ಮಳೆಗಾಲ (Travel Tips) ಜೋರಾಗಿದೆ. ಎಲ್ಲ ನದಿಗಳೂ ಭೋರ್ಗರೆಯುತ್ತಿವೆ. ಯಾವುದೋ ಬೆಟ್ಟದ ತುದಿಯಿಂದ, ಗುಡ್ಡದ ಅಂಚಿನಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುವ ಉತ್ಸಾಹ ನಿಮಗಿದೆ. ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಗಾಡಿ ಹತ್ತಿದ ಸ್ವಲ್ಪವೇ ಹೊತ್ತಿನಲ್ಲಿ ತಲೆನೋವು, ತಲೆ ಸುತ್ತು, ಹೊಟ್ಟೆ ತೊಳೆಸುವುದು, ವಾಂತಿ… ದೇವರೇ! ಒಂದೆರಡೇ ಅಲ್ಲ ನಿಮ್ಮ ಅವಸ್ಥೆ. ಮೋಷನ್ ಸಿಕ್‌ನೆಸ್, ಟ್ರಾವೆಲ್ ಸಿಕ್‌ನೆಸ್ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಉಳಿದವರಿಗೆ ಅದರ ನೋವು ತಿಳಿಯುವುದಿಲ್ಲ, ನೋವಾದವರಿಗೆ ತಡೆಯಲಾಗುವುದಿಲ್ಲ!
ಪ್ರಯಾಣದ ಅಸ್ವಸ್ಥತೆ ಕೇವಲ ಬಸ್ಸು, ಕಾರಿನ ಪ್ರವಾಸದಲ್ಲೇ ಬರಬೇಕೆಂದಿಲ್ಲ. ಹಡಗು, ರೈಲು, ವಿಮಾನಗಳಿಂದ ಹಿಡಿದು ಯಾವುದೇ ವಾಹನದ ಮೂಲಕ ಪ್ರಯಾಣಿಸಿದರೂ ಹೊಟ್ಟೆಯಲ್ಲಿ ತೌಡು ಕುಟ್ಟುವುದಕ್ಕೆ ಶುರು. ಅದರಲ್ಲೂ ಹೋಗುವ ದಾರಿ ಹಾವಿನಂತೆ ಸಾಗುವುದಾದರೆ, ಅವರ ಅವಸ್ಥೆ ಶತ್ರುಗಳಿಗೂ ಬೇಡ. ಅಲ್ಲಿಯವರೆಗೆ ನಗುನಗುತ್ತ ಇದ್ದವರು ಇದ್ದಕ್ಕಿದ್ದಂತೆ ಹೈರಾಣಾಗಿ ಹೋಗುತ್ತಾರೆ. ಕೆಲವರು ಮಾತ್ರೆಯೊಂದನ್ನು ನುಂಗಿ ಗಪ್ಪಾಗಿ ಕೂತರೆ, ಹಲವರಿಗೆ ಅದನ್ನು ಸೇವಿಸಿದರೂ ಹೊಟ್ಟೆಯೊಳಗೆ ಭೂಮಿ ತಿರುಗುವುದು ತಪ್ಪುವುದಿಲ್ಲ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚಿನ ತಾಪತ್ರಯವಿಲ್ಲದೆ ಸುಲಲಿತವಾಗಿ ಪ್ರಯಾಣದ ಸುಖವನ್ನು ಅನುಭವಿಸುವುದಕ್ಕೆ ಸಾಧ್ಯವಿದೆ.
ಆಸನ ಯಾವುದು?
