ಬೆಂಗಳೂರು: ಪ್ರವಾಸ ಹೋಗುವುದು ಎಲ್ಲರಿಗೂ ಇಷ್ಟವೇ. ಆದರೆ ಪ್ರವಾಸ ಮಾಡುವಾಗ ಉಂಟಾಗುವ ಕೆಲವು ಸಮಸ್ಯೆಗಳು ಕೆಲವರನ್ನು ಪ್ರವಾಸದಿಂದ ದೂರ ಉಳಿಯುವಂತೆ ಮಾಡಿಬಿಡುತ್ತವೆ. ಪ್ರವಾಸಕ್ಕೆ ಹೋಗಬೇಕು, ಆದರೆ ಅಲ್ಲಿ ಏನಾದರೂ ಸಮಸ್ಯೆ ಆಗಿ ಬಿಟ್ಟರೆ? ಎನ್ನುತ್ತಲೇ ಎಷ್ಟೋ ಮಂದಿ ಪ್ರವಾಸವನ್ನು ಮುಂದೂಡುತ್ತಲೇ ಹೋಗುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಕ್ಕೆಂದೇ ಪ್ರಯಾಣ ವಿಮೆ (Travel Insurance) ಎನ್ನುವುದು ಇದೆ. ಇದರ ಮಾಹಿತಿ ಅರಿಯದ ಜನರು ಈ ವಿಮೆ ತೆಗೆದುಕೊಳ್ಳದೆ ಒದ್ದಾಡುತ್ತಿರುತ್ತಾರೆ. ಪ್ರಯಾಣ ವಿಮೆ ಏಕಾಗಿ ಮುಖ್ಯ ಎನ್ನುವುದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ ನೋಡಿ.
ಪ್ರವಾಸಕ್ಕೆ ಹೋದಾಗ ನಿಮಗೆ ಅನಿರೀಕ್ಷಿತವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ಬಂದುಬಿಡಬಹುದು. ಅಥವಾ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು, ಕೊನೆಯ ಕ್ಷಣದಲ್ಲಿ ಪ್ರವಾದವನ್ನು ರದ್ದು ಮಾಡಬೇಕಾಗಬಹುದು, ಇಲ್ಲವೇ ಪ್ರವಾಸಕ್ಕೆ ಹೋದಾಗ ನಿಮ್ಮ ಲಗೇಜ್ ಕಳೆದುಹೋಗಿಬಿಡಬಹುದು. ಇಂತಹ ಎಲ್ಲ ಸಂದರ್ಭದಲ್ಲಿ ನಿಮಗೆ ಪ್ರಯಾಣ ವಿಮೆ ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: Independence day 2023 : ಅದು ಜಾತಿ, ಧರ್ಮದ ಹಂಗು ಮೀರಿದ ಹೋರಾಟ; ಪ್ರತಿಯೊಬ್ಬರ ಕೊಡುಗೆಯೂ ಸ್ಮರಣೀಯ
ವೈದ್ಯಕೀಯ ಸಹಕಾರ
ಪ್ರವಾಸಕ್ಕೆ ಹೋದಾಗ ಯಾವ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಿಬಿಡಬಹುದು. ಈಗ ನೀವು ವಿದೇಶದ ಪ್ರವಾಸದಲ್ಲಿದ್ದೀರಿ ಎಂದುಕೊಳ್ಳಿ. ಆಗ ನಿಮಗೆ ಅಪಘಾತವಾಗಿಯೋ ಇಲ್ಲ ಏನೋ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಸೇರಬೇಕಾಗಬಹುದು. ವಿದೇಶದಲ್ಲಿನ ಆಸ್ಪತ್ರೆಯ ಶುಲ್ಕ ನಮ್ಮ ದೇಶದ ಶುಲ್ಕಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿರಬಹುದು. ಅಂತಹ ಸಮಯದಲ್ಲಿ ನಿಮಗೆ ಪ್ರಯಾಣ ವಿಮೆ ಸಹಾಯಕ್ಕೆ ಬರುತ್ತದೆ. ಅಲ್ಲಿನ ಆಸ್ಪತ್ರೆಯ ಖರ್ಚನ್ನು ನೀವು ಈ ವಿಮೆ ಬಳಸಿಕೊಂಡು ಕಟ್ಟಬಹುದು.
