ಪ್ರವಾಸ ಎಂಬುದು ಪ್ರತಿಯೊಬ್ಬರನ್ನೂ ಸೆಳೆಯುವ ಸೂಜಿಗಲ್ಲು. ಅದಕ್ಕಾಗಿಯೇ ಇಂದು ವಿಶ್ವದಲ್ಲಿ ಪ್ರವಾಸೋದ್ಯಮ ಕಂಡರಿಯದ ರೀತಿಯಲ್ಲಿ ಬೆಳೆಯುತ್ತಿದೆ. ಎಲ್ಲ ದೇಶಗಳೂ ತಮ್ಮ ದೇಶದ ಪ್ರವಾಸೋದ್ಯಮವನ್ನು ವಿಶ್ವಮಟ್ಟದಲ್ಲಿ ಅಭಿವೃದ್ಧಿಗೊಳಿಸಲು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಈ ಬಾರಿಯ ಸೆಪ್ಟೆಂಬರ್ 27ರಂದು ಆಚರಿಸಲಾದ ವಿಶ್ವ ಪ್ರವಾಸೋದ್ಯಮ ದಿನದ (World tourism Day) ಅಂಗವಾಗಿ ಬಿಡುಗಡೆ ಮಾಡಲಾದ ಪಟ್ಟಿಯ ಪ್ರಕಾರ, ಪ್ರಪಂಚದಲ್ಲೇ ಅತೀ ಹೆಚ್ಚು ಭೇಟಿ ಕೊಟ್ಟ ದೇಶಗಳ ಪೈಕಿ ಟಾಪ್ 10 ದೇಶಗಳ (Travel destinations) ಪಟ್ಟಿ ಇಲ್ಲಿದೆ.
1. ಫ್ರಾನ್ಸ್; ಈ ಬಾರಿ ಮೊದಲ ಸ್ಥಾನ ಫ್ರಾನ್ಸ್‌ನದ್ದು. 2023ರಲ್ಲಿ ಈವರೆಗೆ ಅತ್ಯಂತ ಹೆಚ್ಚು ಪ್ರವಾಸಿಗರು ಬಂದಿದ್ದು ಫ್ರಾನ್ಸ್‌ಗೆ. 89.4 ಮಿಲಿಯನ್ ಮಂದಿ ಜಗತ್ತಿನಾದ್ಯಂತ ಪ್ರಾನ್ಸ್‌ಗೆ ಪ್ರವಾಸ ಮಾಡಿದ್ದು, ಫ್ರಾನ್ಸ್‌ನ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. ಯುರೋಪ್ ದೇಶಗಳ ಪೈಕಿ ತನ್ನ ಐತಿಹಾಸಿಕ ಸ್ಥಳಗಳು ಹಾಗೂ ಪ್ರಕೃತಿ ಸೌಂದರ್ಯದ ಮೂಲಕ ಗಮನ ಸೆಳೆಯುತ್ತಿರುವ ಫ್ರಾನ್ಸ್ ತನ್ನಲ್ಲಿರುವ ಐಫೆಲ್ ಟವರ್ ಮೂಲಕವೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
2. ಸ್ಪೈನ್: ಫ್ರಾನ್ಸ್ ನಂತರದ ಸ್ಥಾನದಲ್ಲಿರುವುದು ಸ್ಪೈನ್. ತನ್ನ ಇತಿಹಾಸ ಹಾಗೂ ಪ್ರಕೃತಿ ಸೌಂದರ್ಯದ ಮೂಲಕ ವಿಶ್ವ ಪ್ರವಾಸೋದ್ಯಮದಲ್ಲಿ ಹೆಸರು ಮಾಡುತ್ತಿರುವ ಮತ್ತೊಂದು ದೇಶ ಸ್ಪೈನ್. ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್ ನಗರಗಳು ಪ್ರವಾಸಿಗರನ್ನು ಇನ್ನಿಲ್ಲದಂತೆ ಮೋಡಿ ಮಾಡುತ್ತಿದೆ. ಈವರೆಗೆ ಈ ವರ್ಷ ಇಲ್ಲಿಗೆ ಭೇಟಿ ಕೊಟ್ಟ ಪ್ರವಾಸಿಗರ ಸಂಖ್ಯೆ 83.5 ಮಿಲಿಯನ್.
3. ಯುನೈಟೆಡ್ ಸ್ಟೇಟ್ಸ್: ಯುಎಸ್ ಕೂಡಾ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ವರ್ಷ ಇಲ್ಲಿಗೆ ಭೇಟಿಕೊಟ್ಟ ಪ್ರವಾಸಿಗರ ಸಂಖ್ಯೆ 79.3 ಮಿಲಿಯನ್. ಯುಎಸ್‌ನ ಸಂಸ್ಕೃತಿ, ವಾತಾವರಣ, ಕಾಸ್ಮೋಪಾಲಿಟನ್ ನಾಗರೀಕತೆ ಸೇರಿದಂತೆ ಯುಎಸ್ ಬಗೆಗೆ ಪ್ರವಾಸಿಗರ ಕುತೂಹಲ ಹೆಚ್ಚು. ಹೀಗಾಗಿ ಯುಎಸ್ ಕೂಡಾ ಪ್ರವಾಸೀ ನೆಲೆಯಲ್ಲೂ ಹಿಂದೆ ಬಿದ್ದಿಲ್ಲ.
