ಬೇಸಿಗೆ ರಜೆಯಲ್ಲಿ ದುಡಿಯುವ ಹೆತ್ತವರು ಮಕ್ಕಳಿಗಾಗಿ ಎಷ್ಟು ಪ್ಲಾನ್ ಸಿದ್ಧ ಮಾಡಿಕೊಡರೂ, ಸಾಲದು. ಬೇಸಿಗೆ ಶಿಬಿರಕ್ಕೆಂದು 15 ದಿನ, ಇನ್ನು ಹತ್ತು ದಿನ ಅಜ್ಜನ ಮನೆಗೆ, ಮತ್ತೆ ಇನ್ಯಾವುದೋ ಕ್ಲಾಸಿಗೆ, ಹೀಗೆ ಪ್ಲಾನ್ ಸಿದ್ಧವಾಗಿರಿಸಿಕೊಂಡರೂ, ತಮಗಾಗಿ ಒಂದಿಷ್ಟು ದಿನಗಳನ್ನು ಕಾಪಿಟ್ಟುಕೊಳ್ಳಬೇಕಾಗುತ್ತದೆ. ಮಕ್ಕಳ ಜೊತೆಗೆ ಹೊರಗೆ ಸುತ್ತಾಡಲು (travel tips) ಒಂದಿಷ್ಟು ರಜೆಯನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಮಕ್ಕಳ ಮನದಲ್ಲಿ ನೆನಪಿನ ಜೋಳಿಗೆಯಲ್ಲಿ ಭದ್ರವಾಗಿ ಉಳಿಯುವ ನೆನಪುಗಳಿಗೆ ನಾವು ಪೋಷಕರಾಗಿ ವೇದಿಕೆ ಒದಗಿಸಿಕೊಡಲೇಬೇಕಲ್ಲವೇ?
ಬಹಳ ಸಲ, ಹೆತ್ತವರಿಗೆ ರಜೆ ಸಿಗುವ ಆಧಾರದ ಮೇಲೆ ಪ್ರವಾಸ (summer travel) ಎಲ್ಲಿಗೆ ಎಂಬ ಗೊಂದಲ ಶುರುವಾಗುತ್ತದೆ. ಪಟ್ಟಿಯಲ್ಲಿರುವ ಹಲವು ಹೆಸರುಗಳನ್ನು ನಾನಾ ಕಾರಣಗಳಿಂದಾಗಿ ಕೈಬಿಡಬೇಕಾಗುತ್ತದೆ. ಕೊನೆಗೆ ಉಳಿಯುವುದು ಹತ್ತಿರದಲ್ಲೇ, ಸುಲಭವಾಗಿ ವೀಕೆಂಡೊಂದಕ್ಕೆ ಎಟಕಬಲ್ಲ ಯೋಜನೆಗಳನ್ನಾದರೂ ರೂಪಿಸುವ ಒತ್ತಡಕ್ಕೆ ಬಂದು ನಿಲ್ಲುತ್ತದೆ. ಇನ್ನೂ ಅನೇಕರು ಸಾಕಷ್ಟು ಮೊದಲೇ ಯೋಜನೆ ರೂಪಿಸಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡೇ ಬೇಸಿಗೆ ರಜೆಯ ಪ್ರವಾಸದ ಮಜಾವನ್ನು ಅನುಭವಿಸುತ್ತಾರೆ. ಅದಕ್ಕಾಗಿಯೇ, ಎಪ್ರಿಲ್ ಮೇ ತಿಂಗಳಲ್ಲಿ ದೇಶದಲ್ಲಿ ಎಲ್ಲೇ ಸುತ್ತಾಡಲು ಕಾಲಿಟ್ಟರೂ ಜನಜಂಗುಳಿ! ಆದರೂ ಬೇಸಿಗೆಯ ರಜಾವನ್ನು ಹಾಗೆಯೇ ಕಳೆದುಹೋಗಲಿ ಎಂದು ಸುಮ್ಮನೆ ಬಿಡಲಾದೀತೇ? ಕಡೇ ಪಕ್ಷ ಮಕ್ಕಳನ್ನು ಕರೆದುಕೊಂಡು ಹತ್ತಿರದಲ್ಲೇ ಇರುವ ದಕ್ಷಿಣ ಭಾರತದ, ಮೂರ್ನಾಲ್ಕು ದಿನಗಳಲ್ಲಿ ಹೋಗಿಬರಬಹುದಾದ ಬೇಸಿಗೆಯ ತಾಣಗಳ (hill stations) ವಿವರ ಇಲ್ಲಿದೆ.
