Site icon Vistara News

Travel Tips: ರಾತ್ರಿಯಾಕಾಶದ ನಕ್ಷತ್ರಪುಂಜಗಳನ್ನು ನೋಡಬೇಕೆಂದರೆ ನೀವು ಇಲ್ಲಿಗೆ ಪ್ರವಾಸ ಮಾಡಿ!

astro tourism

ನಗರಗಳಲ್ಲಿ ಕಳೆಯುವ ಬಹುತೇಕರಿಗೆ ನಕ್ಷತ್ರಗಳ ಲೋಕ ಕಾಣುವುದೇ ಅಪರೂಪ. ನಾವು ನಡೆಯುವ ನೆಲದಿಂದ ಆಗಸದೆಡೆಗೆ ಕತ್ತೆತ್ತಿ ನೋಡಿದರೆ ರಾತ್ರಿ ಆಗಸದ ತುಂಬೆಲ್ಲ ಹೊಳೆವ ನಕ್ಷತ್ರ ಕಂಡರೆ ಆ ರಾತ್ರಿಯಷ್ಟು ಸುಂದರ ಇನ್ನೊಂದು ಅನುಭವ ಇರಲಿಕ್ಕಿಲ್ಲ. ದಿನವಿಡೀ ಕೆಲಸದ ಒತ್ತಡದಲ್ಲಿ ಕಳೆದು, ರಾತ್ರಿ ಮನೆಗೆ ಬಂದು ಟೇರೇಸು ಹತ್ತಿ ಕತ್ತೆತ್ತಿ ನೋಡಿದರೆ ನಕ್ಷತ್ರಗಳೇ ನಮ್ಮ ಸೂರಾಗಿ ಕಂಡರೆ, ಒತ್ತಡವೆಲ್ಲ ಬಸಿದ ಅನುಭವ. ಆದರೆ, ನಗರಗಳ ಮಾಲಿನ್ಯ ಹಾಗೂ ನಾನಾ ಕಾರಣಗಳಿಂದ ಇಂದು ಆಕಾಶವಿಡೀ ಮಬ್ಬಾಗಿಯೇ ಕಾಣುತ್ತದೆ, ನಕ್ಷತ್ರಗಳು ಮಿನುಗುವುದಂತೂ ದೂರದ ಮಾತು.

ಹಾಗಾದರೆ, ನಕ್ಷತ್ರಗಳೂರಿಗೇ ಪ್ರವಾಸ ಮಾಡಿದರೆ ಹೇಗೆ ಎಂಬ ಯೋಚನೆ ನಿಮಗೆ ಬಂದಿರಲಿಕ್ಕೂ ಸಾಕು. ಪ್ರವಾಸಗಳು ಮರೆಯದ ಅನುಭವವಾಗಿರಲಿಕ್ಕೆ ಅಲ್ಲಿ ರಾತ್ರಿ ಆಕಾಶ ತುಂಬ ನಕ್ಷತ್ರ ಕಂಡರೂ ಸಾಕು ಎನ್ನುವ ಮಂದಿ ಭಾರತದ ಈ ಕೆಲವು ಊರುಗಳಿಗಾದರೂ ಪ್ರವಾಸ ಹೋಗಲೇ ಬೇಕು. ಯಾಕೆಂದರೆ, ಇಲ್ಲಿನ ರಾತ್ರಿಗಳೆಂದರೆ, ಆಕಾಶದ ತುಂಬ ಮಿನುಗುವ ನಕ್ಷತ್ರಗಳು ಕನಸಿನ ಲೋಕವನ್ನೇ ನಿಮ್ಮ ಮುಂದೆ ತೆರೆದಿಡುತ್ತದೆ.

