Site icon Vistara News

Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!

travel

ಸೋಲೋ ಪ್ರವಾಸವೆಂಬುದು ಸದ್ಯದ ಟ್ರೆಂಡ್‌ ಆದರೂ ಬಹಳಷ್ಟು ಮಂದಿಗೆ ಬಹಳಷ್ಟು ಸಂದರ್ಭಗಳಲ್ಲಿ ಒಬ್ಬರೇ ಪ್ರವಾಸ ಮಾಡುವುದು ಸಾಧ್ಯವಾಗುವುದಿಲ್ಲ. ಪ್ರವಾಸಕ್ಕೆ ಒಂದಿಬ್ಬರೋ ಅಥವಾ ಒಂದು ಗುಂಪೋ ಇದ್ದರೆ ಎಷ್ಟು ಚೆನ್ನಾಗಿತ್ತು ಅನಿಸುತ್ತದೆ. ಜೊತೆಗಾರರು ಇದ್ದಾಗ, ಏಕಾಕಿತನ ಕಾಡದೆ, ಅದ್ಭುತವಾಗಿ ಸಮಯ ಕಳೆಯಬಹುದು ಎಂಬುದೂ ನಿಜವೇ. ಆದರೆ, ಜೊತೆಗಾರರು ಎಂಥವರು ಎಂಬುದರ ಮೇಲೆ ನಿಮ್ಮ ಇಡೀ ಪ್ರವಾಸ ನಿಂತಿರುತ್ತದೆ. ʻಹೇ ನಿನ್ನ ಜೊತೆ ನಾನೂ ಪ್ರವಾಸಕ್ಕೆ ಬರುತ್ತೇನೆʼ ಎಂದು ನಮ್ಮ ಬೆನ್ನ ಹಿಂದೆ ಬೀಳುವ ಮಂದಿ ನಿಜಕ್ಕೂ ನಮ್ಮದೇ ಮಾದರಿಯ ಪ್ರವಾಸ ಪ್ರಿಯರಾ ಎಂಬುದನ್ನು ನಾವು ಮೊದಲೇ ಯೋಚಿಸಬೇಕಾಗುತ್ತದೆ. ಹಾಗಾಗಿ ಪ್ರವಾಸ ಹೊರಡುವ ಮುನ್ನ ಎಂಥ ಮಂದಿಯನ್ನು ನಮ್ಮ ಪ್ರವಾಸದಿಂದ ದೂರ ಇರಿಸಬೇಕು ಎಂಬ ಬಗ್ಗೆ ನೋಡೋಣ.

೧. ಹೋಗುವ ಸ್ಥಳದ ಬಗ್ಗೆ ಎಲ್ಲ ಮಾಹಿತಿಯೂ ತಿಳಿದ ಮಂದಿ ಇರುತ್ತಾರೆ. ಇಡೀ ಪ್ರವಾಸಲ್ಲಿ, ಏನೇ ವಿಚಾರ ಬಂದರೂ ಎಲ್ಲಿಗೇ ಹೋದರೂ ಅವರು ಇದೆಲ್ಲ ನನಗೆ ಗೊತ್ತು ಎಂಬ ಮನೋಸ್ಥಿತಿಯಲ್ಲೇ ಇರುತ್ತಾರೆ. ಅವರು ಚೆನ್ನಾಗಿ ಓದಿ ತಿಳಿದುಕೊಂಡಿರುವವರೇ ಇರಬಹುದು, ಆದರೆ, ಇಂಥವರ ಜೊತೆ ಹೋದರೆ, ಪ್ರವಾಸದ ಸಣ್ಣ ಸಣ್ಣ ಖುಷಿಗಳು ದಕ್ಕದೆ, ಪ್ರತಿಯೊಂದಕ್ಕೂ ನೀವು ಅವರನ್ನೇ ಅವಲಂಬಿಸಬೇಕಾಗಿ ಬಂದು ನೆಮ್ಮದಿ ಹಾಳಾಗುತ್ತದೆ.

