ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಆಗಾಗ ನಮ್ಮ ಸುತ್ತಮುತ್ತಲಿನ ಘಟನೆಗಳೇ ಸಾಕ್ಷಿಯಾಗುತ್ತವೆ. ಬೈಕ್‌ನಲ್ಲಿ ಸಾವಿರಾರು ಕೀಮೀ ದೂರ ಹೋಗೋದೆಲ್ಲ ಕಷ್ಟ ಎನ್ನುವವರಿಗೆ ಬೈಕ್ ಚಲಾಯಿಸುವುದರ ಜೊತೆಗೆ ನಾಯಿಯನ್ನೂ ಕುಳ್ಳಿರಿಸಿಕೊಂಡು ಹೋದರೆ ಅಚ್ಚರಿಯಾಗದೆ ಇರದು. ಹೋಗುವ ಛಲ, ಹೊಸದನ್ನು ಅನುಭವಿಸುವ ಆಸಕ್ತಿ, ಏನೇ ಬಂದರೂ ಎದುರಿಸುತ್ತೇನೆ ಎಂಬ ಛಾತಿ ಇದ್ದರೆ ಸಾಕು ಬದುಕನ್ನು ನಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು ಎಂಬುದಕ್ಕೆ ಇಂತಹ ಉದಾಹರಣೆ ಸಾಕು.
ಚಾರ್ಲಿ ೭೭೭ ಸಿನಿಮಾದ ನಂತರ ಅಂಥದ್ದೇ ಪಯಣದ ಕತೆಗಳು ಆಗಾಗ ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಕೇರಳದ ವ್ಯಕ್ತಿಯೊಬ್ಬರು ತನ್ನ ಪ್ರೀತಿಯ ನಾಯಿಯ ಜೊತೆಗೆ ಕೇರಳದಿಂದ ಕಾಶ್ಮೀರದವರೆಗೆ ಬೈಕ್ ಸವಾರಿ ಮಾಡಿದ್ದರು. ಈಗ ಮತ್ತೊಬ್ಬರು ಚಾರ್ಲಿಯಂತಹುದೇ ಕತೆಯನ್ನು ಹೊತ್ತು ತಂದಿದ್ದಾರೆ. ತನ್ನ ನಾಯಿಯ ಜೊತೆಗೆ ತುಂಬ ದುರ್ಗಮ ಹಾದಿಗಳಲ್ಲಿ ಕ್ರಮಿಸಿ ಲಡಾಕ್‌ನ ಝಂಸ್ಕಾರ್ ಪ್ರಾಂತ್ಯದಲ್ಲೂ ಸುತ್ತಿ ಬಂದು ಎಲ್ಲರನ್ನೂ ಅಚ್ಚರಿಗೆ ನೂಕಿದೆ.
ಜೀವನಪ್ರೀತಿ ಎಂದರೆ ಇದು. ಚೌ ಸುರೇಂಗ್ ರಾಜ್‌ಕನ್ವರ್ ಎಂಬ ಟ್ರಾವೆಲ್ ಇನ್‌ಫ್ಲುಯೆಂಝರ್ ದೆಹಲಿಯಿಂದ ಲಡಾಕ್‌ವರೆಗೆ ತನ್ನ ನಾಯಿಯ ಅನುಕೂಲಕ್ಕೆ ತಕ್ಕಂತೆ ಬೈಕ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ನಾಯಿಯನ್ನು ಕೂರಿಸಿಕೊಂಡು ಭರ್ಜರಿ ಪ್ರವಾಸ ಮಾಡಿ ಬಂದಿದ್ದಾರೆ. ಅವರ ನಾಯಿ ಜೊತೆಗಿನ ಪ್ರಯಾಣದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಜನಮನ ಗೆದ್ದಿದೆ. ಬೈಕ್‌ನ ಹಿಂಬದಿಗೆ ಒಂದು ಕ್ಯಾರಿಯರ್ ಅಳವಡಿಸಿ ಅದರಲ್ಲಿ ತನ್ನ ನಾಯಿ ಕೂರಬಹುದಾದಂತೆ ಮಾಡಿದ್ದನ್ನು ನೋಡಿ ಎಲ್ಲರೂ ಸೋಜಿಗ ವ್ಯಕ್ತಪಡಿಸುತ್ತಿದ್ದಾರೆ.
ರಾಜ್‌ಕನ್ವರ್ ಅವರ ನಾಯಿ ಬೆಲ್ಲಾಗೆ ಅವರು ಪ್ರವಾಸಕ್ಕೂ ಮೊದಲೇ, ಹೇಗೆ ಬೈಕ್‌ನಲ್ಲಿ ಕುಳಿತುಕೊಳ್ಳುವುದರಿಂದ ಹಿಡಿದು, ಪ್ರಯಾಣಕ್ಕೆ ಬೇಕಾದ ಎಲ್ಲ ರೀತಿಯ ತರಬೇತಿಗಳನ್ನೂ ಮೊದಲೇ ಮಾಡಿದ್ದರಂತೆ. ರಾಜ್ ಹಿಂದಿನ ಕ್ಯಾರಿಯರ್‌ನಲ್ಲಿ ಬೆಲ್ಲಾ ಕೂತು ಲಡಾಕ್‌ನ ದುರ್ಗಮ ದಾರಿಗಳಲ್ಲಿ ಅದ್ಭುತ ಪ್ರಯಾಣ ಮಾಡಿದೆ. ೪೫ ಸೆಕೆಂಡುಗಳ ಪುಟಾಣಿ ವಿಡಿಯೋನಲ್ಲಿ ಇಡೀ ಪ್ರಯಾಣದ ಝಲಕ್‌ನ್ನು ರಾಜ್ ಅವರು ಪೋಸ್ಟ್ ಮಾಡಿದ್ದು, ಇವರಿಬ್ಬರ ಈ ಪ್ರಯಾಣದ ತುಣುಕುಗಳನ್ನು ನೋಡುವುದೇ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ.