spiti valley

1. ಲಡಾಖ್:‌ ಲಡಾಖ್‌ ಎಂಬ ಸಾಹಸಪ್ರಿಯರ ಫೇವರಿಟ್‌ ತಾಣ ಕೇವಲ ಸಾಹಸಮಯ ಚಟುವಟಿಕೆಗಳಿಗೆ ಮಾತ್ರ ತಾಣವಲ್ಲ. ಖಗೋಳ ಜಗತ್ತಿನ ವಿಸ್ಮಯಗಳನ್ನು ಸವಿಯುವ ಮಂದಿಗೂ ಅಷ್ಟೇ ಪ್ರಿಯ. ಯಾಕೆಂದರೆ, ಆಕಾಶ ಕಾಯಗಳನ್ನು ರಾತ್ರಿ ನೋಡಬೇಕೆಂದರೆ ಲಡಾಖ್‌ಗಿಂತ ಉತ್ತಮ ಜಾಗ ಇನ್ನೊಂದಿಲ್ಲ. ಅದಕ್ಕಾಗಿಯೇ ರಾತ್ರಿಯ ಆಕಾಶದ ಫೋಟೋ ತೆಗೆಯಲಿಚ್ಛಿಸುವ ಮಂದಿಯೆಲ್ಲ ಲಡಾಖ್‌ಗೆ ದೌಡಾಯಿಸುತ್ತಾರೆ. ಇಲ್ಲಿನ ಬೌದ್ಧಮಂದಿರಗಳನ್ನು ನೋಡುತ್ತಾ, ಶೀತಮರುಭೂಮಿಯ ಬೇರೆಯದೇ ಸೊಬಗನ್ನು ಅನುಭವಿಸುತ್ತಾ, ರಾತ್ರಿಗಳಲ್ಲಿ ಮಿಲ್ಕೀವೇ, ಆಂಡ್ರೋಮಿಡಾ ಗ್ಯಾಲೆಕ್ಸಿಯನ್ನು ಕಣ್ತುಂಬಿಕೊಳ್ಳುತ್ತಾ ಬೇರೆಯದೇ ಪ್ರವಾಸದ ಸುಖವನ್ನು ಅನುಭವಿಸಬೇಕೆಂದರೆ ಒಮ್ಮೆ ಲಡಾಖ್‌ ನೋಡಬೇಕು.

2. ಜೈಸಲ್ಮೇರ್‌: ಥಾರ್‌ ಮರುಭೂಮಿಯ ಸೊಬಗನ್ನು ಸವಿಯಬೇಕೆಂದರೆ ಜೈಸಲ್ಮೇರ್‌ಗೆ ಹೋಗಬೇಕು. ಕೇವಲ ಮರುಭೂಮಿಯ ಸೊಬಗಷ್ಟೇ ಅಲ್ಲ, ರಾತ್ರಿಯ ನೀಲಾಕಾಶದ ವೈಭವವನ್ನು ನೋಡಬೇಕೆಂದರೂ ಜೈಸಲ್ಮೇರಿಗೇ ಹೋಗಬೇಕು. ಯಾಕೆಂದರೆ, ರಾತ್ರಿದಾದರೆ, ನಕ್ಷತ್ರ ಪುಂಜಗಳೇ ದೀಪಾವಳಿಯ ವಿದ್ಯುದ್ದೀಪಗಳಂತೆ ಆಕಾಶದಲ್ಲಿ ಜಗಮಗಿಸುವ ಖುಷಿಯನ್ನು ಸವಿಯಲು ಎಲ್ಲ ಜಾಗದಲ್ಲೂ ಸಾಧ್ಯವಿಲ್ಲವಲ್ಲ.

ಇದನ್ನೂ ಓದಿ: Travel Tips: ಬೆಟ್ಟದ ಹಾದಿಯಲ್ಲಿ ಪ್ರವಾಸಕ್ಕೆ ಮೊದಲು ಈ ಆಹಾರಗಳನ್ನು ತಿನ್ನದಿರಿ!

