Site icon Vistara News

Travel Guide: ನವೆಂಬರ್‌ನ ಹಿತವಾದ ಚಳಿಗೆ ಈ ಯಾವುದಾದರೂ ಜಾಗಕ್ಕೆ ಪ್ರವಾಸ ಮಾಡಿ ಬನ್ನಿ!

winter travel

ನವೆಂಬರ್‌ ತಿಂಗಳು ಪ್ರವಾಸ ಹೋಗಲು ಅತ್ಯುತ್ತಮ ಕಾಲ. ಭಾರತದಲ್ಲಿ ಕೆಲವು ಸ್ಥಳಗಳಿಗೆ ನವೆಂಬರ್‌ ತಿಂಗಳಲ್ಲದೆ, ಬೇರೆ ಕಾಲದಲ್ಲಿ ಹೋದರೂ ಆ ಜಾಗವನ್ನು ಹಾಗೆ ನೋಡಲು ಸಾಧ್ಯವಿಲ್ಲ. ನವೆಂಬರ್‌ ಚಳಿಗಾಲದ ಆರಂಭ. ನಿಧಾನವಾಗಿ ಚಳಿ ಆವರಿಸುತ್ತಿದ್ದರೆ, ಸುದೀರ್ಘ ಬೇಸಗೆಯ ಸೆಖೆ ಕಳೆದು ಹಾಯೆನಿಸುವ ಸುಖ. ಚಳಿಗಾಲ ಇನ್ನೇನು ಆವರಿಸಿಕೊಳ್ಳುವ ಹಿತವಾದ ಚಳಿಯಿದೆ ಅನಿಸುವಾಗ ಇಂತಹ ಕೆಲವು ಸ್ಥಳಗಳಿಗೆ ಹೋಗಬೇಕು (winter travel). ಆಗ ಆ ಜಾಗಗಳು ಕಾಣುವ ರೀತಿಯೇ ಭಿನ್ನ. ಹಾಗಾದರೆ ಬನ್ನಿ, ಈ ನವೆಂಬರ್‌ನಲ್ಲಿ ನೀವು ಎಲ್ಲೆಲ್ಲಿ ಹೋಗಿ ಬರಬಹುದು (travel guide) ಎಂಬುದನ್ನು ನೋಡೋಣ.

1. ಜೈಪುರ, ರಾಜಸ್ಥಾನ: ರಾಜಸ್ಥಾನ ನವೆಂಬರ್‌ನಲ್ಲಿ ಹಿತವಾಗಿರುತ್ತದೆ. ಭಾರತದಲ್ಲೇ ಅತೀ ಹೆಚ್ಚಿನ ಸೆಖೆಯನ್ನೂ ಬಿಸಿಲನ್ನೂ ಕಾಣುವ ರಾಜಸ್ಥಾನದ ಊರುಗಳನ್ನು ಚಳಿಗಾಲದಲ್ಲೇ ನೋಡಬೇಕು. ಪಿಂಕ್‌ ಸಿಟಿ ಎಂಬ ಹೆಸರಿನಿಂದಲೇ ಪ್ರಖ್ಯಾತವಾದ ಜೈಪುರದ (Jaipur travel) ಕೋಟೆ ಕೊತ್ತಲಗಳನ್ನು ನೋಡಲು ಬಿಸಿಲಿನಲ್ಲಿ ಸುತ್ತಲು ಕಷ್ಟವೇ. ಹಾಗಾಗಿ. ನವೆಂಬರ್‌ ತಿಂಗಳು ಇದಕ್ಕೆ ಸರಿಯಾದ ಕಾಲ. ಮಾರ್ಚ್‌- ಎಪ್ರಿಲ್‌ ಆರಂಭದವರೆಗೂ ರಾಜಸ್ಥಾನದ ನಗರಿಗಳನ್ನು ಸುತ್ತಿ ಬರಬಹುದು.

2. ವಾರಣಾಸಿ, ಉತ್ತರ ಪ್ರದೇಶ: ಬೇಸಿಗೆಯಲ್ಲಿ ಬೆವರಿಳಿಸುವ ಸೆಖೆ ವಾರಣಾಸಿಯಲ್ಲಿದ್ದರೂ, ಎಲ್ಲ ಕಾಲದಲ್ಲೂ ನೋಡಿ ಬರಬಹುದಾದ ತಾಣ (Varanasi travel) ಆಗಿದ್ದರೂ ಚಳಿಗಾಲದಲ್ಲಿ ಇದನ್ನು ನೋಡುವ ಮಜಾವೇ ಬೇರೆ. ಯಾಕೆಂದರೆ, ಚಳಿಗಾಲದಲ್ಲಿ ಇಲ್ಲಿ ಬೀದಿಗಳು ತೆರೆದುಕೊಳ್ಳುವ ಮಾಯಾಲೋಕವೇ ಬೇರೆ. ಬಗೆಬಗೆಯ ತಿನಿಸುಗಳು, ಬಿಸಿಬಿಸಿ ತಿಂಡಿಗಳನ್ನು ಚಳಿಗಾಲದಲ್ಲಿ ಸವಿಯುವ ಜೊತೆಗೆ ಹಬ್ಬಗಳು ಕಳೆಗಟ್ಟಿ ವಾರಣಾಸಿ ಇನ್ನಷ್ಟು ಮತ್ತಷ್ಟು ಝಗಮಗಿಸುತ್ತಿರುತ್ತದೆ. ಹಿತವಾದ ಚಳಿಯಲ್ಲಿ ಗಂಗಾರತಿಯನ್ನು ನೋಡುವುದೂ ಕೂಡಾ ದೈವಿಕವಾಗಿ ಆನಂದವನ್ನು ನೀಡುತ್ತದೆ.

