Site icon Vistara News

Travel Tips: ಈ ಹೆದ್ದಾರಿಯ ಮೂಲಕ ಕೋಲ್ಕತಾದಿಂದ ಬ್ಯಾಂಕಾಕ್‌ಗೆ ರೋಡ್‌ಟ್ರಿಪ್ ಮಾಡಿ!

kolkata bangkok highway

ಪ್ರವಾಸಪ್ರಿಯರಲ್ಲಿ ಕೆಲವರಿಗೆ ಹೀಗೆ ಹೋಗಿ ಹಾಗೆ ಬರುವುದರಲ್ಲಿ ಮಜಾ ಬರುವುದಿಲ್ಲ. ವಿಮಾನ ಹತ್ತಿ ಕಣ್ಮುಚ್ಚಿ ತೆರೆಯುವದರಲ್ಲಿ ಇನ್ನೊಂದು ದೇಶದಲ್ಲಿಳಿದು, ಪ್ಯಾಕೇಜುಗಳು ರೆಡಿ ಮಾಡಿ ಕೊಡುವ ಒಂದಿಷ್ಟು ಜಾಗಗಳನ್ನು ನೋಡಿ ಮತ್ತೆ ದಿನ ಬೆಳಗಾಗುವುದರೊಳಗೆ ಮತ್ತೆ ಸ್ವಸ್ಥಾನಕ್ಕೆ ಮರಳುವುದರಲ್ಲಿ ಸಂತೃಪ್ತಿ ಸಿಗುವುದಿಲ್ಲ. ಹೋಗುವ ಜಾಗಕ್ಕಿಂತಲೂ ಸಾಗುವ ದಾರಿಯ ಅನುಭವವೇ ಮುಖ್ಯ ಎಂದು ನಂಬುವ ಎಷ್ಟೋ ಪ್ರವಾಸ ಪ್ರಿಯರಿದ್ದಾರೆ. ಇಂಥವರು ಸಾಗುವ ಹಾದಿಯನ್ನೇ ಅನುಭವಿಸುವವರು. ರೋಡ್‌ಟ್ರಿಪ್‌ಗಳಲ್ಲಿ ಖುಷಿಯನ್ನು ಹುಡುಕುವವರು. ಇದಕ್ಕಾಗಿ ಯಾವ ಕಷ್ಟವನ್ನೂ ಬೇಕಾದರೂ ತೆಗೆದುಕೊಳ್ಳಲು ರೆಡಿ ಇರುವವರು. ಭಾರತದುದ್ದಕ್ಕೂ, ಡ್ರೈವ್‌ ಮಾಡುತ್ತ ಸಿಗುವ ಒಂದೊಂದು ಊರನ್ನೂ ಗಮನಿಸುತ್ತಾ, ಪ್ರವಾಸಕ್ಕೆ ಯೇರೆಯದೇ ಬಗೆಯ ಕಲ್ಪನೆಗಳನ್ನು ನೀಡುವ ಮಂದಿ ಇಂಥವರು. ಇಂಥವರಿಗೆ ಈಗ ಇನ್ನು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಕೋಲ್ಕತಾ- ಬ್ಯಾಂಕಾಕ್‌ ಹೆದ್ದಾರಿ ಯೋಜನೆ ವರದಾನವಾಗಲಿದೆ!

ಹೌದು. ಕೋಲ್ಕತಾದಿಂದ ಬ್ಯಾಂಕಾಕ್‌ಗೆ ರಸ್ತೆಯೋ ಎಂದು ಹುಬ್ಬೇರಿಸಬೇಡಿ. ನೀವು ಕೇಳುತ್ತಿರುವುದು ನಿಜ. ಭಾರತದ ಕೋಲ್ಕತಾವೂ ಥಾಯ್ಲೆಂಡಿನ ಬ್ಯಾಂಕಾಕ್‌ ಎಂಬ ಇನ್ನೊಂದು ಮಹಾನಗರವೂ ರಸ್ತೆಮಾರ್ಗದಿಂದ ಸಂಪರ್ಕ ಸಾಧಿಸಲಿವೆ. ಏಷ್ಯಾದ ಈ ಎರಡು ಮಹಾನಗರಗಳ ಮಧ್ಯೆ ನಿರ್ಮಾಣವಾಗಲಿರುವ ಹೆದ್ದಾರಿಯು ಬಿಐಎಮ್‌ಎಸ್‌ಟಿಇಸಿ ಯೋಜನೆಯ ಭಾಗವಾಗಿದ್ದು, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಲ್ಲಿದೆ. ಭಾರತೀಯ ವಾಣಿಜ್ಯ ಸಂಸ್ಥೆ (ಐಸಿಸಿ) ಹಾಗೂ ವಿದೇಶೀ ವ್ಯವಹಾರಗಳ ಸಚಿವಾಲಯ ಈ ವಿಚಾರವನ್ನು ತಿಳಿಸಿದೆ.

