ಪ್ರವಾಸ ಮಾಡುವುದು ಯಾಕಾಗಿ ಹೇಳಿ? ಹಾಗಂತ ಪ್ರಶ್ನೆ ಕೇಳಿದರೆ ಒಬ್ಬೊಬ್ಬರ ಉತ್ತರ ಒಂದೊಂದು ಸಿಕ್ಕೀತು. ಬಹಳಷ್ಟು ಮಂದಿಗೆ ಪ್ರವಾಸ ಎಂದರೆ ಹೊಸ ಜಾಗವನ್ನು ನೋಡುವುದು ಹಾಗೂ ಒಂದಿಷ್ಟು ಮೋಜು ಮಸ್ತಿ ಮಾಡುವುದು. ಆದರೆ, ಇನ್ನೂ ಕೆಲವರು ಪ್ರವಾಸದ ನಿಜವಾದ ಆನಂದವನ್ನು ಬೇರೆ ಬೇರೆ ಭಾವಗಳಲ್ಲಿ ಹಿಡಿದಿಟ್ಟಾರು. ಅಂಥ ಕೆಲವರಿಗೆ ಪ್ರವಾಸವೆಂದರೆ, ನಮ್ಮನ್ನು ನಾವು ಕಂಡುಕೊಳ್ಳುವುದು, ನೋವನ್ನು ಮರೆಯುವುದು, ಬದಲಾವಣೆ ಕಾಣಲು, ಯಾವ ಬಂಧನವೂ ಇಲ್ಲದೆ ಸ್ವಾತಂತ್ರ್ಯದ ಸುಖವನ್ನು ಅನುಭವಿಸಲು, ಹೊಸ ಜನರೊಂದಿಗೆ ಬೆರೆಯಲು, ಬೇರೆ ಸಂಸ್ಕೃತಿ, ಜನಜೀವನದೊಳಗೆ ಅನಾಮಿಕನಾಗಿ ಕಳೆದುಹೋಗಲು, ಇತ್ಯಾದಿ ಇತ್ಯಾದಿ ವಿಸ್ತಾರವಾದ ಅರ್ಥ ಸಿಕ್ಕೀತು. ಆದರೆ, ಈ ಪ್ರವಾಸದ ಖುಷಿ ಅನುಭವಿಸಲು ಇನ್ನೂ ಒಂದು ಉತ್ತರ ಬಾಕಿ ಇದೆ. (food tourism) ಅದು ಆಹಾರ!
ಹೌದು. ಪ್ರವಾಸದ ನಿಜದ ಖುಷಿಗಳಲ್ಲಿ ಆಯಾ ಊರಿನ ವಿಶೇಷ ತಿಂಡಿ ತಿನಿಸುಗಳ ರುಚಿ ನೋಡುವುದರಲ್ಲೂ ಅಡಗಿದೆ. ಭಾರತದಲ್ಲಿ ಒಂದೊಂದು ಊರೂ ಕೂಡಾ ಒಂದೊಂದು ಬಗೆಯ ವಿಶೇಷ ತಿನಿಸುಗಳನ್ನು ತನ್ನಲ್ಲಿ ಅಡಗಿಸಿಟ್ಟೇ ಇರುತ್ತದೆ. ಅದರಲ್ಲೂ ಕೆಲವು ಊರುಗಳಿಗೆ ಕೇವಲ ತಿನ್ನಲಾದರೂ ಹೋಗಲೇಬೇಕು. ಹಾಗಾದರೆ ಬನ್ನಿ, ಸುಮ್ಮನೆ ತಿನ್ನಲಾದರೂ ಈ ಊರುಗಳಲ್ಲೊಮ್ಮೆ ತಿರುಗಾಡಿ ಬನ್ನಿ.
