ಪ್ರವಾಸ
Travel Tips: ಪಾರ್ಟಿಪ್ರಿಯರಷ್ಟೇ ಅಲ್ಲ, ಶಾಂತಿಪ್ರಿಯರೂ ಈ ಗೋವಾದ ಈ ಬೀಚ್‌ಗಳಿಗೆ ಹೋಗಬೇಕು!
ಬನ್ನಿ, ಗೋವಾದ ಹೆಚ್ಚು ಜನಪ್ರಿಯವಲ್ಲದ, ಪ್ರವಾಸಿಗಿಂದ ಗಿಜಿಗುಟ್ಟದ, ಸ್ವಚ್ಛ ಸುಂದರ ನೆಮ್ಮದಿಯ ಬೀಚ್‌ಗಳನ್ನೊಮ್ಮೆ ಸುತ್ತು ಹಾಕಿಕೊಂಡು ಬರೋಣ.
ಸಮುದ್ರ ತೀರಕ್ಕೂ ಮಾನವನಿಗೂ ಅವಿನಾಭಾವ ಸಂಬಂಧ. ಎಷ್ಟೇ ಜಂಜಡಗಳಿದ್ದರೂ, ಕೆಲಸದ ಒತ್ತಡವಿದ್ದರೂ, ಸಮುದ್ರ ತೀರದಲ್ಲೊಮ್ಮೆ ಮರಳಿನ ಮೇಲೆ ಸುಮ್ಮನೆ ತೀರಕ್ಕಪ್ಪಳಿಸುವ ಅಲೆಗಳನ್ನು ನೋಡುತ್ತಾ ಒಂದು ಗಂಟೆ ಕಳೆದರೂ ಸಾಕು ಮನಸ್ಸಿಗೆ ಎಷ್ಟೋ ಸಮಾಧಾನ ಸಿಗುತ್ತದೆ. ಒತ್ತಡ ದುಗುಡಗಳೆಲ್ಲ ಮಾಯವಾಗಿ ನೆಮ್ಮದಿ ಮೂಡಿದಂತಾಗುತ್ತದೆ. ಸಮುದ್ರ ತೀರಕ್ಕೆ ಕಾಲಿಟ್ಟರೆ ಸಾಕು ಮನಸ್ಸು ಮಗುವಾಗುತ್ತದೆ. ತೀರದಲ್ಲಿ ಮಗುವಿನಂತೆ ಮಣ್ಣಾಟ, ನೀರಾಟವಾಡುವುದರಲ್ಲಿ ಎಲ್ಲ ಮರೆಯಬೇಕನಿಸುತ್ತದೆ. ಅದಕ್ಕೇ, ಪ್ರವಾಸ (Travel Tips) ಎಂದಾಗ ಒಂದೋ ಬೆಟ್ಟದೂರಿನ ಕಡೆ ಮನಸ್ಸು ಸೆಳೆದರೆ, ಇನ್ನೊಂದೆಡೆ, ಸಮುದ್ರ ತೀರದೆಡೆಗೆ ಹೋಗಿ ಬರಲು ಮನಸ್ಸು ಕಾತರಿಸುತ್ತದೆ.
ಭಾರತದಲ್ಲಿ ಸಮುದ್ರ ತೀರ ಎಂದರೆ ಸಾಕು, ಪ್ರವಾಸಿಗರಿಗೆ ನೆನಪಾಗುವುದು ಗೋವಾ (goa beach). ಸದಾ ಗಿಜಿಗುಟ್ಟುವ, ವಿದೇಶೀಯರಿಂದ ತುಂಬಿ ತುಳುಕುವ ಗೋವಾ ಎಂದರೆ ಪ್ರತಿ ಪ್ರವಾಸಿಗನಿಗೆ ಅದೇನೋ ಸೂಜಿಗಲ್ಲಿನ ಸೆಳೆತ. ಆದರೆ, ಮಜಾ ಬಿಟ್ಟು ಶಾಂತಿಯನ್ನರಸಿ ಹೋಗಲು ಗೋವಾ ತಕ್ಕ ಜಾಗವಲ್ಲ ಎಂಬ ಭಾವನೆ ಅನೇಕರಿಗಿದೆ. ಆದರೆ, ವಿಶೇಷವೆಂದರೆ, ಗೋವಾದಲ್ಲಿ ಎರಡೂ ಮಾದರಿಯ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸಮುದ್ರ ತೀರಗಳಿವೆ. ಗಿಜಿಗುಟ್ಟುವ, ಕ್ಯಾಸಿನೋಗಳಿರುವ, ಸುಖಾಸುಮ್ಮನೆ ಕಾಲುಜಾಚಿ ಬಿಸಿಲು ಕಾಯಿಸಿಕೊಂಡು, ಮಸಾಜ್ ಮಾಡಿಸಿಕೊಂಡು, ಮದಿರೆಯನ್ನು ಗುಟುಕು ಗುಟುಕಾಗಿ ಮಂದಬೆಳಕಿನಲ್ಲಿ ಹೀರುವ ತಾಣಗಳೂ ಇವೆ. ಅಷ್ಟೇ ಅಲ್ಲ, ಯಾರ ತಂಟೆ ತಕರಾರೂ ಇಲ್ಲದೆ, ಖಾಲಿ ಬೀಚಿನಲ್ಲಿ ಕಾಲು ಚಾಚಿ ಕೂತು ಶಾಂತಿ, ನೆಮ್ಮದಿಯಿಂದ ಒಂದೆರಡು ದಿನ ಇದ್ದು ಬರಬೇಕು ಅಂದುಕೊಂಡಿದ್ದರೆ ಅಂಥ ತಾಣಗಳೂ ಇವೆ. ಹಾಗಾದರೆ ಬನ್ನಿ, ಗೋವಾದ ಹೆಚ್ಚು ಜನಪ್ರಿಯವಲ್ಲದ, ಪ್ರವಾಸಿಗಿಂದ ಗಿಜಿಗುಟ್ಟದ, ಸ್ವಚ್ಛ ಸುಂದರ ನೆಮ್ಮದಿಯ ಬೀಚ್‌ಗಳನ್ನೊಮ್ಮೆ ಸುತ್ತು ಹಾಕಿಕೊಂಡು ಬರೋಣ.
1. ಬಟರ್‌ಫ್ಲೈ ಬೀಚ್: ದಕ್ಷಿಣ ಗೋವಾದ ಯಾರಿಗೂ ಹೆಚ್ಚಿ ತಿಳಿಯದ ಚೆಂದನೆಯ ಬೀಚ್ ಇದು. ಬೋಟ್ ಮೂಲಕ ಹೋಗಿ ಬರಬಹುದಾದ, ಸ್ವಲ್ಪ ನಡೆಯುವ ಹಾದಿಯಿರುವ ಪ್ರವಾಸಿಗರು ಅಷ್ಟಾಗಿ ಹೋಗದ ಶಾಂತವಾದ ಅಷ್ಟೇ ಸುಂದರ ಬೀಚ್ ಇದು.
