Site icon Vistara News

Yoga Tour: ಈ ಜಾಗಗಳಿಗೆ ಯೋಗ ಕಲಿಕೆಗೆಂದೇ ಪ್ರವಾಸ ಮಾಡುವುದೇ ಒಂದು ಅನುಭವ!

prerane

ಯೋಗ ನಮಗೆ ಕೇವಲ ಫಿಟ್‌ನೆಸ್‌ಗೆ ಇರುವ ವ್ಯಾಯಾಮವಷ್ಟೇ ಅಲ್ಲ, ಅದು ದೇಹ ಮನಸ್ಸಿಗೆ ಶಕ್ತಿ ನೀಡುವ, ರಿಲ್ಯಾಕ್ಸ್‌ ಮಾಡುವ ಒಂದು ಜೀವನಕ್ರಮವೂ ಹೌದು. ಇಂದು ನಿಧಾನವಾಗಿ ಹಲವರಿಗೆ ಯೋಗದ ಮಹತ್ವ ಅರಿವಾಗುತ್ತಿದೆ. ಒತ್ತಡದ ಜೀವನಶೈಲಿಯಿಂದ ಹೊರಬಂದು ನೆಮ್ಮದಿಯನ್ನು ಕಂಡುಕೊಳ್ಳುವ ರಹಸ್ಯ ಯೋಗದಲ್ಲಿದೆ ಎಂಬುದೂ ಅರಿವಾಗಿದೆ. ಅದಕ್ಕಾಗಿಯೇ ಇಂದು ಯೋಗ ಪ್ರವಾಸೋದ್ಯಮದ ಭಾಗವಾಗಿಯೂ ಬದಲಾಗಿದೆ. ಹಲವು ಪ್ರವಾಸೀ ತಾಣಗಳು, ಯೋಗ ಕೇಂದ್ರಗಳಾಗಿ ಬದಲಾಗಿವೆ. ವಿದೇಶೀಯರೂ ಸೇರಿದಂತೆ ಇಂದು ಯೋಗವನ್ನರಸಿ ಈ ಸ್ಥಳಗಳಲ್ಲಿ ಭಾರತದ ನಿಜವಾದ ಖುಷಿಯನ್ನು ಕಂಡುಕೊಳ್ಳಲು ಬರುತ್ತಿದ್ದಾರೆ. ಹಾಗಾಗಿ, ಯೋಗ, ಧ್ಯಾನ ಹಾಗೂ ಯೋಗದ ಮೂಲಕ ಆಧ್ಯಾತ್ಮದ ಸಂತೋಷ ಕಾಣಲು ಜನರು ಯಾವೆಲ್ಲ ಜಾಗಗಳಿಗೆ ಪ್ರವಾಸ ಮಾಡಬಹುದು ನೋಡೋಣ.

1. ರಿಷಿಕೇಶ, ಉತ್ತರಾಖಂಡ: ಯೋಗದ ಭಾರತದ ರಾಜಧಾನಿ ಎಂದೇ ಪ್ರಸಿದ್ಧವಾದ ರಿಷಿಕೇಶದಲ್ಲಿ ಯೋಗ ಕಲಿಯಲು, ಯೋಗದ ಮೂಲಕ ಆಧ್ಯಾತ್ಮ ಸಾಧನೆ ಮಾಡಲು ಪ್ರಪಂಚದಾದ್ಯಂತ ಜನರು ಬರುತ್ತಾರೆ. ಉತ್ತರಾಖಂಡದಲ್ಲಿ ಗಂಗೆಯ ಮಡಿಲಲ್ಲಿರುವ ರಿಷಿಕೇಶದಲ್ಲಿ ಯೋಗ ಕಲಿಯಲು ಹಲವಾರು ಆಶ್ರಮಗಳಿವೆ. ಹಿಮಾಲಯದ ತಪ್ಪಲಲ್ಲಿ ಇರುವ ರಿಷಿಕೇಶ ಯೋಗ ಗೂ ಧ್ಯಾನಕ್ಕೆ ಹೇಳಿ ಮಾಡಿಸಿದ ಜಾಗವೂ ಕೂಡಾ. ಮನಸ್ಸಿಗೆ ನೆಮ್ಮಂದಿ ಶಾಂತಿ ನೀಡುವ ಈ ಜಾಗದಲ್ಲಿ ಪರಮಾರ್ಥ ನಿಕೇತನ, ಶಿವಾನಂದ ಆಶ್ರಮ, ಸಾಧನಾ ಮಂದಿರ, ಯೋಗ ನಿಕೇತನ, ಹಿಮಾಲಯನ್‌ ಯೋಗ ಆಶ್ರಮ, ಆನಂದ ಪ್ರಕಾಶ ಆಶ್ರಮ ಇತ್ಯಾದಿ ಆಶ್ರಮಗಳಿದ್ದು, ಇಲ್ಲಿ ಕೆಲವು ದಿನಗಳ ಕಾಲ ನಿಂತು ಯೋಗ ಕಲಿಯಲು ಆಸ್ಪದವಿದೆ.

