ನೀವು ಎಂದಾದರೂ ನೆರಳೇ ಇಲ್ಲದ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಇಲ್ಲ ಎಂದಾದರೆ, ನಮ್ಮ ನಡುವೆಯೇ ಇರುವ ಚೋಳನಾಡಿನ ಅದ್ಭುತ ದೇವಾಲಯವನ್ನೊಮ್ಮೆ ನೋಡಿಕೊಂಡು (Travel guide) ಬರಬೇಕು. ತನ್ನ ನೆರಳನ್ನೇ ನೆಲಕ್ಕೆ ಬೀಳಗೊಡದ ಈ ಎತ್ತರದ ದೇವಸ್ಥಾನದ ಚರಿತ್ರೆಯನ್ನೊಮ್ಮೆ ಓದಬೇಕು.
ತಮಿಳುನಾಡಿನ ತಂಜಾವೂರಿನ ಬೃಹದೀಶ್ವರ ದೇವಸ್ಥಾನ (Tanjavur Brihadeshwara Temple) ಭಾರತದ ಪುರಾತನ ದೇವಸ್ಥಾನಗಳಲ್ಲೊಂದು. ಇದು ತನ್ನ ಅತ್ಯಪೂರ್ವ ವಾಸ್ತುಶಿಲ್ಪ, ಕೆತ್ತನೆಗಳಿಂದಷ್ಟೇ ಅಲ್ಲ, ತನ್ನ ಹಲವು ವಿಸ್ಮಯಗಳಿಂದಲೂ ಬಲು ಪ್ರಸಿದ್ಧಿ. ಅದಕ್ಕಾಗಿಯೇ ನಿತ್ಯವೂ ಇಲ್ಲಿ ಭಕ್ತರಷ್ಟೇ ಅಲ್ಲ, ದೇಶವಿದೇಶಗಳಿಂದ ಪ್ರವಾಸಿಗರೂ ಅಚ್ಚರಿಯಿಂದ ಭೇಟಿ ನೀಡುತ್ತಾರೆ. ಹಾಗಂತ ದೇವಸ್ಥಾನದ ನೆರಳು ನೆಲಕ್ಕೆ ಬೀಳದೆ ಇರುವುದು ಕಂಡುಹಿಡಿಯಲಾಗದ ರಹಸ್ಯವೇನೂ ಅಲ್ಲ. ಈ ಬೃಹದೀಶ್ವರ ದೇವಸ್ಥಾನವನ್ನು ಆ ರೀತಿಯಲ್ಲಿ ಬಹಳ ಲೆಕ್ಕಾಚಾರದಿಂದ ಕಟ್ಟಲಾಗಿದೆಯಂತೆ. ಹಾಗಾಗಿಯೇ ಇದು ಅಂದಿನ ಕಾಲದ ಎಂಜಿನಿಯರಿಂಗ್ ಅದ್ಭುತವೂ (Engineering marvel) ಹೌದು.
ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಈ ದೇವಾಲಯ ಕಟ್ಟುವಾಗ ಆಗಿನ ಚೋಳರಸ, ರಾಜರಾಜ ಚೋಳನು ದೇವಾಲಯದ ವಾಸ್ತುಶಿಲ್ಪಿಯನ್ನು ಕೇಳಿದನಂತೆ, ʻಎಂದಾದರೂ, ಈ ದೇವಾಲಯ ನೆಲಕ್ಕೆ ಬಿದ್ದೀತೇ?ʼ ಎಂದು. ಅದಕ್ಕೆ ವಾಸ್ತುಶಿಲ್ಪಿ ಹೇಳಿದ ಉತ್ತರ, ʻದೇವಸ್ಥಾನವೇಕೆ? ಎಂದಿಗೂ ಈ ದೇವಸ್ಥಾನದ ನೆರಳೂ ನೆಲದ ಮೇಲೆ ಅಥವಾ ನಿಮ್ಮ ಮೇಲೆ ಬೀಳದುʼ ಎಂದು. ಅದರಂತೆಯೇ, ಇಂದಿಗೂ ನೆರಳೇ ಬೀಳದ ದೇವಸ್ಥಾನವಿದು!
ಚೋಳ ಸಾಮ್ರಾಜ್ಯದ ಅತ್ಯಂತ ಪ್ರಮುಖ ನಗರಗಳ ಪೈಕಿ ತಂಜಾವೂರು ಕೂಡಾ ಒಂದು. ತಂಜಾವೂರು ಈ ದೇವಾಲಯ ಜಗತ್ತಿನ ಅತ್ಯಂತ ಎತ್ತರದ ದೇವಸ್ಥಾನಗಳ ಪೈಕಿ ಒಂದು ಕೂಡಾ. ಕೆದಕುತ್ತಾ ಹೋದರೆ ಇಲ್ಲಿ ದೇವಸ್ಥಾನದ ನೆರಳಿನ ಕೌತುಕವಷ್ಟೇ ಅಲ್ಲದೆ, ಇನ್ನೂ ಅನೇಕ ವಿಸ್ಮಯಗಳು ದಕ್ಕುತ್ತವೆ.