2. ಕೋಲಾ ಬೀಚ್: ದಕ್ಷಿಣ ಗೋವಾದ ಕೋಲಾ ಬೀಚ್ ಅತ್ಯದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಗೋವಾದ ಎಲೆಮರೆಯ ಕಾಯಿಯಂತಿರುವ ಬೀಚ್. ಇದು ತನ್ನ ತೀರದುದ್ದಕ್ಕೂ ಹೊದಿರುವ ತೆಂಗಿನ ಮರಗಳ ಸೌಂದರ್ಯದಿಂದ ನೀಲಿ ಹಸಿರು ಬಣ್ಣದಿಂದ ಕಂಗೊಳಿಸುವ ಬೀಚ್.
3. ಗಾಲ್ಗಿಬಾಗಾ ಬೀಚ್: ಇದೂ ಕೂಡಾ ಪ್ರಕೃತಿಯ ರಮ್ಯಾದ್ಭುತವನ್ನು ತನ್ನಲ್ಲಿ ಹುದುಗಿಸಿಟ್ಟಿರುವ ಬೀಚ್. ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಎಂಬ ಕಡಲಾಮೆ ಈ ಬೀಚ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
4. ಮೋರ್ಜಿಮ್ ಬೀಚ್: ಉತ್ತರ ಗೋವಾದಲ್ಲಿ ಶಾಂತವಾದ ಬೀಚ್ ಬೇಕು ಎಂದು ಹುಡುಕುವ ಮಂದಿಗೆ ಮೋರ್ಜಿಮ್ ಬೀಚ್ ಹೇಳಿ ಮಾಡಿಸಿದ ಜಾಗ. ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಇರುವ ಮಂದಿಗೂ ಇದು ತಕ್ಕ ಜಾಘ.
5. ಕಾಕೋಲೆಮ್ ಬೀಚ್: ದಕ್ಷಿಣ ಗೋವಾದಲ್ಲಿ ಅಷ್ಟಾಗಿ ಪ್ರಸಿದ್ಧವಲ್ಲದ ಆದರೆ ಬಹಳ ಸುಂದರವಾಗಿರುವ ಬೀಚ್‌ಗಳಲ್ಲಿ ಇದೂ ಒಂದು. ಈಜು ಹಾಗೂ ಸರ್ಫಿಂಗ್ ಶಾಂತವಾಗಿ ಮಾಡಬಯಸುವ ಮಂದಿಗೆ ಇದು ಹೇಳಿ ಮಾಡಿಸಿದ ಜಾಗ.
6. ಅಗೋಂಡಾ ಬೀಚ್: ರಿಲ್ಯಾಕ್ಸ್ ಆಗಿ ಶಾಂತವಾದ ಸಮುದ್ರ ತೀರದಲ್ಲಿ ಹೊಟೇಲುಗಳಲ್ಲಿ ಉಳಿದುಕೊಂಡು ತನ್ನ ಪಾಡಿಗೆ ತಾನಿರುತ್ತಾ ಸುಮ್ಮನೆ ಕಡಲು ನೋಡುತ್ತಾ ಇರಬೇಕು ಅನ್ನುವ ಮಂದಿಗೆ ಈ ಬೀಚ್ ಬೆಸ್ಟ್. ಕಯಾಕಿಂಗ್, ಪ್ಯಾಡಲ್ ಬೋರ್ಡಿಂಗ್ ಕೂಡಾ ಇಲ್ಲಿ ಲಭ್ಯ. ಸಮುದ್ರ ತೀರದಲ್ಲಿ ಕಿಲೋಮೀಟರುಗಟ್ಟಲೆ ಸುಮ್ಮನೆ ಬೆಳಗ್ಗೆದ್ದು ನಡೆಯಬೇಕು ಎನ್ನುವವರಿಗೂ ಇದು ಬೆಸ್ಟ್ ಜಾಗ.
ಹಾಗಾದರೆ, ಗೋವಾ ಎಂದರೆ ಗಿಜಿಗಿಜಿ ಎಂದು ದೂರ ಉಳಿದ ಶಾಂತಿಪ್ರಿಯ ಪ್ರವಾಸಿಗರು ಈ ಜಾಗಗಳನ್ನು ನೋಡಲಾದರೂ ಗೋವಾಕ್ಕೆ ಹೋಗಬೇಕು.
ಇದನ್ನೂ ಓದಿ: Travel Tips: ರಾತ್ರಿಗಳಲ್ಲಿ ಹೊಳೆವ ಅಲೆಗಳ ಬೀಚ್‌ಗಳಿಗೆ ಪ್ರವಾಸ ಮಾಡಿ!
ಪ್ರಮುಖ ಸುದ್ದಿ
Monsoon Travel: ಮಲೆನಾಡಿನ ಮಳೆಹಾಡಿನ ಹೊಸತನ! ರಾಜ್ಯದ ಈ ಟಾಪ್ 5 ತಾಣಗಳಿಗೆ ಮಳೆಯಲ್ಲೊಮ್ಮೆ ಭೇಟಿ ಕೊಡಿ
ನೀವು ಈ ಸ್ಥಳಗಳನ್ನು ನೋಡಿರುವಿರಾದರೂ, ಮಳೆಗಾಲದಲ್ಲೊಮ್ಮೆ ಮತ್ತೊಮ್ಮೆ ಹೋಗಿ ನೋಡಿ, ಇದು ಅದೇ ಜಾಗ ಹೌದೋ ಅಲ್ಲವೋ ಎಂಬಷ್ಟು ವ್ಯತ್ಯಾಸ ನೀವು ಗುರುತಿಸುತ್ತೀರಿ. ಮಳೆಯನ್ನು ಇಷ್ಟಪಡುವ ಎಲ್ಲರೂ ಮಳೆಗಾಲದಲ್ಲಿ ಮಲೆನಾಡನ್ನು ನೋಡಬೇಕು.
ಮಳೆಗಾಲದ ಪ್ರವಾಸ ಎಂದರೆ ಮೈಮನಗಳಿಗೆ ತಾಜಾತನದ ಅನುಭೂತಿ. ಜೂನ್ ಬಂತೆಂದರೆ ಆಕಾಶ ಕಪ್ಪಿಟ್ಟು ಧೋ ಎಂದು ಸುರಿವ ಮಳೆಯನ್ನು ಕಾರಿನಲ್ಲಿ ತಿರುವು ಮುರುವಿನ ರಸ್ತೆಯಲ್ಲಿ ಕಾರು ಚಲಾಯಿಸುತ್ತಲೋ, ಅಥವಾ ಹೋಂ ಸ್ಟೇಯೊಂದರಲ್ಲಿ ಕೂತು, ಮಳೆಯನ್ನು ನೋಡುತ್ತಾ ಕೂರುವುದೋ ಅಥವಾ ಸುರಿದ ಮಳೆ ಬಿಟ್ಟು ಹೋದ ತಂಪಿನಲ್ಲಿ ಕಾಡಿನುದ್ದಕ್ಕೂ ಹೆಜ್ಜೆ ಹಾಕುವುದರಲ್ಲೋ ಆನಂದವಿದೆ. ಮಳೆಯನ್ನು ಪ್ರೀತಿಸುವ ಪ್ರತಿಯೊಂದು ಜೀವವೂ ಮಳೆಗಾಲದ ಪ್ರವಾಸವನ್ನು ಪ್ರೀತಿಸದೆ ಇರಲು ಸಾಧ್ಯವೇ ಇಲ್ಲ.
