ರಾತ್ರಿ ಹೊತ್ತಿನಲ್ಲಿ ಸಮುದ್ರ ತೀರಕ್ಕೆ ಹೋಗುವುದರಲ್ಲಿ ಒಂದು ಖುಷಿಯಿದೆ. ಕತ್ತಲ ರಾತ್ರಿಯಲ್ಲಿ ದಡಕ್ಕಪ್ಪಳಿಸುವ ಅಲೆಗಳ ನೋಡುತ್ತಾ ಸುಮ್ಮನೆ ಕೂರುವ ಸುಖವೇ ಬೇರೆ. ಕತ್ತಲೆಯಲ್ಲೂ ನಿಜದ ಬೆಳಕಿದೆ ಎಂದು ಅರಿವಾಗುವುದೇ ಅಲ್ಲಿ. ಆದರೆ, ಭಾರತದಲ್ಲಿ ಕೆಲವು ವಿಶೇಷ ಸಮುದ್ರಗಳಿವೆ, ಅಲ್ಲಿ ಕತ್ತಲೆಯಲ್ಲಿ ಅಲೆಗಳು ಮಿಂಚುತ್ತವೆ. ಕತ್ತಲೆಯಲ್ಲೂ ಬೆಳಕು ಚಿಮ್ಮಿಸುತ್ತವೆ. ಕತ್ತಲೆಯಲ್ಲಿ ಮಿರಮಿರ ಮಿಂಚುವ ಸಮುದ್ರ ತೀರಗಳಿವು. ಅವುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
1. ತಿರುವಾನ್ಮಿಯೂರ್ ಬೀಚ್, ಚೆನ್ನೈ: ತಮಿಳುನಾಡಿನ ಚೆನ್ನೈಯ ತಿರುವಾನ್ಮಿಯೂರ್ ಸಮುದ್ರ ತೀರ ಈ ಹಿನ್ನೆಲೆಯಲ್ಲಿ ಹೆಸರು ಮಾಡಿದ ಮೊದಲ ಬೀಚ್. ಇದು ಸೂರ್ಯೋದಯಕ್ಕೆ ಬಹಳ ಪ್ರಸಿದ್ಧ. 2019ರಲ್ಲಿ ಅಲೆಗಳು ಹೊಳೆಯುವ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಗಮನಿಸಿದ್ದು ಇಲ್ಲಿಯೇ. ಅಷ್ಟರವರೆಗೆ ಹೊಳೆಯ ಸಮುದ್ರ ತೀರಗಳ ಬಗ್ಗೆ ಭಾರತದ ಜಿನರಿಗೆ ಯಾವ ಮಾಹಿತಿಯೂ ಇರಲಿಲ್ಲ.
2. ಬೇತಾಳ್‌ಬಾಟಿಮ್ ಬೀಚ್, ಗೋವಾ: ಗೋವಾದ ಬೀಚ್‌ಗಳ ಬಗ್ಗೆ ಹೇಳಬೇಕಾ ಹೇಳಿ. ಇಲ್ಲಿ ರಾತ್ರಿಗಳೇ ಹೆಚ್ಚು ಹೊಳೆಯುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇಲ್ಲಿನ ಇನ್ನೊಂದು ಬೀಚ್ ಉಳಿದೆಲ್ಲ ಬೀಚ್‌ಗಳಿಗಿಂತ ಬೇರೆಯದೇ ಕಾರಣಕ್ಕೆ ಹೊಳೆಯುತ್ತದೆ. ಬಯೋಲ್ಯುಮಿನೆಸೆನ್ಸ್ ಕಾರದಿಂದ ಈ ಬೀಚ್ ಹಾಗೆ ಹೊಳೆಯುತ್ತಿದ್ದರೆ, ಈ ಅನುಭವ ಪಡೆಯುವವರಿಗೆ ನೋಡಲು ಎರಡು ಕಣ್ಣು ಸಾಲದು.
3. ಜುಹು ಬೀಚ್, ಮುಂಬೈ: ಮುಂಬೈನ ಜುಹು ಬೀಚ್ ಸಾಖಷ್ಟು ಕಾರಣಗಳಿಗೆ ಪ್ರಸಿದ್ಧ ಹಾಘೂ ಜನನಿಬಿಡ. ಇಲ್ಲಿನ ಬೀಚ್‌ಗಳು ಮಧ್ಯರಾತ್ರಿಯವರೆಗೂ ಜನರಿಂದ ತುಂಬಿಕೊಂಡಿರುತ್ತದೆ ಎಂದರೆ ಸುಳ್ಳಲ್ಲ. ಏಕೆಂದರೆ ನಗರದ ಬೀಚ್‌ಗಳು ಆ ನಗರದ ಮಂದಿಗೆ ನೀಡುವ ಅನುಭೂತಿಯನ್ನು ಯಾರೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕೆಲಸದ ನಂತರ ಮನಸ್ಸಿಗೊಂದು ರಿಲ್ಯಾಕ್ಸ್ ಬೇಕೆನಿಸಿದಾಗ ನೆನಪಾಗುವುದು ಬೀಚ್. ಇಲ್ಲೂ ಅಪರೂಪಕ್ಕೊಮ್ಮೆ ಅಲೆಗಳು ಈ ಪ್ರಕ್ರಿಯೆಯಿಂದ ಹೊಳೆಯುವುದುಂಟು. ನೀವು ಅದೃಷ್ಟವಂತರಾಗಿದ್ದರೆ, ಎಲ್ಲೋ ಏಕೆ, ನಿಮ್ಮದೇ ಜುಹು ಬೀಚ್‌ನಲ್ಲಿಯೇ ಹೊಳೆವ ಅಲೆಗಳನ್ನು ಕಣ್ತುಂಬಿಕೊಳ್ಳಬಹುದು.
