Site icon Vistara News

Travel Tips: ಪ್ರವಾಸಪ್ರಿಯರೇ, ನಿಮ್ಮ ವಿಮಾನ ಪ್ರಯಾಣ ಆರಾಮದಾಯಕವಾಗಬೇಕಿದ್ದರೆ ಈ ಟಿಪ್ಸ್‌‌ ಪಾಲಿಸಿ!

Travel Tips

ಪ್ರವಾಸ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಹುತೇಕರಿಗೆ ಪ್ರವಾಸ ಎಂದರೆ ಅದೊಂದು ಖುಷಿ, ಉಲ್ಲಾಸ, ಜಗತ್ತು ಮರೆಯುವಷ್ಟು ಸಂತಸ. ಹೊಸ ಜಾಗ, ಹೊಸ ಆಹಾರ, ಹೊಸ ಹೊಸ ಜನರು, ಏಕಾತನತೆಯ ಬದುಕಿಗೊಂದು ಹೊಸ ಉಲ್ಲಾಸದ ತಂಗಾಳಿಯ ಅನುಭವ ನೀಡುವುದು ಸುಳ್ಳಲ್ಲ. ಪ್ರವಾಸವೆಂಬ ಒಂದು ಸಣ್ಣ ಬದಲಾವಣೆ ಬದುಕಿನಲ್ಲಿ ಭಾರೀ ಬದಲಾವಣೆಯನ್ನೇ ತರಬಹುದು. ಆದರೆ, ಅನೇಕರಿಗೆ ಪ್ರವಾಸ ಇಷ್ಟವಾದರೂ, ಪ್ರವಾಸದ ಹಾದಿ ತ್ರಾಸದಾಯಕ. ಗಂಟೆಗಟ್ಟಲೆ ಪ್ರಯಾಣ ಮಾಡುವುದು ದೇಹಕ್ಕೆ ಒಗ್ಗದು. ಇನ್ನೂ ಕೆಲವರಿಗೆ ಪ್ರವಾಸದ ಮುಖ್ಯ ಭಾಗವಾದ ಪ್ರಯಾಣವೇ ಒಂದು ದಿವ್ಯ ಅನುಭೂತಿ. ಈಗೆಲ್ಲ ಪ್ರವಾಸ ಹಿಂದೆಂದಿಗಿಂತಲೂ ಅನುಕೂಲಕರವಾಗಿದೆ. ಕಚೇರಿಯ ಕೆಲಸವಿರಬಹುದು, ತಮ್ಮ ಪ್ರೀತಿ ಪಾತ್ರರ ಭೇಟಿಗೆ ಇರಬಹುದು ಅಥವಾ, ಹೊಸ ಸ್ಥಳವನ್ನು ಕಣ್ತುಂಬಿಕೊಂಡು ಬರಲಿರಬಹುದು, ಗೆಳೆಯರ ಜೊತೆ ಕೇವಲ ಒಂದು ಪಾರ್ಟಿಯಲ್ಲಿ ಭಾಗವಹಿಸಿ ಬರುವುದರಿಬಹುದು ಅಥವಾ ಕಚೇರಿಯ ಬಹುಮುಖ್ಯವಾದ ಮೀಟಿಂಗ್‌ಗೆ ಇರಬಹುದು, ಅಂದುಕೊಂಡ ತಕ್ಷಣ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹೊರಟು ನಿಲ್ಲಬಹುದು. ಟಿಕೆಟ್‌ ಕಾದಿರಿಸಿ ವಿಮಾನ ಹತ್ತುವ ಕೆಲಸ ಇಂದು ಬಹಳ ಮಂದಿಯ ಜೀವನದಲ್ಲಿ ನಿತ್ಯದ ಕೆಲಸವೇ ಆಗಿದೆ. ಮಧ್ಯಮವರ್ಗದ ಸಾಮಾನ್ಯರೂ ಕೂಡಾ ವಿಮಾನ ಪ್ರಯಾಣವನ್ನು ಆಯ್ಕೆ ಮಾಡಲಾರಂಭಿಸಿದ್ದಾರೆ. ವಿಮಾನ ಪ್ರಯಾಣ ಸುಖದಾಯಕ ಎಂಬ ಭ್ರಮೆ ಬಹಳಷ್ಟು ಮಂದಿಯಲ್ಲಿದೆ. ಆಗಸದಲ್ಲಿ ಹಾರಿ ಹೋಗಿ ಸಾವಿರಾರು ಕಿಮೀ ದೂರದ ಮತ್ತೊಂದು ಜಾಗದಲ್ಲಿ ಕೆಲವೇ ಗಂಟೆಗಳಲ್ಲಿ ತಲುಪಬಹುದಾದ ಈ ಸೇವೆ ನಿಜಕ್ಕೂ ಅದ್ಭುತವೇ ಆದರೂ, ಈ ಪ್ರಯಾಣ ಅಂದುಕೊಂಡ ಹಾಗೆ ಸುಖದಾಯಕವೇನೂ ಇಲ್ಲ. ಬಹಳ ಮಂದಿಗೆ ವಿಮಾನ ಪ್ರಯಾಣವೆಂದರೆ ಭಯ, ಇನ್ನೂ ಹಲವರಿಗೆ ಅದೊಂದು ಕಷ್ಟದಾಯಕವಾದ ಕೆಲಸ. ಯಾಕೆಂದರೆ ಸಮುದ್ರ ಮಟ್ಟದಿಂದ ಬಹಳಷ್ಟು ಮೇಲೆ ಸಂಚರಿಸುವ ವಿಮಾನ ಪ್ರಯಾಣದಲ್ಲೂ ಹಲವು ಅನನುಕೂಲತೆಗಳಿವೆ. ಬನ್ನಿ ವಿಮಾನ ಪ್ರಮಾಣ ಸುಖಕರವಾಗಿರಬೇಕಿದ್ದರೆ ಈ ಕೆಲವು ಟಿಪ್ಸ್‌ (travel tips) ನೆನಪಿನಲ್ಲಿಟ್ಟುಕೊಳ್ಳಿ