ಇಲ್ಲಿಂದಲೇ ನಿಮ್ಮ ಸುಖಕರ ಪ್ರಯಾಣದ ಸಿದ್ಧತೆ ಆರಂಭವಾಗುತ್ತದೆ. ಕಾರಿನಲ್ಲಿ ಪ್ರಯಾಣವಾದರೆ ಮುಂದಿನ ಸೀಟ್ ಮಾತ್ರವೇ ನಿಮ್ಮದು. ಹಿಂದಿನ ಆಸನಗಳಲ್ಲಿ ಕುಲುಕಾಟ ಹೆಚ್ಚಿರುವುದರಿಂದ ಹೊಟ್ಟೆ ತೊಳೆಸುವ ಸಾಧ್ಯತೆ ಅಧಿಕ. ಬಸ್ಸಿನಲ್ಲಿ ಮಧ್ಯಮ ಆಸನಗಳಿಗಿಂತ ಹಿಂದೆ ಹೋಗಬೇಡಿ. ಅದರಲ್ಲೂ ಗಾಲಿ ಮೇಲಿನ ಆಸನಗಳು ನಿಮಗಲ್ಲವೇ ಅಲ್ಲ. ವಿಮಾನದಲ್ಲಾದರೆ ರೆಕ್ಕೆ ಮೇಲಿನ ಆಸನಗಳನ್ನು ಆಯ್ದುಕೊಳ್ಳಿ.
ದೃಷ್ಟಿ ಕೀಲಿಸಿ
ಕಿಟಕಿಯ ಪಕ್ಕದ ಆಸನಗಳು ಎಲ್ಲರಿಗೂ ಇಷ್ಟ. ಆದರೆ ದಾರಿಯಲ್ಲಿ ನಮ್ಮೊಂದಿಗೇ ಓಡುತ್ತಿರುವ ವಸ್ತುಗಳನ್ನು ದಿಟ್ಟಿಸಿದರೆ, ಹೊಟ್ಟೆಯಲ್ಲೂ ಇಲಿಗಳ ಓಡಾಟ ಆರಂಭವಾಗುತ್ತದೆ. ಹಾಗಾಗಿ ಸಾಧ್ಯವಾದರೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರ, ದಿಗಂತ… ಹೀಗೆ ಸ್ತಿರವಾಗಿರುವ ಯಾವುದಾದರೂ ವಸ್ತುವಿನತ್ತ ಕಣ್ಣು ಕೀಲಿಸಿ. ಮೊಬೈಲ್ ನೋಡುವುದು, ಓದುವುದು ಬೇಡ. ಬದಲಿಗೆ ಕಣ್ಣು ಮುಚ್ಚಿಕೊಂಡು ನಿಮ್ಮಿಷ್ಟ ಹಾಡು ಹೇಳುವುದು ಒಳ್ಳೆಯ ಕ್ರಮ.
ತಾಜಾ ಗಾಳಿ
ಹವಾನಿಯಂತ್ರಣ ಇದ್ದರೆ, ಕಿಟಕಿ ಮುಚ್ಚಿದ್ದರೆ ಹಲವರಿಗೆ ಹೊಟ್ಟೆಯೆಲ್ಲ ಮೊಗುಚುತ್ತದೆ. ನೀವು ಕುಳಿತಿದ್ದೆಡೆಗೆ ತಾಜಾ ಗಾಳಿ ಇರುವಂತೆ ನೋಡಿಕೊಳ್ಳಿ. ಬಸ್ಸು, ಕಾರುಗಳಲ್ಲಿ ಕಿಟಕಿ ತೆರೆಯುವುದು ಸರಿ. ವಿಮಾನದಲ್ಲೇನು ಮಾಡುವುದು ಎಂದು ಕೇಳಬಹುದು. ವೆಂಟ್‌ಗಳ ತೀವ್ರತೆ ಕಡಿಮೆ ಮಾಡಿ, ಅವುಗಳು ನೇರವಾಗಿ ನಿಮಗೇ ತಾಗುವಂತೆ ಇರಿಸಿಕೊಳ್ಳಿ. ಗಾಳಿಯ ಓಡಾಡ ಹೆಚ್ಚಿದ್ದಷ್ಟೂ ಹೊಟ್ಟೆಯಲ್ಲಿ ತಳಮಳ ಕಡಿಮೆಯಾಗುತ್ತದೆ.