೨. ಕೆಲವರಿರುತ್ತಾರೆ, ಅವರಿಗೆ ಪ್ರವಾಸ ಎಂದರೆ ಕುಡಿಯೋದು. ಅವರು ಎಲ್ಲೇ ಉಳಿದುಕೊಂಡರೂ ಅಲ್ಲಿ ಬಾಟಲಿ ಹರವಿಬಿಡುತ್ತಾರೆ. ಸಮುದ್ರ ತೀರವೋ ಬಾರ್‌ಗಳೋ ಸಿಕ್ಕಿದರೆ ಮುಗೀತು. ಅವರಿಗೆ ಹಬ್ಬ. ಅವರ ಜೊತೆ ಹೋದರೆ ಕುಡಿತ ಬಿಟ್ಟರೆ ಬೇರೆ ಯಾವುದೇ ಮನರಂಜನೆ ಇರುವುದಿಲ್ಲ. ಹೊಸ ಜಾಗವೊಂದನ್ನು ನೋಡುವುದು, ಹೊಸ ಸಾಹಸಗಳನ್ನು ಮಾಡುವುದು, ಅಲ್ಲಿನ ಹೊಸ ರುಚಿಗಳನ್ನು ಟ್ರೈ ಮಾಡುವುದು, ಕಲೆ, ಸಂಸ್ಕೃತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಎಲ್ಲವೂ ನಿಮಗಿನ್ನು ಕೇವಲ ಕನಸಾದೀತು. ಎಚ್ಚರ.

೩. ಇನ್ನೂ ಕೆಲವರಿರುತ್ತಾರೆ. ಹುಟ್ಟಿದ ಮೇಲೆ ನೆಲದಲ್ಲಿ ಕಾಲೇ ಇಟ್ಟಿಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಾರೆ. ಎಲ್ಲೋ ರಸ್ತೆಯಲ್ಲಿ ೧೦ ನಿಮಿಷ ನಡೆದು ಹೋಗುತ್ತಿದ್ದರೆ ಸುಸ್ತಾಗುತ್ತಾರೆ. ಇನ್ನೆಲ್ಲೋ ಒತ್ತೊತ್ತಾದ ಜನಸಂದಣಿಯಲ್ಲಿ ಹೆಜ್ಜೆ ಹಾಕಬೇಕೆಂದರೆ ಕುಯ್ಯೋ ಮುರ್ರೋ ಎಂದು ಆಕಾಶ ಭೂಮಿ ಒಂದು ಮಾಡುತ್ತಾರೆ. ಇಂತಹ ಡ್ರಾಮಾ ಕ್ವೀನ್‌ /ಕಿಂಗ್‌ಗಳ ಜೊತೆ ತಿರುಗಾಡುವುದೇ ಹಿಂಸೆ ಅನಿಸತೊಡಗುತ್ತದೆ.

೪. ಬೆಳಗ್ಗೆ ತನ್ನ ಮನೆಯಲ್ಲಿ ಭಾನುವಾರದ ರಜಾದಿನದಂದು ಎದ್ದಂತೆ ನಿಧಾನಕ್ಕೆ ಸೂರ್ಯನ ಪ್ರಖರ ಬಿಸಿಲು ಮುಖಕ್ಕೆ ಬಿದ್ದಾಗಲಷ್ಟೇ ಏಳುವ ಮಂದಿಯ ಜೊತೆಗೂ ಪ್ರವಾಸ ಕಷ್ಟ. ಹೊಸತೊಂದು ಜಾಗಕ್ಕೆ ಬಂದಾಗ ಬೇಗ ಎದ್ದು, ಒಂದು ವಾಕ್‌ ಮಾಡುವುದು ಅಥವಾ ಸೂರ್ಯೋದಯವನ್ನು ಕಣ್ತುಂಬಿಕೊಳ್ಳುವುದು, ಚಾರಣ ಮಾಡುವುದು ಇವನ್ನೆಲ್ಲ ಇಂಥವರು ನಿಮ್ಮ ಜೊತೆಗೆ ಇದ್ದರೆ ಮಾಡಲಾಗುವುದೇ ಇಲ್ಲ. ಇವರು ನಿಧಾನಕ್ಕೆ ಎದ್ದು ಹಾಸಿಗೆಗೇ ಚಹಾ ತರಿಸಿಕೊಂಡು, ಆಮೇಲೆ ಹಲ್ಲುಜ್ಜಿ ತಿಂಡಿಗೆ ಆರ್ಡರ್‌ ಕೊಟ್ಟು, ಕಾಲು ಚಾಚಿ, ಪಟ್ಟಾಂಗ ಹೊಡೆಯುತ್ತಾ ತಿಂಡಿ ತಿನ್ನುವಷ್ಟರಲ್ಲಿ ಸೂರ್ಯ ತನ್ನ ಅರ್ಧ ದಾರಿ ಕ್ರಮಿಸಿರುತ್ತಾನೆ. ಇಂಥವರೊಂದಿಗೆ ನಿಮ್ಮ ಪ್ರವಾಸ ಫ್ಲಾಪ್!‌

