ಯುರೋಪಿಗೆ (Europe tour) ಹೋದವರೆಲ್ಲ, ಯುರೋಪಿನ ಸೌಂದರ್ಯವನ್ನು ವರ್ಣಿಸುವುದನ್ನು ನೀವು ಕೇಳಿರಬಹುದು. ಆದರೆ, ನಮಗೆ ಆ ಭಾಗ್ಯವಿಲ್ಲವಲ್ಲ ಎಂದು ಹಳಹಳಿಸಿರಲೂಬಹುದು. ಆದರೆ, ಯುರೋಪಿನ ಕೆಲವು ನಗರಗಳ ಹೋಲಿಕೆಯಿರುವ ನಗರಗಳು, ಪ್ರವಾಸೀ ಸ್ಥಳಗಳು ನಮ್ಮ ಭಾರತದಲ್ಲೂ ಇವೆ. ನಮ್ಮ ದೇಶದಲ್ಲೇ ಯುರೋಪಿನ ಶೈಲಿಯ ಕಟ್ಟಡಗಳು, ಪ್ರಕೃತಿ ಸೌಂದರ್ಯ ಕಾಣಬೇಕೆಂದರೆ ಯುರೋಪಿಗೆ ಹೋಗಲಾಗದಿದ್ದರೇನಂತೆ! ನಮ್ಮ ದೇಶದೊಳಗೇ ಪ್ರವಾಸ ಮಾಡಿ (Travel Guide) ಬನ್ನಿ. ಇಲ್ಲೂ ಯುರೋಪಿನ ಸೌಂದರ್ಯಕ್ಕೆ ಸೆಡ್ಡು ಹೊಡೆವ ಸೌಂದರ್ಯವಿರುವ ನಗರಗಳೂ ಇವೆ, ಬೆಟ್ಟದೂರುಗಳೂ ಇವೆ. ಬನ್ನಿ, ಅಂಥ ಪ್ರವಾಸೀ ಸ್ಥಳಗಳು ಯಾವುವೆಂದು ನೋಡೋಣ.
1. ಅಲೆಪ್ಪಿ: ಕೇರಳದ ಅಲೆಪ್ಪಿ ಹಿನ್ನೀರಿನ ಸೌಂದರ್ಯವನ್ನು ಬಹಳ ಸಾರಿ ವೆನಿಸ್‌ನ ಸೌಂದರ್ಯಕ್ಕೆ ಹೋಲಿಸಲಾಗುತ್ತದೆ. ಪೂರ್ವದ ವೆನಿಸ್ ಎಂದರೆ ಅಲೆಪ್ಪಿ ಎಂದು ಪ್ರವಾಸಿಗರು ಅಲೆಪ್ಪಿಯನ್ನು ಕೊಂಡಾಡಿದ್ದಾರೆ ಕೂಡಾ. ಇಲ್ಲಿನ ಹಿನ್ನೀರಿನಲ್ಲಿ ದಿನವಿಡೀ, ಹೌಸ್‌ಬೋಟಿನೊಳಗೆ ಕುಳಿತು ಊಟ, ನಿದ್ರೆ ಸ್ನಾನಾದಿಗಳನ್ನು ಮಾಡಿ ಹಾಯಾಗಿ ಇರುವುದು ಒಂದು ಅದ್ಭುತ ಅನುಭವ.
2. ಖಜ್ಜಿಯಾರ್: ಹಿಮಾಚಲ ಪ್ರದೇಶದ ಖಜ್ಜಿಯಾರ್ ಎಂಬ ಪರ್ವತದೂರು ಯಾವ ಸ್ವಿಜ್ಜರ್‌ಲ್ಯಾಂಡ್‌ಗೂ ಕಮ್ಮಿಯಿಲ್ಲ. ಇಲ್ಲಿನ ಸಿಡಾರ್ ಅರಣ್ಯ, ಇಲ್ಲಿನ ಮನೆಗಳು, ಹುಲ್ಲುಗಾವಲು, ಚಳಿಗಾಲದಲ್ಲಿ ಹಿಮ ಮುಚ್ಚುವ ಈ ಊರು ಸ್ವಿಜ್ಜರ್‌ಲ್ಯಾಂಡ್ ಅನ್ನು ಹೋಲುತ್ತದೆ. ಪ್ರೇಮಿಗಳಿಗೆ ಅದ್ಭುತ ಜಾಗ.
