೂಸಿಯಂ ಅನ್ನು ವೀಕ್ಷಿಸಬಹುದು. ಜುಲೈ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.
ತವಾಂಗ್
ಅರುಣಾಚಲ ಪ್ರದೇಶದ ತವಾಂಗ್ ಪ್ರವಾಸಿಗರನ್ನು ಸೆಳೆಯುವ ಸ್ಥಳ. ಭಾರತ ಮತ್ತು ಚೀನಾದ ಗಡಿಯಲ್ಲಿ ಕಾಣಿಸಿಕೊಳ್ಳುವ ಈ ತವಾಂಗ್‌ನಲ್ಲಿ ಸುಂದರವಾದ ನಿಸರ್ಗ ಸೌಂದರ್ಯವನ್ನು ನೀವು ಕಾಣಬಹುದು. ಬೌದ್ಧ ಮಠಗಳೂ ಇಲ್ಲಿರುವುದರಿಂದಾಗಿ ನಿಮಗೆ ಆಧ್ಯಾತ್ಮಿಕವಾಗಿಯೂ ಸೆಳೆಯುವ ಸ್ಥಳ ಇದಾಗಿದೆ. ಆರ್ಕಿಡ್ ಗಿಡಗಳು ಈ ಪ್ರದೇಶದ ತುಂಬೆಲ್ಲ ಇದ್ದು, ಅದರ ಹೂವುಗಳು ನಿಮ್ಮ ಮನಸೂರೆಗೊಳ್ಳುವುದು ಗ್ಯಾರಂಟಿ. ಇಲ್ಲಿಗೆ ಭೇಟಿ ನೀಡಲು ಜುಲೈ ಸೂಕ್ತ ಸಮಯವಾಗಿದೆ.
ಮಹಾಬಲೇಶ್ವರ
ಸಹ್ಯಾದ್ರಿ ಶ್ರೇಣಿಯಲ್ಲಿ ಕಾಣಸಿಗುವ ಮತ್ತೊಂದು ಜನಪ್ರಿಯ ಗಿರಿಧಾಮವೆಂದರೆ ಅದು ಮಹಾಬಲೇಶ್ವರ. ಮಹಾರಾಷ್ಟ್ರದಲ್ಲಿರುವ ಈ ಸ್ಥಳದಲ್ಲಿ ಸುತ್ತಮುತ್ತಲಿನ ಬೆಟ್ಟಗಳು ಮತ್ತು ಕಣಿವೆಗಳ ವಿಹಂಗಮ ನೋಟವನ್ನು ನೀವು ಕಾಣಬಹುದು. ಮಳೆಗಾಲದ ಸಮಯದಲ್ಲಿ ಪೂರ್ತಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುವುದರ ಜತೆಗೆ ಅಲ್ಲಲ್ಲಿ ಹರಿವ ಜಲಪಾತಗಳು ಮನಸ್ಸಿಗೆ ಮುದ ನೀಡುತ್ತವೆ. ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ನೀವು ಬೋಟ್ ರೈಟ್, ಟ್ರೆಕ್ಕಿಂಗ್ ಮಾಡಬಹುದು. ಹಾಗೆಯೇ ಇಲ್ಲಿ ಬೆಳೆಯುವ ಸ್ಟ್ರಾಬೆರಿಯ ರುಚಿಯನ್ನೂ ನೋಡಬಹುದು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರದಲ್ಲಿ ಜಿ 20 ಪ್ರವಾಸೋದ್ಯಮ ಸಭೆ ಐತಿಹಾಸಿಕ
ಆಗುಂಬೆ
ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಸಿಕೊಳ್ಳುವುದು ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆ. ಚಿಕ್ಕ ಹಳ್ಳಿಯಾಗಿರುವ ಇಲ್ಲಿ ಅತ್ಯಧಿಕ ಮಳೆ ಸುರಿಯುತ್ತದೆ. ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಎರಡನೇ ಪ್ರದೇಶ ಇದಾಗಿದೆ. ಇಲ್ಲಿನಿಂದ ಸೂರ್ಯಾಸ್ತವನ್ನು ನೋಡುವುದು ಒಂದು ಅದ್ಭುತವನ್ನು ನೋಡಿದಂತೆಯೇ ಸರಿ. ಮಳೆಗಾಲಯದಲ್ಲಿ ಈ ಪ್ರದೇಶ ಪೂರ್ತಿಯಾಗಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಬೆಟ್ಟಗಳಿಂದ ಕೆಳಗೆ ಹರಿಯುವ ನೀರು ಚಿಕ್ಕ ಚಿಕ್ಕ ಜಲಪಾತಗಳಂತೆಯೇ ಕಾಣಿಸಿಕೊಳ್ಳುತ್ತವೆ.
ಖಂಡಾಲಾ
ಮುಂಬೈಗೆ ಸಮೀಪದಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ಅದು ಖಂಡಾಲಾ. ಸಹ್ಯಾದ್ರಿ ತಪ್ಪಲಿನಲ್ಲಿರುವ ಈ ಪ್ರದೇಶದ ಮುಂಬೈ ಜನರಿಗೆ ವಾರಾಂತ್ಯದ ಪ್ರವಾಸಿ ತಾಣವಾಗಿಬಿಟ್ಟಿದೆ. ಹುಲ್ಲಿನ ಬೆಟ್ಟಗಳು, ರಮಣೀಯ ಕಣಿವೆಗಳು, ಪ್ರಶಾಂತರವಾದ ಸರೋವರ ಹಾಗೂ ಅಲ್ಲಲ್ಲಿ ಸಣ್ಣ ಜಲಪಾತಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಟ್ರೆಕ್ಕಿಂಗ್ ಮಾಡುವುದಕ್ಕೂ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಜೈಪುರ
ಗುಲಾಬಿ ನಗರವೆಂದೇ ಕರೆಸಿಕೊಳ್ಳುವ ರಾಜಸ್ಥಾನದ ಜೈಪುರಕ್ಕೆ ಒಮ್ಮೆಯಾದರೂ ಭೇಟಿ ನೀಡಿ. ಭಾರತದ ಇತಿಹಾಸದಲ್ಲಿಯೂ ಪ್ರಮುಖ ಪಾತ್ರ ವಹಿಸಿಕೊಂಡಿರುವ ಈ ನಗರದಲ್ಲಿ ಅನೇಕ ಪುಟ್ಟ ಪುಟ್ಟ ಅರಮನೆಗಳು, ಕೋಟೆಗಳು, ವಿಶೇಷ ವಿನ್ಯಾಸದ ಕಟ್ಟಡಗಳನ್ನು ಕಾಣಬಹುದು. ಇದೊಂದು ರೀತಿಯಲ್ಲಿ ರಾಯಲ್ ನಗರವೆಂದರೂ ತಪ್ಪಾಗದು. ಮಳೆಗಾಲದ ಜುಲೈ ತಿಂಗಳಲ್ಲಿ ಈ ಪ್ರದೇಶದಲ್ಲಿ ತಂಪಾದ ವಾತಾವರಣವಿರುತ್ತದೆ. ಸುತ್ತಲಿರುವ ಬೆಟ್ಟ ಗುಡ್ಡಗಳು ಹಸಿರಿನಿಂದ ತುಂಬಿರುತ್ತವೆ. ಇಲ್ಲಿಗೆ ಹೋದ ಮೇಲೆ ಇಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ವೀಕ್ಷಿಸಲು ಮರೆಯಬೇಡಿ. ಇಲ್ಲಿ ಹಾಟ್ ಏರ್ ಬಲೂನ್ ರೈಡ್, ಆನೆ ಸಫಾರಿ ಸೇರಿ ಅನೇಕ ಸಾಹಸಮಯ ಕ್ರೀಡೆಗಳನ್ನು ನೀವು ಆಡಬಹುದು.
ಕುದುರೆಮುಖ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಕರ್ನಾಟಕದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಕುದುರೆಯ ಮುಖದ ಆಕಾರದಲ್ಲಿ ಇಲ್ಲಿನ ಬೆಟ್ಟ ಇರುವುದರಿಂದ ಸ್ಥಳಕ್ಕೆ ಆ ಹೆಸರು ಬಂದಿದೆ. ಇಲ್ಲಿ ನಿಸರ್ಗ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಸಿಕೊಳ್ಳಬಹುದು. ಸುತ್ತಲೂ ಸುತ್ತುವರಿದುಕೊಳ್ಳುವ ಮಂಜು ನಿಮಗೆ ಸ್ವರ್ಗದಲ್ಲಿ ಇರುವಂತಹ ಅನುಭವವನ್ನು ನೀಡುತ್ತದೆ. ಇಲ್ಲಿ ಟ್ರೆಕ್ಕಿಂಗ್ ಮಾಡುವುದಕ್ಕೆ ಅವಕಾಶವಿದೆ.
ಕಾಸ್ ಪ್ರಸ್ಥಭೂಮಿ
ಪಮಚಗಣಿಯಲ್ಲಿರುವ ಕಾಸ್ ಪ್ರಸ್ಥಭೂಮಿಯನ್ನು 2012ರಲ್ಲಿ ವಿಶ್ವ ನೈಸರ್ಗಿಕ ಪರಂಪರೆಯ ತಾಣ ಎಂದು ಘೋಷಿಸಲಾಗಿದೆ. ಇದು ಸರೋವರಗಳು, ವೈವಿಧ್ಯಮಯ ಹೂವುಗಳು ಮತ್ತು ಚಿಟ್ಟೆಗಳಿಂದ ಕೂಡಿರುವ ಮಾಂತ್ರಿಕ ಸ್ಥಳವಾಗಿದೆ. ಇಲ್ಲಿ ಸುಮಾರು 850 ಜಾತಿಯ ಹೂವುಗಳನ್ನು ನೀವು ಕಾಣಬಹುದಾಗಿದೆ. 1000 ಹೆಕ್ಟೇರ್ ಪ್ರದೇಶವನ್ನು ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ದಿನಕ್ಕೆ ಮೂರು ಸಾವಿರ ಜನರಿಗೆ ಮಾತ್ರ ಈ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.
FAQ
ಜುಲೈನಲ್ಲಿ ಭಾರತದ ಯಾವ ಭಾಗಕ್ಕೆ ಭೇಟಿ ನೀಡಲು ಉತ್ತಮವಾಗಿದೆ?
ಈ ಜುಲೈ ತಿಂಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಪ್ಲಾನಿಂಗ್ ಮಾಡುತ್ತಿದ್ದೀರೇ? ಈ ತಿಂಗಳಲ್ಲಿ ಯಾವ ಸ್ಥಳಕ್ಕೆ ಹೋಗುವುದು ಸೂಕ್ತ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.