ಕರ್ನಾಟಕ ಗೋವಾ ಗಡಿಯ ದೂದ್‌ಸಾಗರ್ ಜಲಪಾತವನ್ನು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ಅನುಭವ. ಈ ಹಾದಿಯ ದಟ್ಟ ಕಾಡಿನ ಸೌಂದರ್ಯ, ದೂದ್‌ಸಾಗರ್ ಬಳಸಿಕೊಂಡು ಸಾಧಾರಣ ರೈಲಿನಲ್ಲಿ ಹೋಗುವಾಗಿನ ಸಂಭ್ರಮ ದುಪ್ಪಟ್ಟಾಗಿ ಅನುಭವಿಸುವ ಆಸೆಯಿದ್ದವರಿಗೆಲ್ಲ ಈಗ ಶುಭಸುದ್ದಿಯಿದೆ! ವಿಸ್ಟಾಡೋಮ್ ಕೋಚ್ ಈ ಹಾದಿಯಲ್ಲೂ ಇನ್ನೂ ಪ್ರಕೃತಿಪ್ರಿಯರ ರೈಲು ಪ್ರಯಾಣವನ್ನು ಸುಮಧುರವಾಗಿಸಲಿದೆ.
ನೈರುತ್ಯ ರೇಲ್ವೆ ಈ ಹಿಂದೆಯೇ ವ್ಯಕ್ತವಾಗಿದ್ದ ಭಾರೀ ಬೇಡಿಕೆಯನ್ನು ಪರಿಗಣಿಸಿ ಸದ್ಯದಲ್ಲೇ ವಿಸ್ಟಾಡೋಮ್ ಕೋಚ್‌ಗಳನ್ನು ಈ ಹಾದಿಯಲ್ಲೂ ಬಿಡಲು ನಿರ್ಧರಿಸಿದೆ.
ಬಹಳ ಹಿಂದಿನಿಂದಲೇ ಈ ಹಾದಿಯಲ್ಲಿ ವಿಸ್ಟಾಡೋಮ್ ಕೋಚ್ ಆರಂಬಿಸಿದರೆ, ಈ ಹಾದಿಯ ಅಮೋಘ ದೃಶ್ಯವೈಭವ ಸವಿಯಲು ಅನುಕೂಲವಾಗಬಹುದು ಎಂಬ ಬೇಡಿಕೆಯಿತ್ತು. ದೂದ್ ಸಾಗರ್ ಈ ಹಾದಿಯ ಪ್ರಮುಖ ಆಕರ್ಷಣೆಯಾಗಿದ್ದು, ಪಶ್ಚಿಮ ಘಟ್ಟಗಳ ಬೆಟ್ಟ ಸಾಲು, ದಟ್ಟ ಕಾಡು, ನೀರ ಝರಿಗಳು, ಸುರಂಗ ಮಾರ್ಗಗಳು ಈ ಇಡೀ ರೈಲುಪ್ರಯಾಣವನ್ನು ರೋಮಾಂಚನಗೊಳಿಸುತ್ತದೆ. ಹಾಗಾಗಿಯೇ ಈ ಹಾದಿ ಭಾರತದ ಅತ್ಯಂತ ಪ್ರಸಿದ್ಧ ರೈಲುಹಾದಿಯಾಗಿದೆ.
ಎರ್ನಾಕುಲಂನಿಂದ ಪುಣೆಗೆ ಹೋಗುವ ಪೂರ್ಣ ಎಕ್ಸ್‌ಪ್ರೆಸ್ ರೈಲು ಬೆಳಗಾವಿ, ಲೋಂದಾ, ದೂದ್‌ಸಾಗರ್, ಮಡ್‌ಗಾಂವ್, ಕಾರವಾರ, ಗೋಕರ್ಣ, ಮುರುಡೇಶ್ವರ, ಉಡುಪಿ ಹಾಗೂ ಮಂಗಳೂರು ಹಾದಿಯಾಗಿ ಸಾಗುತ್ತಿದ್ದು ಈ ರೈಲಿಗೆ ವಿಸ್ಟಾಡೋಮ್ ಕೋಚ್ ಸರಿಯಾಗಿ ಹೊಂದಿಕೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಈ ಸೇವೆ ಸಿಗಲಿದ್ದು, ಇದು ನಾಲ್ಕು ರಾಜ್ಯಗಳ ಹಲವು ಪ್ರವಾಸೀ ತಾಣಗಳನ್ನು ಸಂಧಿಸಲಿದೆ.
ವಿಸ್ಟಾಡೋಮ್ ಕೋಚ್ ಸೇರಿಸುವ ಬಗ್ಗೆ ಈಗಾಗಲೇ ವಿವಿಧ ರೈಲ್ವೆ ವಿಭಾಗಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಕೇಂದ್ರ ರೈಲ್ವೆ ಮಂಡಳಿಗೆ ಪ್ರಸ್ಥಾವನೆ ಸಲ್ಲಿಸಲಾಗುವುದು. ಸದ್ಯಕ್ಕೆ ಪೂರ್ಣ ಎಕ್ಸ್‌ಪ್ರೆಸ್ ರೈಲಿನೊಂದಿಗೆ ವಿಸ್ಟಾಡೋಮ್ ಆರಂಭಿಸಿ ನಂತರ ಪ್ರತಿಕ್ರಿಯೆ ಗಮನಿಸಿ ಹೆಚ್ಚುವರಿ ಸೇರಿಸುವ ಬಗ್ಗೆ ಯೋಚಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಕ್ರೀಟು ಜಂಗಲ್‌ನೊಳಗೂ ನಿಜವಾದ ಕಾಡುಗಳಿವೆ, ಒಮ್ಮೆ ನೋಡಿ…