Site icon Vistara News

Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ

neil island andaman

ದ್ವೀಪಗಳೆಂದರೆ ಯಾರಿಗೆ ತಾನೇ ಮೋಹ ಉಕ್ಕಲಿಕ್ಕಿಲ್ಲ ಹೇಳಿ. ಸಮುದ್ರದ ಮಧ್ಯದಲ್ಲೋ, ನದಿಯ ಮಧ್ಯದಲ್ಲೋ ಎದ್ದು ನಿಂತಿರುವ ನಡುಗಡ್ಡೆಗಳೂ ಯಾವತ್ತಿಗೂ ಕೈಬೀಸಿ ಕರೆಯುವ ತಾಣಗಳೇ. ನಮ್ಮ ದೇಶದಲ್ಲೂ ದ್ವೀಪಗಳಿಗೇನೂ ಕೊರತೆಯಿಲ್ಲ. ಪ್ರಸಿದ್ಧವಾದ ದ್ವೀಪಗಳಂತೆ, ಅಷ್ಟಾಗಿ ತಿಳಿದಿಲ್ಲದ ದ್ವೀಪಗಳೂ ಬಹಳಷ್ಟಿವೆ. ಒಮ್ಮೆಯಾದರೂ ದ್ವೀಪಗಳಿಗೊಮ್ಮೆ ಹೋಗಬೇಕು (Travel guide) ಅನಿಸಿದರೆ, ಈ ಕೆಳಗಿನ ದ್ವೀಪಗಳನ್ನು ನೀವು ನಿಮ್ಮ ಪಟ್ಟಿಯಿಂದ ತಳ್ಳಿ ಹಾಕಲಾರಿರಿ. ಬನ್ನಿ, ಯಾವೆಲ್ಲ ದ್ವೀಪಗಳು (island tourism) ಸೌಂದರ್ಯದ ಖನಿ ಎಂಬುದನ್ನು ನೋಡೋಣ.

೧. ದಿಯು, ಗುಜರಾತ್:‌ ಅಷ್ಟಾಗಿ ಯಾರೂ ಹೋಗದ ಚೆಂದನೆಯ ದ್ವೀಪವಿದು. ಪ್ರವಾಸಿ ತಾಣವಾಗಿ ಹೆಚ್ಚು ಪ್ರಸಿದ್ಧಿ ಪಡೆದಿಲ್ಲವಾದರೂ, ಭಾಋತದ ಸುಂದರ ದ್ವೀಪಗಳ ಪೈಕಿ ಇದೂ ಒಂದು. ಇಂದಿಗೂ ಪೋರ್ಚುಗೀಸರ ಆಲ್ವಿಕೆಯ ಪ್ರಭಾವಗಳು ಇಲ್ಲಿ ಕಾಣಬಹುದಾಗಿದ್ದು, ಬೇರೆಯದೇ ಆದ ಸಂಸ್ಕೃತಿ, ಭಿನ್ನ ವಾಸ್ತುಶಿಲ್ಪ ಹಾಗೂ ಪ್ರಕೃತಿಯ ರಮಣೀಯತೆಯನ್ನು ಇಲ್ಲಿ ನೋಡಬಹುದಾಗಿದೆ. ಮಳೆಗಾಲದಲ್ಲಿ ಈ ದ್ವೀಪ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಿಂದ ಪ್ರಕೃತಿಯೊಂದಿಗೆ ಕಾಲ ಕಳೆಯಲು, ಶಾಂತಿ ಅನುಭವಿಸಲು ಇಲ್ಲಿಗೆ ಮಳೆಗಾಲದಲ್ಲೊಮ್ಮೆ ಭೇಟಿ ಕೊಡಿ.

೨. ನೀಲ್‌ ದ್ವೀಪ (ಶಹೀದ್‌ ದ್ವೀಪ), ಅಂಡಮಾನ್: ಹೆಸರಿಗೆ ತಕ್ಕಂತೆ ನೀಲಿ ದ್ವೀಪವೇ ಆಗಿರುವ ಈ ದ್ವೀಪ ಅಂಡಮಾನಿನ ಅತ್ಯಂತ ಸುಂದರ ದ್ವೀಪಗಳ ಪೈಕಿ ಒಂದಾಗಿದೆ. ಸ್ವರ್ಗದ ತುಣುಕೊಂದು ತಪ್ಪಿ ಎಲ್ಲಿ ಭುವಿಗೆ ಬಿದ್ದಿದೆಯೋ ಅನಿಸಬೇಕು, ಹಾಗಿದೆ ಇಲ್ಲಿನಪ್ರಾಕೃತಿಕ ಸೌಂದರ್ಯ. ಜೀವನದಲ್ಲೊಮ್ಮೆ ದ್ವೀಪದ ನಿಜವಾದ ಸೌಂದರ್ಯ ನಮ್ಮ ಕೈಯಳತೆಯಲ್ಲೇ ಕಾಣಬಹುದು ಎಂದರೆ ಅದು ನಮ್ಮದೇ ಭಾರತದಲ್ಲಿರುವ ಅಂಡಮಾನಿನ ಈ ನೀಲ್‌ ದ್ವೀಪ! ಇನ್ನು ಈಗಷ್ಟೇ ಮದುವೆಯಾದ ನವ ಜೋಡಿಗಳ ಪಾಲಿಗಂತೂ ಈ ದ್ವೀಪ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನದೆ ವಿಧಿಯಿಲ್ಲ.

