Site icon Vistara News

Winter Travel Destinations: ಚಳಿಗಾಲದಲ್ಲಿ ಪ್ರವಾಸ ಮಾಡಬಹುದಾದ ದೇಶದ ಟಾಪ್ 11 ತಾಣಗಳು

winter tour

winter tour

ಬೆಂಗಳೂರು: ಪ್ರವಾಸ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಪ್ರವಾಸ ಎಂದರೆ ಖುಷಿ ಪಡುತ್ತಾರೆ. ಹೇಳಿ ಕೇಳಿ ವರ್ಷಾಂತ್ಯ ಸಮೀಪಿಸುತ್ತದೆ. ಕ್ರಿಸ್‌ಮಸ್‌, ಹೊಸ ವರ್ಷ ಹೀಗೆ ಸಾಲು ಸಾಲು ರಜೆ ದೊರೆಯುತ್ತದೆ. ಹೀಗಾಗಿ ಇದು ಪ್ರವಾಸಕ್ಕೆ ಹೇಳಿ ಮಾಡಿಸಿದ ಸಮಯವೂ ಹೌದು. ಈ ರಜಾ ಅವಧಿಯಲ್ಲಿ ಪ್ರವಾಸ ಮಾಡಬಹುದಾದ ದೇಶದ 11 ಅದ್ಭುತ ತಾಣಗಳ ಪರಿಚಯ ಇಲ್ಲಿದೆ (Winter Travel Destinations).

ಪಾಂಡಿಚೇರಿ

ಚಳಿಗಾಲದ ರಜಾದಿನಗಳು ಮತ್ತು ಕ್ರಿಸ್‌ಮಸ್‌ ಅನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲು ಪಾಂಡಿಚೇರಿ ಅತ್ಯಂತ ಸೂಕ್ತ ತಾಣ. ಅದ್ಭುತ ಕಡಲ ತೀರಗಳು, ವಾಯು ವಿಹಾರ ತಾಣಗಳು, ಆರೋವಿಲ್ಲೆ, ಶ್ರೀ ಅರಬಿಂದೋ ಆಶ್ರಮ, ಉದ್ಯಾನಗಳು ಮತ್ತು ಸರೋವರಗಳು ಇಲ್ಲಿನ ಭೇಟಿಯನ್ನು ಸ್ಮರಣೀಯವಾಗಿಸುತ್ತವೆ. ಬೆಸಿಲಿಕಾ ಆಫ್ ದಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಕ್ಯಾಥೆಡ್ರಲ್ ಮತ್ತಿತರ ಚರ್ಚ್‌ಗಳಲ್ಲಿನ ಕ್ರಿಸ್‌ಮಸ್‌ ಆಚರಣೆ ಬಹಳ ವಿಶೇಷ. ಜತೆಗೆ ಮಧುರವಾದ ಕ್ರಿಸ್‌ಮಸ್‌ ಗೀತೆಗಳನ್ನು ಆನಂದಿಸಬಹುದು.

ಗೋವಾ

ದೇಶದಲ್ಲಿನ ಬಹುತೇಕ ಪ್ರವಾಸಿಗರ ಹಾಟ್‌ ಫೇವರೇಟ್‌ ಸ್ಥಳ ಗೋವಾ. ಅದರಲ್ಲೂ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಗಾಗಿಯೇ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಅಧಿಕ. ಈ ಸಮಯದಲ್ಲಿ ಗೋವಾದ ಪ್ರಸಿದ್ಧ ಚರ್ಚ್‌ಗಳನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಅಲ್ಲದೆ ಚಳಿಗಾಲದ ವಿಶೇಷ ಗೋವಾ ರಜಾ ಪ್ಯಾಕೇಜ್‌ಗಳು ಲೈವ್ ಬ್ಯಾಂಡ್ ಮತ್ತು ಕ್ರಿಸ್‌ಮಸ್‌ ಭೋಜನ ಮತ್ತು ಉತ್ಸಾಹಭರಿತ ಕಡಲತೀರಗಳನ್ನು ಪರಿಚಯಿಸುತ್ತವೆ. ಇದರ ಸದುಪಯೋಗ ಪಡಿಸಿಕೊಂಡರೆ ನಿಮ್ಮ ಗೋವಾ ಭೇಟಿ ಅವಿಸ್ಮರಣೀಯವಾಗಲಿದೆ.