೧. ವಾರಣಾಸಿ: ವಾರಣಾಸಿ ಅಥವಾ ಕಾಶಿ ಎಂದರೆ ಕೇವಲ ವಿಶ್ವನಾಥನ ದರ್ಶನ ಗಂಗಾರತಿಯಷ್ಟೇ ಅಲ್ಲ. ಕಾಶಿಯನ್ನು ಪೂರ್ತಿಯಾಗಿ ಅನುಭವಿಸಬೇಕೆಂದರೆ ಅಲ್ಲಿನ ಗಲ್ಲಿಗಳಲ್ಲಿ ತಿರುಗಾಡಿ ತಿನ್ನಬೇಕು. ಕಾಶಿಯ ಗಲ್ಲಿಗಳಲ್ಲಿ ದೊರಕುವ ಗೋಲ್‌ಗಪ್ಪದಿಂದ ಹಿಡಿದು ಜಿಲೇಬಿಯವರೆಗೆ ಎಲ್ಲವೂ ರುಚಿ ನೋಡಿ ಅನುಭವಿಸುವಂಥದ್ದೇ. ಕಿಸೆಯಲ್ಲಿ ಚಿಲ್ಲರೆ ಕಾಸಿದ್ದರೂ ಸಾಕು, ಕಾಶಿಯ ಬೀದಿಗಳಲ್ಲಿ ಹೊಟ್ಟೆ ತುಂಬ ತಿಂದು ತೇಗಬಹುದು. ಗೋಲ್‌ಗಪ್ಪ, ಕಚೋಡಿ, ಟಮಾಟರ್ ಚಾಟ್, ಬಗೆಬಗೆಯ ಪರಾಠಾ, ಜಿಲೇಬಿಗಳು, ಪೂರಿ ಸಬ್ಜಿ, ದಮ್ ಆಲೂ, ಬಾಟಿ ಚೋಕಾ, ಆಲೂ ಟಿಕ್ಕಿ, ಕಾಲಾಕಂದ್, ಬಗೆಬಗೆಯ ಲಸ್ಸಿಗಳು, ರಬ್ಡೀ, ಕುಲ್ಫೀ, ಠಂಡೈ, ಬಾದಾಮ್ ಶರಬತ್ತು, ಗಲ್ಲಿಗಲ್ಲಿದ ದೇವಸ್ಥಾನಗಳು ಹಂಚುವ ರುಚಿಯಾದ ಖಿಚಡಿ ಪ್ರಸಾದ ಹೀಗೆ ಒಂದೇ ಎರಡೇ! ಕಾಶಿಯಲ್ಲಿ ತಿಂದು ಕುಡಿದು ಮಾಡಲು ಈ ನರಜನ್ಮ ಸಾಲದು ಎಂದರೂ ಉತ್ಪ್ರೇಕ್ಷೆಯಲ್ಲ. ಇಷ್ಟೆಲ್ಲ ತಿಂದ ಮೇಲೆ ಕಾಶಿಯ ಸ್ಪೆಷಲ್ ಬನಾರಸೀ ಪಾನ್ ಜಗಿಯದಿದ್ದರೆ, ಕಾಶಿಗೆ ಹೋಗಿದ್ದೇ ವೇಸ್ಟ್!