ಬಹಳಷ್ಟು ದಕ್ಷಿಣ ಭಾರತದ ದೇವಸ್ಥಾನಗಳ ಪೈಕಿ ದೇವಸ್ಥಾನದ ಪ್ರವೇಶ ಗೋಪುರ ಮುಖ್ಯ ದೇವಸ್ಥಾನಕ್ಕಿಂತ ದೊಡ್ಡದಾಗಿರುತ್ತವೆ. ಆದರೆ, ಬೃಹದೀಶ್ವರ ದೇವಸ್ಥಾನ ಮಾತ್ರ ಹಾಗಲ್ಲ. ಇಲ್ಲಿ ದೇವಾಲಯಕ್ಕಿಂತ ಗೋಪುರದ ಎತ್ತರ ಕಡಿಮೆ. ಇನ್ನೂ ವಿಶೇಷವೆಂದರೆ, ಇಡೀ ದೇವಸ್ಥಾನವನ್ನು ಆ ಕಾಲದಲ್ಲಿ ಕಟ್ಟಿದ್ದು ಗ್ರಾನೈಟ್ ಶಿಲೆಯಿಂದ. ತಂಜಾವೂರು ಸುತ್ತಮುತ್ತ ಎಲ್ಲಿಯೂ ಗ್ರಾನೈಟ್ ಕಲ್ಲು ಕಡಿಯುವ ಸ್ಥಳಗಳಿಲ್ಲ. ಸುಮಾರು 50 ಕಿಮೀ ಆಸುಪಾಸಿನಲ್ಲೂ ಅಂತಹ ಜಾಗ ಈಗಲೂ ಇಲ್ಲ. ಹಾಗಾದರೆ, ಅಂದಿನ ಕಾಲಕ್ಕೇ ಅಂದರೆ 11ನೇ ಶತಮಾನದ ಆಸುಪಾಸಿನಲ್ಲಿ, ಸುಮಾರು ಸಾವಿರ ವರ್ಷಗಳ ಹಿಂದೆ ದೂರದೂರಿನಿಂದ ಇಂತಹ ಶಿಲೆಗಳನ್ನು ಇಲ್ಲಿಗೆ ಹೇಗೆ ತಂದಿರಬಹುದು ಎಂಬುದನ್ನು ಊಹಿಸಿ!
ಈ ದೇವಸ್ಥಾನದ ಮುಖ್ಯ ಗೋಪುರ ಅಂದರೆ ವಿಮಾನದ ಎತ್ತರ 66 ಮೀಟರ್. ಇದು ಆರು ಮಹಡಿಗಳಷ್ಟು ಎತ್ತರ. ಆಗಿನ ಕಾಲಕ್ಕೆ ದಕ್ಷಿಣ ಭಾರತದಲ್ಲೇ ಇದು ಅತ್ಯಂತ ಎತ್ತರದ ಕಟ್ಟಡ. ಗ್ರಾನೈಟ್ ಶಿಲೆಯಂಥ ಭಾರೀ ಗಾತ್ರದ ಭಾರೀ ಭಾರದ ಶಿಲೆಯಿಂದ ಈ ದೇವಸ್ಥಾನವನ್ನು ಅಂದು ಹೇಗೆ ಕಟ್ಟಿರಬಹುದು ಎಂಬುದನ್ನು ಈಗ ಊಹಿಸುತ್ತಾ ಕೂತರೆ, ನಮ್ಮ ಕಲ್ಪನೆಗೂ ದಕ್ಕಲಾರದ ವಿಶೇಷವಿದು!
Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!ಇದನ್ನೂ ಓದಿ:
ಇನ್ನೂ ವಿಶೇಷವೆಂದರೆ ದೇವಸ್ಥಾನದ ಮುಖ್ಯ ಗೋಪುರ ಅಂದರೆ ವಿಮಾನವನ್ನು ಮಾಡಲು ಬಳಸಿದ ಇಟ್ಟಿಗೆಗಳನ್ನು ಕೇವಲ ಒಂದಕ್ಕೊಂದು ಹೊಂದಿಸಿ ಇಂಟರ್ಲಾಕ್ ಮಾಡಿ ಇಟ್ಟಿರುವುದು! ಎಲ್ಲೂ ಇವುಗಳನ್ನು ಒಂದಕ್ಕೊಂದು ಅಂಟಿಸಲು ಯಾವುದೇ ಬೈಂಡಿಂಗ್ ವಸ್ತುವನ್ನೂ ಬಳಸಿಲ್ಲ. ಹಾಗಿದಾಗ್ಯೂ ನೂರಾರು ವರ್ಷ ಈ ದೇವಸ್ಥಾನ ಹಾಗೆಯೇ ಉಳಿದಿರುವುದೂ ಕೂಡಾ ಆಗಿನ ಕಾಲದ ಎಂಜಿನಿಯರಿಂಗ್ ಅದ್ಭುತವಲ್ಲದೆ ಮತ್ತಿನ್ನೇನು!
ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿದ ಚೋಳನಾಡಿನ ಈ ಬೃಹದೀಶ್ವರ ದೇವಾಲಯ ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ದಕ್ಷಿಣ ಭಾರತದ ಬಹುಮುಖ್ಯ ಹಿಂದೂ ದೇವಾಲಯಗಳಲ್ಲಿ ಒಂದು ಎಂಬ ವಿಖ್ಯಾತಿ ಪಡೆದಿರುವ ಈ ದೇವಾಲಯ ಶಿವನನ್ನು ಮುಖ್ಯ ದೇವರಾಗಿ ಹೊಂದಿದೆ. ಪಾರ್ವತಿ, ನಂದಿ, ಗಣೇಶ, ಕಾರ್ತಿಕೇಯ ದೇವಸ್ಥಾನಗಳೂ ಇದರ ಸಮುಚ್ಛಯದಲ್ಲೇ ಇವೆ.
ಇದನ್ನೂ ಓದಿ: Travel Story: ಹಸುಗೂಸಿನೊಂದಿಗೇ ಪ್ರವಾಸ: ದೇಶ ದೇಶಗಳನ್ನು ಸುತ್ತಿ ಬರುವ ಅನಿಂದಿತಾ!