ಮಲೆನಾಡು ಹೆಸರೇ ಹೇಳುವಂತೆ ಮಲೆಗಳ ನಾಡು. ಇವು ಮಳೆಗಾಲದಲ್ಲಿ ಮಾತ್ರವಲ್ಲ, ಸರ್ವ ಕಾಲದಲ್ಲೂ ಹಸಿರಾಗಿ ಕಂಗೊಳಿಸುವ ಊರುಗಳು. ಇನ್ನು ಮಳೆಗಾಲ ಹೇಗಿರಬಹುದು ಎಂದು ಯಾರೂ ಕೂಡಾ ಊಹಿಸಬಹುದು. ಮಳೆಗಾಲದಲ್ಲಿ ಜಿಟಿಜಿಟಿ ಮಳೆಯ ಸದ್ದನ್ನೇ ದಿನವೂ ಕೇಳಬಹುದಾದ ಚಂದನೆಯ ಹಚ್ಚ ಹಸಿರು ಪಚ್ಚೆಪೈರಿನ ಊರುಗಳನ್ನು ಹೊಂದಿರುವ ಮಲೆನಾಡಿನಲ್ಲಿ ಸಾಕಷ್ಟು ಪ್ರವಾಸೀ ತಾಣಗಳೂ ಇವೆ. ಬಹುತೇಕ ಪ್ರವಾಸಿ ತಾಣಗಳನ್ನು ಮಳೆಗಾಲದಲ್ಲಿ ನೋಡುವ ಸೊಗಸೇ ಬೇರೆ. ನೀವು ಈ ಸ್ಥಳಗಳನ್ನು ನೋಡಿರುವಿರಾದರೂ, ಮಳೆಗಾಲದಲ್ಲೊಮ್ಮೆ ಮತ್ತೊಮ್ಮೆ ಹೋಗಿ ನೋಡಿ, ಇದು ಅದೇ ಜಾಗ ಹೌದೋ ಅಲ್ಲವೋ ಎಂಬಷ್ಟು ವ್ಯತ್ಯಾಸ ನೀವು ಗುರುತಿಸುತ್ತೀರಿ. ಮಳೆಯನ್ನು ಇಷ್ಟಪಡುವ ಎಲ್ಲರೂ ಮಳೆಗಾಲದಲ್ಲಿ ಮಲೆನಾಡನ್ನು ನೋಡಬೇಕು.
1. ಸಕ್ರೆಬೈಲು ಆನೆ ಶಿಬಿರ: ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿರುವ ಸಕ್ರೆಬೈಲು ಆನೆ ಶಿಬಿರ ಹಲವು ಆನೆಗಳಿಗಿಗೆ ತವರು. ಇಲ್ಲಿ ತರಬೇತಿ ಪಡೆದ ಆನೆಗಳನ್ನೂ, ಆನೆ ಮರಿಗಳನ್ನೂ ನೋಡುವುದಷ್ಟೇ ಅಲ್ಲ, ಇಲ್ಲಿ ತುಂಬಿ ಹರಿವ ತುಂಗೆಯಲ್ಲಿ ಆನೆ ಸ್ನಾನ ಮಾಡುವ ಸೊಬಗನ್ನೂ ನೋಡಬಹುದು. ಮಳೆಗಾಲದಲ್ಲಿ, ಸಕ್ರೆಬೈಲು ಹಾಗೂ ಸುತ್ತಮುತ್ತಲ ಕಾಡಿನ ಪರಿಸರ ಅದ್ಭುತವಾಗಿ ಕಾಣಿಸುವುದಷ್ಟೇ ಅಲ್ಲ, ಇಲ್ಲಿಗೆ ಹೋಗುವ ದಾರಿಯೂ ಒಂದು ಅನುಭವವೇ. ರಸ್ತೆಯ ಇಕ್ಕೆಲಗಳಲ್ಲಿರುವ ಗದ್ದೆ, ಮಳೆಗಾಲ ಶುರುವಾಗುವ ಹೊತ್ತಿನಲ್ಲಿ ರೈತರು ಪೈರು ನೆಡುವ ಸಂಭ್ರಮ, ಮುಂಜಾವಿನಲ್ಲಿ ಮಂಜು ಮುಸುಕಿದ ಪ್ರಕೃತಿ ಇವೆಲ್ಲ ನೋಡುತ್ತಾ ಪ್ರವಾಸ ಮಾಡುವ ಅನುಭವವೇ ಜೀವನದ ಅತ್ಯಂತ ಸಂತಸಾಯಕ ಅನುಭವಗಳಲ್ಲೊಂದಾಗಬಹುದು.
2. ಕುಪ್ಪಳ್ಳಿ: ನಮ್ಮ ನಾಡಗೀತೆಯನ್ನು ರಚಿಸಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರನ್ನು ನಾವು ಪ್ರೀತಿಯಿಂದ ಸ್ಮರಿಸಿದಾಗಲೆಲ್ಲ ನೆನಪಾಗುವುದು ಕುಪ್ಪಳ್ಳಿ. ಕುಪ್ಪಳ್ಳಿ ಕುವೆಂಪು ಅವರ ತವರು. ಕುವೆಂಪು ಕೃತಿಗಳಲ್ಲಿ ಮಲೆನಾಡಿನ ಸೊಬಗಿನ ಕುರಿತಾದ ವರ್ಣನೆಯನ್ನು ಕೇಳಿದವರಿಗೆಲ್ಲ, ಕುಪ್ಪಳ್ಳಿಯನ್ನು ನೋಡಬೇಕೆಂಬ ತವಕ ಇಲ್ಲದೆ ಇರದು. ಮಳೆಗಾಲದಲ್ಲಿ ಮಲೆನಾಡಿನ ಕುಪ್ಪಳ್ಳಿಯನ್ನು ನೋಡಲು ಸಕಾಲ. ಶಿವಮೊಗ್ಗದಿಂದ 66 ಕಿಮೀ ದೂರದಲ್ಲಿರುವ ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆಯನ್ನೂ, ಕವಿಶೈಲವನ್ನೂ ನೋಡಿ, ಆಗುಂಬೆಯ ಸೊಬಗನ್ನೂ ಸವಿದು ಜೋಗ ಜಲಪಾತ, ಲಿಂಗನಮಕ್ಕಿ ಹಿನ್ನೀರು, ಕುಂದಾದ್ರಿ ಬೆಟ್ಟ ಇತ್ಯಾದಿಗಳನ್ನೆಲ್ಲ ನೋಡಿ ಬರಬಹುದು.
