Site icon Vistara News

Travel with kids: ಪ್ರವಾಸ ಎಂಬ ಜೀವನಪಾಠ: ಮಕ್ಕಳ ಜೊತೆ ಪ್ರವಾಸ ಯಾಕೆ ಮಾಡಬೇಕು?

travel with kids

ಪ್ರವಾಸ, ತಿರುಗಾಟದಲ್ಲಿ ಆಸಕ್ತಿಯಿರುವ ಮಂದಿಯೆಲ್ಲ ಬಹುತೇಕ ಮಕ್ಕಳಾದ ಮೇಲೆ ತಮ್ಮ ಆಸಕ್ತಿಗೆ ಎಳ್ಳುನೀರು ಬಿಡುವುದನ್ನು ನೋಡುತ್ತೇವೆ. ಕಾಲೇಜು ಓದುವಾಗ, ಮದುವೆಯಾದ ಹೊಸದರಲ್ಲಿ ತಿರುಗಾಟ, ಚಾರಣ ಎಂದೆಲ್ಲ ಹುಚ್ಚೆಲ್ಲ ಅಂಟಿಸಿಕೊಂಡಿದ್ದವರು ಮಕ್ಕಳಾದ ತಕ್ಷಣ ಅವಕ್ಕೆಲ್ಲ ಟಾಟಾ ಹೇಳಿ ಗಂಭೀರವಾಗಿ ಬದುಕಿನ ಜಂಜಡದಲ್ಲಿ ಬ್ಯುಸಿಯಾಗಿ ಬಿಟ್ಟ  ಉದಾಹರಣೆಗಳು ಕಣ್ಣ ಮುಂದಿವೆ. ಅಯ್ಯೋ ಮಕ್ಕಳ ಜೊತೆ ಪ್ರವಾಸ (travel with kids) ಹೋದರೆ ಪ್ರಯಾಸವೇ ಹೆಚ್ಚು ಎನ್ನುವ ಮಂದಿ ಬಹಳ. ಇನ್ನೂ ಕೆಲವರು ಮಕ್ಕಳು ಸಣ್ಣವರಿರುವಾಗ ಪ್ರವಾಸ ಕರೆದುಕೊಂಡು ಹೋದರೆ ಅವರಿಗೆ ಆ ಜಾಗದ ಬಗೆಗೆ ನೆನಪು ಹೇಗಿದ್ದೀತು, ವೃಥಾ ದುಡ್ಡು ದಂಡ ಎಂದು ವಾದ ಮಾಡುವವರೂ ಇದ್ದಾರೆ. ಹೀಗಾಗಿ, ಬಹುತೇಕ ಮಕ್ಕಳಿಗೆ ಬಾಲ್ಯದಲ್ಲಿ ಪ್ರವಾಸದ ನಿಜವಾದ ರುಚಿ ದಕ್ಕಿರುವುದೇ ಇಲ್ಲ.

ಹಾಗಾದರೆ ಮಕ್ಕಳೊಂದಿಗೆ ಪ್ರವಾಸ ಯಾಕೆ ಮಾಡಬೇಕು? ಇದರಿಂದ ಮಕ್ಕಳಿಗೆ ದಕ್ಕುವುದಾದರೂ ಏನು? ಎಂದು ತಿಳಿಯಹೊರಟರೆ ಯಾವ ಹೆತ್ತವರೂ ಮಕ್ಕಳಿಗೆ ಇಂಥ ಅನುಭವ ನೀಡದೆ ಇರಲು ಮನಸ್ಸೊಪ್ಪದು. ಹಾಗಾಗಿ, ಈ ಕಾರಣಗಳಿಗಾದರೂ ನೀವು ನಿಮ್ಮ ಮಕ್ಕಳಿಗೆ ಸಾಧ್ಯವಾಗುವಷ್ಟು ಪ್ರವಾಸದ ಅನುಭವವನ್ನು ಜೀವನದಲ್ಲಿ ನೀಡಲೇಬೇಕು!

೧. ಮಕ್ಕಳು ದೊಡ್ಡವರಿಗಿಂತ ಬೇಗ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಹೊಸ ಜಾಗ, ಹೊಸ ಜನರು, ಹೊಸ, ಭಾಷೆ, ಹೊಸ ಸಂಸ್ಕೃತಿ ಇವನ್ನೆಲ್ಲ ಮಕ್ಕಳು ಬೇಗ ತಮ್ಮೊಳಗೆ ತೆಗೆದುಕೊಳ್ಳುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಮಕ್ಕಳಿಗೆ ಪ್ರವಾಸದಿಂದ ಸಿಗುವ ಅನುಭವ ದೊಡ್ಡದು.