ಇದನ್ನೂ ಓದಿ | Viral Video| ಡ್ರೈವರ್ ಸೀಟ್ನಲ್ಲಿ ಕುಳಿತುಕೊಳ್ಳದೆ, 18 ಚಕ್ರದ ಬೃಹತ್ ಟ್ರಕ್ನ್ನು ಪಾರ್ಕ್ ಮಾಡಿದ ಚಾಲಕ!
ರಾಜ್ ಅವರು ಹೇಳುವಂತೆ, ದೆಹಲಿಯಿಂದ ಲಡಾಕ್‌ವರೆಗೆ ತನ್ನ ಪ್ರೀತಿಯ ಸಾಕು ನಾಯಿ ಬೆಲ್ಲಾ ಜೊತೆಗೆ ಹೋಗುವುದು ಸುಲಭದ ನಿರ್ಧಾರವಾಗಿರಲಿಲ್ಲ. ಇದಕ್ಕೆ ತಿಂಗಳುಗಟ್ಟಲೆ ಸಾಕಷ್ಟು ತಯಾರಿ ನಡೆಸಲಾಗಿದೆ. ವಾಹನದಲ್ಲಿ ಮಾಡಿರುವ ಮಾರ್ಪಾಡುಗಳಿಂದ ಹಿಡಿದು ಪ್ರತಿಯೊಂದೂ ಇಲ್ಲಿ ಸವಾಲೇ ಆಗಿತ್ತು. ಜೊತೆಗೆ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದ ವಾಹನ ಹೋಗಬಹುದಾದ ಹಾದಿಯಲ್ಲಿ ಕ್ರಮಿಸುವುದು ಎಂದರೆ ಇನ್ನೊಂದು ದೊಡ್ಡ ಸವಾಲು. ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು, ಬೈಕ್ ಚಾಲನೆ ಮಾಡುತ್ತಾ, ಹಿಮಚ್ಛಾದಿತ ಬೆಟ್ಟಗಳ ದುರ್ಗಮ ದಾರಿಯಲ್ಲಿ ಕ್ರಮಿಸುವುದು ಸುಲಭವಾಗಿರಲಿಲ್ಲ. ಝಂಸ್ಕಾರ್- ಲಡಾಕ್ ಪ್ರಾಂತ್ಯದಲ್ಲಿ ಚಾಲನೆ ಸುಲಭವೂ ಅಲ್ಲ. ಆದರೂ ಇದೊಂದು ಜೀವನದ ಅತ್ಯಂತ ಅದ್ಭುತ ಅನುಭವಗಳಲ್ಲೊಂದು ಎಂದವರು ವಿವರಿಸಿದ್ದಾರೆ.
ಬೆಲ್ಲಾ ಜೊತೆಗೆ ತನ್ನ ಪಯಣದ ಪುಟ್ಟ ವಿಡಿಯೋನ ಕೊನೆಯಲ್ಲಿ ಭಾರತದ ರಾಷ್ಟ್ರಧ್ವಜದೊಂದಿಗೆ ವಿಶ್ವದ ಅತ್ಯಂತ ಎತ್ತರದ ವಾಹನ ಹೋಗಬಹುದಾದ ಹಾದಿಯ ಉಮ್ಲಿಂಗ್‌ಲಾ ತಲುಪುವರೆಗೆ ಇದೆ. ಈ ಇಬ್ಬರ ಜೋಡಿಯ ಜೊತೆಗೆ ಹಾದಿ ಬದಿಯಲ್ಲಿ ಸಿಕ್ಕ ಪಯಣಿಗರು, ಪ್ರತಿಯೊಂದು ಜಾಗದಲ್ಲಿ ಪರಿಚಯವಾದ ಪ್ರವಾಸಿಗರು ನೀಡುವ ಪ್ರೀತಿ, ಸೆಲ್ಫಿ ಫೋಟೋಗಳ ಝಲಕ್ ಕೂಡಾ ಇದೆ. ಪುಟಾಣಿ ವಿಡಿಯೋವಾದರೂ, ಸಾವಿರಾರು ಮಂದಿ ಇದನ್ನು ವೀಕ್ಷಿಸಿ ರಾಜ್ ಅವರ ಪ್ರವಾಸ ಹಾಗೂ ನಾಯಿ ಪ್ರೀತಿಗೆ ಮೆಚ್ಚುಗೆ ಸುರಿಮಳೆಯನ್ನೇ ಹರಿಸಿದ್ದಾರೆ. ಬಹುಮುಖ್ಯವಾಗಿ ಬೆಲ್ಲಾ ಈ ಪ್ರವಾಸದ ಹೈಲೈಟ್ ಆಗಿ ಮಿಂಚಿದೆ!
ಇದನ್ನೂ ಓದಿ | Jog Falls Hanuman | ಜೋಗ ಜಲಪಾತದಲ್ಲಿ ಕಂಡ ರಾಮನ ಬಂಟ ಹನುಮ; ವಿಸ್ಮಯ ಕಂಡು ಬೆರಗಾದ ಪ್ರವಾಸಿಗರು