3. ಹೊನ್ನಾವರ ಕಾಂಡ್ಲಾವನ: ಹೊನ್ನಾವರದ ಶರಾವತಿ ಕಾಂಡ್ಲಾವನ ಇತ್ತೀಚೆಗೆ ಭಾರೀ ಪ್ರಸಿದ್ಧಿ ಪಡೆದಿರುವ ಚಂದನೆಯ ಪ್ರವಾಸೀ ತಾಣಗಳಲ್ಲೊಂದು. ಶರಾವತಿ ಹಿನ್ನೀರಿನಲ್ಲಿ ಕಾಂಡ್ಲಾ ಮಳೆಕಾಡುಗಳನ್ನು ನೋಡಲು ನಿರ್ಮಿತವಾದ ನಡೆದು ಸಾಗಬಹುದಾದ ಮರದ ಸೇತುವೆಯ ಮೂಲಕ ಸಾಗುತ್ತಾ ಕಾಂಡ್ಲಾವನದ ಸೊಬಗನ್ನು ಸವಿಯಬಹುದು. ಶರಾವತಿ ಹಿನ್ನೀರಿನಲ್ಲಿ ಬೋಟಿಂಗ್ ಕೂಡಾ ಮಾಡಬಹುದು.
4. ಮಂಜರಾಬಾದ್ ಕೋಟೆ: ಕನ್ನಡದ ಹಲವು ಸಿನಿಮಾಗಳ ಹಾಡುಗಳಲ್ಲಿ ಬಂದು ಹೋಗಿರುವ ಈ ಕೋಟೆಯನ್ನು ಮಳೆಗಾಲದಲ್ಲಿ ನೋಡುವುದೇ ಸೊಗಸು. ೧೭೯೨ರಲ್ಲಿ ಟಿಪ್ಪು ಸುಲ್ತಾನ್ ಕಟ್ಟಿಸಿದ ಈ ಕೋಟೆ ನಕ್ಷತ್ರಾಕಾರದಲ್ಲಿರುವುದರಿಂದ ಗಮನ ಸೆಳೆಯುತ್ತದೆ. ಸಕಲೇಶಪುರಿಂದ ೬ ಕಿಮೀ ದೂರದಲ್ಲಿರುವ ಈ ಕೋಟೆ ಮಳೆಗಾಲದಲ್ಲಿ ನೋಡಲೇಬೇಕಾದ ಸುಂದರ ತಾಣ.
5. ದಾಂಡೇಲಿ: ಮಳೆಗಾಲದಲ್ಲಿ ನೋಡಲೇಬೇಕಾದ ಇನ್ನೊಂದು ಅದ್ಭುತ ಸ್ಥಳ ಎಂದರೆ ಅದು ಉತ್ತರಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ. ಕಾಳೀ ನದೀ ತೀರದಲ್ಲಿರುವ ದಾಂಡೇಲಿಯನ್ನು ಮಳೆಗಾಲದಲ್ಲಿ ನೋಡುವುದೇ ಚಂದ. ದಟ್ಟ ಕಾಡು, ಸದಾ ಸುರಿವ ಮಳೆ, ಅಪರೂಪದ ಪಕ್ಷಿಸಂಕುಲ ಎಲ್ಲವೂ ದಾಂಡೇಲಿಯನ್ನು ಅಪೂರ್ವವನ್ನಾಗಿ ಮಾಡಿವೆ. ಇಲ್ಲಿ ತಿರುಗಾಡುವ ಮೂಲಕ ನೀವು ಈವರೆಗೆ ಕಂಡಿರದ ಮಳೆಯನ್ನೂ ಅನುಭವಿಸಬಹುದು, ಅಷ್ಟೇ ಅಲ್ಲ, ಅದೃಷ್ಟ ಮಾಡಿದ್ದರೆ, ಹಾರ್ನ್‌ಬಿಲ್ ಪಕ್ಷಿಯನ್ನೂ ಕಾಣಬಹುದು!
ಇದನ್ನೂ ಓದಿ: Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!
ಪ್ರವಾಸ
Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!
ಮಳೆಯಲ್ಲಿ ಪಯಣಿಸುವ (monsoon travel) ಅನುಭವವೇ ಮುದವನ್ನು ಕೊಡುವಂಥದ್ದು. ಅದರಲ್ಲೂ ದಕ್ಷಿಣ ಭಾರತದ ಈ ಬೆಟ್ಟತಾಣಗಳು (hill stations) ಸ್ವರ್ಗಸದೃಶ.
ಮಳೆ ಯಾರಿಗಿಷ್ಟವಿಲ್ಲ ಹೇಳಿ! ಚಂದದ ಮಳೆಯಲ್ಲಿ ಮೆದುವಾಗಿ ಡ್ರೈವ್ ಮಾಡುತ್ತಾ ಹೇರ್‌ಪಿನ್ ಬೆಂಡ್‌ಗಳನ್ನು ಒಂದೊಂದಾಗಿ ಹತ್ತುತ್ತಾ ಬೆಟ್ಟದೂರಿಗೆ ಪಯಣಿಸುವ ಸುಖವನ್ನು ಯಾರು ಬೇಡ ಅಂತಾರೆ ಹೇಳಿ. ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿಹೋಗುವ ಬೆಟ್ಟದೂರುಗಳೆಲ್ಲ ಮಳೆಗಾಲದಲ್ಲಿ ತಮ್ಮ ಪಾಡಿಗೆ ತಾವು ಮಳೆಯೆಂಬ ಧ್ಯಾನಸ್ಥ ಸ್ಥಿತಿಗೆ ಹೋಗುತ್ತವೆ. ಧೋ ಎಂದು ಸುರಿವ ಮಳೆಯಲ್ಲಿ ಹಸುರಾಗಿ ಕಂಗೊಳಿಸುವ ಬೆಟ್ಟಗಳನ್ನು (hill stations) ಬೇರೆಲ್ಲ ಕಾಲದಲ್ಲಿ ನೋಡುವುದಕ್ಕಿಂತ ಮಳೆಗಾಲದಲ್ಲಿ ನೋಡುವುದೇ ಚಂದ. ಮಳೆಗಾಲದಲ್ಲಿ, ಸುತ್ತಿ ನೋಡುವುದು ಕಷ್ಟ, ತಿರುಗಾಡಲು ಅನುಕೂಲವಾಗುವುದಿಲ್ಲ ಎಂಬ ಕಾರಣಕ್ಕೆ ಬಹುತೇಕರು ಪ್ರವಾಸವನ್ನು ಬಯಸುವುದಿಲ್ಲವಾದರೂ, ಮಳೆಯಲ್ಲಿ ಪಯಣಿಸುವ (monsoon travel) ಅನುಭವವೇ ಮುದವನ್ನು ಕೊಡುವಂಥದ್ದು.
ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿರುವ ಕಾರಣ ಬಹುತೇಕರಿಗೆ ಜೂನ್‌ನಲ್ಲಿ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಆದರೂ, ಜೂನ್ ಎಂಬ ಮಾಸ ಹೊತ್ತು ತರುವ ಮಳೆಯ ಸಿಂಚನ ನಿಜಕ್ಕೂ ಪ್ರವಾಸದಲ್ಲಿ ರೋಮಾಂಚನ ನೀಡಬಲ್ಲುದು. ಹಾಗಾಗಿ ದಕ್ಷಿಣ ಭಾರತದಲ್ಲೇ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಜೂನ್ ಮಳೆಯಲ್ಲಿ ಡ್ರೈವ್ ಹೋಗಿ ಬರುವುದಾದರೆ ಯಾವೆಲ್ಲ ತಾಣಗಳನ್ನು ನೋಡಬಹುದು ಎಂಬುದನ್ನು ನೋಡೋಣ.