೨. ಹೊಸ ರುಚಿ, ಹೊಸ ಆಹಾರ ಪದ್ಧತಿಗಳನ್ನು ಟ್ರೈ ಮಾಡುವುದು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಒಳ್ಳೆಯದು. ವಿವಿಧ ಊರುಗಳ ಬಗೆಬಗೆಯ ಆಹಾರಗಳು, ಅಲ್ಲಿನ ಜನರ ಸಂಸ್ಕೃತಿ ಎಲವೂ ಎಳವೆಯಲ್ಲಿ ತಿಳಿದುಕೊಳ್ಳುವ ಆಸಕ್ತಿಕರ ವಿಚಾರಗಳು. ಬಹಳ ಬೇಗನೆ ಮಕ್ಕಳು ವಿಶಾಲ ಮನೋಭಾವ ಬೆಳೆಸಿಕೊಳ್ಳಲು, ಪ್ರಪಂಚಕ್ಕೆ ತೆರೆದುಕೊಳ್ಳಲು, ಜನರನ್ನು ಅವರ ಆಹಾರ ಪದ್ಧತಿಯ ಮೂಲಕ ಗೌರವಿಸಲು ಇದು ಸಹಾಯವಾಗುತ್ತದೆ.

೩. ಯಾವುದೇ ಹೊಸ ಜಾಗ, ಪರಿಸರ, ದೇಶಕ್ಕೆ ಹೋದರೂ ಅಲ್ಲಿನ ಮಂದಿಯ ಭಾಷೆ ನಮಗೆ ಮೊದಲು ನೀಡುವ ಅನುಭವ ದೊಡ್ಡದು. ಯಾರಿಗ್ಗೊತ್ತು, ಒಂದೆರಡು ಶಬ್ದಗಳನ್ನು ಮಕ್ಕಳು ಕಲಿಯಲೂ ಬಹುದು. ಕಲಿತರೂ, ಕಲಿಯದಿದ್ದರೂ, ಮಕ್ಕಳು ಬೇರೆ ಪೇರೆ ಪ್ರದೇಶಗಳನ್ನು ಅವುಗಳ ಭಾಷೆಯ ಮೂಲಕ ನೋಡುವುದು ಒಂದು ಅನುಭವ. ಭಾಷೆ ಎಂಬುದು ಪ್ರತಿಯೊಂದು ಪ್ರದೇಶದ ಮೂಲ ಸಂಸ್ಕೃತಿಯ ಭಾಗ. ಇವುಗಳ ಮೂಲಕ ಆ ಪ್ರದೇಶಕ್ಕೆ ಪ್ರವೇಶಿಸುವುದೇ ಮಕ್ಕಳಿಗೆ ಸಿಗುವ ಹೊಸ ಅನುಭವ.

೪. ಬೇರೆಲ್ಲಾ ವಿಷಯಗಳು ಒತ್ತಟ್ಟಿಗಿರಲಿ. ಮಕ್ಕಳಿಗೆ ಪ್ರವಾಸದಿಂದ ಸಿಗುವ ಆತ್ಮವಿಶ್ವಾಸ, ಧೈರ್ಯವೇ ಬೇರೆ. ಹೊಸ ಜಾಗ, ಹೊಸ ಬಾಷೆ, ಹೊಸ ಜನರು ಎಲ್ಲವೂ ಹೊಸ ವಿಚಾರಗಳು. ಮಕ್ಕಳು ತಮ್ಮ ಕಂಫರ್ಟ್‌ ವಲಯದಿಂದ ಹೊರಬಂದು ಬದುಕಿನಲ್ಲಿ ನಿಜವಾಗಿ ಬೇಕಾದ ಪಾಠಗಳನ್ನು ಕಲಿಯುವುದು ಪ್ರವಾಸದಲ್ಲಿಯೇ. ಸ್ವತಂತ್ರ ಮನೋಭಾವ, ವಿಶಾಲ ಆಲೋಚನೆ, ಪಠ್ಯದಲ್ಲಿ ಸಿಗಲಾರದ ಜೀವನ ಪಾಠಗಳು ಮಕ್ಕಳಿಗೆ ಖಂಡಿತವಾಗಿಯೂ ಪ್ರವಾಸದಲ್ಲಿಯೇ ಸಿಗುತ್ತದೆ.

ಇದನ್ನೂ ಓದಿ: Thailand tour: ಕಡಿಮೆ ವೆಚ್ಚದ ಪ್ರವಾಸಕ್ಕೆ ಹೇಳಿ ಮಾಡಿಸಿದ ವಿದೇಶ ಥಾಯ್ಲೆಂಡ್‌!