ಶಿಲ್ಲಾಂಗ್‌

ಚಳಿಗಾಲದ ರಜಾದಿನಗಳು ಎಂದಾಗ ನೆನಪಿಗೆ ಬರುವ ಇನ್ನೊಂದು ಪ್ರಮುಖ ತಾಣ ಶಿಲ್ಲಾಂಗ್. ಈಶಾನ್ಯ ಭಾರತದಲ್ಲಿರುವ ಶಿಲ್ಲಾಂಗ್‌ನಲ್ಲಿ ಕ್ರಿಶ್ಚಿಯನ್ನರು ಗಣನೀಯ ಜನಸಂಖ್ಯೆ ಇರುವುದರಿಂದ ಕ್ರಿಸ್‌ಮಸ್‌ ಮತ್ತು ಹೊಸ ವರ್ಷವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಚರ್ಚ್‌ಗಳು, ಬೀದಿಗಳು ಮತ್ತು ಮನೆಗಳು ರಾತ್ರಿಯಲ್ಲಿ ದೀಪಗಳ ಬೆಳಕಿನಿಂದ ಹೊಳೆಯುತ್ತವೆ. ಸಾಂಪ್ರದಾಯಿಕ ಪಾಕಪದ್ಧತಿ ಮತ್ತು ಗಾಳಿಯಲ್ಲಿ ಹೊರಹೊಮ್ಮುವ ಕ್ರಿಸ್‌ಮಸ್‌ ಕ್ಯಾರಲ್‌ಗಳ ಸುವಾಸನೆ ನಿಮ್ಮ ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಟೈಸಿಮ್, ಬಾಗ್ಮಾರಾ, ಪಿಂಜೇರಾ, ವಿಲಿಯಂನಗರ್ ಮತ್ತು ತುರಾ ವಿಂಟರ್ ಫೆಸ್ಟಿವಲ್ ಸೇರಿದಂತೆ ಹಲವು ಉತ್ಸವಗಳನ್ನು ಆಯೋಜಿಸಲಾಗುತ್ತದೆ.

ಕೇರಳ

ದೇವರ ಸ್ವಂತ ನಾಡು ಕೇರಳ ಹಲವು ನಿಸರ್ಗ ರಮಣೀಯ ತಾಣಗಳಿಂದ ಕೂಡಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಿಮ್ಮ ಚಳಿಗಾಲದ ರಜಾದಿನಗಳನ್ನು ಕೇರಳದ ಹಿನ್ನೀರಿನಲ್ಲಿ ತೇಲುತ್ತಿರುವ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಕಳೆಯಬಹುದು. ಕೇರಳ ಹಾಲಿಡೇ ಪ್ಯಾಕೇಜ್‌ ಮೂಲಕ ಕಾಲುವೆಗಳು, ಕಡಲತೀರಗಳು ಮತ್ತು ಹಿನ್ನೀರುಗಳಿಗೆ ಹೆಸರುವಾಸಿಯಾದ ಅಲೆಪ್ಪಿಗೆ ಭೇಟಿ ನೀಡಿ. ಇಲ್ಲಿನ ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಪ್ರತಿ ಬೀದಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ. ಇಲ್ಲಿನ ಪ್ರಾಚೀನ ಕಡಲತೀರಗಳು ಮತ್ತು ಭವ್ಯವಾದ ಚರ್ಚ್‌ಗಳು ನಿಮ್ಮ ಮಾನಸಿಕ ಒತ್ತಡ ತೊಡೆದು ಹಾಕಲು ನೆರವಾಗಲಿವೆ.

ಮನಾಲಿ

ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಮನಾಲಿ. ಹಿಮಾಚಲ ಪ್ರದೇಶ ಪ್ರವಾಸ ಪ್ಯಾಕೇಜ್‌ಗಳು ನಿಜವಾದ ಹಿಮದ ನಡುವೆ ಕ್ರಿಸ್‌ಮಸ್‌ ಆಚರಿಸಲು ನಿಮಗೆ ಅವಕಾಶವನ್ನು ನೀಡುತ್ತವೆ. ಸ್ಕೀಯಿಂಗ್ ಆನಂದಿಸಲು, ಹಿಮಮಾನವನನ್ನು ಮಾಡಲು ಮತ್ತು ಹಿಮದ ಸ್ನೋಬಾಲ್‌ಗಳನ್ನು ಪರಸ್ಪರ ಎಸೆದು ಆಡಲು ಮನಾಲಿಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ. ಮನಾಲಿಗೆ ಹೋದಾಗ ತಂಗಲು ಮರದ ಗುಡಿಸಲುಗಳನ್ನು ಆಯ್ಕೆ ಮಾಡುವುದನ್ನು ಮರೆಯಬೇಡಿ.

