ಡಿಸೆಂಬರ್‌ನಂತಹ ಚಳಿಗಾಲದಲ್ಲಿ ಚಳಿಯಿರದೆ ಇನ್ನೇನು ಅನ್ನುವುದು ಗೊತ್ತೇ ಇದ್ದರೂ ಬೆಂಗಳೂರಿಗರು ಥರಗುಟ್ಟುವ ಚಳಿಯಲ್ಲಿ, ಮನಸ್ಸಿಲ್ಲದ ಮನಸ್ಸಿಂದ ಹೊದಿಕೆಯೊಳಗಿನಿಂದ ಎದ್ದು ಆಫೀಸಿಗೆ ಹೋಗಿ ಕೂತರೆ, ಛೇ ಇಂಥಾ ಚಳಿಯಲ್ಲಿ ಮನೆಯಲ್ಲಿ ಹೊದಿಕೆಯೊಳಗೆ ಬೆಚ್ಚಗೆ ಕೂತಿರುವ ಯೋಗ ಯಾಕೆ ಕೊಡಲಿಲ್ಲ ದೇವರೇ ಎಂದು ಕೇಳಬೇಕು ಅನಿಸಬಹುದು. ಅಷ್ಟೇ ಅಲ್ಲ, ಈ ಚಳಿಯಲ್ಲಿ ರಜೆ ಹಾಕಿ ಇನ್ನೂ ಚಳಿಯ ಪ್ರದೇಶಗಳಿಗೆ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್ ಮಾಡುವ ಗೆಳೆಯರನ್ನು ನೋಡಿದಾಗಲೆಲ್ಲ, ಅಯ್ಯೋ ಇನ್ನೂ ಚಳಿಯ ಜಾಗಕ್ಕೆ ಹೋಗೋದಾ ಅಂತ ಕೆಲವರಿಗೆ ಅನಿಸಬಹುದು.
ಹಾಗೆ ನೋಡಿದರೆ, ಬಿಸಿಲೂರುಗಳಿಗೆ ಚಳಿಗಾಲದಲ್ಲಿ ಹೋಗುವುದೂ ಒಂದು ಕಲೆ. ಬಿಸಿಲೂರಿನ ಬಿಸಿಲಲ್ಲಿ ಬೇಯದೆ, ವಿಶೇಷ ಚಳಿಯೂ ಇಲ್ಲದ ಹದವಾದ ತಂಪಿನಲ್ಲಿ ಸುತ್ತಾಡಿ ಬರುವುದು ಕೂಡಾ ಒಳ್ಳೆಯ ಐಡಿಯಾ. ಹಾಗಾಗಿ, ಬೆಂಗಳೂರಿನ ಚಳಿಯಲ್ಲಿ ಥರಗುಟ್ಟದೆ, ಬಿಸಿಲಲ್ಲಿ ಮೈಚಾಚಿ ಮಲಗಿ, ಖುಲ್ಲಂಖುಲ್ಲ ಆಗಿ ತಿರುಗಾಡಬಹುದಾದ ಜಾಗಗಳನ್ನು ನೋಡೋಣ.
೧. ಮುಂಬೈ: ನಗರದಲ್ಲಿ ನೋಡಲೇನಿದೆ ಎನ್ನಬೇಡಿ. ಮುಂಬೈ ನಗರದ ಬದುಕಿನೊಂದಿಗೆ ತನ್ನದೇ ಆದ ರುಚಿಯನ್ನು ಹದವಾಗಿ ಇನ್ನೂ ಕಾಪಾಡಿಕೊಂಡಿರುವ ಅಪ್ಪಟ ದೇಸೀ ನಗರಿ. ಸಮುದ್ರತೀರದ ಮುಂಬೈ ಹೇಳಿ ಕೇಳಿ ಬಿಸಿಲುಗಾಲದಲ್ಲಿ ಕೆಂಡದಂತೆ ನಿಗಿನಿಗಿ ಸುಡುತ್ತಿರುತ್ತದೆ. ಹಾಗಾಗಿ ಮುಂಬೈ ಸುತ್ತಲು ಚಳಿಗಾಲ ಹೇಳಿ ಮಾಡಿಸಿದ ಕಾಲ. ಮುಂಬೈಯ ಜಗತ್ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಿಂದ ಹಿಡಿದು, ಬಾಂದ್ರಾ ವೊರ್ಲಿ ಸೀ ಲಿಂಕ್‌ವರೆಗೆ ಮುಂಬೈಯಲ್ಲಿ ನೋಡಬೇಕಾದ್ದು ಬಹಳವಿದೆ.
