ಸಮುದ್ರ ತೀರಕ್ಕೂ ಮಾನವನಿಗೂ ಅವಿನಾಭಾವ ಸಂಬಂಧ. ಎಷ್ಟೇ ಜಂಜಡಗಳಿದ್ದರೂ, ಕೆಲಸದ ಒತ್ತಡವಿದ್ದರೂ, ಸಮುದ್ರ ತೀರದಲ್ಲೊಮ್ಮೆ ಮರಳಿನ ಮೇಲೆ ಸುಮ್ಮನೆ ತೀರಕ್ಕಪ್ಪಳಿಸುವ ಅಲೆಗಳನ್ನು ನೋಡುತ್ತಾ ಒಂದು ಗಂಟೆ ಕಳೆದರೂ ಸಾಕು ಮನಸ್ಸಿಗೆ ಎಷ್ಟೋ ಸಮಾಧಾನ ಸಿಗುತ್ತದೆ. ಒತ್ತಡ ದುಗುಡಗಳೆಲ್ಲ ಮಾಯವಾಗಿ ನೆಮ್ಮದಿ ಮೂಡಿದಂತಾಗುತ್ತದೆ. ಸಮುದ್ರ ತೀರಕ್ಕೆ ಕಾಲಿಟ್ಟರೆ ಸಾಕು ಮನಸ್ಸು ಮಗುವಾಗುತ್ತದೆ. ತೀರದಲ್ಲಿ ಮಗುವಿನಂತೆ ಮಣ್ಣಾಟ, ನೀರಾಟವಾಡುವುದರಲ್ಲಿ ಎಲ್ಲ ಮರೆಯಬೇಕನಿಸುತ್ತದೆ. ಅದಕ್ಕೇ, ಪ್ರವಾಸ (Travel Tips) ಎಂದಾಗ ಒಂದೋ ಬೆಟ್ಟದೂರಿನ ಕಡೆ ಮನಸ್ಸು ಸೆಳೆದರೆ, ಇನ್ನೊಂದೆಡೆ, ಸಮುದ್ರ ತೀರದೆಡೆಗೆ ಹೋಗಿ ಬರಲು ಮನಸ್ಸು ಕಾತರಿಸುತ್ತದೆ.
ಭಾರತದಲ್ಲಿ ಸಮುದ್ರ ತೀರ ಎಂದರೆ ಸಾಕು, ಪ್ರವಾಸಿಗರಿಗೆ ನೆನಪಾಗುವುದು ಗೋವಾ (goa beach). ಸದಾ ಗಿಜಿಗುಟ್ಟುವ, ವಿದೇಶೀಯರಿಂದ ತುಂಬಿ ತುಳುಕುವ ಗೋವಾ ಎಂದರೆ ಪ್ರತಿ ಪ್ರವಾಸಿಗನಿಗೆ ಅದೇನೋ ಸೂಜಿಗಲ್ಲಿನ ಸೆಳೆತ. ಆದರೆ, ಮಜಾ ಬಿಟ್ಟು ಶಾಂತಿಯನ್ನರಸಿ ಹೋಗಲು ಗೋವಾ ತಕ್ಕ ಜಾಗವಲ್ಲ ಎಂಬ ಭಾವನೆ ಅನೇಕರಿಗಿದೆ. ಆದರೆ, ವಿಶೇಷವೆಂದರೆ, ಗೋವಾದಲ್ಲಿ ಎರಡೂ ಮಾದರಿಯ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸಮುದ್ರ ತೀರಗಳಿವೆ. ಗಿಜಿಗುಟ್ಟುವ, ಕ್ಯಾಸಿನೋಗಳಿರುವ, ಸುಖಾಸುಮ್ಮನೆ ಕಾಲುಜಾಚಿ ಬಿಸಿಲು ಕಾಯಿಸಿಕೊಂಡು, ಮಸಾಜ್ ಮಾಡಿಸಿಕೊಂಡು, ಮದಿರೆಯನ್ನು ಗುಟುಕು ಗುಟುಕಾಗಿ ಮಂದಬೆಳಕಿನಲ್ಲಿ ಹೀರುವ ತಾಣಗಳೂ ಇವೆ. ಅಷ್ಟೇ ಅಲ್ಲ, ಯಾರ ತಂಟೆ ತಕರಾರೂ ಇಲ್ಲದೆ, ಖಾಲಿ ಬೀಚಿನಲ್ಲಿ ಕಾಲು ಚಾಚಿ ಕೂತು ಶಾಂತಿ, ನೆಮ್ಮದಿಯಿಂದ ಒಂದೆರಡು ದಿನ ಇದ್ದು ಬರಬೇಕು ಅಂದುಕೊಂಡಿದ್ದರೆ ಅಂಥ ತಾಣಗಳೂ ಇವೆ. ಹಾಗಾದರೆ ಬನ್ನಿ, ಗೋವಾದ ಹೆಚ್ಚು ಜನಪ್ರಿಯವಲ್ಲದ, ಪ್ರವಾಸಿಗಿಂದ ಗಿಜಿಗುಟ್ಟದ, ಸ್ವಚ್ಛ ಸುಂದರ ನೆಮ್ಮದಿಯ ಬೀಚ್‌ಗಳನ್ನೊಮ್ಮೆ ಸುತ್ತು ಹಾಕಿಕೊಂಡು ಬರೋಣ.