ಪ್ರವಾಸ ರದ್ದು:
ಎಲ್ಲಿಗೋ ಪ್ರವಾಸ ಹೋಗಬೇಕೆಂದು ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೀರಿ. ಅಲ್ಲಿಗೆ ಹೋಗಲು ವಿಮಾನದ ಟಿಕೆಟ್ ಇಂದ ಹಿಡಿದು ಅಲ್ಲಿ ವಾಸವಿರಲು ರೂಂವರೆಗೆ ಎಲ್ಲವೂ ಬುಕ್ಕಿಂಗ್ ಆಗಿ ಹಣವನ್ನೂ ಪಾವತಿ ಮಾಡಿಯಾಗಿರುತ್ತದೆ. ಅದರಲ್ಲಿ ಒಂದಿಷ್ಟು ನಿಮಗೆ ಮರುಪಾವತಿ ಆಗದಂತಹ ಖರ್ಚೂ ಇರುತ್ತದೆ. ಆಗ ನಿಮಗೆ ಏನೋ ತುರ್ತು ಪರಿಸ್ಥಿತಿ ಒದಗಿ ಬಂದು ಪ್ರವಾಸವನ್ನು ರದ್ದು ಮಾಡಬೇಕಾಗುತ್ತದೆ. ಮರುಪಾವತಿ ಆಗುವಂತಹ ಹಣವೇನೋ ನಿಮಗೆ ವಾಪಸು ಬರುತ್ತದೆ. ಆದರೆ ಕೆಲವೊಂದಿಷ್ಟು ಹಾಗಿರುವುದಿಲ್ಲ. ಆಗ ಕೂಡ ನಿಮಗೆ ಪ್ರಯಾಣ ವಿಮೆ ಸಹಕಾರಿ. ನಿಮ್ಮ ಮರುಪಾವತಿ ಆಗದ ಹಣವನ್ನು ನೀವು ಈ ವಿಮೆಯಿಂದ ಪಡೆದುಕೊಂಡು ಮತ್ತೆ ಬೇರೆ ದಿನದಂದು ಪ್ರವಾಸದ ಪ್ಲಾನ್ ಮಾಡಿಕೊಳ್ಳಬಹುದು.
ಲಗೇಜ್ ಕಳೆದುಹೋದಾಗ
ವಿದೇಶಿ ಪ್ರವಾಸಕ್ಕೆಂದು ವಿಮಾನದಲ್ಲಿ ಹೋಗಿ ಅಲ್ಲಿಳಿದಿದ್ದೀರಿ. ಆದರೆ ನಿಮ್ಮ ಲಗೇಜ್ ಬರಬೇಕಾದ ಸಮಯಕ್ಕೆ ಬರಲೇ ಇಲ್ಲ. ಅಥವಾ ಆ ಲಗೇಜ್ ಕಾಣೆಯೇ ಆಗಿಬಿಟ್ಟಿತು. ಆಗ ಯಾರನ್ನು ಕೇಳುವುದು? ಆಗಲೂ ನಿಮ್ಮ ವಿಮೆಯೇ ನಿಮಗೆ ಸಹಾಯಕ್ಕೆ ಬರುತ್ತದೆ. ಕಳೆದು ಹೋದ ವಸ್ತುವಿನ ಮೌಲ್ಯವನ್ನು ನೀವು ವಿಮೆ ಮೂಲಕ ಪಡೆದುಕೊಂಡು ಪ್ರವಾಸವನ್ನು ಯಾವುದೇ ಚಿಂತೆಯಿಲ್ಲದೆ ಮುಂದುವರಿಸಬಹುದು.