3. ಲೇಕ್ ಟೌನ್, ಕೋಲ್ಕತ್ತಾ: ಕೋಲ್ಕತ್ತಾದ ಲೇಕ್ ಟೌನ್ ಕ್ಲಾಕ್ ಟವರ್ ಚಿತ್ರ ನೋಡಿದರೆ, ಅರೆ ಇದು ಲಂಡನ್‌ನ ಬಿಗ್ ಬೆನ್ ಥರಾನೇ ಕಾಣಿಸ್ತಾ ಇದ್ಯಲ್ಲಾ ಅಂತ ನಿಮಗೆ ಅನಿಸಿದರೆ ಅದು ನಿಮ್ಮ ತಪ್ಪಲ್ಲ. ಕೋಲ್ಕತ್ತಾದ ಈ ಜಾಗ ಲಂಡನ್‌ನ ಬಿಗ್ ಬೆನ್ ಅನ್ನು ಹೋಲುತ್ತದೆ ಎಂಬುದು ನಿಜವೂ ಕೂಡಾ. ೩೦ ಮೀಟರು ಎತ್ತರದ ಈ ಟವರ್ ಕೋಲ್ಕತ್ತಾಗೆ ಒಂದು ವಿಶಿಷ್ಟ ಗೆಟಪ್ ಅನ್ನು ನೀಡುತ್ತದೆ.
4. ಕೊಲ್ಲಿ ಹಿಲ್ಸ್: ತಮಿಳುನಾಡಿನ ಕೊಲ್ಲಿ ಹಿಲ್ಸ್ ಅಥವಾ ಕೊಲ್ಲಿ ಮಲೈ ಎಂಬ ಬೆಟ್ಟದೂರಿನ ಮಜಾವೇ ಬೇರೆ. 70ಕ್ಕೂ ಹೆಚ್ಚು ಹೇರ್‌ಪಿನ್ ಬೆಂಡ್‌ಗಳನ್ನು ಸುತ್ತುತ್ತಾ ಮೇಲೆ ಹೋದರೆ ನೀವೊಂದು ಅದ್ಭುತ ಪ್ರಪಂಚವನ್ನೇ ತಲುಪುತ್ತೀರಿ. ಕೊಲ್ಲಿ ಹಿಲ್ಸ್‌ನನ್ನು ಬಹುತೇಕರು ರೊಮೇನಿಯಾ ದೇಶದ ಟ್ರಾನ್ಸಿಲ್ವೇನಿಯಾದಂತೆ ಕಾಣುತ್ತದೆ ಎಂದು ಹೊಗಳಿದ್ದಾರೆ!
5. ಇಂಡಿಯಾ ಗೇಟ್: ದೆಹಲಿಯ ಕರ್ತವ್ಯ ಪಥದ ಬಳಿ ಇರುವ ಇಂಡಿಯಾ ಗೇಟ್ ಎಂಬ ಯುದ್ಧ ಸ್ಮಾರಕವನ್ನು ಬಹಳ ಸಲ ಪ್ಯಾರಿಸ್‌ನಲ್ಲಿರುವ ಆರ್ಕ್ ಡಿ ಟ್ರಿಯಂಫ್ ಜೊತೆಗೆ ಹೋಲಿಕೆ ಮಾಡಲಾಗುತ್ತದೆ.