1. ಬಟರ್‌ಫ್ಲೈ ಬೀಚ್: ದಕ್ಷಿಣ ಗೋವಾದ ಯಾರಿಗೂ ಹೆಚ್ಚಿ ತಿಳಿಯದ ಚೆಂದನೆಯ ಬೀಚ್ ಇದು. ಬೋಟ್ ಮೂಲಕ ಹೋಗಿ ಬರಬಹುದಾದ, ಸ್ವಲ್ಪ ನಡೆಯುವ ಹಾದಿಯಿರುವ ಪ್ರವಾಸಿಗರು ಅಷ್ಟಾಗಿ ಹೋಗದ ಶಾಂತವಾದ ಅಷ್ಟೇ ಸುಂದರ ಬೀಚ್ ಇದು.
2. ಕೋಲಾ ಬೀಚ್: ದಕ್ಷಿಣ ಗೋವಾದ ಕೋಲಾ ಬೀಚ್ ಅತ್ಯದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಗೋವಾದ ಎಲೆಮರೆಯ ಕಾಯಿಯಂತಿರುವ ಬೀಚ್. ಇದು ತನ್ನ ತೀರದುದ್ದಕ್ಕೂ ಹೊದಿರುವ ತೆಂಗಿನ ಮರಗಳ ಸೌಂದರ್ಯದಿಂದ ನೀಲಿ ಹಸಿರು ಬಣ್ಣದಿಂದ ಕಂಗೊಳಿಸುವ ಬೀಚ್.
3. ಗಾಲ್ಗಿಬಾಗಾ ಬೀಚ್: ಇದೂ ಕೂಡಾ ಪ್ರಕೃತಿಯ ರಮ್ಯಾದ್ಭುತವನ್ನು ತನ್ನಲ್ಲಿ ಹುದುಗಿಸಿಟ್ಟಿರುವ ಬೀಚ್. ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಎಂಬ ಕಡಲಾಮೆ ಈ ಬೀಚ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
4. ಮೋರ್ಜಿಮ್ ಬೀಚ್: ಉತ್ತರ ಗೋವಾದಲ್ಲಿ ಶಾಂತವಾದ ಬೀಚ್ ಬೇಕು ಎಂದು ಹುಡುಕುವ ಮಂದಿಗೆ ಮೋರ್ಜಿಮ್ ಬೀಚ್ ಹೇಳಿ ಮಾಡಿಸಿದ ಜಾಗ. ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಇರುವ ಮಂದಿಗೂ ಇದು ತಕ್ಕ ಜಾಘ.
5. ಕಾಕೋಲೆಮ್ ಬೀಚ್: ದಕ್ಷಿಣ ಗೋವಾದಲ್ಲಿ ಅಷ್ಟಾಗಿ ಪ್ರಸಿದ್ಧವಲ್ಲದ ಆದರೆ ಬಹಳ ಸುಂದರವಾಗಿರುವ ಬೀಚ್‌ಗಳಲ್ಲಿ ಇದೂ ಒಂದು. ಈಜು ಹಾಗೂ ಸರ್ಫಿಂಗ್ ಶಾಂತವಾಗಿ ಮಾಡಬಯಸುವ ಮಂದಿಗೆ ಇದು ಹೇಳಿ ಮಾಡಿಸಿದ ಜಾಗ.
6. ಅಗೋಂಡಾ ಬೀಚ್: ರಿಲ್ಯಾಕ್ಸ್ ಆಗಿ ಶಾಂತವಾದ ಸಮುದ್ರ ತೀರದಲ್ಲಿ ಹೊಟೇಲುಗಳಲ್ಲಿ ಉಳಿದುಕೊಂಡು ತನ್ನ ಪಾಡಿಗೆ ತಾನಿರುತ್ತಾ ಸುಮ್ಮನೆ ಕಡಲು ನೋಡುತ್ತಾ ಇರಬೇಕು ಅನ್ನುವ ಮಂದಿಗೆ ಈ ಬೀಚ್ ಬೆಸ್ಟ್. ಕಯಾಕಿಂಗ್, ಪ್ಯಾಡಲ್ ಬೋರ್ಡಿಂಗ್ ಕೂಡಾ ಇಲ್ಲಿ ಲಭ್ಯ. ಸಮುದ್ರ ತೀರದಲ್ಲಿ ಕಿಲೋಮೀಟರುಗಟ್ಟಲೆ ಸುಮ್ಮನೆ ಬೆಳಗ್ಗೆದ್ದು ನಡೆಯಬೇಕು ಎನ್ನುವವರಿಗೂ ಇದು ಬೆಸ್ಟ್ ಜಾಗ.
ಹಾಗಾದರೆ, ಗೋವಾ ಎಂದರೆ ಗಿಜಿಗಿಜಿ ಎಂದು ದೂರ ಉಳಿದ ಶಾಂತಿಪ್ರಿಯ ಪ್ರವಾಸಿಗರು ಈ ಜಾಗಗಳನ್ನು ನೋಡಲಾದರೂ ಗೋವಾಕ್ಕೆ ಹೋಗಬೇಕು.
ಇದನ್ನೂ ಓದಿ: Travel Tips: ರಾತ್ರಿಗಳಲ್ಲಿ ಹೊಳೆವ ಅಲೆಗಳ ಬೀಚ್‌ಗಳಿಗೆ ಪ್ರವಾಸ ಮಾಡಿ!