1. ಊಟಿ: ಉದಕಮಂಡಲಂ ಎಂದೂ ಹೆಸರಾಗಿರುವ ಊಟಿ, ದಕ್ಷಿಣ ಭಾರತೀಯರ ಪಾಲಿನ ಆಪದ್ಭಾಂದವ. ಸಮ್ಮರ್ ಪಾರಡೈಸ್. ಅದಕ್ಕಾಗಿಯೇ ಬೇಸಿಗೆ ಬರುತ್ತಿದ್ದಂತೆ ಊಟಿ ಕಿಕ್ಕಿರಿದು ತುಂಬುದತ್ತದೆ. ಟ್ರಾಫಿಕ್ ಜ್ಯಾಂಗಳಾಗಿ, ಗಂಟೆಗಟ್ಟಲೆ ರಸ್ತೆಯಲ್ಲೇ ಪಡಿಪಾಟಲು ಪಡುವಂತಾಗುತ್ತದೆ. ನಗರದ ಒತ್ತಡ, ಸಂಚಾರ ತಪ್ಪಿಸಿ ನೆಮ್ಮದಿಯ ಪ್ರವಾಸ ಮಾಡಿ ಬರಬೇಕೆಂದು ಹೋದವರು ಮತ್ತೆ ಸಂಚಾರ ದಟ್ಟ್ನೆಯಲ್ಲಿ ಸಿಕ್ಕಿ ಹಾಕಿಕೊಂಡು ಪ್ರವಾಸ ಪ್ರಯಾಸವಾಗುತ್ತದೆ. ಆದರೆ ಊಟಿಯಲ್ಲಿ ಮಕ್ಕಳ ಜೊತೆ ನೋಡಬೇಕಾದ್ದು ಬಹಳ ಇದೆ. ಊಟಿ ಚಹಾ ತೋಟ, ನೀಲಗಿರಿ ಬೆಟ್ಟಗಳ ಸಾಲು, ಪುಟಾಣಿ ರೈಲು ಇತ್ಯಾದಿ ಇತ್ಯಾದಿ ಮಕ್ಕಳಿಗೆ ಬಲು ಮಜಾ ಕೊಟ್ಟಾವು. ಅದಕ್ಕಾಗಿಯೇ ಊಟಿಗೆ ಯೋಜನೆ ರೂಪಿಸುವಾಗ, ವೀಕೆಂಡುಗಳ ಜಂಜಡವಿಲ್ಲದ, ವೀಕೆಂಡ್ ತಪ್ಪಿಸಿ, ಸರ್ಕಾರಿ ರಜೆಗಳನ್ನು ತಪ್ಪಿಸಿ ವಾರದ ಮಧ್ಯದಲ್ಲಿ ಹೋಗಿ ಬರುವುದು ಒಳ್ಳೆಯದು.
2. ಮಡಿಕೇರಿ: ಕರ್ನಾಟಕದಲ್ಲಿದ್ದು ಮಡಿಕೇರಿ ನೋಡದಿದ್ದರೆ, ನಮ್ಮ ದೇಶದಲ್ಲಿದ್ದೂ ಕಾಶ್ಮೀರ ನೋಡದ ಹಾಗೆ. ಕರ್ನಾಟಕದ ಪಾಲಿನ ಸ್ವರ್ಗ ಈ ಕೊಡಗು. ಮಡಿಕೇರಿಯೂ ಅಷ್ಟೇ, ಇತ್ತೀಚೆಗಿನ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ಹೋಗುವುದರಿಂದ ಆದಷ್ಟು ಮುಂಚಿತವಾಗಿ ಊಟಿಯಂತೆ ವೀಕೆಂಡ್ ತಪ್ಪಿಸಿ ಪ್ರಯಾಣ ಬೆಳೆಸುವುದು ಒಳ್ಳೆಯದು. ಮಕ್ಕಳಿಗೆ ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಶಿಬಿರ ಒಂದೊಳ್ಳೆ ಅನುಭವವಾಗಬಲ್ಲುದು.