6. ಗುಲ್ಮಾರ್ಗ್: ಕಾಶ್ಮೀರದ ಗುಲ್ಮಾರ್ಗ್‌ನಷ್ಟು ಸುಂದರ ಕನಸಿನ ಲೋಕವನ್ನು ನೀವೆಲ್ಲಾದರೂ ಕಂಡಿದ್ದೀರಾ? ನಮ್ಮ ಕಾಶ್ಮೀರದ ಸೊಬಗಿಗೆ ಯಾವ ದೇಶದ ಯಾವ ಹಿಮಬೆಟ್ಟವೂ ಸಾಟಿಯಾಗಲಾರದು ಎಂಬುದು ನಿಜವೇ! ಹೌದು. ಗುಲ್ಮಾರ್ಗ್‌ನ ಸೌಂದರ್ಯ ನೋಡಿದವರು, ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕು ಎಂದೆನಿಸುವಂತೆ ಮಾಡದಿದ್ದರೆ ಕೇಳಿ. ಈ ಗುಲ್ಮಾರ್ಗನ್ನು ನೋಡಿದ ಹಲವರು, ವಿದೇಶೀಯರು ಇದನ್ನು ಯುರೋಪಿನ ಆಲ್ಪ್ಸ್ ಪರ್ವತ ಸಾಲಿನ ಸೌಂದರ್ಯಕ್ಕೆ ಹೋಲಿಸಿದ್ದಾರೆ.
7. ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಶ್ರೀನಗರಕ್ಕೆ ಕಾಲಿಡುತ್ತಿದ್ದಂತೆ ಒಂದು ಬೇರೆಯದೇ ಪ್ರಪಂಚಕ್ಕೆ ಕಾಲಿಟ್ಟ ಅನುಭವ ನಿಮ್ಮದಾಗುತ್ತದೆ. ಮುಖ್ಯವಾಗಿ ಇಲ್ಲಿನ ಕಟ್ಟಡಗಳು, ಮನೆಗಳು, ಬೆಟ್ಟದ ಸಾಲು ಎಲ್ಲವೂ ಯುರೋಪಿನ ನಗರಗಳನ್ನು ನೆನಪಿಸುತ್ತವೆ. ಶ್ರೀನಗರದಲ್ಲಿರುವ ಟ್ಯುಲಿಪ್ ಗಾರ್ಡನ್ ಏಷ್ಯಾದ ಅತ್ಯಂತ ದೊಡ್ಡ ಟ್ಯುಲಿಪ್ ಗಾರ್ಡನ್ ಆಗಿದ್ದು, ಹಾಲೆಂಡ್‌ನ ಆಮ್ಸ್ಟೆರ್ಡಾಮ್ ಕ್ಯುಕೆನಾಫ್ ಟ್ಯುಲಿಪ್ ಗಾರ್ಡನ್‌ಗೆ ಸಾಮಾನ್ಯವಾಗಿ ಹೋಲಿಸಲಾಗುತ್ತದೆ. ಶ್ರೀನಗರ ಟ್ಯುಲಿಪ್ ಗಾರ್ಡನ್ ೩೦ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ.
8. ಕೂರ್ಗ್: ನಮ್ಮ ಕರ್ನಾಟಕದ ಹೆಮ್ಮಿ ಕೂರ್ಗ್ ಅಥವಾ ಕೊಡಗು ಜಿಲ್ಲೆಯನ್ನು ಭಾರತದ ಸ್ಕಾಟ್‌ಲ್ಯಾಂಡ್ ಎಂದು ಹೇಳಲಾಗುತ್ತದೆ.
9. ಪಾಂಡಿಚೇರಿ: ಪಾಂಡಿಚೇರಿಗೆ ಒಮ್ಮೆ ಬೇಟಿ ಕೊಟ್ಟವರು ಅದನ್ನೊಂದು ಮಿನಿ ಫ್ರಾನ್ಸ್ ಎಂದು ಹೇಳದೆ ಇರಲಾರರು. ಇಲ್ಲಿ ಫ್ರಾನ್ಸ್‌ನ ಸಂಸ್ಕೃತಿಯ ಛಾಯೆ ಕಾಣಸಿಗುತ್ತದೆ. ವಾಸ್ತುಶಿಲ್ಪ, ಆಹಾರ ಸೇರಿದಂತೆ ಬಹುತೇಕ ವಿಚಾರಗಳಲ್ಲಿ ಫ್ರಾನ್ಸ್‌ನ ಛಾಯೆ ಇದೆ. ಹಾಗಾಗಿ ಫ್ರಾನ್ಸ್‌ಗೆ ಹೋಗದಿದ್ದರೇನಂತೆ, ಪಾಂಡಿಚೇರಿಗೊಮ್ಮೆ ಹೋಗಿ ಬನ್ನಿ!
ಇದನ್ನೂ ಓದಿ: Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