1. ಕೊಡೈಕನಾಲ್: ದಕ್ಷಿಣ ಭಾರತದಲ್ಲಿ ಹೆಚ್ಚು ಚಳಿಯಿರುವ ಪ್ರದೇಶಗಳ ಪೈಕಿ ಕೊಡೈಕನಾಲ್ ಕೂಡಾ ಒಂದು. ತಮಿಳುನಾಡಿನ ಅತ್ಯಂತ ಪ್ರಸಿದ್ಧ ಪ್ರವಾಸೀ ಸ್ಥಳವಾದ ಕೊಡೈಕನಾಲ್ ಅನ್ನು ಬೇರೆಲ್ಲಾ ಕಾಲಗಳಲ್ಲಿ ನೋಡುವುದಕ್ಕಿಂತ ಭಿನ್ನ ಕೋನದಲ್ಲಿ ಮಳೆಗಾಲದಲ್ಲಿ ನೋಡಬಹುದು. ಈ ಬೆಟ್ಟದೂರಿನ ತುಂಬ ಕಪ್ಪು ಮೋಡಗಳು ಮೇಳೈಸಿ, ಮಳೆ ಸುರಿವ ಸೊಬಗು ನೋಡುವುದು ಕಣ್ಣಿಗೆ ಮನಸ್ಸಿಗೆ ತಂಪು. ಬೇಸಿಗೆಯ ದುಃಖವನ್ನು ಮರೆತು ತಂಪಿನ ಖುಷಿಗೆ ಮೈಚೆಲ್ಲಿ ಸುಮ್ಮನೆ ಒಂದೆರಡು ದಿನವಾದರೂ ಸುಮ್ಮನೆ ಕೂರಬೇಕು ಎನಿಸಿದರೆ ಕೊಡೈಕನಾಲ್‌ಗೆ ಭೇಟಿ ಕೊಡಬೇಕು. ಇಲ್ಲಿನ ಹಚ್ಚ ಹಸಿರು ಕಣಿವೆಗಳು, ಸುಂದರ ಸರೋವರ, ಸರೋವರದಲ್ಲೊಂದು ಬೋಟಿಂಗ್. ಹಕ್ಕಿಗಳ ಕಲರವ ಎಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ.
2. ಯೇಲಗಿರಿ: ತಮಿಳುನಾಡಿನಲ್ಲಿರುವ ಏಲಗಿರಿಯೂ ಕೂಡಾ ಒಂದು ದಿನದಲ್ಲಿ ಬೆಂಗಳೂರಿನಿಂದ ತಲುಪಬಹುದಾದ ಸುಂದರ ಜಾಗಗಳಲ್ಲೊಂದು. ಅಣ್ಣಾಮಲೈ ಹುಲಿ ರಕ್ಷಿತಾರಣ್ಯದ ಸರಹದ್ದಿನಲ್ಲಿ ಬರುವ ಯೇಲಗಿರಿ ಜೂನ್‌ನಲ್ಲಿ ತಂಪಾಗಿರುತ್ತದೆ. ಇಲ್ಲಿನ ಟೀ ಎಸ್ಟೇಟ್‌ಗಳು, ಸುಂದರ ಕಣಿವೆಗಳು ಹಾಗೂ ಪುಟಾಣಿ ಬೆಟ್ಟದೂರು ಒಂದೆರಡು ದಿನಗಳ ಕಾಲ ಹಾಯಾಗಿರಲು ಹೇಳಿ ಮಾಡಿಸಿದಂತಿವೆ.
3. ಅತಿರಾಪಳ್ಳಿ ಜಲಪಾತ: ಜುಳುಜುಳು ಹರಿವ ನೀರು, ದಟ್ಟ ಕಾಡು, ಮಳೆಯ ಮೋಡಿಗೆ ಹಸಿರು ಹಸಿರಾದ ಪ್ರಕೃತಿ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳಿ. ಧೋ ಎಂದು ಎತ್ತರದಿಂದ ಸುರಿವ ಜಲಪಾತ, ಸುರಿದ ಮಳೆಯ ನೀರನ್ನೂ ಸೇರಿಸಿಕೊಂಡು ದಷ್ಟಪುಷ್ಟವಾದ ಜಲಧಾರೆಯ ಸೊಬಗು ಮಳೆಗಾಲದಲ್ಲಿ ಬೇರೆಯೇ. ಬಾಹುಬಲಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಚಿತ್ರಿತವಾಗಿರುವ ಕೇರಳದ ಪ್ರಸಿದ್ಧ ಜಲಪಾತಗಳಲ್ಲೊಂದು.
4. ಪೊನ್ಮುಡಿ: ಕೇರಳದ ತ್ರಿವೇಂದ್ರಂ ಬಳಿಯ ಪೊನ್ಮುಡಿ ಎಂಬ ಬೆಟ್ಟದೂರು ಅತ್ಯದ್ಭುತ ದೃಶ್ಯ ಸೌಂದರ್ಯಕ್ಕೆ ಹೆಸರು ಮಾಡಿದೆ. ಜೂನ್ ತಿಂಗಳಲ್ಲಿ ಆಗಷ್ಟೇ ಸುರಿವ ಮಳೆಗೆ ಹಸಿರಾಗಿಸಿಕೊಂಡು ಮಂಜು ಕವಿದುಕೊಂಡು ಕೂರುವ ಮರಿಯೇ ಅದ್ಭುತ. ಮಳೆಯ ಸೊಬಗಿಗೆ ಮಗುವಾಗುವ ಮನಸ್ಸು ಇರುವ ಮಂದಿ ಇಲ್ಲಿಗೆ ಮಳೆಗಾಲದಲ್ಲಿ ಪ್ರವಾಸ ಹೋಗಲೇಬೇಕು.
5. ವಯನಾಡ್: ಹೆಚ್ಚು ಸಮಯವಿಲ್ಲ, ಇರುವ ವೀಕೆಂಡಿನಲ್ಲಿ ಮಳೆಯಲ್ಲೊಂದು ಡ್ರೈವ್ ಹೋಗಿ ಬರಬೇಕೆನ್ನುವ ಆಸೆಯಿರುವ ಮಂದಿಗೆ ವಯನಾಡ್ ಬಹಳ ಒಳ್ಳೆಯ ಆಯ್ಕೆ. ಪಶ್ಚಿಮ ಘಟ್ಟಗಳ ಮಳೆಗಾಲದ ಸೌಂದರ್ಯವನ್ನು ಮನಸಾರೆ ಮೊಗೆಮೊಗೆದು ಕುಡಿಯಲು ವಯನಾಡಿಗಿಂತ ಹತ್ತಿರದ ಸುಂದರವಾದ ಸ್ಥಳ ಇನ್ನೊಂದಿಲ್ಲ. ಒಂದೆರಡು ದಿನದ ಸಮಯದಲ್ಲಿ ಮನಸ್ಸು ಹಗುರಾಗಿಸಿಕೊಂಡು ಬರಲು ಸೂಕ್ತ ಜಾಗವಿದು.