3. ಮುನ್ನಾರ್: ಊಟಿಯಂತೆಯೇ ಮುನ್ನಾರ್ ಕೂಡಾ ಪ್ರಕೃತಿ ಸೌಂದರ್ಯದಿಂದ ತುಳುಕುವ ತಾಣ. ಇದೂ ಕೂಡಾ ಪ್ರಸಿದ್ಧ ಪ್ರವಾಸಿ ತಾಣವಾದ್ದರಿಂದ ರಜಾದಿನಗಳಲ್ಲಿ ಜನಜಂಗುಳಿ ಹೆಚ್ಚು. ಮಕ್ಕಳಿಗೆ ಇಲ್ಲಿನ ಚಹಾ ತೋಟ, ಎರವಿಕುಳಂ ರಾಷ್ಟ್ರೀಯ ಉದ್ಯಾನ, ಅದೃಷ್ಟವಿದ್ದರೆ ರಸ್ತೆ ಬದಿಯಲ್ಲೇ ನೀಲ್‌ಗಿರಿ ಥಾರ್ ಪ್ರಾಣಿ ಓಡಾಡುವುದನ್ನೂ ನೋಡಬಹುದು!
4. ಕೊಡೈಕನಾಲ್: ತಮಿಳುನಾಡಿನ ಅತ್ಯಂತ ಸುಂದರ ತಾಣಗಳಲ್ಲಿ ಕೊಡೈಕನಾಲ್ ಕೂಡಾ ಒಂದು. ತನ್ನ ನೈಸರ್ಗಿಕ ಚೆಲುವು, ಸದಾ ಮೋಡ ಮುಸುಕಿದ, ಚಂದನೆಯ ಸರೋವರಗಳನ್ನೂ, ಸಾಲು ಸಾಲು ಬೆಟ್ಟಗಳನ್ನೂ ಹೊಂದಿದ ಬೆಟ್ಟದ ತುದಿಯ ಊರು. ಚಾರಣ, ಕ್ಯಾಂಪಿಂಗ್ ಮತ್ತಿತರ ಚಟುವಟಿಕೆಯನ್ನು ಮಕ್ಕಳ ಜೊತೆ ಮಾಡಲು ಬಯಸುವ ಮಂದೊಗೆ ಇದು ಅತ್ಯುತ್ತಮ ಜಾಗ.
ಇದನ್ನೂ ಓದಿ: Travel Tips: ಬಿರಿಯಾನಿ ಪ್ರಿಯರು ತಿನ್ನಲೇಬೇಕಾದ ವಿವಿಧ ಸ್ಥಳಗಳ ಬಿರಿಯಾನಿಗಳಿವು!
5. ವಯನಾಡು: ಬೆಂಗಳೂರಿಗರಿಗೆ ಅತ್ಯಂತ ಹತ್ತಿರದಲ್ಲಿ ಕೈಗೆಟಕುವ ಇನ್ನೊಂದು ಜಾಗ ಎಂದರೆ ಕೇರಳದ ವಯನಾಡು. ಹಸಿರು ಸ್ವರ್ಗದಂತೆ ಕಂಗೊಳಿಸುವ ಇದೂ ಕೂಡಾ ಸಾಹಸ ಪ್ರಿಯರಿಗೆ, ಮಕ್ಕಳಿಗೆ ಚಾರಣ, ಕ್ಯಾಂಪಿಂಗ್ ಹಾಗೂ ನಿಸರ್ಗ ಪ್ರೇಮ ಬೆಳೆಸುವ ಮನಸ್ಸು ಇರುವ ಹೆತ್ತವರಿಗೆ ಬೆಸ್ಟ್ ಜಾಗ.
6. ಏರ್ಕಾಡ್: ಪುಟಾಣಿ ಹಿಲ್ ಸ್ಟೇಷನ್ ಆದರೂ ಅದ್ಭುತ ಅನುಭವ ನೀಡುವ ಚಂದದೂರು ಈ ಏರ್ಕಾಡು. ಬೆಟ್ಟ್ದ ತುದಿಯ ತಮಿಳುನಾಡಿನ ಈ ಪುಟ್ಟ ಊರಿಗೆ ಹೋಗುವ ಮಜಾವೇ ಮಕ್ಕಳಿಗೆ ಖುಷಿ ಕೊಡುವಂಥದ್ದು. ಊಟಿಯಂತಹ ಅನುಭವ ನೀಡಬಲ್ಲ, ಆದರೆ ಊಟಿಯಷ್ಟು ಜನಜಂಗುಳಿ ಇಲ್ಲದ ಶಾಂತ ಊರು.
ಇದನ್ನೂ ಓದಿ: Air Travel Tips: ವಿಮಾನದೊಳಗೆ ಏನೆಲ್ಲ ಮಾಡಬಾರದು ಎಂದು ಗೊತ್ತಿರಲಿ!