ಈ ರಸ್ತೆ ಬ್ಯಾಂಕಾಕ್‌ನಿಂದ ಆರಂಭವಾಗಲಿದ್ದು, ಇದು ಥಾಯ್ಲೆಂಡಿನ ಪ್ರಮುಖ ನಗರಗಳಾದ ಸುಕೊಥಾಯ್‌, ಮೇಸಾಟ್‌, ಮಯನ್ಮಾರ್‌ನ ಯಾಂಗೋನ್‌, ಮಂಡಾಲೇ, ಕಲೇವಾ, ತಮು ನಗರಗಳನ್ನು ಹಾಯ್ದು ಭಾರತದ ಕೋಲ್ಕತ್ತಾ ತಲುಪಲಿದೆ. ಭಾರತದಲ್ಲಿ ಈ ರಸ್ತೆ ಮೋರೇ, ಕೊಹಿಮಾ, ಗುವಾಹತಿ, ಶ್ರೀರಾಂಪುರ, ಸಿಲಿಗುರಿ ನಗರಗಳನ್ನು ಹಾಯ್ದುಕೊಂಡು ಕೋಲ್ಕತಾ ತಲುಪಲಿದೆ. ಈ ರಸ್ತೆಮಾರ್ಗದ ದೂರ 2,800 ಕಿಮೀ ಆಗಿದೆ.

ಈ ರಸ್ತೆ ಮಾರ್ಗದಲ್ಲಿ ಭಾರತದ ಪಾಲು ದೊಡ್ಡದು, ಹಾಗೂ ಥಾಯ್ಲೆಂಡ್‌ ಪಾಲು ಸಣ್ಣದು. ಈಗಾಗಲೇ ಈ ಹೆದ್ದಾರಿಯ ನಿರ್ಮಾಣದ ಭಾಗವಾಗಿ ಥಾಯ್ಲೆಂಡ್‌ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯು ಪ್ರಗತಿಯಲ್ಲಿದೆಯಂತೆ.

ಈ ಹಿಂದೆಯೂ ಹೀಗೆ ರಸ್ತೆಯ ಮೂಲಕ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸುವ ಅವಕಾಶವಿದ್ದು, ಹಲವು ಮಂದಿ ಇಂತಹ ರೋಚಕ ಪ್ರಯಾಣವನ್ನು ತಿಂಗಳುಗಟ್ಟಲೆ ಕೈಗೊಂಡಿದ್ದಿದೆ. ಆದರೆ, ಈಗ ನಿರ್ಮಾಣವಾಗಲಿರುವ ಹೆದ್ದಾರಿಯು, ಈ ಹಿಂದಿನ ಪ್ರಯಾಣಕ್ಕಿಂದ ವೇಗವಾಗಿ ತಲುಪಬಹುದಾಗಿದ್ದು, ಈ ದೇಶಗಳ ನಡುವಿನ ದೂರವನ್ನೂ ಕಡಿಮೆಗೊಳಿಸಲಿದೆ. ಮೊದಲು ಈ ರಸ್ತೆ ಮಾರ್ಗವು 3,395 ಕಿಮೀ ಇದ್ದು, ಈಗ ಇದರ ದೂರ ಸಾಕಷ್ಟು ಕಡಿಮೆಯಾಗಲಿದೆ. ಅಷ್ಟೇ ಅಲ್ಲ, ಹಿಂದೆ ಈ ಹಾದಿಗೆ ಸುಮಾರು 67 ಗಂಟೆಗಳು ಬೇಕಾಗಿದ್ದರೆ, ಇನ್ನೂ ಈ ಸಮಯವೂ ಉಳಿತಾಯವಾಗಲಿದೆ. ಎರಡು ದೇಶಗಳ ನಡುವಿನ ಸಂಪರ್ಕ, ಸೌಹಾರ್ದವೂ ವೃದ್ಧಿಗೊಳ್ಳಲಿದೆ.

ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ರೋಮಾಂಚಕ ಪ್ರಯಾಣವೊಂದರ ಕನಸು ನೇಯುತ್ತಾ ನೀವು ಈ ಹೆದ್ದಾರಿಯ ಮೂಲಕ ಹೋಗುವ ಯೋಜನೆ ರೂಪಿಸುತ್ತಾ, ಜೀವನದ ಅದ್ಭುತ ಅನುಭವ ಪಡೆಯಲು ತಯಾರಾಗಿ. 

ಇದನ್ನೂ ಓದಿ: Monsoon Travel: ಮಳೆಗಾಲದಲ್ಲಿ ಈ ಸ್ವರ್ಗಸಮಾನ 5 ಹಿನ್ನೀರಿನ ತಾಣಗಳನ್ನು ಕಣ್ಣು ತುಂಬಿಕೊಳ್ಳಿ!

Exit mobile version