Site icon Vistara News

Assembly Session : ಸಚಿವ ಜಮೀರ್‌ ಅಹಮದ್ ವಜಾಕ್ಕೆ ಬಿಜೆಪಿ ಪಟ್ಟು;‌ ಸದನದಲ್ಲಿ ಕೋಲಾಹಲ

Karnataka Assembly Session Zameer ahmad Khan R Ashok

ಬೆಳಗಾವಿ: ಮುಸ್ಲಿಂ ಶಾಸಕರೊಬ್ಬರು ನಡೆದುಬರುತ್ತಿದ್ದಂತೆಯೇ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಕೂಡಾ ಎದ್ದು ನಿಂತು ನಮಸ್ಕಾರ್‌ ಸಾಬ್‌ ಎಂದು ಹೇಳುವ ಹಾಗೆ ಕಾಂಗ್ರೆಸ್‌ ಮಾಡಿದೆ ಎಂದು ಸ್ಪೀಕರ್‌ ಸ್ಥಾನದ (Speaker post) ಬಗ್ಗೆ ಮಾತನಾಡಿದ್ದ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer ahmad Khan) ಅವರು ಹಿಂದುಗಳಿಗೆ, ಸ್ಪೀಕರ್‌ ಹುದ್ದೆಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜತೆಗೆ ಜಮೀರ್‌ ಅಹಮದ್‌ ಖಾನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ (BJP urges for Dissmissal of Zameer Khan) ನೀಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ (Assembly Session) ಕೋಲಾಹಲವೆಬ್ಬಿಸಿದೆ.

ವಿಧಾನ ಮಂಡಲ ಅಧಿವೇಶನ ಸೋಮವಾರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರದಲ್ಲಿ ಅಷ್ಟೇನೂ ಸದ್ದು ಮಾಡದ ಪ್ರತಿಪಕ್ಷ ಎರಡನೇ ವಾರವಾದರೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಉದ್ದೇಶದಿಂದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಹಿಡಿದುಕೊಂಡು ಹೋರಾಟ ನಡೆಸಲು ಮುಂದಾಗಿದೆ. ಸೋಮವಾರ ಮುಂಜಾನೆ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್‌ ಅಶೋಕ್ ನೇತೃತ್ವದಲ್ಲಿ ಉಭಯ ಸದನಗಳ ಪ್ರಮುಖ ನಾಯಕರ ಸಭೆ ನಡೆಸಲಾಯಿತು.

ಇದರಲ್ಲಿ ಸ್ಪೀಕರ್‌ ಸ್ಥಾನಕ್ಕೆ ಅಪಮಾನ ಮಾಡಿದ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ರಾಜೀನಾಮೆಗೆ ಒತ್ತಾಯ ಮಾಡಲು ನಿರ್ಧರಿಸಲಾಯಿತು. ಅದರ ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿರುವ ʻಹಲೋ ಅಪ್ಪʼ ವಿಚಾರವನ್ನೂ ಪ್ರಸ್ತಾಪಿಸಲು ನಿರ್ಧರಿಸಲಾಯಿತು.

ಜಮೀರ್‌ ಅಹಮದ್‌ ಖಾನ್‌ ಉತ್ತರ ನೀಡಲು ಆಕ್ಷೇಪ

ಈ ನಡುವೆ, ಸದನ ಸಮಾವೇಶಗೊಂಡು ಸ್ವಲ್ಪ ಹೊತ್ತಿನಲ್ಲಿ ಹಡಗಲಿ ಶಾಸಕ ಕೃಷ್ಣಾ ನಾಯ್ಕ್ ಪ್ರಶ್ನೆಗೆ ಉತ್ತರಿಸಲು ಸಚಿವ ಜಮೀರ್ ಅಹಮದ್ ಖಾನ್‌ ಮುಂದಾದರು. ಆಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತೆಲಂಗಾಣ ಚುನಾವಣಾ ಪ್ರಚಾರದ ವೇಳೆಯ ಹೇಳಿಕೆ ಪ್ರಸ್ತಾಪಿಸಿ ಸದನದಲ್ಲಿ ಉತ್ತರ ನೀಡಲು ಬಿಡುವುದಿಲ್ಲ ಎಂದು ಹೇಳಿದರು.