ಆಹಾರ
ಹೊರಡುವ ಮುನ್ನ ಭೂರಿ ಭೋಜನವನ್ನು ಯಾರಾದರು ಬಿಟ್ಟಿ ಕೊಟ್ಟರೂ ಮಾಡಬೇಡಿ! ಆಹಾರ ಲಘುವಾಗಿರಲಿ. ಎಣ್ಣೆ, ಮಸಾಲೆ, ಖಾರದ ತಿನಿಸುಗಳು ಬೇಡ. ಹಣ್ಣುಗಳು, ದೋಸೆ-ಚಪಾತಿಯಂಥ ಲಘುವಾದ ತಿನಿಸುಗಳು ಸಾಕು. ನೀರನ್ನು ಯಥೇಚ್ಛವಾಗಿ ಕುಡಿಯಿರಿ. ಆಲ್ಕೋಹಾಲ್ ಮತ್ತು ಕೆಫೇನ್ ಸೇವನೆ ಖಂಡಿತ ಬೇಡ.
ವಿರಾಮ ತೆಗೆದುಕೊಳ್ಳಿ
ರಸ್ತೆ ಪ್ರಯಾಣವಾದರೆ, ವಾಹನ ನಿಮ್ಮದೇ ಆದರೆ, ನಡುವಿಗೆ ವಿರಾಮ ತೆಗೆದುಕೊಳ್ಳಿ. ಇದರಿಂದ ತಾಜಾ ಗಾಳಿಗೆ ಬಂದಂತೆಯೂ ಆಗುತ್ತದೆ, ಕೈ-ಕಾಲುಗಳಿಗೆ ಸ್ವಲ್ಪ ಚಲನೆ ದೊರೆತಂತೆಯೂ ಆಗುತ್ತದೆ. ನಡೆಯುವಾಗ ಚೆನ್ನಾಗಿ ಸ್ಟ್ರೆಚ್ ಮಾಡಿ. ಗಮ್ಯ ತಲುಪುವುದು ಕೊಂಚ ತಡವಾದರೂ, ನೆಮ್ಮದಿಯ ಪ್ರಯಾಣ ನಿಮ್ಮದಾಗುತ್ತದೆ.
ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!
ಮನೆಮದ್ದುಗಳು
ಭಾವನಾ ಶುಂಠಿ ಅಥವಾ ಪೆಪ್ಪರ್‌ಮಿಂಟ್‌ಗಳು ಈ ನಿಟ್ಟಿನಲ್ಲಿ ಸಹಕಾರಿ. ಶುಂಠಿ ಅಥವಾ ಕ್ಯಾಮೊಮೈಲ್ ಚಹಾ, ನಿಂಬೆಹಣ್ಣಿನ ಕ್ಯಾಂಡಿ ಮುಂತಾದವು ಹೊಟ್ಟೆ ತೊಳೆಸುವ ಅನುಭವವನ್ನು ನಿಯಂತ್ರಣಕ್ಕೆ ತರುತ್ತವೆ. ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದು, ಅದರ ಸಿಪ್ಪೆಯನ್ನೊಮ್ಮೆ ಉದುರಿನಲ್ಲಿ ಚುಚ್ಚಿದರೆ, ಸೊನೆಯ ಘಮ ಬರುತ್ತದೆ. ಇದನ್ನೆ ಮೂಸುತ್ತಿದ್ದರೆ ಹೊಟ್ಟೆಯಲ್ಲಿ ತಳಮಳ ಹುಟ್ಟುವುದಿಲ್ಲ. ಯಾವುದೇ ಸಾರಸತ್ವ ತೈಲದ ಒಂದೆರಡು ಹನಿಗಳನ್ನು ಕರ್ಚೀಫಿನಲ್ಲಿ ಹಾಕಿಕೊಂಡು, ಘಮ ತೆಗೆದುಕೊಳ್ಳುತ್ತಾ ಇರುವುದೂ ಪರಿಣಾಮಕಾರಿ.