Site icon Vistara News

Travel Guide: ಸೋಲೋ ಬೇಡವೆ? ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಇರುವ ಗುಂಪಿನಲ್ಲೂ ನೀವು ಪ್ರವಾಸ ಮಾಡಬಹುದು!

women travel

ಎಲ್ಲರಿಗೂ ಸೋಲೋ ಪ್ರವಾಸ ಪಥ್ಯವಾಗುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಸೋಲೋ ಪ್ರವಾಸ ಎಂದರೆ ಅದು ಕೊಂಚ ಯೋಚನೆ ಮಾಡಬೇಕಾದ ವಿಚಾರವೇ. ಭಾರತದಂತಹ ದೇಶದಲ್ಲಿ ಪ್ರವಾಸೋದ್ಯಮದ ಚಿಂತನೆಗಳು ಇತ್ತೀಚೆಗೆ ಯುವಜನರಲ್ಲಿ ಬದಲಾಗುತ್ತಿದ್ದರೂ, ಎಲ್ಲ ಮಹಿಳೆಯರು ಸೋಲೋ ಪ್ರವಾಸ (solo travel) ಮಾಡುವ ಧೈರ್ಯ ಮಾಡುವುದಿಲ್ಲ. ಕೆಲವರಿಗೆ ಧೈರ್ಯ ಇದ್ದರೂ ಮನೆಯಲ್ಲಿ ಸಹಮತ ಇರುವುದಿಲ್ಲ ಇತ್ಯಾದಿ ಕಾರಣಗಳು ಮಹಿಳೆಯರನ್ನು ಅಧೀರರನ್ನಾಗಿಸುತ್ತದೆ. ಇನ್ನೂ ಕೆಲವರ ಸಮಸ್ಯೆ ಬೇರೆ. ಸೋಲೋ ಪ್ರವಾಸದಲ್ಲಿ ಯಾರೂ ಜೊತೆಗಿಲ್ಲದೆ ಏಕತಾನತೆ ಕಾಡುತ್ತದೆ, ಏನಾದರೂ ಆರೋಗ್ಯ ಸಮಸ್ಯೆ ಇತ್ಯಾದಿ ಆದರೆ ನಮ್ಮ ಜೊತೆ ಯಾರೂ ಇಲ್ಲ ಎಂಬ ಭಯ ಕಾಡುತ್ತದೆ, ಸೋಲೋ ಪ್ರವಾಸ ರಿಸ್ಕ್‌ ಇತ್ಯಾದಿ ಸಮಸ್ಯೆಗಳು. ಇವರಲ್ಲಿ ಒಂದಷ್ಟು ಮಹಿಳೆಯರಿಗೆ ಪ್ರವಾಸ ಮಾಡಬೇಕೆಂಬ ತುಡಿತ ಆಗಾಗ. ಆದರೆ, ಜೊತೆಗೆ ಯಾರಿಲ್ಲ ಎಂಬ ಹತಾಶಾಭಾವ. ಕುಟುಂಬಸ್ಥರಿಗೆ ಪ್ರವಾಸ ಇಷ್ಟವಿಲ್ಲ, ಅಥವಾ ಅವರ ಪ್ರವಾಸದ ಪರಿಕಲ್ಪನೆ ಬೇರೆ, ಯಾವ ಗೆಳತಿಯೂ ಜೊತೆಗೆ ಬರಲು ಮನಸ್ಸು ಮಾಡುತ್ತಿಲ್ಲ ಇತ್ಯಾದಿ ಇತ್ಯಾದಿ ಕಾರಣಗಳು. ಹೀಗಾಗಿ ಸಾಮಾನ್ಯ ಭಾರತೀಯ ಮಹಿಳೆಯರಿಗೆ ಪ್ರವಾಸ ಎಂದರೆ, ಬಹಳ ಯೋಚನೆ, ಯೋಜನೆ ಮಾಡುವಂತ ಪರಿಸ್ಥಿತಿ ಇಂದಿಗೂ ಇದೆ. ಹಿಂಜರಿಕೆಯೂ ಇದ್ದೇ ಇದೆ.