4. ಮಟ್ಟು ಬೀಚ್, ಕರ್ನಾಟಕ: ಕಾಪು ಬೀಚ್‌ನಿಂದ ಮಲ್ಪೆ ಬೀಚ್ ಹಾದಿಯಲ್ಲಿ ಸಾಗುವಾಗ ಸಿಗುವ ಸುಮಾರು ೩೦ ಕಿಮೀ ಉದ್ದ್ದ ಬೀಚ್ ಇದೇ ಮಟ್ಟು ಬೀಚ್. ಶಾಂತವಾದ, ಜನಜಂಗುಳಿ ಇಲ್ಲದ ಬೀಚ್ ಇದಾಗಿದ್ದು ಇದು ತನ್ನ ಹೊಳೆವ ಅಲೆಗಳಿಗಾಗಿಯೇ ದೇಶಾದ್ಯಂತ ಸುದ್ದಿ ಮಾಡಿತ್ತು. ಇಲ್ಲಿ ಅತ್ಯದ್ಭುತ ಸೂರ್ಯಾಸ್ತವನ್ನೂ ನೋಡಬಹುದಾಗಿದ್ದು ಅದೃಷ್ಟವಿದ್ದರೆ ಹೊಳೆವ ಅಲೆಗಳ ಜೊತೆಗೊಂದು ಫೋಟೋ ತೆಗೆದುಕೊಂಡು ಬರಬಹುದು.
ಇದನ್ನೂ ಓದಿ: Travel Tips: ವಿಸಾ ಜಂಜಡವಿಲ್ಲದೆ ಈ ದೇಶಗಳಲ್ಲಿ ನೀವು ಸುತ್ತಾಡಿ ಬರಬಹುದು!
5೫. ಹ್ಯಾವ್ಲಾಕ್‌ಬೀಚ್, ಅಂಡಮಾನ್: ಹ್ಯಾವ್ಲಾಕ್ ದ್ವೀಪ ಅಥವಾ ಸ್ವರಾಜ್ ದ್ವೀಪ ಹೆಸರಿನ ಅಂಡಮಾನಿನ ದೀಪದಲ್ಲೂ ಕೂಡಾ ಹೊಳೆಯುವ ಅಲೆಗಳು ದರ್ಶನ ನೀಡುತ್ತವೆ. ಚಂದ್ರನಿಲ್ಲದ ರಾತ್ರಿಗಳಲ್ಲಿ ಈ ಬಯೋ ಇಲ್ಯುಮಿನಸ್ ಪರಿಣಾಮ ಹೆಚ್ಚು ಗಾಢವಾಗಿ ನಡೆಯುವುದರಿಂದ ಅಂಥ ದಿನಗಳಲ್ಲಿ ನೋಡಬಹುದು. ಸಮುದ್ರದಲ್ಲಿ ನಡೆಯುವ ಈ ಪ್ರಕ್ರಿಯೆಯಿಂದಾಗಿ ದಡಕ್ಕಪ್ಪಳಿಸುವ ಹೊಳೆವ ಅಲೆಗಳನ್ನು ಹೆಚ್ಚು ಸರಿಯಾಗಿ ನಡಬೇಕೆಂಬ ಆಸೆಯಿದ್ದರೆ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಇಲ್ಲಿಗೆ ಭೇಟಿಕೊಡಿ.
6. ಬಂಗಾರಂ ಬೀಚ್, ಲಕ್ಷದ್ವೀಪ: ಲಕ್ಷದ್ವೀಪದ ಸಮುದ್ರ ತೀರಗಲೇ ಆಕರ್ಷಕ. ಈ ನೀಲಿ ಹಸಿರು ಬಣ್ಣದ ಸಮುದ್ರ ರಾತ್ರಿಯಾದೊಡನೆ ಪಳಪಳ ಮಿಂಚುತ್ತವೆ. ಈ ಸಮುದ್ರತೀರದಲ್ಲಿ ವಿವಿಧ ಬಗೆಯ ವಾಟರ್ ಅಡ್ವೆಂಚರ್ ಸ್ಪೋರ್ಟ್ಸ್‌ಗಳೂ ಲಭ್ಯವಿವೆ. ಇವೆಲ್ಲವೂ ಎಲ್ಲ ಸಮುದ್ರ ತೀರಗಳಂತೆ ಇದ್ದರೂ, ಇಲ್ಲಿನ ಇನ್ನೊಂದು ವಿಶೇಷವೆಂದರೆ, ಈ ಸಮುದ್ರ ತೀರದ ಅಲೆಗಳು ರಾತ್ರಿ ಮಿಂಚಿನಂತೆ ಪಳಪಳನೆ ಹೊಳೆಯುತ್ತದೆ. ಸಾಗರದಲ್ಲಿರುವ ಫೈಟೋಪ್ಲಾಂಕ್ಟಾನ್ ಎಂಬ ಆಲ್ಗೆಯಿಂದಾಗಿ ಸಮುದ್ರ ಹೀಗೆ ಹೊಳೆಯುತ್ತದೆ.
ಇದನ್ನೂ ಓದಿ: Travel Tips: ನಿಮಗೆ ಹೀಗೆಲ್ಲ ಆಗುತ್ತಿದೆಯೇ? ಹಾಗಾದರೆ ನಿಮಗೆ ಪ್ರವಾಸದ ಅಗತ್ಯವಿದೆ!