೨. ಗುಜರಾತ್: ನಮ್ಮ ದೇಶದೊಳಗೆ ನೋಡಲೇಬೇಕಾದ ರಾಜ್ಯಗಳ ಪೈಕಿ ಗಾಂಧಿ ನಾಡು ಗುಜರಾತ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಯಾಕೆಂದರೆ, ಗುಜರಾತ್ ತನ್ನದೇ ಆದ ಕಲೆ, ಸಂಸ್ಕೃತಿ, ಆಚಾರ ವಿಚಾರಗಳಷ್ಟೇ ಅಲ್ಲ, ಅತ್ಯಂತ ಸುಂದರ ಭೂಪ್ರದೇಶವನ್ನೂ ಹೊಂದಿದೆ. ಇಲ್ಲಿನ ದೇವಾಲಯಗಳು, ಬೆಳ್ಳನೆಯ ಉಪ್ಪಿನ ಮರುಭೂಮಿ ಕಚ್, ಸಿಂಹದ ತಾಣ ಗಿರ್ ಹೀಗೆ ಹಲವು ವೈವಿಧ್ಯಗಳಿಂದ ಸದಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಗುಜರಾತ್ ಸುತ್ತಾಡಲು ಚಳಿಗಾಲ ಬೆಸ್ಟ್.
೩. ಗೋವಾ: ಗೋವಾ ಹೋಗಲು ಇಂಥದ್ದೇ ಕಾಲ ಕೂಡಿ ಬರಬೇಕೆಂದೇನಿಲ್ಲ ನಿಜ. ಒಂದಿಷ್ಟು ಗೆಳೆಯರಿದ್ದರೆ ಗೋವಾ ಯಾವ ಕಾಲದಲ್ಲಾದರೂ ಸುತ್ತಾಡಿ ಬರಬಹುದು. ಬಿಸಿಲು, ಮಳೆಯಲ್ಲೂ ಜಗ್ಗದೆ ಕುಗ್ಗದೆ ನೋಡಿ ಬರಬಹುದು. ಆದರೆ, ಗೋವಾವನ್ನು ಚಳಿಗಾಲದಲ್ಲೇ ನೋಡಬೇಕು. ಅಲ್ಲಿನ ಸಮುದ್ರತೀರಗಳಲ್ಲಿ ಮೈಚಾಚಿ ಸೂರ್ನ ಸ್ನಾನ ಮಾಡಬೇಕೆಂದರೆ ಚಳಿಗಾಲ ಉತ್ತಮ. ಅಷ್ಟೇ ಅಲ್ಲ, ಡಿಸೆಂಬರ್ ತಿಂಗಳು ಇಡೀ ಗೋವಾ ಬೇರೆಯದೇ ಲುಕ್ಕಿನಲ್ಲಿ ಕಂಗೊಳಿಸಲು ಆರಂಭಿಸುತ್ತದೆ. ಪಾರ್ಟಿ ಮೂಡಿನಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಮುಳುಗೇಳಬೇಕೆಂದಿದ್ದರೆ, ಗೋವಾಕ್ಕಿಂತ ಅತ್ಯುತ್ತಮ ಜಾಗ ಇನ್ನೊಂದಿಲ್ಲ.