ಲ್ಯಾನ್ಸ್‌ಡೌನ್‌

ಉತ್ತರಾಖಂಡದ ಲ್ಯಾನ್ಸ್‌ಡೌನ್‌ ಹೊಸ ವರ್ಷ ಆಚರಣೆಗೆ ಸೂಕ್ತ ತಾಣವಾಗಲಿದೆ. ಪ್ರಕೃತಿ ಸೌಂದರ್ಯದಿಂದ ಕೂಡಿದ ಇಲ್ಲಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಈ ಮೋಡಿ ಮಾಡುವ ಗಿರಿಧಾಮಕ್ಕೆ ತೆರಳಿ. ಜನಸಮೂಹದಿಂದ ಬಹಳ ದೂರವಿರುವ ಇಲ್ಲಿ ಶಾಂತಿಯುತವಾಗಿ ರಜೆಯನ್ನು ಕಳೆಯಬಹುದು.

ಗೋಕರ್ಣ

ನಮ್ಮದೇ ರಾಜ್ಯದಲ್ಲಿರುವ ಗೋಕರ್ಣಕ್ಕೆ ಭೇಟಿ ನೀಡಿಲ್ಲವೇ? ಹಾಗಾದರೆ ಈ ಬಾರಿಯ ರಜೆಯನ್ನು ಇಲ್ಲಿ ಕಳೆಯಬಹುದು. ಪ್ರಸಿದ್ಧ ಹಿಂದು ಯಾತ್ರಾ ಸ್ಥಳವಾಗಿರುವುದರ ಜತೆಗೆ ಗೋಕರ್ಣವು ಬೀಚ್ ಪ್ರಿಯರಿಗೆ ಅತ್ಯಂತ ನೆಚ್ಚಿನ ತಾಣ. ಇಲ್ಲಿನ ಓಂ ಬೀಚ್‌ ವಿದೇಶಿಗರು ಸೇರಿದಂತೆ ದೇಶದ ನಾನಾ ರಾಜ್ಯದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹೀಗಾಗಿ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಇಲ್ಲಿಗೆ ಭೇಟಿ ನೀಡಬಹುದು.

ಅಂಡಮಾನ್‌ ದ್ವೀಪ

ಪ್ರಶಾಂತತೆ, ಮಾಂತ್ರಿಕ ಕಡಲ ತೀರಗಳು ಮತ್ತು ಪ್ರಸಿದ್ಧ ರೆಸಾರ್ಟ್‌ಗಳಿಗೆ ಹೆಸರುವಾಸಿಯಾದ ಅಂಡಮಾನ್‌ನ ರಜಾ ಪ್ಯಾಕೇಜ್ ಭೂಮಿಯ ಮೇಲಿನ ಸ್ವರ್ಗಕ್ಕೆ ಪ್ರವೇಶಿಸಿದ ಅನುಭವ ನೀಡಲಿದೆ. ವಿಹಾರ ನೌಕೆಗಳು, ರೆಸಾರ್ಟ್‌ಗಳು ಮತ್ತು ಕಡಲ ತೀರಗಳಲ್ಲಿ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ನೀವು ಬಯಸಿದರೆ ಅಂಡಮಾನ್ ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಸಂಶಯವಿಲ್ಲ. ಸ್ಕೂಬಾ ಡೈ ಸೇರಿದಂತರ ಇಲ್ಲಿನ ರೋಮಾಂಚಕ ಜಲ ಕ್ರೀಡೆಗಳನ್ನು ಯಾವುದೇ ಕಾರಣಕ್ಕೂ ಮಿಸ್‌ ಮಾಡಬೇಡಿ.