ಚೆನ್ನಾಗಿ ನೀರು ಕುಡಿಯಿರಿ

ಯಾವುದೇ ಪ್ರಯಾಣದ ಸಂದರ್ಭ ಚೆನ್ನಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ, ವಿಮಾನ ಪ್ರಯಾಣ ಮಾಡುವ ಸಂದರ್ಭ ನಿರ್ಜಲೀಕರಣ ಸಮಸ್ಯೆ ಬರುವ ಸಂಭವ ಹೆಚ್ಚು ಇರುತ್ತದೆ. ಹಾಗಂತ ಹೆಚ್ಚು ನೀರು ಕುಡಿಯುತ್ತಲೇ ಇರಬೇಕಾಗಿಲ್ಲ. ಸ್ವಲ್ಪ ಸ್ವಲ್ಪ ನೀರನ್ನು ಆಗಾಗ ಹೀರುತ್ತಿದ್ದರೆ ಪ್ರಯಾಣ ಸುಲಲಿತವಾಗಿರುತ್ತದೆ. ಬಹಳಷ್ಟು ಮಂದಿಗೆ ನಿರ್ಜಲೀಕರಣದ ಸಮಸ್ಯೆಯಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿ ಸಮಸ್ಯೆಗಳೂ ಉಂಟಾಗಬಹುದು. ಹೀಗಾಗಿ ಸ್ವಲ್ಪ ಸ್ವಲ್ಪ ನೀರು ಹೀರುತ್ತಿರಬಹುದು.

ಕಂಫರ್ಟ್‌ ಇರಲಿ

ಪ್ರಯಾಣದ ಸಂದರ್ಭ ಲಗೇಜ್‌ ಸಾಮಾನ್ಯ. ಅದನ್ನು ಎಳೆದು ಸಾಗಿಸುವ ವ್ಯವಸ್ಥೆ ಇದ್ದರೂ ಲಗೇಜುಗಳನ್ನು ಹಿಡಿದುಕೊಂಡು ಓಡಾಡುವುದರಿಂದ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಕೆಲವರಿಗೆ ಭುಜ, ಕುತ್ತಿಗೆಯ ಸಮಸ್ಯೆಗಳೂ ಆಗುವುದುಂಟು. ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕೂರುವ, ಕೈಕಾಲು ಅಲ್ಲಾಡಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಿಂದ ಪ್ರಯಾಣ ಕಷ್ಟವಾಗಬಹುದು. ಅದಕ್ಕಾಗಿ ಕಂಫರ್ಟ್‌ ಮುಖ್ಯ ಎಂಬುದು ನೆನಪಿಡಿ. ವಿಮಾನದಲ್ಲಿ ಕೂತಾಗ ಕುತ್ತಿಗೆಯ ದಿಂಬು (ನೆಕ್‌ ಪಿಲ್ಲೋ) ಇತ್ಯಾದಿಗಳ ಸಹಾಯ ಪಡೆಯಬಹುದು. ಜೊತೆಗೆ ಕೈಕಾಲುಗಳನ್ನು ಕೂತಲ್ಲಿಯೇ ಅಲ್ಲಾಡಿಸುವ ಸಣ್ಣ ಪುಟ್ಟ ವ್ಯಾಯಾಮಗಳನ್ನೂ ಮಾಡಿ.

