ಸ್ಯಾನ್ ಜೋಸ್: ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ಎಲ್‌ಗೆ ಸೇರಿದ ವಿಮಾನ ತುರ್ತು ಭೂಸ್ಪರ್ಶ ಮಾಡುವ ವೇಳೆ ಎರಡು ತುಂಡಾಗಿದೆ. ಕೋಸ್ಟರಿಕಾದ ಸ್ಯಾನ್ ಜೋಸ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಳಿಯುವಾಗ ವಿಮಾನದಿಂದ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ವಿಮಾನ ರನ್‌ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ವಿಮಾನ ಎರಡು ತುಂಡಾಗಿದೆ.
ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ತಿಳಿಸಿದ್ದಾರೆ. ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಸ್ಯಾನ್ ಜೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಕೆಲಕಾಲ ಮುಚ್ಚಲಾಗಿತ್ತು.
ಬೋಯಿಂಗ್-757 ಸರಕು ಸಾಗಣೆ ವಿಮಾನ ಸ್ಯಾನ್ ಜೋಸ್‌ನ ಜುವಾನ್ ಸಾಂತಾಮಾರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಬೆಳಿಗ್ಗೆ 10:30ರ ಸಮಯದಲ್ಲಿ ರನ್ ವೇನಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಯಾಂತ್ರಿಕ ವೈಫಲ್ಯದಿಂದಾಗಿ ವಿಮಾನ ತುರ್ತು ಲ್ಯಾಂಡಿಂಗ್‌ಗೆ ಮುಂದಾದಾಗ ಈ ದುರ್ಘಟನೆ ನಡೆದಿದೆ.
ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆ ಉಂಟಾದ ಬಗ್ಗೆ ಪೈಲಟ್‌ಗಳು ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಪೈಲಟ್ ಕೊಂಚ ವಿಚಲಿತರಾದರೂ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಅವರಿಗೆ ಎಲ್ಲವೂ ಸ್ಪಷ್ಟವಾಗಿ ನೆನಪಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.