೫. ಕೆಲವರು ಎಲ್ಲೇ ಹೋಗಲಿ ಬರಲಿ ಕೆಲಸದ ಬ್ಯುಸಿಯಲ್ಲೇ ಇರುತ್ತಾರೆ. ಚಂದದ ಜಾಗದಲ್ಲಿ ಕೂತು ಫೋನ್‌, ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುತ್ತಿರುತ್ತಾರೆ. ಅಥವಾ ಪದೇ ಪದೇ ಬರುವ ಕಾಲ್‌ಗಳಲ್ಲಿ ಕಚೇರಿಯ ಮಂದಿಯೊಂದಿಗೆ ಚರ್ಚೆ, ಮಾತುಕತೆ ನಡೆಸುತ್ತಲೇ ಇರುತ್ತಾರೆ. ಇಂಥವರಿದ್ದರೂ, ನಿಮ್ಮ ಇಡೀ ಪ್ರವಾಸ ಅಂದಗೆಡುತ್ತದೆ.

ಇದನ್ನೂ ಓದಿ: Visa free countries | ವೀಸಾ ಇಲ್ಲದೆ ಭಾರತೀಯರಿನ್ನು 60 ದೇಶಗಳಿಗೆ ಹೋಗಬಹುದು!

೬. ಎಂಥ ಜಾಗಕ್ಕೆ ಹೋದರೂ ಉತ್ಸಾಹವಿಲ್ಲದಂತೆ ನೀರಸವಾಗಿರುವ ಮಂದಿಯೂ ಇರುತ್ತಾರೆ. ಇವರು ಹೆಚ್ಚು ಮಾತನಾಡುವುದಿಲ್ಲ. ಖುಷಿಯನ್ನು ಪ್ರಕಟಿಸುವುದೂ ಇಲ್ಲ. ಇಂಥವರೊಂದಿಗೂ ಪ್ರವಾಸ ಕಷ್ಟ.

೭. ಕೆಲವರಿಗೆ ಏನು ಮಾಡಲೂ ಭಯ. ಏನೇ ಹೊಸ ಯೋಜನೆ ಹಾಕಿಕೊಂಡರೂ ಇವರು ಮಧ್ಯದಲ್ಲಿ ಬಾಯಿ ಹಾಕಿ ಭಯ ವ್ಯಕ್ತಪಡಿಸುತ್ತಾರೆ. ಯಾರಾದರೂ ಹೊಸಬರು ಸಿಕ್ಕರೆ ಮಾತನಾಡಿದರೆ ಅವರ ಮೇಲೆ ಅನುಮಾನ, ರಾತ್ರಿ ರಸ್ತೆಯಲ್ಲಿ ನಡೆದು ಹೋಗಲು ಭಯ, ಡ್ರೈವರ್‌ ಸ್ವಲ್ಪ ಹೆಚ್ಚು ಮಾತಾಡಿದನೆಂದರೆ ಅವನ ಮೇಲೆ ಸಂಶಯ… ಹೀಗೆ ಪ್ರತಿಯೊಂದೂ ಅವರಿಗೆ ಸಹಜವಾಗಿ ಕಾಣುವುದೇ ಇಲ್ಲ. ಇಂಥವರೊಂದಿಗೂ ಪ್ರವಾಸ ಕಷ್ಟ.