೫. ತಮ್ಮದೇ ಸೀಮಿತ ವಲಯದಲ್ಲಿದ್ದರೆ ಮಕ್ಕಳ ದೂರುಗಳು ಹೆಚ್ಚು. ಅವಲಂಬನೆ ಜಾಸ್ತಿ. ಪ್ರತಿಯೊಂದಕ್ಕೂ ಹೆತ್ತವರನ್ನು ಅವಲಂಬಿಸುವವರಾಗಿ, ಸ್ವತಂತ್ರ ಮನೋಭಾವ ಬೆಳೆಸಿಕೊಳ್ಳದವರಾಗಿ ಬೆಳೆಯುವ ಸಾಧ್ಯತೆಗಳು ಹೆಚ್ಚು. ಸಣ್ಣ ಸಣ್ಣ ವಿಚಾರಗಳಿಗೆ ಹಠ, ಗಲಾಟೆ, ತನಗೆ ಇಂಥದ್ದು ಹೀಗೇಯೇ ಆಗಬೇಕೆಂಬ ಮನೋಭಾವ, ಪರರ ಕಷ್ಟಗಳನ್ನು ಅರಿತುಕೊಳ್ಳದೆ ತಾನು ಹೇಳಿದ್ದೇ ನಡೆಯಬೇಕೆನ್ನುವ ನೀತಿ, ನಾಲ್ಕು ಗೋಡೆಯೊಳಗೆ ಇದ್ದರೆ ಹೆಚ್ಚು. ಮನೆಯೆಂಬ ಸಂಕುಚಿತ ಭಾವದಿಂದ ಹೊರಗೆ ಬಂದು ಮಕ್ಕಳು ವಿಶಾಲ ಜಗತ್ತಲ್ಲಲಿ, ಜನರ ಕಷ್ಟಗಳನ್ನು, ಬದುಕಿನ ನಿಜವಾದ ಸವಾಲುಗಳನ್ನು ಪ್ರವಾಸದಲ್ಲಿಯೇ ನೋಡುತ್ತಾರೆ. ಇದು ಅವರಲ್ಲಿ ಗಟ್ಟಿತನವನ್ನೂ, ಸಹಿಷ್ಣುತೆಯನ್ನೂ ಹೆಚ್ಚು ಮಾಡುತ್ತದೆ. ಮಕ್ಕಳು ನಮ್ಮನ್ನು ಹೆಚ್ಚು ಅರ್ಥ ಮಾಡಿಕೊಳ್ಳುವವರಾಗಿ ಸೌಜನ್ಯವನ್ನು ಬೆಳೆಸುವ ಮಂದಿಯಾಗಿ ಬೆಳೆಯುತ್ತಾರೆ. ಬದುಕಿನಲ್ಲಿ ನಿಜವಾಗಿ ಬೇಕಾದ ಇಂತಹ ಪಾಠಗಳು ಮಕ್ಕಳಿಗೆ ಎಳವೆಯಲ್ಲಿಯೇ ಒದಗಿಸುವ ಏಕೈಕ ಮಾರ್ಗ ಪ್ರವಾಸ!

ಹೌದು. ಮಕ್ಕಳು, ಪ್ರವಾಸದ ಜಾಗವನ್ನು ಮರೆತು ಬಿಡಬಹುದು. ಆದರೆ ಪ್ರವಾಸ ಕೊಟ್ಟ ಅನುಭವವಗಳನ್ನಲ್ಲ. ಅವರು, ಪ್ರವಾಸದಲ್ಲಿ ಭೇಟಿಯಾದ ಜನರು, ಭಾಷೆ, ಅಲ್ಲಿ ತಿಂದ ಆಹಾರ ಹೀಗೆ ಹಲವು ವಿಚಾರಗಳು ಅವರ ಸ್ಮೃತಿ ಪಟಲದಿಂದ ಮಾಯವಾಗಬಹುದು. ಆದರೆ, ಇವೆಲ್ಲ ಒಟ್ಟಾರೆಯಾಗಿ ನೀಡಿದ ಜೀವನಾನುಭವ ಬೇರೆಲ್ಲೂ ದಕ್ಕದು. ಅದಕ್ಕಾಗಿಯೇ ಕಷ್ಟವೆನಿಸಿದರೂ ಮಕ್ಕಳ ಜೊತೆಗೆ ಪ್ರವಾಸ ಹೋಗಬೇಕು. ನಿಮ್ಮ ಕಣ್ಣ ಮುಂದೆಯೇ ಮಕ್ಕಳು ವಿಶ್ವವಾನವರಾಗಿ ಬೆಳೆಯುವುದನ್ನು ನೀವು ಖಂಡಿತಾ ನೋಡುವಿರಿ!

ಇದನ್ನೂ ಓದಿ: Astro tourism: ರಾಜಸ್ಥಾನಕ್ಕೆ ಪ್ರವಾಸ ಮಾಡಿ: ರಾತ್ರಿಗಳಲ್ಲಿ ನಕ್ಷತ್ರ ಪುಂಜ ಕಣ್ತುಂಬಿಕೊಳ್ಳಿ!

Exit mobile version