3. ಮಡಿಕೇರಿ: ದೂರದ ಜಾಗಗಳಿಗೆ ಹೋಗಲು ಸಮಯವಿಲ್ಲದಿದ್ದರೇನಂತೆ, ನಮ್ಮ ಮಡಿಕೇರಿಯಲ್ಲೂ ರಾತ್ರಿಗಳು ಸುಂದರವಾಗಿಯೇ ಇರುತ್ತವೆ. ಇಲ್ಲಿ ಕಾಫಿ ತೋಟಗಳ ಕತ್ತಲಲ್ಲಿ, ಮಿಣುಕು ಹುಳಗಳನ್ನು ನೋಡುವುದಷ್ಟೇ ಅಲ್ಲ, ರಾತ್ರಿಯಲ್ಲಿ ಆಗಸಕ್ಕೆ ತಲೆಯತ್ತಿ ನೋಡಿದರೆ ಸಾವಿರಾರು ಗ್ರಹ ನಕ್ಷತ್ರಗಳು ಅದ್ಭುತ ಪ್ರಪಂಚವನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಮಳೆಗಾಲದ ಮಳೆಮೋಡಗಳಿಲ್ಲದ ಶುಭ್ರ ನೀಲಿಯಾಕಾಶವಿದ್ದ ದಿನದ ರಾತ್ರಿಗಳಲ್ಲಿ ಈ ವೀಕ್ಷಣೆ ಸಾಧ್ಯವಿದೆ.

4. ಸ್ಪಿತಿ ಕಣಿವೆ: ಲಡಾಖ್‌ನಂತೆಯೇ ಶೀತ ಮರುಭೂಮಿಯ ಸಾಹಸಮಯ ಪ್ರವಾಸ ಬೇಕಿದ್ದರೆ ಲಡಾಖ್‌ ಹೊರತುಪಡಿಸಿದರೆ ಸಿಗುವ ಇನ್ನೊಂದು ಆಯ್ಕೆ ಎಂದರೆ ಅದು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆ. ಬೌದ್ಧ ಮಂದಿರಗಳ ಶಾಂತ ಪರಿಸರ, ಕಣ್ಣೆತ್ತಿ ನೋಡಿದರತ್ತ ಹಿಮಚ್ಛಾದಿತ ಪರ್ವತಗಳು, ರಾತ್ರಿಯ ಕಡುನೀಲಿಯ ಆಕಾಶ ಎಲ್ಲವೂ ಜೀವಮಾನದಲ್ಲಿ ಒಮ್ಮೆ ಪ್ರತಿ ಪ್ರವಾಸಪ್ರಿಯರೂ ಅನುಭವಿಸಬೇಕಾದಂಥದ್ದೇ. ಇಲ್ಲಿನ ರಾತ್ರಿಯ ನಕ್ಷತ್ರಲೋಕವೂ ಕೂಡಾ ಬೇರೆಯದೇ ಒಂದು ಪ್ರಪಂಚವನ್ನೇ ಕಣ್ಣ ಮುಂದಿರಿಸುತ್ತದೆ.

೫. ಕನ್ಯಾಕುಮಾರಿ: ನಮ್ಮ ಭಾರತದ ದಕ್ಷಿಣದ ತುದಿಯಾಗಿರುವ ಕನ್ಯಾಕುಮಾರಿಯೂ ಕೂಡಾ ನಕ್ಷತ್ರಲೋಕವನ್ನು ಅನುಭವಿಸಲು ಹೇಳಿ ಮಾಡಿಸಿದ ಇನ್ನೊಂದು ಜಾಗ. ಕಾಲ ಬುಡದಲ್ಲಿ ಕಡುನೀಲಿ ಅರಬ್ಬೀ ಸಮುದ್ರ, ಕತ್ತೆತ್ತಿ ನೋಡಿದರೆ ಕಡುನೀಲಿಯಾಕಾಶದಲ್ಲಿ ರಾತ್ರಿಯಾದೊಡನೆ ತೆರೆದುಕೊಳ್ಳುವ ನಕ್ಷತ್ರ ಲೋಕ ಜೀವಮಾನದಲ್ಲೊಮ್ಮೆಯಾದರೂ ಅನುಭವಿಸಲೇಬೇಕಾದ ದಿವ್ಯ ಕ್ಷಣಗಳು. 

ಇದನ್ನೂ ಓದಿ: Travel Tips: ಗುಹೆಗಳೆಂಬ ಪ್ರಕೃತಿ ವಿಸ್ಮಯಗಳು: ನೋಡಲೇಬೇಕಾದ ಭಾರತದ ಗುಹೆಗಳಿವು!

Exit mobile version