೨. ದೆಹಲಿ: ದೆಹಲಿಯಲ್ಲಿ ಏನಿದೆ ಮಹಾ ಎಂದಿರಾ? ಖಂಡಿತಾ ಹೀಗನ್ನಬೇಡಿ. ನಮ್ಮ ದೇಶದ ರಾಜಧಾನಿಯಲ್ಲಿ ಕುತುಬ್ ಮಿನಾರ್‌ನಿಂದ ಹಿಡಿದು ಸಂಸತ್ ಭವನದವರೆಗೆ ತಿರುಗಾಡಿಕೊಂಡು ದೆಹಲಿ ನೋಡಿದ್ದಾಯಿತು ಎಂದರೆ ಹೇಗೆ? ದೆಹಲಿಯ ರುಚಿ ನಿಜವಾಗಿ ಅರ್ಥವಾಗಬೇಕಾದರೆ, ಹಳೆ ದಿಲ್ಲಿಯ ಗಲ್ಲಿಗಳಲ್ಲಿ ಅಲೆದಾಡಬೇಕು. ಚಾಂದನಿ ಚೌಕ್‌ನ ಪಾರಾಠಾ ಗಲ್ಲಿಗಳಲ್ಲಿ ಅಲೆದಾಡಿ, ಅಲ್ಲಿನ ನೂರೆಂಟು ವರ್ಷಗಳ ಇತಿಹಾಸವಿರುವ ಪರಾಠಾ ಅಂಗಡಿಗಳಲ್ಲಿ ಬಗೆಬಗೆಯ ಪರಾಠಾ ತಿನ್ನಬೇಕು. ಅಷ್ಟೇ ಅಲ್ಲ, ಗೋಲ್‌ಗಪ್ಪದಂತಹ ಚಾಟ್‌ಗಳು, ರಬ್ಡಿ ಹಾಕಿದ ಜಿಲೇಬಿ, ಬಗೆಬಗೆಯ ಕುಲ್ಫೀಗಳು, ಬಾಸುಂದಿ ಹೀಗೆ ನಾನಾ ಬಗೆಯ ಬಾಯಲ್ಲಿ ನೀರೂರಿಸುವ ತಿನಿಸುಗಳಿಗೆ ದೆಹಲಿಗೆ ಒಮ್ಮೆಯಾದರೂ ಭೇಟಿ ಕೊಡದಿದ್ದರೆ ಹೇಗೆ?
೩. ಮುಂಬೈ: ಮುಂಬೈ ನಗರಿಯ ಇನ್ನೊಂದು ತೆರೆದುಕೊಳ್ಳುವುದು ಇಲ್ಲಿನ ಸ್ಟ್ರೀಟ್ ಫುಡ್‌ನಲ್ಲಿ. ಹೌದು. ಮುಂಬೈಗೆ ಶ್ರೀಮಂತರನ್ನೂ ಬಡವರನ್ನೂ ಒಂದೇ ತಕ್ಕಡಿಯಲ್ಲಿಡುವ ಅಪರೂಪದ ಗುಣವಿದೆ. ಇಲ್ಲಿ ಕಾಸಿದ್ದವರೂ ಕಾಸಿಲ್ಲದವರೂ ಹೊಟ್ಟೆ ತುಂಬ ಉಣ್ಣಬಹುದು. ಬಾಯಲ್ಲಿ ನೀರೂರಿಸುವ ವಡಾಪಾವ್, ಬಗೆಬಗೆಯ ಸ್ಯಾಂಡ್‌ವಿಚ್‌ಗಳು, ಫ್ರ್ಯಾಂಕಿಗಳು, ಫಲೂಡಾ, ಬಾಂಬಿಲ್ ಫ್ರೈ, ಮೋದಕಗಳು ಹೀಗೆ ಬಗೆಬಗೆಯ ತಿಂಡಿಗಳು ಬೀದಿಬದಿಯಲ್ಲಿ ಮಧ್ಯರಾತ್ರಿಯೂ ತಿನ್ನಬಹುದು. ಮುಂಬೈಯೆಂಬ ಸಮುದ್ರತೀರದ ನಗರಿಯ ನೈಟ್‌ಲೈಫಿನ ಸೊಬಗನ್ನು ನೋಡುತ್ತಾ, ಬಗೆಬಗೆಯ ರುಚಿಗಳನ್ನು ಹೊಟ್ಟೆಗಿಳಿಸುವ ಸುಖವೇ ಬೇರೆ.
(ಇನ್ನೂ ಹೆಚ್ಚಿನ ಪ್ರವಾಸೀ ತಾಣಗಳ ವಿವರಣೆ ಮುಂದಿನ ಭಾಗದಲ್ಲಿದೆ)
ಇದನ್ನೂ ಓದಿ: Travel Tips: ರಾತ್ರಿಯಾಕಾಶದ ನಕ್ಷತ್ರಪುಂಜಗಳನ್ನು ನೋಡಬೇಕೆಂದರೆ ನೀವು ಇಲ್ಲಿಗೆ ಪ್ರವಾಸ ಮಾಡಿ!