ಪ್ರತಿಯೊಬ್ಬರಿಗೂ ಯಾವುದಾದರೂ ಹೊರದೇಶಕ್ಕೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂಬ ಕನಸು ಇದ್ದೇ ಇರುತ್ತದೆ. ಪಾಸ್‌ಪೋರ್ಟ್ ಇರುವ ಮಂದಿಯಿನ್ನು ಯಾವುದೇ ತಲೆಬಿಸಿಯಿಲ್ಲದೆ ನಿರಾಳವಾಗಿ ವೀಸಾದ ಅಗತ್ಯವೇ ಇಲ್ಲದೆ ಕಡಿಮೆ ವೆಚ್ಚದಲ್ಲಿ ೬೦ ದೇಶಗಳಿಗೆ ಹೋಗಿ ಬರಬಹುದು.
ಹೌದು! ನಿಮಗೆ ಆಶ್ಚರ್ಯವೆನಿಸಿದರೂ ಇದು ಸತ್ಯ. ಹೆನ್ಲೆ ಪಾಸ್‌ಪೋರ್ಟ್ ಇಂಡೆಕ್ಸ್ ತನ್ನ ಜಾಗತಿಕ ಪಾಸ್‌ಪೋರ್ಟ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ೨೦೨೨ರ ವಿಶ್ವದ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್‌ಗಳ ಪೈಕಿ ಭಾರತ ೮೭ನೇ ಸ್ಥಾನ ಗಳಿಸಿದೆ. ಜಪಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದು, ಸಿಂಗಾಪುರ ಹಾಗೂ ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿಯೂ, ಜರ್ಮನಿ ಹಾಗೂ ಸ್ಪೈನ್ ಮೂರನೇ ಸ್ಥಾನದಲ್ಲೂ ಇವೆ. ಆ ಮೂಲಕ ಈ ಬಾರಿ ಯುರೋಪಿಯನ್ ದೇಶಗಳು ಹಿನ್ನಡೆ ಅನುಭವಿಸಿದೆ.
ಭಾರತ ೮೭ನೇ ಸ್ಥಾನ ಪಡೆದಿರುವ ಕಾರಣ, ಭಾರತೀಯರಿನ್ನು ೬೦ ದೇಶಗಳಿಗೆ ವೀಸಾ ಇಲ್ಲದೆ ಹೋಗಿ ಬರಬಹುದು. ಈ ಮೊದಲು ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ೧೯ ನಿಯಮಾವಳಿಗಳಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಕ್ಕೆ ನಿರ್ಬಂಧ ಹೇರಲಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ಈ ನಿರ್ಬಂಧ ತೆಗೆದುಹಾಕಲಾಗಿತ್ತು. ಕೋವಿಡ್‌ನಿಂದಾಗಿ ತೋಪಾಗಿದ್ದ ಪ್ರವಾಸೋದ್ಯಮವನ್ನು ಮತ್ತೆ ಬಲಪಡಿಸಲು ಈಗ ಪ್ರಯತ್ನಗಳು ನಡೆಯುತ್ತಿದ್ದು, ಈ ಪಟ್ಟಿಯಿಂದಾಗಿ ವೀಸಾರಹಿತ ದೇಶಗಳಲ್ಲಿ ಪ್ರವಾಸ ಮತ್ತಷ್ಟು ಕೈಗೆಟಕುವಂತಾಗಿದೆ.
ವೀಸಾವಿಲ್ಲದೆ ಹೋಗಬಹುದಾದ ದೇಶಗಳು: ಹಾಗಾದರೆ ಭಾರತೀಯರು ವೀಸಾವಿಲ್ಲದೆ ಈ ಕೆಳಗಿನ ಧೇಶಗಳಿಗೆ ಪ್ರಯಾಣಿಸಬಹುದು. ಭೂತಾನ್, ಕಾಂಬೋಡಿಯಾ, ಇಂಡೋನೇಶಿಯಾ, ಲಾವೋಸ್, ಮೆಕಾವ್, ಮಾಲ್ಡೀವ್ಸ್, ಮಯನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್, ಇರಾನ್, ಜೋರ್ಡನ್, ಓಮನ್, ಮಾರಿಷಿಯಸ್, ಮಡಗಾಸ್ಕರ್, ಸೊಮಾಲಿಯಾ, ತಾಂಜಾನಿಯಾ, ಟುನೀಶಿಯಾ, ಉಗಾಂಡಾ, ಜಿಂಬಾಬ್ವೆ, ಕತಾರ್, ಅಲ್ಬೇನಿಯಾ, ಸರ್ಬಿಯಾ, ಬೊಲಿವಿಯಾ, ಕುಕ್ ಐಲ್ಯಾಂಡ್ಸ್, ಫಿಜಿ, ಮಾರ್ಶಲ್ ಐಲ್ಯಾಂಡ್ಸ್, ಮೈಕ್ರೋನೇಶಿಯಾ, ನೀಯು, ಪಲೌ ಐಲ್ಯಾಂಡ್ಸ್, ಸಮೋವಾ, ತುವಲು, ವನೌತು, ಬಾರ್ಬಡೋಸ್, ಬ್ರಿಟೀಷ್ ವರ್ಜಿನ್ ಐಲ್ಯಾಂಡ್ಸ್, ಡೊಮಿನಿಕಾ, ಗ್ರೆನಡಾ, ಹೈತಿ, ಜಮೈಕಾ, ಮಾಂಟ್ಸೆರಾಟ್, ಸೇಂಟ್ ಕಿಟ್ಸ್ ಅಂಡ್ ನೇವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್, ಟ್ರಿನಿಡಾಡ್ ಅಂಡ್ ಟೊಬಾಗೋ, , ಟಿಮರ್ ಲೇಸ್ಟೆ, ಎಲ್ ಸ್ಯಾಲ್ವಡೋರ್, ಬೊಟ್ಸವಾನ, ಬುರುಂಡಿ, ಕೇಪ್ ವರ್ಡ್ ಐಲ್ಯಾಂಡ್ಸ್, ಕೊಮೊರೋ ಐಲ್ಯಾಂಡ್ಸ್, ಇಥಿಯೋಪಿಯಾ, ಗಬೋನ್, ಗ್ವಿನೀಯಾ- ಬಿಸೌ, ಮಾರಿತಾನಿಯಾ, ಮೊಝಂಬಿಕ್, ರವಾಂಡಾ, ಸೆನೆಗಲ್, ಸೆಚೇಲ್ಸ್, ಸಿಯಾರಾ ಲಿಯೋನ್, ಟೋಗೋ ದೇಶಗಳೇ ಅವುಗಳು.
ಇದನ್ನೂ ಓದಿ: ಪ್ರವಾಸಿ ತಾಣ: ಕೊರೊನಾ ನಂತರ ಈ ದೇಶ ಪ್ರವಾಸಿಗರ ಅಚ್ಚುಮೆಚ್ಚು ಆಗಿದೆಯಂತೆ!