೪. ಚೈನಾ: ಚೈನಾದ ಇತಿಹಾಸ, ಸ್ಮಾರಕಗಳು ಹಾಗೂ ತನ್ನದೇ ಆದ ಅಪರೂಪದ ಸಂಸ್ಕೃತಿಯೂ ಸೇರಿದಂತೆ ಶಾಂಘೈ, ಬೀಜಿಂಗ್‌ನಂತಹ ಮುಂದುವರಿದ ನಗರಗಳು ಬೇರೆಬೇರೆ ಮಾದರಿಯ ಪ್ರವಾಸಿಗರನ್ನು ಕೈಬೀಸಿ ಕರೆದಿದೆ. ಹೀಗಾಗಿ, ಇದು ನಾಲ್ಕನೇ ಸ್ಥಾನದಲ್ಲಿದ್ದು 65.7 ಮಿಲಿಯನ್ ಮಂದಿಯನ್ನು ತನ್ನತ್ತ ಸೆಳೆದಿದೆ.
5. ಇಟಲಿ: ಐದನೇ ಸ್ಥಾನದಲ್ಲಿರುವ ಇಟಲಿ 64.7 ಮಿಲಿಯನ್ ಮಂದಿ ಪ್ರವಾಸಿಗರನ್ನು ಈ ಬಾರಿ ಕಂಡಿದೆ. ಇಟಲಿಯು ಕೂಡಾ ತನ್ನದೇ ಆದ ಸಂಸ್ಕೃತಿ, ಭೌಗೋಳಿಕ ಪರಿಸರ, ವಾಸ್ತುಶಿಲ್ಪಗಳ ಮೂಲಕ ವಿಶ್ವ ಪ್ರವಾಸೋದ್ಯಮದಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.
6. ಟರ್ಕಿ: 51.2 ಮಿಲಿಯನ್ ಪ್ರವಾಸಿಗರನ್ನು ತನ್ನೆಡೆಗೆ ಸೆಳೆದುಕೊಂಡು ಆರನೇ ಸ್ಥಾನದಲ್ಲಿರುವ ಟರ್ಕಿ, ತನ್ನಲ್ಲಿರುವ ಅಪರೂಪದ ಬೀಚುಗಳು, ನ್ಯಾಶನಲ್ ಪಾರ್ಕುಗಳು, ಜಲಪಾತಗಳೂ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.
7. ಮೆಕ್ಸಿಕೋ: 45 ಮಿಲಿಯನ್ ಮಂದಿ ಪ್ರವಾಸಿಗರು ಈವರೆಗೆ ಈ ವರ್ಷ ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿನ ಅಪರೂಪದ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಮೇಲೆ ಕುತೂಹಲಗೊಂಡು ಈ ದೇಶದತ್ತ ಮುಖ ಮಾಡುತ್ತಿದ್ದಾರೆ.
8. ಥಾಯ್ಲೆಂಡ್: ಯಾವಾಗಲೂ ಪ್ರವಾಸಿಗರ ವಿಚಾರದಲ್ಲಿ ಮುಂಚೂಣಿಯಲ್ಲೇ ಇರುವ ಥಾಯ್ಲೆಂಡ್ ಈ ಬಾರಿ ಎಂಟನೇ ಸ್ಥಾನದಲ್ಲಿದೆ. 39.8 ಮಿಲಿಯನ್ ಮಂದಿ ಇಲ್ಲಿಗೆ ಭೇಟಿ ಕೊಟ್ಟಿದ್ದು, ಇಲ್ಲಿನ ದೇವಾಲಯಗಳು, ಸಮುದ್ರ ತೀರಗಳು, ಜಲಪಾತಗಳು, ಪ್ರಕೃತಿಯ ರಮ್ಯ ತಾಣಗಳು ಪ್ರವಾಸಿಗರ ವಿಚಾರದಲ್ಲಿ ಸದಾ ಮುಂದು.
9. ಜರ್ಮನಿ: 39.6 ಮಿಲಿಯನ್ ಮಂದಿಯನ್ನು ತನ್ನತ್ತ ಆಕರ್ಷಿಸಿರುವ ಜರ್ಮನಿ ಕೂಡಾ, ಯುರೋಪ್‌ನ ಪ್ರಮುಖ ಪ್ರವಾಸೀ ದೇಶಗಳ ಪೈಕಿ ಒಂದು. ಇಲ್ಲಿನ ಸಂಸ್ಕೃತಿ, ವಾಸ್ತುಶಿಲ್ಪ, ಆಧುನಿಕತೆ ಪ್ರವಾಸಿಗರ ಆಸಕ್ತಿಯನ್ನು ಕೆರಳಿಸುತ್ತವೆ.
10. ಇಂಗ್ಲೆಂಡ್: 39.4 ಮಿಲಿಯನ್ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮೂಲಕ ಹತ್ತನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಸದಾ ಪ್ರವಾಸಿಗರ ಪಾಲಿಗೊಂದು ಕುತೂಹಲಕರ ದೇಶ. ಇಲ್ಲಿನ ಆಧುನೀಕತೆ, ಗಗನಚುಂಬಿ ನಗರಗಳು ಪುರಾತನ ಮ್ಯೂಸಿಯಂಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ.
ಇದನ್ನೂ ಓದಿ: Solo Travel: ಮೊದಲ ಬಾರಿಗೆ ಸೋಲೋ ಹೊರಟರೆ ಇವು ಭಾರತದ ಟಾಪ್ 5 ಸುರಕ್ಷಿತ ಪ್ರವಾಸಿ ತಾಣಗಳು!