ಹೆಚ್ಚು ಕಾಫಿ, ಆಲ್ಕೋಹಾಲ್‌ ಸೇವನೆ ಬೇಡ

ವಿಮಾನ ಪ್ರಯಾಣವಿದ್ದಾಗ ಕೆಫೀನ್‌ ಅಂಶದ ಆಹಾರಗಳನ್ನು ಕಡಿಮೆ ಸೇವಿಸಿ. ಕಾಫಿ, ಚಹಾ ಇತ್ಯಾದಿಗಳು, ಆಲ್ಕೋಹಾಲ್‌ ಸೇವನೆ ಇತ್ಯಾದಿ ಮಾಡಬೇಡಿ. ದ್ರವಾಹಾರ ಒಳ್ಳೆಯದು ಎಂದಾಕ್ಷಣ ಇಂತಹ ಪೇಯಗಳೂ ಒಳ್ಳೆಯದು ಎಂಬ ಭ್ರಮೆ ಬೇಡ. ಹೆಚ್ಚು ಸಕ್ಕರೆ ಇರುವಂಥಹ ಜ್ಯೂಸ್‌, ಶೇಕ್‌ಗಳೂ ಬೇಡ.

ಚರ್ಮವನ್ನು ಕಾಳಜಿ ಮಾಡಿ

ವಿಮಾನದೊಳಗೆ ಒಣ ಹವೆ ಇರುವುದರಿಂದ ಅನೇಕರಿಗೆ ಚರ್ಮ ಒಣಕಲಾಗುತ್ತದೆ. ಹಾಗಾಗಿ ವಿಮಾನ ಪ್ರಯಾಣಕ್ಕೂ ಮೊದಲು ಚರ್ಮದ ಕಾಳಜಿ ಮಾಡಿ. ಮಾಯ್‌ಶ್ಚರೈಸರ್‌ ಹಾಗೂ ಲಿಪ್‌ ಬಾಮ್‌ನ ಸಣ್ಣ ಡಬ್ಬವನ್ನು ಜೊತೆಗೆ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಕಿವಿ ನೋವಿಗೆ ಕಾಳಜಿ ಮಾಡಿ

ವಿಮಾನ ಪ್ರಯಾಣದ ಸಂದರ್ಭ ಬಹಳಷ್ಟು ಮಂದಿಯ ದೊಡ್ಡ ಸಮಸ್ಯೆ ಎಂದರೆ ಕಿವಿ ನೋವು. ವಿಮಾನ ರನ್‌ ವೇ ಮೇಲೆ ಓಡಿ ಟೇಕ್‌ ಆಫ್‌ ಆದ ತಕ್ಷಣ ಗುಂಯ್‌ಗುಡಲ್ಪಡುವ ಅನುಭವ. ಇದು ನೋವಿಗೂ ತಿರುಗುತ್ತದೆ. ಪ್ರಯಾಣವಿಡೀ ಕಿವಿಯೊಳಗೆ ಗಾಳಿ ತುಂಬಿಕೊಂಡಂತೆ ಅತೀವ ಹಿಂಸೆಯೆನಿಸುತ್ತದೆ. ಇದು ಯಾಕೆಂದರೆ ವಿಮಾನ ಮೇಲೇರಿದಾಗ ಕ್ಯಾಬಿನ್‌ ಒಳಗೆ ಉತ್ಪತ್ತಿಯಾಗುವ ಗಾಳಿಯ ಒತ್ತಡ. ಇದಕ್ಕಿರುವ ಒಂದೇ ಉಪಾಯವೆಂದರೆ ಚೂಯಿಂಗ್‌ ಗಮ್‌ ಜಗಿಯುವುದು. ಇದರಿಂದ ಕಿವಿಯ ಮೇಲೆ ಬೀಳುವ ಒತ್ತಡ ಕೊಂಚ ಹತೋಟಿಗೆ ಬರುತ್ತದೆ. ಯಾವುದಾದರೂ ಕ್ಯಾಂಡಿ, ಮಿಠಾಯಿಯನ್ನೂ ಇಟ್ಟುಕೊಳ್ಳಬಹುದು. ಏನೂ ಇಲ್ಲದಿದ್ದರೆ ಜಗಿಯುವಂಥ ಮುಖಭಾವ ಮಾಡಿಕೊಂಡರೆ ಇದರಿಂದ ಕೊಂಚ ನೆಮ್ಮದಿ ಸಿಗುತ್ತದೆ.

Exit mobile version