ಉದಯಪುರ

ಈ ರಜಾದಿನಗಳನ್ನು ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಸ್ಥಳಗಳಲ್ಲಿ ಸಮಯ ಕಳೆಯಲು ಬಯಸಿದರೆ ರಾಜಸ್ಥಾನದ ಉದಯಪುರಕ್ಕೆ ತೆರಳುವುದು ಉತ್ತಮ. ಈ ಸುಂದರವಾದ ‘ಮಹಾರಾಜರ ನಾಡು’ ಅರಮನೆಗಳು, ಹೊಳೆಯುವ ಸರೋವರಗಳು, ದೇವಾಲಯಗಳು, ಪ್ರಾಚೀನ ನಗರಗಳನ್ನು ಒಳಗೊಂಡಿರುವುದು ವಿಶೇಷ. ಇದು ಪ್ರಾಚೀನ ಪ್ರಪಂಚಕ್ಕೆ ಕಾಲಿಟ್ಟ ಅನುಭವವನ್ನು ನೀಡುತ್ತದೆ. ಚಳಿಗಾಲದ ರಜಾದಿನಗಳಿಗೆ ರಾಜಸ್ಥಾನದ ರಜಾ ಪ್ಯಾಕೇಜ್‌ಗಳು ಅತ್ಯುತ್ತಮ ಆಯ್ಕೆಗಳಲ್ಲಿ ಒಂದು.

ಕಛ್‌

ಗುಜರಾತ್‌ನ ಕಛ್ ಕೂಡ ಚಳಿಗಾಲದ ಪ್ರವಾಸಕ್ಕೆ ಉತ್ತಮ ತಾಣ ಎನಿಸಿಕೊಂಡಿದೆ. ಕಛ್ ಅತ್ಯಂತ ಕಡಿಮೆ ಬೆಲೆಯ ಪ್ರವಾಸಿ ತಾಣಗಳಲ್ಲಿ ಒಂದು. ಇದು ಸಾಂಸ್ಕೃತಿಕವಾಗಿ ಶ್ರೀಮಂತ ತಾಣ. ಚಳಿಗಾಲದಲ್ಲಿ ರಣ್ ಆಫ್ ಕಛ್‌ನಲ್ಲಿ ರಣ್ ಉತ್ಸವ್ ಆಯೋಜಿಸಲಾಗುತ್ತದೆ. ಹುಣ್ಣಿಮೆಯಂದು ಸಂಗೀತ, ನೃತ್ಯ ಮತ್ತು ನೈಸರ್ಗಿಕ ಸೌಂದರ್ಯ ಆಸ್ವಾದಿಸುವ ಆ ಘಳಿಗೆ ಮರೆಯಲಾಗದ ಅನುಭವ ನೀಡಲಿದೆ.

ದಮನ್ ಮತ್ತು ದಿಯು

ದಮನ್ ಮತ್ತು ದಿಯುವಿನ ತಂಪಾದ ಕಡಲ ತೀರಗಳು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯಲಿದೆ. ಸ್ನೇಹಿತರೊಂದಿಗೆ ಹೊಸ ವರ್ಷವನ್ನು ಆಚರಿಸಲು ಇದು ಅದ್ಭುತ ಸ್ಥಳ. ನೀವು ಬೀಚ್‌ನಲ್ಲಿ ಪಾರ್ಟಿ ಮಾಡಬಹುದು, ಶಾಪಿಂಗ್ ಆನಂದಿಸಬಹುದು ಮತ್ತು ಬೀಚ್ ಸ್ಟಾಲ್‌ಗಳಲ್ಲಿ ಅದ್ಭುತ ಆಹಾರವನ್ನು ಸವಿಯಬಹುದು. ಜಂಪೋರಾ, ದೇವ್ಕಾ ಮತ್ತು ನಾಗಾವೊ ದಮನ್‌ನ ಅತ್ಯುತ್ತಮ ಕಡಲತೀರಗಳಾಗಿವೆ. ದಿಯುವಿನ ಅತಿದೊಡ್ಡ ಕಡಲ ತೀರವಾದ ಗೋಖಲೆ ಅತ್ಯುತ್ತಮ ಈಜು, ಸರ್ಫಿಂಗ್ ಮತ್ತು ಪ್ಯಾರಾಸೈಲಿಂಗ್ ಅನುಭವ ನೀಡುತ್ತದೆ.

ಇದನ್ನೂ ಓದಿ: Travel Guide: ಸೋಲೋ ಬೇಡವೆ? ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಇರುವ ಗುಂಪಿನಲ್ಲೂ ನೀವು ಪ್ರವಾಸ ಮಾಡಬಹುದು!

Exit mobile version