ಕರ್ನಾಟಕ
Coastal Karnataka travel: ಮಳೆ ಬಂದಾಗ ಈ ಕರಾವಳಿ ತೀರದ ತಾಣಗಳಿಗೆ ನೀವು ಒಂದು ಟ್ರಿಪ್ ಹೋಗ್ಲೇಬೇಕು!
ಸುಂದರವಾದ ಕಡಲ ತೀರ, ಕಾಲಿಗೆ ಕಚಗುಳಿ ಕೊಡುವ ಮರಳು, ಕಣ್ಣು ತುಂಬುವ ಹಸಿರಿನ ಜತೆಗೆ ಮಳೆಯೂ ಸೇರಿಕೊಂಡರೆ, ಮಳೆಗಾಲದಲ್ಲಿ ಕರಾವಳಿ ಕರ್ನಾಟಕದಷ್ಟು ಸುಂದರವಾದ ಪ್ರವಾಸೀ ತಾಣ ಬೇರೆ ಇಲ್ಲ.
ಕರಾವಳಿ ಕರ್ನಾಟಕ ತನ್ನ ಒಡಲಲ್ಲಿ ವಜ್ರದಂಥ ಪ್ರವಾಸಿ ತಾಣಗಳನ್ನು ಹುದುಗಿಸಿಟ್ಟುಕೊಂಡಿದೆ. ಬೇಸಿಗೆಯಲ್ಲಿ ಬಿಸಿಲಿನಿಂದ ಹೊಳೆಯುವ ಇವು, ಮಳೆಗಾಲದಲ್ಲಿ ಅಷ್ಟೇ ಹಸಿರಿನಿಂದ, ಅಲೆಗಳಿಂದ, ಥಳಥಳನೆ ಕಂಗೊಳಿಸುತ್ತವೆ. ಇಲ್ಲಿನ ನದಿಗಳು, ಸಮುದ್ರತೀರ, ಮರಳು, ತೆಂಗಿನ ಮರಗಳು, ಹಳೆಯ ಮನೆಗಳು ನಿಮ್ಮನ್ನು ಕೇರಳದ ಯಾವುದೋ ಹಳ್ಳಿಮೂಲೆಗೆ ಕರೆದೊಯ್ದಂತೆ ಭಾಸವಾಗುತ್ತವೆ. ಮಳೆಗಾಲದ ರಜೆಗಳನ್ನು ಆನಂದವಾಗಿ ಫ್ಯಾಮಿಲಿ ಸಮೇತ ಕಳೆಯಲು ಈ ಕೆಳಗಿನ ಕರಾವಳಿ ತಾಣಗಳು (Coastal Karnataka travel) ಬೆಸ್ಟ್. ಇಲ್ಲಿನ ಹಚ್ಚಹಸಿರು ಪ್ರಕೃತಿ, ನೀಲಿ ಸಮುದ್ರದ ಜತೆಗೆ ಸ್ಥಳೀಯ ಫುಡ್ ಐಟಮ್‌ಗಳು ಕೂಡ ನಿಮ್ಮನ್ನು ಖುಷಿಪಡಿಸುತ್ತವೆ.
ಮಂಗಳೂರು
ಮಂಗಳೂರು ಸುಂದರವಾದ ಕರಾವಳಿ ಪಟ್ಟಣ. ಬಾಯಲ್ಲಿ ನೀರೂರಿಸುವ ಆಹಾರದಿಂದ ಹಿಡಿದು ಸುಂದರವಾದ ಬೀಚ್‌ಗಳವರೆಗೆ ಇಲ್ಲಿದೆ. ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸ್ವಲ್ಪ ದೂರದಲ್ಲಿರುವ ಉಳ್ಳಾಲ, ಸೋಮೇಶ್ವರ ಬೀಚ್ ಆನಂದ ನೀಡುತ್ತವೆ. ಇಲ್ಲಿನ ಗೋಡಂಬಿ ಕಾರ್ಖಾನೆ, ಕದ್ರಿ ಮಂಜುನಾಥ ದೇವಸ್ಥಾನ, ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಸುಲ್ತಾನ್ ಬತ್ತೇರಿ, ಪಣಂಬೂರು ಬಂದರುಗಳ ಭೇಟಿ, ರಾಮ್‌ಪ್ರಸಾದ್ ಹೋಟೆಲ್ ತುಪ್ಪದೋಸೆ, ಪಬ್ಬಾಸ್‌ನಲ್ಲಿ ಐಸ್‌ಕ್ರೀಮ್ ಸವಿಯುವುದು ಮರೆಯಬೇಡಿ.
ಉಡುಪಿ
ಇದೂ ದೇವಾಲಯಗಳ ನಗರವೇ. ಉಡುಪಿಯ ಹೆಚ್ಚು ಜನನಿಬಿಡ ಸ್ಥಳಗಳೆಂದರೆ ದೇವಾಲಯಗಳು- ಉಡುಪಿ ಶ್ರೀ ಕೃಷ್ಣ ದೇವಸ್ಥಾನ, ಅನಂತೇಶ್ವರ ದೇವಸ್ಥಾನ ಇತ್ಯಾದಿ. ಇಲ್ಲಿಯೇ ಹತ್ತಿರದಲ್ಲಿರುವ ಶಿಕ್ಷಣ ಕಾಶಿ ಮಣಿಪಾಲವನ್ನೂ ವೀಕ್ಷಿಸಬಹುದು. ಅಲೆಗಳು ಇಲ್ಲದಿದ್ದರೆ ಸೇಂಟ್ ಮೇರಿಸ್ ದ್ವೀಪಕ್ಕೆ ತೆರಳಬಹುದು. ಸನಿಹದಲ್ಲಿ ಮಲ್ಪೆ ಬೀಚ್ ಹಾಗೂ ಕಾಪು ಬೀಚ್‌ಗಳಿವೆ. ಕಾಪು ದ್ವೀಪಸ್ತಂಭ ಮತ್ತು ಅಲ್ಲಿಂದ ಕಾಣುವ ನೋಟ ಮನೋಹರವಾಗಿವೆ.