ಅದಕ್ಕಾಗಿಯೇ ಇಂಥ ಮಹಿಳೆಯರಿಗೆಂದೇ ಭಾರತದಲ್ಲಿ ಹಲವಾರು ಪ್ರವಾಸ ಸಂಸ್ಥೆಗಳಿವೆ. ಗುಂಪುಗಳಿವೆ. ಮಹಿಳೆಯರಿಂದ, ಮಹಿಳೆಯರಿಗಾಗಿಯೇ, ಮಹಿಳೆಯರಿಗೋಸ್ಕರ ಇರುವ ಪ್ರವಾಸದ ಗುಂಪುಗಳಿವು. ಇಂತಹ ಗುಂಪುಗಳು ಆಗಾಗ, ಮಹಿಳೆಯರಿಗಾಗಿ ಬಗೆಬಗೆಯ ಗುಂಪು ಪ್ರವಾಸ ಆಯೋಜಿಸುತ್ತವೆ. ಕೇವಲ ಮಹಿಳೆಯರು ಮಾತ್ರ ಈ ಪ್ರವಾಸದಲ್ಲಿ ಭಾಗವಹಿಸಬಹುದು. ತನಗೆ ಇಷ್ಟವಿರುವ ಪ್ಯಾಕೇಜನ್ನು ಆಯ್ದುಕೊಂಡು ಮಹಿಳೆಯರ ಗುಂಪಿನಲ್ಲಿ ಪ್ರವಾಸ ಮಾಡಿ ಬರಬಹುದು. ಯಾವುದೇ ಭಯವಿಲ್ಲದ, ಎಲ್ಲ ಬಗೆಯ ಸುರಕ್ಷತೆಗಳನ್ನೂ ನೀಡುವ, ಹೊಸ ಹೊಸ ಮಹಿಳೆಯರ ಸ್ನೇಹ ಸಂಪಾದಿಸಬಲ್ಲ ಪ್ರವಾಸವಿದು. ಹಾಗಾದರೆ ಬನ್ನಿ, ಯಾವೆಲ್ಲ ಸಂಸ್ಥೆಗಳು ಮಹಿಳೆಯರ ಪ್ರವಾಸವನ್ನೂ ಮಾತ್ರ ಆಯೋಜಿಸುತ್ತವೆ (women travel, travel guide, travel tips) ಎಂದು ನೋಡೋಣ.

1. ವಾವ್‌ ಕ್ಲಬ್‌ (Wow Club): ವಿಮೆನ್‌ ಆನ್‌ ವಾಂಡರ್‌ಲಸ್ಟ್‌ (Women on Wanderlust) ಎಂಬ ಪ್ರವಾಸಿ ಸಂಸ್ಥೆಯನ್ನು ಆರಂಭಿಸಿದ್ದು ಸ್ವತಃ ಸಾಕಷ್ಟು ಪ್ರವಾಸಗಳನ್ನು ಮಾಡಿ ಅನುಭವವಿರುವ ಹಾಗೂ ಬರಹಗಾರ್ತಿ ಸುಮಿತ್ರಾ ಎಂಬವರು. ಬಹಳಷ್ಟು ಸೋಲೋ ಪ್ರವಾಸಗಳನ್ನು ಮಾಡಿರುವ ಇವರಿಗೆ, ಭಾರತದಲ್ಲಿ ಮಹಿಳೆಯರಿಗಾಗಿಯೇ ಮೀಸಲಿರುವ ಪ್ರವಾಸಿ ಸಂಸ್ಥೆಗಳಿಲ್ಲ, ಹಾಗೂ ಮಹಿಳಾ ಪ್ರವಾಸಿ ಸಹವರ್ತಿ ಹುಡುಕುವುದು ಬಹಳ ಕಷ್ಟ ಎಂಬುದನ್ನು ಅರಿತುಕೊಂಡು ತನ್ನದೇ ಒಂದು ಸಂಸ್ಥೆ ಕಟ್ಟುವ ಕನಸು ಕಂಡು ಅದರಂತೆ ನನಸೂ ಮಾಡಿಕೊಂಡರು. 2005ರಲ್ಲಿ ಹುಟ್ಟಿಕೊಂಡ ಈ ಸಂಸ್ಥೆ, ಈವರೆಗೆ 100ಕ್ಕೂ ಹೆಚ್ಚು ಪ್ರವಾಸಗಳನ್ನು ಆಯೋಜಿಸಿದ್ದು, 50ಕ್ಕೂ ಹೆಚ್ಚು ಬಗೆಯ ಪ್ಯಾಕೇಜುಗಳು ಇವರ ಬಳಿ ಇವೆ.

Tips for Healthy Travel

2. ಎಫ್‌5 ಎಸ್ಕೇಪ್ಸ್‌ (F5 Escapes): ಮಾಲಿನಿ ಗೌರಿಶಂಕರ್‌ ಎಂಬವರಿಂದ ಆರಂಭವಾದ ಈ ಸಂಸ್ಥೆ ಮಹಿಳೆಯರಿಗಾಗಿಯೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹಲವಾರು ಪ್ರವಾಸಗಳನ್ನು ಹಮ್ಮಿಕೊಳ್ಳುತ್ತದೆ. ನಾನು ದೇಶದ ಉದ್ದಗಲಕ್ಕೂ ಒಂಟಿಯಾಗಿ ಸುತ್ತಾಡಿದ್ದೇನೆ, ಆದರೆ, ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಕೆಲವರಿಗೆ ಜೊತೆಗಾರ್ತಿಯರು ಬೇಕಾಗುತ್ತದೆ ಎಂದು ಅರಿತುಕೊಂಡ ನಾನು ಇಂತಹ ಸಂಸ್ಥೆಯೊಂದನ್ನು ಆರಂಭಿಸಿದೆ ಎಂದು ಅವರು ಹೇಳುತ್ತಾರೆ.