ರಿಷಿಕೇಶ

2. ಆರೋವಿಲ್ಲೆ, ಪಾಂಡಿಚೇರಿ: ಆರೋವಿಲ್ಲೆ ಭಾರತದ ಮತ್ತೊಂದು ಪ್ರಖ್ಯಾತ ಯೋಗ ಕೇಂದ್ರ. ಇಲ್ಲಿನ ವಿಶೇಷವಾದ ವಾಸ್ತುಶಿಲ್ಪದ ಧ್ಯಾನ ಕೇಂದ್ರದ ಆಕರ್ಷಣೆಗಾಗಿಯೇ ಪ್ರಪಂಚದಾದ್ಯಂತ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಆರೋವಿಲ್ಲೆಯ ಯೋಗ ಹಾಗೂ ಧ್ಯಾನ ಪರಂಪರೆಯು ಭಾರತದ ಇತರ ಆಶ್ರಮಗಳಿಗಿಂತ ಕೊಂಚ ಭಿನ್ನ. ಇಲ್ಲಿನ ವಿಶಾಲವಾದ ಪರಿಸರ, ಶಾಂತಿ ಹಾಗೂ ನೆಮ್ಮದಿಯ ಅನುಭೂತಿ ನೀಡುತ್ತದೆ.

ಪಾಂಡಿಚೆರಿ

3. ಗೋವಾ: ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ಮತ್ತೊಂದು ಭಾರತದ ಸ್ಥಳ ಎಂದರೆ ಅದು ಗೋವಾ. ಇಲ್ಲಿನ ಸಮುದ್ರ ತೀರಗಳು ಭಾರತದ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಸಾಹಸೀ ಪ್ರಿಯ ಪ್ರವಸಿಗರನ್ನು, ನೈಟ್‌ಲೈಫ್‌ ಇಷ್ಟಪಡುವ ಯುವ ಮಂದಿಯನ್ನು ಸೆಳೆದರೂ, ಯೋಗಕ್ಕಾಗಿಯೂ ಹೆಸರುವಾಸಿಯಾಗಿದೆ. ಇಲ್ಲಿನ ಹಲವು ರೆಸಾರ್ಟ್‌ಗಳು ಪ್ರವಾಸಿಗರಿಗೆ ಯೋಗ ಕಲಿಕೆಯ ಅನುಭವವನ್ನೂ ನೀಡುತ್ತದೆ. ಮುಖ್ಯವಾಗಿ ವಿದೇಶೀ ಪ್ರವಾಸಿಗರು, ಭಾರತದ ಯೋಗದ ರುಚಿಯನ್ನು ಪಡೆಯಲು ಇಂಥ ಕೋರ್ಸುಗಳನ್ನು ತಮ್ಮ ಪ್ರವಾಸದ ಸಂದರ್ಭ ಆಯ್ಕೆ ಮಾಡುತ್ತಾರೆ.

ಗೋವಾ

ಇದನ್ನೂ ಓದಿ: Travel Tips: ರಾತ್ರಿಯಾಕಾಶದ ನಕ್ಷತ್ರಪುಂಜಗಳನ್ನು ನೋಡಬೇಕೆಂದರೆ ನೀವು ಇಲ್ಲಿಗೆ ಪ್ರವಾಸ ಮಾಡಿ!

4: ವಾರಣಾಸಿ, ಉತ್ತರ ಪ್ರದೇಶ: ಭಾರತದ ಅತ್ಯಂತ ಪುರಾತನ ಪಟ್ಟಣ ಎಂಬ ಹೆಗ್ಗಳಿಕೆಯ ಕಾಶಿಯ್ನು ಶಿವನೇ ಕಟ್ಟಿದ್ದು ಎಂಬ ನಂಬಿಕೆ ಹಿಂದೂಗಳದ್ದು. ಇಂಥ ಕಾಶಿಗೂ ಆದ್ಯಾತ್ಮಕ್ಕೂ ಅವಿನಾಭಾವ ಸಂಬಂಧ. ಹಾಗಾಗಿಯೇ ಯೋಗವೂ ಅಷ್ಟೆ, ಇಲ್ಲಿನ ಮಂದಿಯ ನಿತ್ಯದ ಸಾಧನೆ. ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶೀಯರನ್ನು ಸೆಳೆಯುವ ವಾರಣಾಸಿಯ ಗಂಗಾ ತೀರದಲ್ಲಿ ಯೋಗಾಭ್ಯಾಸ ಮಾಡುವುದೇ ಮನಸ್ಸಿಗೆ ಉಲ್ಲಾಸ, ನೆಮ್ಮದಿ ನೀಡುವ ಗಳಿಗೆ.

ವಾರಾಣಸಿ

5. ಧರ್ಮಶಾಲಾ, ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಧರ್ಮಶಾಲಾ ಅತ್ಯಂತ ಸುಂದರ ಜಾಗ. ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರಿದಿರುವ ಬೌದ್ಧ ಮಂದಿರಗಳಿರುವ ಶಾಂತಿ, ನೆಮ್ಮದಿಗೆ ಇನ್ನೊಂದು ಹೆಸರಿದು. ಇದೂ ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ವಿದೇಶೀ ಪ್ರವಾಸಿಗರನ್ನು ಸೆಳೆವ ಜಾಗ. ಹೀಗಾಗಿ ಸಹಜವಾಗಿಯೇ ಇದೂ ಯೋಗ, ಧ್ಯಾನದಂತಹ ಚಟುವಟಿಕೆಗಳ ಸೇವೆಯನ್ನು ಪ್ರವಾಸಿಗರಿಗೆ ಒದಗಿಸು ಜಾಗವೂ ಆಗಿ ಪ್ರಸಿದ್ಧಿ ಪಡೆಯುತ್ತಿದೆ.

ಇದನ್ನೂ ಓದಿ: Travel Tips: ಬೆಟ್ಟದ ಹಾದಿಯಲ್ಲಿ ಪ್ರವಾಸಕ್ಕೆ ಮೊದಲು ಈ ಆಹಾರಗಳನ್ನು ತಿನ್ನದಿರಿ!

Exit mobile version