೮. ಇನ್ನೂ ಕೆಲವರಿರುತ್ತಾರೆ. ತಾವು ಹೋದ ಜಾಗದ ಬಗ್ಗೆ ಫೇಸ್‌ಬುಕ್/ ಇನ್‌ಸ್ಟಾದಲ್ಲಿ ಅಪ್‌ಡೇಟ್‌ ಮಾಡದಿದ್ದರೆ ಬದುಕಿದ್ದೇ ವ್ಯರ್ಥ ಎಂಬಂತೆ ಆಡುತ್ತಾರೆ. ಹೋದ ಹೋಟೇಲು, ತಿಂದ ಜಾಗ, ನಿಂತ, ನಡೆದ ಪ್ರತಿಯೊಂದು ವಿಷಯವೂ ಸಾಮಾಜಿಕ ಜಾಲತಾಣದಲ್ಲಿ ಕ್ಷಣಕ್ಷಣಕ್ಕೆ ಅಪ್‌ಡೇಟ್‌ ಆಗುತ್ತಿರುತ್ತದೆ. ಇಂಥವರು ಜೊತೆಗಿದ್ದರೆ ಬಲುಕಷ್ಟ.

೯. ಫೋಟೋ ಹುಚ್ಚಿನ ಮಂದಿಯೂ ಇರುತ್ತಾರೆ. ಎಲ್ಲೇ ಹೋದರೂ ಬಂದರೂ ಇವರಿಗೆ ಫೋಟೋಗಳಷ್ಟೇ ಬೇಕಾಗಿರುತ್ತದೆ. ಹೋದ ತಕ್ಷಣ ನಿಂತು ನಾನಾ ಭಂಗಿಯ ಪೋಸ್‌ ಕೊಟ್ಟು, ಅದು ತನ್ನ ಅಲೋಚನೆಗೆ ತಕ್ಕ ಹಾಗೆ ಬರುವವರೆಗೆ ಬಿಡದೆ ಕ್ಲಿಕ್ಕಿಸುತ್ತಿರುತ್ತಾರೆ. ಅದಕ್ಕಾಗಿ ಅಮೋಘವಾಗಿ ರೆಡಿಯಾಗಿ, ಸೆಲ್ಫಿಗಳನ್ನೇ ತೆಗೆಯುತ್ತಾ, ಹೋದ ಜಾಗ ಯಾವುದು ಎಂಬ ಬಗ್ಗೆಯೂ ಅವರಿಗೆ ಕುತೂಹಲ ಇರದ ಹಾಗೆ ವರ್ತಿಸುತ್ತಾರೆ. ಇಂಥವರೊಂದಿಗೆ ಎಷ್ಟು ಕಷ್ಟ ಯೋಚಿಸಿ.

೧೦. ಜೋಡಿ ಹಕ್ಕಿಗಳಂತೆ ಸದಾ ಪ್ರೀತಿಯಲ್ಲಿ ಮುಳುಗಿರುವ ಮಂದಿಯೂ ಗುಂಪಿನಲ್ಲಿ ಕಷ್ಟ. ಅವರು, ಮಾತಿಗೊಮ್ಮೆ ಲವ್‌ ಯೂ ಹೇಳಿಕೊಂಡು, ತನ್ನ ಹುಡುಗಿಗೆ ಕಾಲು ಉಳುಕಿದರೆ, ತೊಡೆಯ ಮೇಲೆ ಕೂರಿಸಿಕೊಂಡು ಮಗುವಿನಂತೆ ನೋಡಿಕೊಳ್ಳುತ್ತಾ, ಹೋದಲ್ಲಿ ಬಂದಲ್ಲಿ ಇಂಥದ್ದನ್ನೇ ಪ್ರದರ್ಶಿಸುತ್ತಾ ಸುತ್ತಲಿನವರನ್ನು ಮುಜುಗರಕ್ಕೀಡು ಮಾಡುತ್ತಿರುತ್ತಾರೆ. ಇಂಥವರು ಗುಂಪಿನಲ್ಲಿ ಹೋಗುವ ಬದಲು ಇಬ್ಬರೇ ಹೋಗುವುದು ಉತ್ತಮ.

ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!

Exit mobile version