3. ಗರ್ಲ್ಸ್‌ ಆನ್‌ ದಿ ಗೋ (Girls on The Go): ಜೆಮ್‌ಶೆಡ್‌ಪುರದ ಪ್ರಿಯಾ ಬೋಸ್‌ ಎಂಬವರು ಆರಂಭಿಸಿದ ಈ ಸಂಸ್ಥೆ, ಭಾರತದೊಳಗೂ ಹೊರಗೂ, ಪ್ರಪಂಚದಾದ್ಯಂತ ಹಲವು ಪ್ರವಾಸಗಳನ್ನು ಯೋಜಿಸುತ್ತದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಈ ಸಂಸ್ಥೆ, ನಾರ್ವೆ, ಮಂಗೋಲಿಯಾ, ಭೂತಾನ್‌, ಸ್ಪೈನ್‌, ನ್ಯೂಜಿಲ್ಯಾಂಡ್‌, ಅಂಟಾರ್ಟಿಕಾ ಹೀಗೆ ಪ್ರಪಂಚದ ಮೂಲೆ ಮೂಲೆಗಳಿಗೂ ಪ್ರವಾಸಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಗೆಯಿದೆ.

4. ವಾಂಡರಿಂಗ್‌ ಜೇನ್ (Wandering Jane):‌ ಕಾರ್ಪೋರೇಟ್‌ ಜಗತ್ತಿನಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿ, ಪ್ರವಾಸಕ್ಕಾಗಿ ತುಡಿದ ಮನಸ್ಸಿನ ಅಕ್ಷತ್‌ ಹಾಗೂ ಗರಿಮಾ ಜೇನ್‌ ಎಂಬ ಇಬ್ಬರು ಆರಂಭಿಸಿದ ಮಹಿಳೆಯರಿಗಾಗಿ ಇರುವ ಟ್ರಾವೆಲ್‌ ಸಂಸ್ಥೆಯಿದು.

Tips for Healthy Travel

5. ಚಿಂದಿ ಸಫರ್ (Chindi Safar):‌ ಕಡಿಮೆ ವೆಚ್ಚದಲ್ಲಿ ಬಜೆಟ್‌ ಪ್ರವಾಸವನ್ನು ಇಷ್ಟಪಡುವ ಮಹಿಳೆಯರಿಗಾಗಿ ಇರುವ ಸಂಸ್ಥೆಯಿದು. ಇಲ್ಲಿ ಸುಮಾರು ಹೆಚ್ಚೆಂದರೆ 10 ಮಂದಿ ಮಹಿಳೆಯರು ಒಟ್ಟಾಗಿ ಮಾಡಬಹುದಾದ ಪ್ರವಾಸಗಳು, ಪ್ಯಾಕೇಜುಗಳು ಲಭ್ಯವಿರುತ್ತವೆ. ಭಾರತದಲ್ಲೇ, ಉತ್ತರ ಭಾರತ, ದಕ್ಷಿಣ ಭಾರತದೆಲ್ಲೆಡೆ ಹಲವು ಪ್ರವಾಸಗಳನ್ನು ಈ ಗುಂಪು ಕಡಿಮೆ ಬಜೆಟ್‌ನಲ್ಲಿ ಹಮ್ಮಿಕೊಂಡಿದೆ.

ಇವಿಷ್ಟೇ ಅಲ್ಲ, ಭಾರತದಲ್ಲಿ ಈಗ ಮಹಿಳೆಯರಿಗಾಗಿಯೇ ಇರುವ ಪ್ರವಾಸಿ ಗುಂಪುಗಳು ದಿನೇ ದಿನೇ ಹೆಚ್ಚುತ್ತಿದೆ. ಅಂತರ್ಜಾಲ, ಸಾಮಾಜಿಕ ಜಾಲತಾಣ ಜಾಲಾಡಿದರೆ, ಸಮಾನ ಮನಸ್ಕ ಮಹಿಳೆಯರ ಗುಂಪುಗಳು ಸಿಕ್ಕೇ ಸಿಗುತ್ತವೆ. ಅವರವರ ಅವಶ್ಯಕತೆ, ಆಸಕ್ತಿಗಳಿಗನುಗುಣವಾಗಿ ಪ್ರವಾಸಗಳೂ ಲಭ್ಯವಿರುತ್ತವೆ. ಆದರೆ, ನಮ್ಮ ಆಸಕ್ತಿಯ ಬೆನ್ನು ಬಿದ್ದು ಹುಡುಕುವ ಉತ್ಸಾಹವೂ ಇರಬೇಕು ಅಷ್ಟೇ. ಮನಸ್ಸಿದ್ದಲ್ಲಿ ಮಾರ್ಗ ಅಲ್ಲವೇ!

ಇದನ್ನೂ ಓದಿ: Travel Guide: ನವೆಂಬರ್‌ನ ಹಿತವಾದ ಚಳಿಗೆ ಈ ಯಾವುದಾದರೂ ಜಾಗಕ್ಕೆ ಪ್ರವಾಸ ಮಾಡಿ ಬನ್ನಿ!

Exit mobile version