೩. ಅಗತ್ತಿ ದ್ವೀಪಗಳು, ಲಕ್ಷದ್ವೀಪ: ನಮ್ಮ ದೇಶದ ಮಾತ್ರವಲ್ಲ, ವಿಶ್ವದ ಅತ್ಯಂತ ಸುಂದರ ದ್ವೀಪಗಳ ಪೈಕಿ ಲಕ್ಷದ್ವೀಪಗಳೂ ಒಂದು. ಸುಂದರ ನೀಲಿ ಹಸಿರು ಸಮುದ್ರ ತೀರಗಳು, ಹವಳ ನಿಕ್ಷೇಪಗಳು, ಬೆಳ್ಳನೆಯ ಮರಳು ಹೀಗೆ ಒಂದೇ ಎರಡೇ, ದ್ವೀಪವೆಂದರೆ ಹೀಗಿರಬೇಕು ಅನಿಸುವಷ್ಟು ಸೌಂದರ್ಯದ ರಾಶಿ, ಇಲ್ಲಿಯೇ ಇದೆ ಎನಿಸಿದರೆ ತಪ್ಪಾಗಲಾರದು. ಹನಿಮೂನಿಗೂ ಪ್ರೇಮಿಗಳ ಪಾಲಿಗೆ ಸ್ವರ್ಗವಿದು.

೪.ಹಾವ್‌ಲಾಕ್‌ ದ್ವೀಪ (ಸ್ವರಾಜ್‌ ದ್ವೀಪ): ಅಂಡಮಾನಿಗೆ ಹೋದಾಗ ಹ್ಯಾವ್ಲಾಕ್‌ ದ್ವೀಪಕ್ಕೆ ಹೋಗದಿದ್ದರೆ ಹೇಗೆ ಹೇಳಿ! ಅಂಡಮಾನ್‌ ದ್ವೀಪ ಸಮೂಹದ ಅತೀ ದೊಡ್ಡ ದ್ವೀಪ ಎಂದರೆ ಹ್ಯಾವ್‌ಲಾಕ್.‌ ಅತ್ಯಂತ ಸುಂದರ ದ್ವೀಪವೂ ಹೌದು. ಇದರ ಶಾಂತ ಸುಂದರ ಬೀಚುಗಳು ಪ್ರಕೃತಿ ಪ್ರಿಯರ ಪಾಲಿಗೆ ಹಬ್ಬ.

೫. ಮಜುಲಿ ದ್ವೀಪ, ಅಸ್ಸಾಂ: ಬ್ರಹ್ಮಪುತ್ರದಂತಹ ಅತ್ಯಂದ ಅಗಲವಾದ ನದಿಯ ನಡುವೆ ಒಂದು ದೊಡ್ಡ ಪ್ರಪಂಚವೇ ಇದೆ ಎಂದರೆ ನೀವು ನಂಬಲೇಬೇಕು. ಅದು ಮಜುಲಿ. ಇದು ವಿಶ್ವದ ಅತ್ಯಂತ ದೊಡ್ಡ ನದೀ ದ್ವೀಪಗಳ ಪೈಕಿ ಪ್ರಮುಖವಾದದ್ದು. ಚಂದದ, ತನ್ನದೇ ವಿಶೇಷ ಸಂಸ್ಕೃತಿಯಿರುವ ವಿಶಿಷ್ಟ ಭೂಭಾಗವಿದು.

ಇದನ್ನೂ ಓದಿ: Travel Tips: ಈ ಹೆದ್ದಾರಿಯ ಮೂಲಕ ಕೋಲ್ಕತಾದಿಂದ ಬ್ಯಾಂಕಾಕ್‌ಗೆ ರೋಡ್‌ಟ್ರಿಪ್ ಮಾಡಿ!

೬. ದೀವಾರ್‌ ದ್ವೀಪ, ಗೋವಾ: ಗೋವಾದಲ್ಲಿ ಕೇವಲ ಸಮುದ್ರ ತೀರಕ್ಕಷ್ಟೇ ಹೋಗಿ ಬರುವುದು ಎಂದು ಅಂದುಕೊಂಡರೆ ನಿಮ್ಮ ಎಣಿಕೆ ತಪ್ಪಾದೀತು. ಇಲ್ಲಿ ಚಂದನೆಯ ದ್ವೀಪಗಳೂ ಇವೆ. ಗೋವಾದ ಪಣಜಿಂನಿಂದ ೧೦ ಕಿಮೀ ದೂರದಲ್ಲಿರುವ ದೀವಾರ್‌ ದ್ವೀಪ ಅಷ್ಟಾಗಿ ಯಾರೂ ಹೋಗದ ಚಂದನೆಯ ದ್ವೀಪ.

೭. ಗ್ರೇಟ್‌ ನಿಕೋಬಾರ್ ದ್ವೀಪ: ಒಮ್ಮೆ ನಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕಾದ ದ್ವೀಪವಿದು. ಗ್ರೇಟ್‌ ನಿಕೋಬಾರ್‌ ಬಾರತದ ಅತ್ಯಂತ ದೊಡ್ಡ ದ್ವೀಪ. ಸ್ಪಟಿಕ ಶುದ್ಧ ಸಮುದ್ರ ತೀರಗಳು, ನೀಲಿ ಹಸಿರು ಸಮುದ್ರ ಎಂಥ ಕಲ್ಲು ಹೃದಯಿಯನ್ನೂ ಕರಗಿಸಬಲ್ಲುದು.

ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!

Exit mobile version