ಇದನ್ನೂ ಓದಿ: Foods That Stop Nightmares: ದುಃಸ್ವಪ್ನಗಳಿಂದ ಪಾರಾಗಬೇಕೆ? ಈ ಆಹಾರ ಸೇವಿಸಿ
ತುರ್ತು ಸ್ಥಳಾಂತರ
ಉಕ್ರೇನ್ ರಷ್ಯಾ ಯುದ್ದದ ಸಮಯದಲ್ಲಿ ಅಲ್ಲಿದ್ದ ಭಾರತೀಯರನ್ನು ತುರ್ತಾಗಿ ಭಾರತಕ್ಕೆ ಕರೆಸಿಕೊಂಡ ಪರಿಯನ್ನು ನೀವು ನೋಡಿದ್ದೀರಿ. ಈ ರೀತಿಯ ತುರ್ತು ಪರಿಸ್ಥಿತಿ ನೀವು ಪ್ರವಾಸಕ್ಕೆ ಹೋದ ಸ್ಥಳದಲ್ಲೂ ಆಗಬಹುದು. ಆಗ ತುರ್ತಾಗಿ ನಿಮ್ಮ ಮನೆಗೆ ವಾಪಸಾಗಲು ನಿಮ್ಮ ಪ್ರವಾಸ ವಿಮೆ ಸಹಾಯ ಮಾಡುತ್ತದೆ.
ವಿಮಾನದ ವಿಳಂಬ
ವಿಮಾನಗಳ ಸಮಯ ವಿಳಂಬವಾಗುವುದು ಮಾಮೂಲಿ. ಆದರೆ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿದ ನಿಮಗೆ ವಿಮಾನಕ್ಕೆ ಕಾಯುತ್ತಾ ಕೂರುವುದು ದೊಡ್ಡ ಚಿಂತೆ. ಅಲ್ಲಿ ಊಟದಿಂದ ಹಿಡಿದು ಪ್ರತಿಯೊಂದೂ ದುಬಾರಿಯೇ. ಆಗ ನೀವು ಪ್ರಯಾಣ ವಿಮೆ ಬಳಸಿಕೊಳ್ಳಬಹುದು. ಅಲ್ಲಿ ಹೆಚ್ಚುವರಿಯಾಗಿ ಮಾಡುವ ವಸತಿ ಹಾಗೆಯೇ ಊಟ ತಿಂಡಿಯ ಖರ್ಚನ್ನು ನೀವು ವಿಮೆಯಿಂದ ಪಡೆದುಕೊಳ್ಳಬಹುದು.
ಹೀಗೆ ಒಟ್ಟಿನಲ್ಲಿ ನಿಮ್ಮ ಪ್ರಯಾಣದ ವಿಮೆಯು ನಿಮಗೆ ತುರ್ತು ಸಮಯದಲ್ಲಿ ನಿಮಗೆ ಆಗಬಹುದಾದ ಹೊರೆಯನ್ನು ತಪ್ಪಿಸುತ್ತದೆ. ಹಾಗೆಯೇ ಪ್ರವಾಸದ ಸ್ಥಳದಲ್ಲಿ ನಿಮಗಾಗಬಹುದಾದ ಚಿಕಿತ್ಸಾ ವೆಚ್ಚದಿಂದಲೂ ನಿಮ್ಮನ್ನು ಪಾರು ಮಾಡುತ್ತದೆ. ಈ ವಿಮೆ ವೈಯಕ್ತಿಕ ರಕ್ಷಣೆಯನ್ನು ಮೀರಿದ್ದಾಗಿದೆ. ಮುಂದೆ ನೀವು ಬೇರೆ ದೇಶಕ್ಕೆ ಅಥವಾ ಬೇರೆ ಸ್ಥಳಕ್ಕೆ ಪ್ರವಾಸಕ್ಕೆ ಹೋಗುವುದಕ್ಕೆ ಪ್ಲಾನ್ ಮಾಡುವಾಗ ಈ ರೀತಿಯ ವಿಮೆಯ ಬಗ್ಗೆಯೂ ಗಮನ ಕೊಡಿ. ಬ್ಯಾಂಕ್‌ಗಳಲ್ಲಿ ನೀವು ಈ ರೀತಿಯ ವಿಮೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ.