Site icon Vistara News

Viral News: ಈ ನಗರಕ್ಕೆ ಪ್ರವಾಸ ಹೋದರೆ, ಚಕ್ರವಿರುವ ಟ್ರಾಲಿ ಬ್ಯಾಗ್‌ ಹೊತ್ತೊಯ್ಯಬೇಡಿ!

wheeled luggage

ಯುರೋಪ್‌ ಪ್ರವಾಸ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರವಾಸದ ಬಗ್ಗೆ ಕನಸು ಕಾಣುವ, ಆಸಕ್ತಿ ಇರುವ ಪ್ರತಿಯೊಬ್ಬರೂ ಯುರೋಪಿಗೊಮ್ಮೆ (Europe travel) ಪ್ರವಾಸ ಮಾಡಬೇಕು ಎಂದು ಬಯಸುವವರೇ. ಇಂತಹ ಯುರೋಪಿನ ಅದ್ಭುತ ನಗರಗಳ ಪೈಕಿ ಡಬ್ರೋವ್ನಿಕ್‌ ಕೂಡಾ ಒಂದು. ಆಹಾ ಎಂಥ ಸುಂದರ ನಗರವಿದು ಎಂದುಕೊಳ್ಳುತ್ತಾ ನೀವಲ್ಲಿಗೆ ಕಾಲಿಡುವ ಮುನ್ನ ಕೆಲವೊಂದು ವಿಚಾರಗಳನ್ನು ಅರಿಯಲೇಬೇಕು. ಮುಖ್ಯವಾಗಿ ಈ ನಗರಕ್ಕೆ ಹೋಗುವ ಮೊದಲು ಬ್ಯಾಗ್‌ ಪ್ಯಾಕ್‌ ಮಾಡಿಕೊಳ್ಳುವ ಮುನ್ನ ಒಂದಲ್ಲ, ಹತ್ತು ಬಾರಿ ಯೋಚಿಸಬೇಕು!

ಹೌದು. ತಮಾಷೆ ಎನಿಸಿದರೂ ನಿಜ. ಈ ನಗರದಲ್ಲೊಂದು ಹೊಸ ನಿಯಮ ಜಾರಿಗೆ ಬಂದಿದೆ. ಅದೇನೆಂದರೆ, ಈ ನಗರದಲ್ಲಿ ಚಕ್ರವಿರುವ ಟ್ರಾಲಿ ಬ್ಯಾಗ್‌ಗಳನ್ನು (Wheeled Luggage) ಹೊತ್ತೊಯ್ಯುವಂತಿಲ್ಲ!

ಅರೆ, ಇದೇನಿದು, ಹೀಗೂ ನಿಯಮಗಳಿರುತ್ತದೆಯೋ? ಇದೆಂಥ ವಿಚಿತ್ರ ನಿಯಮ ಎಂದು ಹೌಹಾರಬೇಡಿ. ಇದು ನಿಜ. ಈಗಷ್ಟೇ  ಡಬ್ರೋವ್ನಿಕ್‌ ನಗರದ ಮೇಯರ್‌, ಈ ಹೊಸ ನಿಯಮವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ತಂದಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ, ಟ್ರಾಲಿ ಬ್ಯಾಗ್‌ ಯಾಕೆ ತರಬಾರದು ಎಂದು ನಿಮಗನಿಸಿದರೆ, ಈ ವಿಚಿತ್ರ ನಿಯಮಕ್ಕೆ ಕಾರಣವಾಗಿದ್ದೂ ಕೂಡಾ ಪ್ರವಾಸಿಗರೇ ಅಂತೆ. ಪ್ರವಾಸಿಗರು, ಈ ನಗರದಲ್ಲಿ, ಟ್ರಾಲಿ ಬ್ಯಾಗ್‌ಗಳನ್ನೆಳೆಯುತ್ತಾ ಸದ್ದು ಮಾಡುತ್ತಾ ಇರುವುದರಿಂದ ಈ ಸದ್ದಿಗೆ ಬೇಸತ್ತ ಇಲ್ಲಿನ ನಿವಾಸಿಗಳು ಮೇಯರ್‌ ಬಳಿಗೆ ತಮ್ಮ ಅಹವಾಲು ಸಲ್ಲಿಸಿದ್ದರಂತೆ. ಪ್ರವಾಸಿಗರು ಹೊತ್ತಲ್ಲದ ಹೊತ್ತಿನಲ್ಲಿ ಈ ನಗರದ ರಸ್ತೆ ಹಾಗೂ ಕಲ್ಲುಹಾಸಿನ ಮೇಲೆ ತಮ್ಮ ಸೂಟ್‌ಕೇಸ್‌ಗಳನ್ನು ಎಳೆದುಕೊಂಡು ಹೋಗುತ್ತಿರುವುದರಿಂದ ಅದರ ಚಕ್ರದಿಂದ ದಿನವಿಡೀ ಗರ್ರ್‌ ಎಂಬ ಸದ್ದನ್ನೇ ಕೇಳುತ್ತಿರಬೇಕಾಗುತ್ತದೆ. ಇದರಿಂದ ರಾತ್ರಿಯೆಲ್ಲ ನಿದ್ದೆಯೂ ಬರುವುದಿಲ್ಲ. ಹಾಗಾಗಿ, ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಅಲ್ಲಿನ ನಿವಾಸಿಗಳು ದೂರಿಕೊಂಡಿದ್ದರಂತೆ.

ಇದರಿಂದ ಅಲ್ಲನಿ ಮೇಯರ್‌ ಮೇಟೋ ಫ್ರಾಂಕೋವಿಕ್‌ ಹೊಸ ನಿಯಮವನ್ನು (travel tips) ಜಾರಿಗೆ ತಂದಿದ್ದು, ಅದರ ಪ್ರಕಾರ ಇನ್ನು ಮುಂದೆ ಇಲ್ಲಿಗೆ ಬರುವ ಪ್ರವಾಸಿಗರು ಟ್ರಾಲಿ ಬ್ಯಾಗ್‌ ತರುವಂತಿಲ್ಲ. ಡಬ್ರೋವ್ನಿಕ್‌ ಹಳೆ ನಗರದ ಪ್ರದೇಶದಲ್ಲಿ ಇಂತಹ ಬ್ಯಾಗ್‌ ಎಳೆದುಕೊಂಡು ಶಬ್ದ ಮಾಡುತ್ತಾ ತಿರುಗಾಡುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ 288 ಡಾಲರ್‌ ಅಂದರೆ ಸುಮಾರು 23,630 ರೂಪಾಯಿಗಳ ದಂಡವನ್ನೂ ತೆರಬೇಕಾಗುತ್ತದಂತೆ!

ಈ ಹೊಸ ನಿಯಮ, ಯುರೋಪಿನ ಈ ನಗರದ ಪ್ರವಾಸೋದ್ಯಮದ ಭಾಗವಾದ ʻಈ ನಗರವನ್ನು ಗೌರವಿಸಿʼ ಎಂಬ ಚಳುವಳಿಯ ಭಾಗವಾಗಿದೆ. ಮುಂದಿನ ನವೆಂಬರ್‌ ತಿಂಗಳಿಂದ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದ್ದು, ನಂತರ ಹಾಗೆ ಇಂತಹ ಬ್ಯಾಗ್‌ಗಳನ್ನು ತಂದರೂ ನಗರದ ಹೊರಗಡೆಯೇ ಬ್ಯಾಗನ್ನು ಇಟ್ಟು ನಗರ ಪ್ರವೇಶಿಸಬಹುದಾಗಿದೆ ಎಂದೂ ಹೇಳಲಾಗಿದೆ.

ಈ ನಗರ ಯುರೋಪ್‌ ಪ್ರವಾಸಿಗರ ಪಾಲಿಗೆ ಬಲು ಇಷ್ಟದ ನಗರವಾಗಿದ್ದು, ಪ್ರತಿ ರ್ಷವೂ ಲಕ್ಷಗಟ್ಟಲೆ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಇದು ಟಿವಿ ಸೀರೀಸ್‌ ಗೇಂ ಆಫ್‌ ಥ್ರೋನ್‌ನ ಜಾಗವಾಗಿರುವುದರಿಂದ ಹಾಗೂ ಈ ನಗರ ಹೊಂದಿರುವ ಪುರಾತನ ಗೋಡೆಗಳೂ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!

Exit mobile version