೪. ಚೆನ್ನೈ: ಚೆನ್ನೈನಲ್ಲೇನಿದೆ ಎನ್ನಬೇಡಿ. ನೀವು ತಿಂಡಿಪೋತರಾಗಿದ್ದರೆ, ಬಗೆಬಗೆಯ ತಿನಿಸುಗಳನ್ನು ಹೊಸರುಚಿಗಳನ್ನು ಸವಿದು ನೋಡುವ ಆಸೆಯಿದ್ದರೆ, ಅಪ್ಪಟ ದಕ್ಷಿಣ ಭಾರತೀಯ ಶೈಲಿಯಲ್ಲಿ ಚಂದಕ್ಕೆ ಬಾಳೆ ಎಲೆಯಲ್ಲಿ ಪೊಗದಸ್ತಾದ ಊಟ ಮಾಡಬೇಕೆಂದಿದ್ದರೆ, ದೋಸೆಯನ್ನು ಬಗೆಬಗೆಯ ಚಟ್ನಿಯಲ್ಲಿ ಮುಳುಗೇಳಿಸಿ ತಿನ್ನುವ ಆಸೆಯಿದ್ದರೆ ಚೆನ್ನೈಗೆ ಒಮ್ಮೆ ಭೇಟಿ ಕೊಡಬೇಕು. ಇಲ್ಲಿನ ಸಮುದ್ರ ತೀರಗಳಲ್ಲಿ ಅಡ್ಡಾಡಿ, ದೇವಸ್ಥಾನಗಳಲ್ಲಿ ಸುತ್ತಾಡಿ, ಕುಟುಂಬ ಸಮೇತರಾಗಿ ಒಂದು ಕಂಪ್ಲೀಟ್ ಫೀಲ್ ಕೊಡುವ ಪ್ರವಾಸ ನಿಮಗೆ ಬೇಕೆಂದಿದ್ದರೆ, ಚಳಿಗಾಲದಲ್ಲಿ ಹತ್ತಿರದಲ್ಲೇ ಇರುವ ಚೆನ್ನೈಗೆ ಹೋಗಿ ಬರಬಹುದು.
೫. ಪಾಂಡಿಚೇರಿ: ಫ್ರೆಂಚ್ ವಸಾಹತುಶಾಹಿ ನೆನಪಿನ ಜೊತೆಗೆ ಸುಂದರ, ಸ್ವಚ್ಛ, ಶಾಂತಿಯುತವಾದ ನಗರದಲ್ಲೊಂದೆರಡು ದಿನ ಕಳೆದು ಬರಬೇಕಿದ್ದರೆ ಅದು ಪಾಂಡಿಚೇರಿ. ಮುದ್ದಾದ ಊರಿನಲ್ಲಿ, ಸಮುದ್ರ ತೀರಗಳಲ್ಲಿ ಡ್ರೈವ್ ಮಾಡುತ್ತಾ ಒಂದೆರಡು ದಿನ ಮಜವಾಗಿ ಕಳೆದು ಬರಬಹುದಾದ ಪುಟ್ಟ ನಗರವಿದು.
೬. ಹೈದರಾಬಾದ್: ಬಿರಿಯಾನಿ ಸವಿಯಬೇಕೆಂದು ಮನಸ್ಸಾಗುತ್ತಿದೆಯೇ? ಯಾಕೆ ಈ ನೆಪದಲ್ಲೇ ಒಮ್ಮೆ ಹೈದರಾಬಾದ್ ಹೋಗಿ ಬರಬಾರದು. ಪುಟ್ಟ ಪುಟ್ಟ ಕಾರಣಗಳು ನಿಮ್ಮನ್ನು ಹೊಸ ಊರಿನತ್ತ ಕೊಂಡೊಂಯ್ದರೆ ಅದಕ್ಕಿಂತ ಖುಷಿ ಇನ್ನೇನಿದೆ. ಹೈದರಾಬಾದ್ ಸುತ್ತಾಡಲು ಚಳಿಗಾಲಕ್ಕಿಂತ ಉತ್ತಮ ಕಾಲ ಇನ್ನೊಂದಿಲ್ಲ.