ಹೆಚ್ಚಿನ ಆಹಾರ ಪ್ರಿಯರಲ್ಲಿ ಕೇಳಿ, ಇಷ್ಟದ ತಿನಿಸು ಯಾವುದೆಂದು, ಅವರ ಉತ್ತರ ಬಿರಿಯಾನಿಯೇ ಆಗಿರುತ್ತದೆ. ಒಂದು ಸುಂದರ ರಜಾದಿನದ ಮಧ್ಯಾಹ್ನಕ್ಕೆ ಅದ್ಭುತವಾದ ಬಿರಿಯಾನಿ ಸವಿಯಲು ಸಿಕ್ಕರೆ ಅದಕ್ಕಿಂತ ಸ್ವರ್ಗ ಇನ್ನೇನಿದೆ ಎಂಬುದು ಆಹಾರವ ಪ್ರಿಯರ ಬಿರಿಯಾನಿ ಬಣ್ಣನೆ! ವಿಷಯವೇನೋ ನಿಜವೇ ಆದರೂ, ಸಿಕ್ಕಸಿಕ್ಕಲ್ಲೆಲ್ಲ ಬಿರಿಯಾನಿ ಸವಿದರೆ, ಸ್ವರ್ಗ ಸುಖ ಖಂಡಿತಾ ಸಿಗದು. ಬಗೆಬಗೆಯ ರುಚಿಯ ವಿಶೇಷವಾದ ಅದ್ಭುತ ಬಿರಿಯಾನಿ ಸವಿಯಬೇಕಿದ್ದರೆ ನಮ್ಮ ದೇಶದಲ್ಲಿ ಎಲ್ಲಿಗೆ ಪಯಣಿಸಬೇಕು ಎಂಬುದೂ ಬಿರಿಯಾನಿ ಪ್ರಿಯರಿಗೆ ಗೊತ್ತಿರಬೇಕು. ಅವುಗಳ ವಿವರ ಇಲ್ಲಿದೆ.
1. ಕೋಲ್ಕತ್ತಾ ಬಿರಿಯಾನಿ: ಕೋಲ್ಕತ್ತಾ ಬಿರಿಯಾನಿ ರುಚಿಯೋ, ಹೈದರಾಬಾದ್‌ನ ಬಿರಿಯಾನಿ ರುಚಿಯೋ ಎಂಬೊಂದು ಕೋಳಿ ಜಗಳ ಬಿರಿಯಾನಿ ಪ್ರಿಯರಲ್ಲಿ ಎಂದಿಗೂ ಇತ್ಯರ್ಥವಾಗದ ಸಮಸ್ಯೆ. ಯಾಕೆಂದರೆ, ಕೋಲ್ಕತ್ತಾ ಬಿರಿಯಾನಿಗೂ ಹೈದರಾಬಾದ್ ಬಿರಿಯಾನಿಗೂ ಅವರವರದ್ದೇ ಆದ ಅಭಿಮಾನಿ ಬಳಗವಿದೆ. ಕೋಲ್ಕತ್ತಾದಲ್ಲಿದ್ದ ನವಾಬರು ಅವಧ್ ಪ್ರಾಂತ್ಯದ ಬಿರಿಯಾನಿಯ ಘಮ ಹಾಗೂ ರುಚಿಯ ಶೈಲಿಯನ್ನೇ ಮುಂದುವರಿಸಿಕೊಂಡು ಹೋಗಿರುವುದೇ ಕೋಲ್ಕತ್ತಾದ ವಿಶೇಷವಾಗಿದೆ. ಹದವಾದ ಮಸಾಲೆ ಭರಿತ ಕೇಸರಿ ಹಾಕಿದ, ಆಲೂಗಡ್ಡೆ, ಮೊಟ್ಟೆ, ಮಾಂಸ ಹಾಕಿದ ಬಿರಿಯಾನಿಯಿದು.
2. ಹೈದರಾಬಾದ್ ಬಿರಿಯಾನಿ: ಸಾಟಿಯಿಲ್ಲದ ಘಮದ ಹೈದರಾಬಾದ್ ಬಿರಿಯಾನಿ ದೇಶವಷ್ಟೇ ಅಲ್ಲದೆ, ವಿದೇಶದಲ್ಲೂ ಖ್ಯಾತಿವೆತ್ತಿದೆ. ಬಿರಿಯಾನಿ ಎಂದರೆ ಹೈದರಾಬಾದ್, ಹೈದರಾಬಾದ್ ಎಂದರೆ ಬಿರಿಯಾನಿ ಎಂಬಷ್ಟು ಹೆಸರು ಒಂದಕ್ಕೊಂದು ಬೆಸೆದುಕೊಂಡಿದೆ. ಇಲ್ಲಿನ ಬಿರಿಯಾನಿಯ ಘಮವೇ ಬೇರೆ. ಢಾಳಾಗಿ ಹಾಕುವ ಕೇಸರಿ, ಗುಲಾಬಿ ನೀರು ಹಾಕಿ ಮಾಡುವ ಬಿರಿಯಾನಿಯಿದು. ಪಕ್ಕಾ ಹಾಗೂ ಕಚ್ಚಾ ಎಂಬ ಎರಡು ವಿಧಗಳಲ್ಲಿ ಇಲ್ಲಿ ಬಿರಿಯಾನಿ ಲಭ್ಯವಾಗುತ್ತದೆ. ಎರಡೂ ಮಾಡುವ ಬಗೆ ಬೇರೆ ಬೇರೆ.
