ಆಮ್‌ಸ್ಟರ್‌ಡಂ: ಅಕ್ಕ ಪಕ್ಕ ನೀರು. ಮಧ್ಯದಲ್ಲಿ ರಸ್ತೆ. ಈ ರೀತಿಯ ಸುಂದರ ಪ್ರಕೃತಿಯ ನಡುವೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಿಮ್ಮ ಕಾರು ಮಾಯವಾಗಿಬಿಟ್ಟರೆ? ಹೌದು. ಇಂತದ್ದೊಂದು ವಿಸ್ಮಯ ಕಾಣಸಿಗುವುದು ನೆದರ್ಲೆಂಡ್‌ನ ರಿವರ್ಸ್ ಬ್ರಿಜ್‌ನಲ್ಲಿ (Reverse Bridge).
ಇಲ್ಲಿ ವಿಶಾಲವಾದ ಎರಡು ರಸ್ತೆಗಳಿವೆ. ಅದರಲ್ಲಿ ವೇಗವಾಗಿ ವಾಹನಗಳು ಸಾಗುತ್ತವೆ ಕೂಡಾ. ಆದರೆ, ಒಂದು ದೊಡ್ಡ ನೀರಿನ ತೊರೆ ಹರಿಯುತ್ತದೆ. ವಾಹನಗಳೆಲ್ಲ ಹೋಗಿ ಆ ತೊರೆಯಲ್ಲಿ ಬಿದ್ದು ಕಣ್ಮರೆಯಾದಂತೆ ನಮಗೆ ಕಾಣಿಸುತ್ತವೆ. ತೊರೆಯ ಮೇಲೆ ಹಾಯಿ ದೋಣಿಗಳು ಹಾಯಾಗಿ ಸಾಗುತ್ತಲೇ ಇರುತ್ತವೆ!
ಇದು ಹೇಗೆ ಸಾಧ್ಯ? ಏನಿದು ವಿಸ್ಮಯ ಅಂದುಕೊಂಡಿರಾ? ಇದೊಂಥರಾ ನಿಜಕ್ಕೂ ಎಂಜಿನಿಯರಿಂಗ್ ವಿಸ್ಮಯವೇ. ಈ ಸೇತುವೆಯನ್ನು ಮೇಲಿನಿಂದ ನೀವು ನೋಡಿದರೆ ಸೇತುವೆ ವಾಹನಗಳನ್ನು ನುಂಗಿಕೊಳ್ಳುತ್ತಿರುವಂತೆ ಕಾಣಿಸುತ್ತದೆ. ಎಲ್ಲೆಡೆ ನೀರಿನ ಮೇಲ್ಭಾಗದಲ್ಲಿ ಸೇತುವೆ ನಿರ್ಮಿಸಿ, ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ, ಇಲ್ಲಿ ಸೇತುವೆಯ ಅಡಿ ಭಾಗದಲ್ಲೇ ವಾಹನಗಳು ಸಂಚರಿಸುತ್ತವೆ. ಸೇತುವೆಯ ಮೇಲೆ ನೀರು ಹರಿಯುವುದಕ್ಕೆ ಜಾಗ ಕೊಡಲಾಗಿದೆ. ಅಷ್ಟೇ ಅಲ್ಲದೆ ಚಿಕ್ಕ ಪುಟ್ಟ ದೋಣಿ, ಹಡಗುಗಳೂ ಸಹ ಈ ಸೇತುವೆಯ ಮೇಲ್ಭಾಗದಲ್ಲಿ ಸಂಚರಿಸುತ್ತವೆ. ಪ್ರಪಂಚದಲ್ಲಿಯೇ ಈ ರೀತಿ ನೀರಿನ ಕೆಳಭಾಗದಲ್ಲಿ ವಾಹನ ಚಲಿಸುವಂತೆ ಮಾಡಿರುವ ಸೇತುವೆಗಳಲ್ಲಿ ಇದೇ ದೊಡ್ಡದು.
ಇದನ್ನೂ ಓದಿ: Viral story | ಬರೋಬ್ಬರಿ 51 ವರ್ಷಗಳ ನಂತರ ಸಿಕ್ಕಿದ ಕಿಡ್ನ್ಯಾಪ್ ಆದ ಮಗು!
ಈ ಸೇತುವೆಯ ಸುಂದರವಾದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ವಿನ್ ಫೂ ಹೆಸರಿನವರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಸಾವಿರಾರು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಒಮ್ಮೆ ಈ ಸುಂದರ ಸೇತುವೆ(Reverse Bridge)ಯನ್ನು ಕಣ್ಣಾರೆ ನೋಡಬೇಕು” ಎಂದು ಕಾಮೆಂಟ್ ಮಾಡಲಾರಂಭಿಸಿದ್ದಾರೆ.
ಅಂದ ಹಾಗೆ ಈ ಸೇತುವೆಯನ್ನು 2002ರಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. 25 ಮೀಟರ್ ಉದ್ದವಿರುವ ಈ ಸೇತುವೆಗೆ ವೇಲುವಮೆರ್ ಅಕ್ವಾಡಕ್ಟ್(Veluwemeer Aquaduct) ಎನ್ನುವ ಹೆಸರೂ ಇದೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಮಡಿಲು ಈ ಬೆಕ್ಕಿಗೆ ಸುಪ್ಪತ್ತಿಗೆ!; ಓಡೋಡಿ ಬಂದು ತೊಡೆ ಏರಿದ ಮಾರ್ಜಾಲ