ಗೋಕರ್ಣ
ಗೋಕರ್ಣವು ಇಡೀ ಭಾರತದ ಪ್ರಾಕೃತಿಕ ಸ್ವರ್ಗ. ಇದು ಬಡವರ ಗೋವಾ ಅಂತಲೂ ಜನಪ್ರಿಯ. ರಜಾದಿನಗಳಿಗೆ ಪರಿಪೂರ್ಣವಾದ ಶಾಂತಿಯುತ ಬೀಚ್ ಪಟ್ಟಣ. ಕಡಲತೀರಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿ. ಮಳೆಗಾಲದಲ್ಲಿ ಅಬ್ಬರಿಸುವ ಇಲ್ಲಿರುವ ಕೆಲವು ಪ್ರಸಿದ್ಧ ಕಡಲತೀರಗಳು- ಓಂ ಬೀಚ್, ಕುಡ್ಲೆ ಬೀಚ್, ಪ್ಯಾರಡೈಸ್ ಬೀಚ್, ಹಾಫ್ ಮೂನ್ ಬೀಚ್. ಮಹಾಬಲೇಶ್ವರ ದೇವಾಲಯದಲ್ಲಿ ಆಧ್ಯಾತ್ಮಿಕ ಅನುಭೂತಿಯನ್ನೂ ಅನುಭವಿಸಬಹುದು ಇಲ್ಲಿ. ಆತ್ಮಲಿಂಗದ ಮೂಲಕ ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುತ್ತದೆ.
ಕುಮಟಾ
ಸುಂದರವಾದ ಕಡಲತೀರಗಳನ್ನು ಹೊಂದಿದ ಕುಮಟಾದ ಬೀದಿಗಳು ಹಾಗೂ ಬೀಚ್‌ಗಳು ಇನ್ನೂ ವಾಣಿಜ್ಯೀಕರಣಗೊಂಡಿಲ್ಲ. ಹೀಗಾಗಿ ಇಲ್ಲಿ ಪ್ರವಾಸಿಗರ ಹಾವಳಿಯೂ ಅಷ್ಟಿಲ್ಲ. ಹೀಗಾಗಿ ನೀವು ನಿಮ್ಮ ಖಾಸಗಿ ದ್ವೀಪದಲ್ಲಿದ್ದಂತೆ ಅನಿಸುತ್ತದೆ. ಸ್ಥಳೀಯರು ಮುಗ್ಧತೆ ಹಾಗೂ ಪ್ರೀತಿಯಿಂದ ನಿಮ್ಮನ್ನು ಸ್ವಾತಿಸುತ್ತಾರೆ. ನಿರ್ವಾಣ ಮುಂತಾದ ಬೀಚ್‌ಗಳು ಪರಿಶುಭ್ರವಾಗಿವೆ.
ಮುರುಡೇಶ್ವರ
ಕಡಲ ತೀರದ ಈ ಪಟ್ಟಣ ಭಗವಾನ್ ಶಿವನ ಬೃಹತ್ ಪ್ರತಿಮೆಗೆ ನೆಲೆ. ವಿಶ್ವದ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆ ಇದು. ಮುರುಡೇಶ್ವರ ದೇವಾಲಯ ರಾಜ್ಯದ ಭವ್ಯ ದೇವಾಲಯಗಳಲ್ಲಿ ಒಂದು. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಇಲ್ಲಿನ ಬೀಚ್, ಮಿರ್ಜಾನ್ ಕೋಟೆ, ಪ್ರತಿಮೆ ಪಾರ್ಕ್ ಹೆಚ್ಚು ಭೇಟಿ ಕಾಣುವ ಪ್ರವಾಸಿ ತಾಣಗಳು. ಇಲ್ಲಿಂದ ನೇತ್ರಾಣಿ ದ್ವೀಪಕ್ಕೂ ಹೋಗಬಹುದು. ಆದರೆ ಮಳೆ ಜೋರಿದ್ದರೆ ಸಾಧ್ಯವಿಲ್ಲ.
ಇದನ್ನೂ ಓದಿ: Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!
ಕಾರವಾರ
ಇಲ್ಲಿ ಕಾಳಿ ನದಿಯು ಅರಬಿ ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ. ಕಾರವಾರವು ಕಡಲ ತೀರವೂ ಶಾಂತ ಹಾಗೂ ಶುದ್ಧವಾಗಿದೆ. ತನ್ನ ಅಧಿಕೃತ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹೋದರೆ ಮೀನಿನ ಖಾದ್ಯ ಸೇವಿಸುವುದು ಮರೆಯಬೇಡಿ. ಹಲವು ದೇವಾಲಯಗಳೂ ಇವೆ. ಇಲ್ಲಿನ ಟಾಗೋರ್ ಬೀಚ್‌ನಲ್ಲಿ, ರವೀಂದ್ರನಾಥ್ ಟಾಗೋರ್ ಅವರು ಹಲವು ಕಾಲ ತಂಗಿದ್ದು, ವಿಹರಿಸಿದ್ದರು. ಕಾರವಾರದ ಪ್ರಸಿದ್ಧ ದೇವಾಲಯಗಳಲ್ಲಿ ನಾಗನಾಥ ದೇವಾಲಯವೂ ಒಂದು.
ಮರವಂತೆ
ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿದೆ. ಪ್ರಕೃತಿಯ ಅದ್ಭುತವನ್ನು ವೀಕ್ಷಿಸಲು ಸೂಕ್ತ ತಾಣವಿದು. ಹೆದ್ದಾರಿಯ ಒಂದು ಬದಿಗೆ ಅಬ್ಬರಿಸುವ ಅರಬ್ಬಿ ಕಡಲು, ಇನ್ನೊಂದು ಬದಿಗೆ ಸೌಮ್ಯವಾಗಿ ಹರಿಯುವ ಸೌಪರ್ಣಿಕಾ ನದಿ. ಸುಂದರವಾದ ಕೊಡಚಾದ್ರಿ ಬೆಟ್ಟಗಳನ್ನು ಹಿನ್ನೆಲೆಯಲ್ಲಿ ವೀಕ್ಷಿಸಬಹುದು. ಇಲ್ಲಿ ರೈಡ್ ಹೋಗಬಹುದು ಅಥವಾ ಶಾಂತವಾಗಿ ಸಮಯ ಕಳೆಯಬಹುದು.
ಇದನ್ನೂ ಓದಿ: Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!
ಕರ್ನಾಟಕ
Cyclone Biparjoy: ದಕ್ಷಿಣ ಕನ್ನಡ ಬೀಚ್‌ಗಳಿಗೆ NO Entry; ಪ್ರವಾಸಿಗರು ವಾಪಸ್!
Dakshina Kannada Beach: ಬಿಪರ್‌ಜಾಯ್ ಚಂಡಾಮಾರುತದ ಪರಿಣಾಮ ಸಮುದ್ರದ ಅಲೆಗಳು ಬಿರುಸುಗೊಂಡಿವೆ. ಇದರಿಂದಾಗಿ ಅಪಾಯದ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ತೀರಗಳಿಗೆ ಬಂದಿರುವ ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ.
ಉಳ್ಳಾಲ: ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ (Cyclone Biparjoy) ಹಿನ್ನೆಲೆಯಲ್ಲಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಬುಧವಾರ (ಜೂ. 7) ನಸುಕಿನಿಂದ ಹೆಚ್ಚಾಗಿದೆ. ಜಿಲ್ಲಾಡಳಿತದ ಆದೇಶದಂತೆ ಉಳ್ಳಾಲ, ಸೋಮೇಶ್ವರ ಸಮುದ್ರ ತೀರದಲ್ಲಿ ಬರುವ ಪ್ರವಾಸಿಗರನ್ನು ಹೋಂಗಾರ್ಡ್‌ಗಳು ವಾಪಸ್ ಕಳುಹಿಸುತ್ತಿದ್ದಾರೆ.
