Site icon Vistara News

Travel Story: ಹಸುಗೂಸಿನೊಂದಿಗೇ ಪ್ರವಾಸ: ದೇಶ ದೇಶಗಳನ್ನು ಸುತ್ತಿ ಬರುವ ಅನಿಂದಿತಾ!

anindita chaterjee

ಮಕ್ಕಳಾದ ಮೇಲೆ ಪ್ರವಾಸ ಎಂಬುದು ಕೇವಲ ಕನಸಷ್ಟೇ ಎಂಬ ನಂಬಿಕೆ ಅನೇಕರಿಗಿದೆ. ಮಕ್ಕಳಾದ ಮೇಲೆ ಮಕ್ಕಳ ಜವಾಬ್ದಾರಿಗಳ ಭಾರ ನಮ್ಮ ಕನಸನ್ನು ನನಸಾಗಿಸಲು ಬಿಡುವುದಿಲ್ಲ ಎಂಬುದಷ್ಟೇ ಅಲ್ಲ, ಮಕ್ಕಳನ್ನು ಅದರಲ್ಲೂ ಸಣ್ಣ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ತಿರುಗಾಡುವುದು ಸಾಧ್ಯವಿಲ್ಲ ಎಂಬುದು ಹಲವರ ವಾದ. ಆದರೆ, ಈ ವಾದವನ್ನು ಅನೇಕರು ಇತ್ತೀಚಿಗಿನ ದಿನಗಳಲ್ಲಿ ಸುಳ್ಳಾಗಿಸಿದ ಅಮ್ಮಂದಿರೂ, ಪೋಷಕರೂ ಇದ್ದಾರೆ! ಮಗುವನ್ನು ಹೆತ್ತು, ನಮ್ಮ ಕನಸುಗಳನ್ನೂ ಮೊಟಕುಗೊಳಿಸದೆ, ದೇಶ ದೇಶ ಸುತ್ತುವ ಉತ್ಸಾಹಿ ಹೆಣ್ಣುಮಕ್ಕಳು, ಈ ಕಾಲದ ಹೆಣ್ಣುಮಕ್ಕಳು ಇತರರಿಗೂ ಸ್ಪೂರ್ತಿಯಾಗುತ್ತಾರೆ. ಇಂಥ ಹೆಣ್ಣುಮಕ್ಕಳ ಪೈಕಿ ಅನಿಂದಿತಾ ಚಟರ್ಜಿ ಕೂಡಾ ಒಬ್ಬರು. ಅನಿಂದಿತಾ ತನ್ನ ಒಂದು ವರ್ಷದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ದೇಶ ದೇಶಗಳನ್ನು (travel with kid) ಸುತ್ತಾಡಿದ್ದಾರೆ. ಪ್ರವಾಸ ಮಾಡುವುದು, ಇತರ ದೇಶ, ಭಾಷೆ, ಗಡಿಗಳ ಹಂಗಿಲ್ಲದೆ, ಖುಷಿಯಿಂದ ತಿರುಗಾಡಿಕೊಂಡಿರುವ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ.

40ರ ಹರೆಯದ ಅನಿಂದಿತಾ ಚಟರ್ಜಿಗೆ ಪ್ರವಾಸ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಂತ ಮಕ್ಕಳಾದ ಮೇಲೆ ಪ್ರವಾಸವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದೆನಿಸಿದ ಆಕೆ ಗರ್ಭಿಣಿಯಾಗಿದ್ದಾಗಲೇ ನಾಲ್ಕು ದೇಶ ಸುತ್ತಿ ಬಂದರಂತೆ. ಮಗು ಹುಟ್ಟಿದ ಮೇಲೂ ತನ್ನ ಪ್ರವಾಸವನ್ನು ನಿಲ್ಲಿಸದ ಈಗೆ ಇನ್ನೂ ಹತ್ತು ದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗುವ ಅದಮ್ಯ ಉತ್ಸಾಹದ ಈಕೆ, ಈಗ ನನ್ನ ಆಸಕ್ತಿಯನ್ನು ನನ್ನ ಮಗುವನ್ನು ಬೆಳೆಸುವ ಜೊತೆಗೇ ಮುಂದುವರಿಸುತ್ತೇನೆ. ಆದರೆ, ಮಗು ದೊಡ್ಡವಳಾದ ಮೇಲೆ ಆಕೆಯ ಆಸಕ್ತಿ, ಇಷ್ಟವನ್ನು ಆಕೆ ಮುಂದುವರಿಸುತ್ತಾಳೆ ಎನ್ನುತ್ತಾರೆ.