ಟಾಪ್ ಟೆನ್: ಟಾಪ್ ಟೆನ್ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಕ್ರಮವಾಗಿ, ಫಿನ್‌ಲ್ಯಾಂಡ್, ಇಟಲಿ, ಲುಕ್ಸೆಂಬರ್ಗ್ ನಾಲ್ಕನೇ, ಆಸ್ಟ್ಟಿಯಾ ಡೆನ್ಮಾರ್ಕ್, ನೆದರ್‌ಲ್ಯಾಂಡ್ ಹಾಗೂ ಸ್ವೀಡನ್ ಐದನೇ ಸ್ಥಾನಗಳಲ್ಲಿವೆ. ಯುಕೆ, ಪೋರ್ಚುಗಲ್, ಫ್ರಾನ್ಸ್, ಐರ್ಲ್ಯಾಂಡ್ ದೇಶಗಳು ಆರನೇ ಸ್ಥಾನದಲ್ಲಿಯೂ, ಯುಎಸ್‌ಎ, ಸ್ವಿಜರ್‌ಲ್ಯಾಂಡ್, ನಾರ್ವೆ, ನ್ಯೂಜಿಲ್ಯಾಂಡ್ ಹಾಗೂ ಬೆಲ್ಪಿಯಂ ದೇಶಗಳು ಏಳನೇ ಸ್ಥಾನದಲ್ಲಿ, ಆಸ್ಟ್ರೇಲಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಗ್ರೀಸ್, ಮಾಲ್ಟಾ ದೇಶಗಳು ಎಂಟನೇ, ಒಂಬತ್ತನೇ ಸ್ಥಾನದಲ್ಲಿ ಹಂಗೇರಿ, ೧೦ನೇ ಸ್ಥಾನದಲ್ಲಿ ಲಿಥುವೇನಿಯಾ, ಪೋಲೆಂಡ್ ಹಾಗೂ ಸ್ಲೋವಾಕಿಯಾ ದೇಶಗಳು ಸ್ಥಾನ ಪಡೆದಿವೆ. ಮೊದಲ ಸ್ಥಾನ ಪಡೆದ ಜಪಾನ್ ಪ್ರಜೆಗಳಿನ್ನು ೧೯೩ ದೇಶಗಳಲ್ಲಿ ವೀಸಾ ರಹಿತವಾಗಿ ಪ್ರಯಾಣಿಸುವ ಹಕ್ಕು ಇದರಿಂದ ಪಡೆದುಕೊಂಡಿದ್ದಾರೆ. ಯುಎಸ್‌ಎಯ ಮಂದಿ ೧೮೬ ದೇಶಗಳಿಗೂ, ಯುಕೆ ಮಂದಿ ೧೮೭ ದೇಶಗಳಿಗೂ ವಿಸಾರಹಿತ ಪ್ರವಾಸದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನಕ್ಕೆ ಕೊನೆಯ ಸ್ಥಾನ: ಭಾರತದೊಂದಿಗೆ ೮೭ನೇ ಸ್ಥಾನದಲ್ಲಿ ಮಾರಿಷಿಯಸ್, ತಜಕಿಸ್ತಾನಗಳೂ ಸೇರಿವೆ. ನಮ್ಮ ನೆರೆಯ ಚೀನಾ ೬೯ನೇ ಸ್ಥಾನದಲ್ಲಿದ್ದು, ಅದರ ಜೊತೆಗೆ ಬೊಲಿವಿಯಾ ಕೂಡಾ ಇದೆ. ಇವಕ್ಕೆ ೮೦ ದೇಶಗಳಿಗೆ ವೀಸಾರಹಿತ ಪ್ರವೇಶ ಸಿಗಲಿವೆ.
ಬಾಂಗ್ಲಾದೇಶ ೧೦೪ನೇ ಸ್ಥಾನದಲ್ಲಿದ್ದು, ಪಾಕಿಸ್ಥಾನ ಕೊನೆಯಿಂದ ನಾಲ್ಕನೇ ಸ್ಥಾನದಲ್ಲಿದ್ದು ಅತ್ಯಂತ ದುರ್ಬಲ ರ್ಯಾಂಕಿಂಗ್ ಹೊಂದಿದೆ. ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದ್ದು, ಅಲ್ಲಿನ ಪ್ರಜೆಗಳು ಕೇವಲ ೨೭ ದೇಶಗಳಲ್ಲಿ ವೀಸಾರಹಿತ ಪ್ರಯಾಣದ ಅವಕಾಶ ಪಡೆದಿದ್ದಾರೆ. ಕೊನೆಯಿಂದ ಎರಡನೇ, ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿ ಕ್ರಮವಾಗಿ ಇರಾಕ್, ಸಿರಿಯಾ, ಪಾಕಿಸ್ತಾನಗಳಿದ್ದು ಅತ್ಯಂತ ದುರ್ಬಲ ಪಾಸ್‌ಪೋರ್ಟ್ ರ್ಯಾಂಕಿಂಗ್ ಪಡೆದಿವೆ.
ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!