3. ಗೋವಾ: ಡಿಸೆಂಬರ್‌ ತಿಂಗಳಲ್ಲಿ ಇಲ್ಲಿಗೆ ಪ್ರವಾಸಿಗರ ದಂಡು ಬರಲು ಆರಂಭವಾಗುವುದಾದರೂ ಒಂದು ತಿಂಗಳು ಮುಂಚಿತವಾಗಿ, ಅಷ್ಟಾಗಿ ಜನಜಂಗುಳಿಯಿಲ್ಲದ ಗೋವಾವನ್ನು (Goa travel) ನೋಡುವ ಸೊಬಗೇ ಬೇರೆ. ಬಗೆಬಗೆಯ ವಾಟರ್‌ ಸ್ಪೋರ್ಟ್ಸ್‌ಗಳ ಮಜಾ ಅನೂಭವಿಸುತ್ತಾ ಹಿತವಾದ ಬಿಸಿಲಿಗೆ ಮೈಯೊಡ್ಡಿಕೊಂಡು ಬೀಚ್‌ ಬದಿಯಲ್ಲಿ ಕೂರುವ ಸುಖ ಯಾರಿಗೆ ಬೇಡ ಹೇಳಿ!

4. ಮುನ್ನಾರ್:‌ ನವೆಂಬರ್‌ನಲ್ಲೂ ಹಸಿರು ಹಸಿರಿನ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆಯಿದ್ದರೆ ಮುನ್ನಾರ್‌ಗೆ (Munnar travel) ಹೋಗಬೇಕು. ಯಾಕೆಂದರೆ, ನವೆಂಬರ್‌ ತಿಂಗಳು ಕೇರಳದಲ್ಲಿ ಮಳೆಗಾಲಕ್ಕೆ ಟಾಟಾ ಹೇಳುವ ಕಾಲ. ಹೀಗಾಗಿ, ಮುನ್ನಾರ್‌ ಹಾಗೂ ಕೇರಳದ ಕೆಲವು ಚಹಾತೋಟಗಳ ಊರುಗಳು ನವೆಂಬರ್‌ನಲ್ಲೂ ಹಸಿರುಹಸಿರಾಗಿ ಕಂಗೊಳಿಸುತ್ತವೆ. ಹಿತವಾದ ವಾತಾವರಣವಿರುವ ಕಾಲದಲ್ಲಿ ಕಣ್ಣಿಗೆ ಹಸಿರಿನ ತಂಪೂ ಜೊತೆಗೂಡಿದರೆ ಎಷ್ಟು ಸುಖವಿದ್ದೀತು ಅಲ್ಲವೇ!

ಇದನ್ನೂ ಓದಿ: Travel Guide: ಈ ಜಾಗಗಳಿಗೆ ಚಾಕೊಲೇಟ್‌ ಸವಿಯುವುದಕ್ಕಾಗಿಯೇ ಪ್ರವಾಸ ಹೋಗಿ!

5. ಪುಷ್ಕರ್‌, ರಾಜಸ್ಥಾನ: ರಾಜಸ್ಥಾನದ ಪುಷ್ಕರ್‌ ಎಂಬ ಸ್ಥಳದಲ್ಲೊಂದು ಇತಿಹಾಸ ಪ್ರಸಿದ್ಧ ಉತ್ಸವವೊಂದು ನಡೆಯುತ್ತದೆ. ಪುಷ್ಕರ್‌ ಮೇಳ ಹೆಸರಿನ ಒಂಟೆ ಮೇಳದಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಪುಷ್ಕರ್‌ಗೆ ಹೋಗಿ ಈ ಐತಿಹಾಸಿಕ ಉತ್ಸವದಲ್ಲಿ ಪಾಲ್ಗೊಂಡು ರಾಜಸ್ಥಾನದ ಸಂಸ್ಕೃತಿಯ ಪರಿಚಯ ಮಾಡಿಕೊಂಡು ಬರಲು ಇದು ಸಕಾಲ.

6. ಅಮೃತ್‌ಸರ, ಪಂಜಾಬ್‌: ಪಂಜಾಬ್‌ನ ಅಮೃತ್‌ಸರ ನವೆಂಬರ್‌ ತಿಂಗಳಲ್ಲಿ ಹಿತವಾದ ತಂಪಿನಲ್ಲಿರುತ್ತದೆ. ಅತ್ತ ಹೆಚ್ಚು ಚಳಿಯೂ ಅಲ್ಲದ, ಸೆಖೆಯೂ ಅಲ್ಲದ ಕಾಲವಿದು. ಅಮೃತಸರದ ಗೋಲ್ಡನ್‌ ಟೆಂಪಲ್‌, ಜಲಿಯನ್‌ ವಾಲಾಬಾಗ್‌ ಹಾಊಗೂ ಭಾರತ ಪಾಕ್‌ ಗಡಿಯಾದ ವಾಘಾ ಬಾರ್ಡರ್‌ನ ಕವಾಯತು ಪ್ರದರ್ಶನವನ್ನು ನೋಡಲೂ ಕೂಡಾ ಇದು ಸಕಾಲ.

ಇದನ್ನೂ ಓದಿ: Travel Guide: ಯುರೋಪನ್ನು ಭಾರತದಲ್ಲೇ ನೋಡಬೇಕೇ? ಹಾಗಾದರೆ ಈ ಜಾಗಗಳಿಗೆ ಹೋಗಿ ಬನ್ನಿ!

Exit mobile version