ಅನಿಂದಿತಾ ತನ್ನ ಮಗುವಿನ ಪುಟ್ಟ ಪಾದದ ಮೆದುವಾದ ಒದೆತವನ್ನು ಮೊದಲ ಬಾರಿಗೆ ತನ್ನ ಹೊಟ್ಟೆಯೊಳಗೆ ಅನುಭವವಾಗುವ ಸಂದರ್ಭ ಆಕೆ ಮೆಕ್ಸಿಕೋನಲ್ಲಿ ಈಜುತ್ತಿದ್ದರಂತೆ. ಗರ್ಭಿಣಿಯಾಗಿದ್ದಾಗ, ಮೆಕ್ಸಿಕೋ, ಕೊಲಂಬಿಯಾ, ಕ್ಯುರಸೌ, ಅರುಬಾ ಎಂಬ ನಾಲ್ಕು ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಈ ಪ್ರವಾಸದ ವೇಳೆ ಗರ್ಭಿಣಿಯಾಗಿದ್ದಾಗಲೇ ಎಲ್ಲ ಬಗೆಯ ಆಸಕ್ತಿಗಳನ್ನೂ ಯಾವ ಅಂಜಿಕೆಯೂ ಇಲ್ಲದೆ ಅನಿಂದಿತಾ ಮಾಡಿದ್ದು, ಈಜುವುದು, ಅಗ್ನಿಪರ್ವತದ ಕೆಸರಿನಲ್ಲಿ ತೇಲುವುದು, ಸ್ನೋರ್ಕ್ಲಿಂಗ್‌, ಚಾರಣ ಇತ್ಯಾದಿಗಳನ್ನೆಲ್ಲ ಮಾಡಿದ್ದರಂತೆ. ದಿನಕ್ಕೆ ೧೦ ಕಿಮೀಗಳಷ್ಟು ನಡೆದದ್ದೂ ಇದೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Travel Tips: ಈ ಹೆದ್ದಾರಿಯ ಮೂಲಕ ಕೋಲ್ಕತಾದಿಂದ ಬ್ಯಾಂಕಾಕ್‌ಗೆ ರೋಡ್‌ಟ್ರಿಪ್ ಮಾಡಿ!

2017ರಲ್ಲಿ ಟ್ರಾವೆಲ್‌ ಚಾಟರ್‌ ಎಂಬ ಇನ್ಸ್ಟಾಗ್ರಾಂ ಖಾತೆ ತೆರೆದ ಈಕೆ ಆ ಮೂಲಕ ತನ್ನ ತಿರುಗಾಟದ ವಿಡಿಯೋ ಹಾಗೂ, ವಿವರಗಳನ್ನು ಪೋಸ್ಟ್‌ ಮಾಡುತ್ತಿದ್ದರು. 2020ರಲ್ಲಿ ತನ್ನ ಉದ್ಯೋಗಕ್ಕೂ ಗುಡ್‌ಬೈ ಹೇಳಿದ ಈಕೆ, ತನ್ನ ಆಸಕ್ತಿಯಾದ ತಿರುಗಾಟವನ್ನೇ ಪೂರ್ಣಕಾಲಿಕ ಕೆಲಸವನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಈ ಬಗ್ಗೆ ವಿಡಿಯೋಗಳನ್ನು, ಹಾಗೂ ಬರವಣಿಗೆಯನ್ನೂ ಮಾಡುವ ಮೂಲಕ ಪ್ರವಾಸಕ್ಕೆ ದುಡ್ಡುಳಿಸುತ್ತಾರಂತೆ. ಜೊತೆಗೆ ತಿರುಗಾಡುತ್ತಲೇ ಕೆಲಸ ಮಾಡುವ ಸುಖವನ್ನೂ ಅನುಭವಿಸುತ್ತಾರಂತೆ.

ನನಗೆ ಪ್ರವಾಸ ಎಂದರೆ ಇಷ್ಟವಿರುವಾಗ ನಾನು ಮಗುವಿನ ಕಾರಣಕ್ಕೆ ಅದನ್ಯಾಕೆ ಬಿಡಬೇಕು. ಮಕ್ಕಳನ್ನೂ ಕರೆದುಕೊಂಡು ಯಾಕೆ ಪ್ರವಾಸ ಮಾಡಬಾರದು ಅನಿಸಿ ನನ್ನ ಆಸಕ್ತಿಯನ್ನು ಮುಂದುವರಿಸುತ್ತಿರುವೆ. ಮಗು ಹುಟ್ಟಿದ ಮೇಲೆ ಪ್ರವಾಸಕ್ಕೂ ಮೊದಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ. ಹೋಗುವ ಜಾಗದ ಬಗ್ಗೆ ಸಾಕಷ್ಟು ಓದಿಕೊಂಡು ಹೋಗುತ್ತೇನೆ. ಆಕೆ ಹುಟ್ಟಿದ ಮೇಲೆ 14 ದೇಶ ಸುತ್ತಿದ್ದೇನೆ. ಈವರೆಗೆ 78 ದೇಶಗಳನ್ನು ಸುತ್ತಾಡಿಕೊಂಡು ನೋಡಿ ಬಂದಿದ್ದೇನೆ ಎನ್ನುತ್ತಾರೆ.

ಮಗುವಿನ ಜೊತೆಗೆ ಪ್ರವಾಸ ಮಾಡಲು ಕೊಂಚ ತಯಾರಿ ಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳುವ ಅವರು. ಎಲ್ಲಿಗೇ ಹೋದರೂ ಮಗುವಿನ ಮೂಡ್‌ ನೋಡಿಕೊಂಡು ಆ ದಿನದ ತಿರುಗಾಟವನ್ನು ಪ್ಲಾನ್‌ ಮಾಡುತ್ತೇನೆ. ಪ್ರಯಾಣಗಳಲ್ಲೂ ಕಾರ್‌ ಬಾಡಿಗೆಗೆ ಪಡೆದು ಹೋಗುತ್ತೇನೆ, ಆಗ ಮಗುವಿನ ಸಾಮಾನುಗಳನ್ನು ಇಟ್ಟುಕೊಳ್ಳಲು ಹಾಗೂ ಬೇಕಾದೆಡೆಯಲ್ಲಿ ನಿಲ್ಲಿಸಲು ಸುಲಭವಾಗುತ್ತದೆ ಎಂದಾಕೆ ಹೇಳುತ್ತಾರೆ.

ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!

Exit mobile version