3. ಲಖ್ನೌ ಬಿರಿಯಾನಿ: ಲಖನೌನ ರಾಜ ಮನೆತನದಿಂದ ದಾಟಿಕೊಂಡು ಬಂದ ಬಿರಿಯಾನಿ ಶೈಲಿಯಿದು. ಮುಘಲ್ ರಾಜರ ಅರಮನೆಗಳಿಗೆ ಬಿರಿಯಾನಿ ಹೇಗೆ ಬಂತು ಎಂಬುದಕ್ಕೆ ನೂರಾರು ಕಥೆಗಳಿವೆ. ತನ್ನದೇ ಆದ ಘಮದ, ಈ ಲಖನೌನ ಬಿರಿಯಾನಿ ಉಳಿದೆಲ್ಲ ಬಿರಿಯಾನಿಗಳಿಗಿಂತ ಬಹಳ ಮೆತ್ತಗಿರುತ್ತದೆ.
4. ತಲಚೇರಿ ಬಿರಿಯಾನಿ: ಕೇರಳದ ತಲಚೇರಿಯ ಮಲಬಾರ್ ಬಿರಿಯಾನಿ ಕೂಡಾ ಬಿರಿಯಾನಿ ಪ್ರಿಯರ ಲಿಸ್ಟ್‌ನಲ್ಲಿ ಯಾವಾಗಲೂ ಇರುತ್ತದೆ. ಈ ಬಿರಿಯಾನಿ ಸಾಕಷ್ಟು ಪ್ರಮಾಣದಲ್ಲಿ ಗೋಡಂಬಿಯನ್ನೂ, ಒಣದ್ರಾಕ್ಷಿಯನ್ನೂ, ಸೋಂಪ್ನೂ ಸೇರಿಸಿಕೊಂಡು ಬೇರೆಯದೇ ಬಗೆಯ ರುಚಿಯನ್ನೂ ಘಮವನ್ನೂ ತನ್ನೊಳಗೆ ಸೇರಿಸಿರುತ್ತದೆ.
5. ಸಿಂಧಿ ಬಿರಿಯಾನಿ: ಸಿಂಧಿಗಳು ಮಾಡುವ ಬಿರಿಯಾನಿಗೆ ಅದರದ್ದೇ ಆದ ರುಚಿಯಿದೆ. ಈ ಬಿರಿಯಾನಿಯನ್ನು ಮಾಡಲು ಸಾಕಷ್ಟು ಬೀಜಗಳನ್ನೂ ಒಣ ಹಣ್ಣುಗಳನ್ನೂ ಹಾಕಲಾಗುತ್ತದೆ. ಕೊತ್ತಂಬರಿ ಸೊಪ್ಪು, ಪುದಿನ, ಈರುಳ್ಳಿ ಹಾಗೂ ಮಸಾಲೆಗಳನ್ನೂ ಇದಕ್ಕೆ ಧಾರಾಳವಾಗಿ ಹಾಕಲಾಗಿರುತ್ತದೆ. ಹುಳಿಯಾದ ಮೊಸರನ್ನು ಈ ಬಿರಿಯಾನಿ ತಯಾರಿಸುವಾಗ ಬಳಕೆ ಮಾಡಲಾಗುತ್ತದೆ. ಹಾಗಾಗಿ ಇದಕ್ಕೊಂದು ಬೇರೆಯದೇ ರುಚಿಯಿರುತ್ತದೆ.
6. ಕಾಶ್ಮೀರಿ ಬಿರಿಯಾನಿ: ಕಾಶ್ಮೀರಿ ಬಿರಿಯಾನಿಯ ಮೇಲೆ ಮೊಘಲ್ ಬಿರಿಯಾನಿಯ ಪ್ರಭಾವ ಸಾಕಷ್ಟಿದೆ. ಎಳೆ ಚಿಕನ್ ಹಾಗೂ ಹದವಾಗಿ ಬೆಂದ ಅನ್ನ, ಧಾರಾಳವಾಗಿ ಸುರಿದ ಒಣಹಣ್ಣುಗಳು, ಬೀಜಗಳು, ಹಣ್ಣುಗಳು, ಮಸಾಲೆ, ಇಂಗು ಎಲ್ಲವನ್ನೂ ಹಾಕಿ ಮಾಡುವ ವಿಶೇಷವಾದ ಸಿಹಿ ರುಚಿಯನ್ನೂ ಹೊಂದಿರುವ ಬಿರಿಯಾನಿಯಿದು.
7. ಗೋವಾ ಫಿಶ್ ಬಿರಿಯಾನಿ: ಗೋವಾಕ್ಕೆ ಪ್ರವಾಸ ಹೋದರೆ ಅಲ್ಲಿನ ಬಿರಿಯಾನಿ ರುಚಿ ಸವಿದು ಬರದವರಿಲ್ಲ. ಯಾಕೆಂದರೆ, ಬೀಚ್‌ನಲ್ಲಿ ಸುತ್ತಾಡಿ, ಮೀನಿನ ಬಿರಿಯಾನಿ ರುಚಿ ನೋಡದಿದ್ದರೆ ಹೇಗೆ ಹೇಳಿ. ಸೀಫುಡ್ ಇಷ್ಟಪಡುವ ಮಂದಿಗೆ ಗೋವಾದ ಫಿಶ್ ಬಿರಿಯಾನಿ ಖಂಡಿತ ಇಷ್ಟವಾಗದೆ ಇರದು.
ಇದನ್ನೂ ಓದಿ: Travel Tips: ಈ ಜನುಮವೇ ರುಚಿ ಸವಿಯಲು! ಕೇವಲ ತಿನ್ನಲಿಕ್ಕಾದರೂ ಈ ಜಾಗಗಳಿಗೆ ಪ್ರವಾಸ ಮಾಡಿ!