ಬುಧವಾರ ನಸುಕಿನಿಂದ ಚಂಡಮಾರುತದ ಪ್ರಭಾವ ಉಳ್ಳಾಲದ ಸಮುದ್ರ ತೀರದ ಪ್ರದೇಶಗಳಿಗೆ ಗೋಚರಿಸಲು ಆರಂಭವಾಗಿದೆ. ಬೃಹತ್ ಗಾತ್ರದ ಅಲೆಗಳು ಸಮುದ್ರದ ಅಂಚಿಗೆ, ಬಂಡೆ ಕಲ್ಲುಗಳಿಗೆ ಬಹುವೇಗವಾಗಿ ಅಪ್ಪಳಿಸುತ್ತಿದೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ, ಕೈಕೋ, ಹಿಲೆರಿಯಾನಗರ, ಸುಭಾಷನಗರ, ಕೈಕೊ, ಸಮ್ಮರ್ ಸ್ಯಾಂಡ್, ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಸಮುದ್ರ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣಾ ಪೊಲೀಸರು, ಹೋಂಗಾರ್ಡ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸಮುದ್ರ ತೀರಕ್ಕೆ ಬರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತಿರುವ ಬಿಪರ್‌ಜಾಯ್ ಚಂಡಮಾರುತ, ಉತ್ತರ ದಿಕ್ಕಿನತ್ತ ಚಲಿಸಿದರೆ ಗೋವಾ, ಮುಂಬೈ ಕರಾವಳಿಗೆ ಅಪ್ಪಳಿಸಲಿದೆ. ಜತೆಯಲ್ಲೇ ಕೇರಳದಿಂದ ಮಹಾರಾಷ್ಟ್ರದ ಸಾಗರ ತೀರದ ಉದ್ದಕ್ಕೂ ಭಾರಿ ಮಳೆ ಆಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಜೂನ್ 8ರಿಂದ ಜೂನ್ 10ರವರೆಗೆ ಪ್ರಕ್ಷುಬ್ಧ ವಾತಾವರಣ ಇರಲಿದೆ.
ಬಿಪರ್‌ಜಾಯ್ ಪದದ ಅರ್ಥ ಏನು? ಮೊದಲು ಎಲ್ಲಿ ಬಳಕೆ?
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತದ ರೂಪ ತಾಳಿದೆ. ಈ ಚಂಡಮಾರುತಕ್ಕೆ ಬಿಪರ್‌ಜಾಯ್ (Cyclone Biparjoy) ಎಂದು ಕರೆಯಲಾಗಿದ್ದು, ಕರ್ನಾಟಕ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಇದು ಭಾರಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬಿಪರ್‌ಜಾಯ್ ಚಂಡಮಾರುತದಿಂದ ಮುಂಗಾರು ಕೂಡ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟರಮಟ್ಟಿಗೆ ಪರಿಣಾಮ ಬೀರಿರುವ ಚಂಡಮಾರುತ ‘ಬಿಪರ್‌ಜಾಯ್’ ಪದವನ್ನು ಮೊದಲು ಎಲ್ಲಿ ಬಳಸಲಾಯಿತು? ಈ ಪದದ ಅರ್ಥ ಏನು ಎಂಬುದರ ಮಾಹಿತಿ ಇಲ್ಲಿದೆ.
ಬಿಪರ್‌ಜಾಯ್ ಪದದ ಅರ್ಥವೇನು?
ಚಂಡಮಾರುತಕ್ಕೆ ಬಿಪರ್‌ಜಾಯ್ ಎಂದು ಬಾಂಗ್ಲಾದೇಶ ಹೆಸರಿಟ್ಟಿದೆ. ಬಿಪರ್‌ಜಾಯ್ ಎಂದರೆ ಹವಾಮಾನ ವೈಪರೀತ್ಯ ಅಥವಾ ವಿಪತ್ತು ಎಂಬ ಅರ್ಥವಿದೆ. ಈ ಪದವನ್ನು ವಿಶ್ವ ಹವಾಮಾನ ಸಂಸ್ಥೆ (WMO) 2020ರಲ್ಲಿ ಅಳವಡಿಸಿಕೊಂಡಿದೆ. ಅರಬ್ಬೀ ಸಮುದ್ರ ಸೇರಿ ಆಯಾ ಪ್ರಾದೇಶಿಕ ನಿಯಮಗಳಿಗೆ ಅನ್ವಯವಾಗುವಂತೆ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ.
ಯಾವ ಆಧಾರದ ಮೇಲೆ ನಾಮಕರಣ?
ಚಂಡಮಾರುತಗಳಿಗೆ ಡಬ್ಲ್ಯೂಎಂಒ ಮತ್ತು ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ (ESCAP) ಸದಸ್ಯ ರಾಷ್ಟ್ರಗಳು ಹೆಸರಿಡುತ್ತವೆ. ಅಟ್ಲಾಂಟಿಕ್, ಭಾರತೀಯ ಸಾಗರ ಹಾಗೂ ದಕ್ಷಿಣ ಪೆಸಿಫಿಕ್‌ನಲ್ಲಿ ವರ್ಣಮಾಲೆಯ ಪ್ರಕಾರ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ. ಹಾಗೆಯೇ, ಮಹಿಳೆಯರು ಹಾಗೂ ಪುರುಷರ ಹೆಸರುಗಳನ್ನು ಕೂಡ ಕೆಲವೊಮ್ಮೆ ಇಡಲಾಗುತ್ತದೆ. ಉತ್ತರ ಭಾರತ ಸಾಗರ ಪ್ರದೇಶದ ಕಡೆಯೂ ವರ್ಣಮಾಲೆ ಆಧಾರದ ಮೇಲೆ ಹೆಸರಿಡುತ್ತಾರೆ. ಆದರೆ, ಲಿಂಗ ತಟಸ್ಥವಾಗಿ ಚಂಡಮಾರುತಗಳಿಗೆ ನಾಮಕರಣ ಮಾಡಲಾಗುತ್ತದೆ.
ಇದನ್ನೂ ಓದಿ: Cyclone Biporjoy: ಬಿಪರ್‌ಜಾಯ್ ಚಂಡಮಾರುತದಿಂದ ಮಳೆ; ಮುಂಗಾರು ಮತ್ತಷ್ಟು ದೂರ
ಕರ್ನಾಟಕದ ಮೇಲೆ ಬೀರುವ ಪರಿಣಾಮ ಏನು?
ಬಿಪರ್‌ಜಾಯ್ ಚಂಡಮಾರುತದ ಕುರಿತು ಬುಧವಾರ ಬೆಳಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗಂಟೆಗೆ 135-160 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದ್ದು, ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಈ ರಾಜ್ಯಗಳಲ್ಲಿ ಚಂಡಮಾರುತದ ಪರಿಣಾಮವೂ ತೀವ್ರವಾಗಿರಲಿದೆ ಎಂದು ತಿಳಿಸಿದೆ. ಹಾಗಾಗಿ, ಕರಾವಳಿ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema24 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ20 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