ನಾವೇನು ಗುಲಾಮರಾ ಎಂದು ಪ್ರಶ್ನಿಸಿದ ಆರ್‌. ಅಶೋಕ್‌

ಜಮೀರ್‌ ಅಹಮದ್‌ ಖಾನ್‌ ಅವರಿಗೆ ಉತ್ತರ ನೀಡಲು ಅವಕಾಶ ನೀಡಕೂಡದು. ನಾವು ಕಾಂಗ್ರೆಸ್‌ನ ಒಬ್ಬ ಶಾಸಕರು ಬಂದಾಗ ಕೈಜೋಡಿಸಿ ನಮಸ್ಕಾರ ಸಾಬ್‌ ಎಂದು ಹೇಳುತ್ತೇವೆ ಎಂದು ಜಮೀರ್‌ ಹೇಳಿದ್ದಾರೆ. ಇದರ ಅರ್ಥ ಏನು? ನಾವೇನು ಗುಲಾಮರಾ ಎಂದು ಪ್ರಶ್ನಿಸಿದರು ವಿಪಕ್ಷ ನಾಯಕ ಆರ್‌ ಅಶೋಕ್‌.

ಸಚಿವ ಜಮೀರ್ ಅಹಮದ್ ಅವರನ್ನು ಸದನಕ್ಕೆ ಪ್ರವೇಶಿಸಲು ಬಿಟ್ಟಿದ್ದು ಯಾಕೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ ಪ್ರಶ್ನಿಸಿದರು. ಆದರೆ, ಬಿಜೆಪಿ ವಿರೋಧಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಯಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ತೀವ್ರ ಮಾತಿನ ಸಮರ ನಡೆಯಿತು.

ಈ ನಡುವೆ ಜಮೀರ್‌ ಅಹಮದ್‌ ಅವರು ಎದ್ದು ನಿಂತು ಮಾತಾಡಲು ಮುಂದಾದರು. ಆಗ ಸಚಿವ ಶಿವಾನಂದ ಪಾಟೀಲ್‌ ಅವರೇ ಜಮೀರ್ ಕೈ ಹಿಡಿದೆಳೆದು ಕೂರಿಸಿ ಮಾತನಾಡದಂತೆ ಸೂಚಿಸಿದರು.

ಅಚ್ಚರಿ ಎಂದರೆ, ಜಮೀರ್ ಅಹಮದ್ ವಿಚಾರದಲ್ಲಿ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸುತ್ತುದ್ದರೂ ಜೆಡಿಎಸ್ ಸದಸ್ಯರು ಅವರ ಜೊತೆ ಕೈ ಜೋಡಿಸದೇ ಮೌನವಾಗಿ ಕುಳಿತಿದ್ದರು. ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಲಾಯಿತು.

ಸ್ಪೀಕರ್‌ ಖಾದರ್‌ ಸಂಧಾನ ಸಭೆ ವಿಫಲ

ಈ ನಡುವೆ, ಸಚಿವ ಜಮೀರ್ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್‌ ಯು.ಟಿ. ಖಾದರ್‌ ಅವರು ಸಂಧಾನ ಸಭೆಯನ್ನು ಆಯೋಜಿಸಿದರು. ಸದನ ಮುಂದೂಡುತ್ತಿದ್ದಂತೆ ವಿಪಕ್ಷ ನಾಯಕರ ಕಚೇರಿಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಭೆ ನಡೆಯಿತು. ಅಂತಿಮವಾಗಿ ಎರಡೂ ಪಕ್ಷಗಳು ಜತೆಯಾಗಿ ಹೋರಾಟ ನಡೆಸಲು ಮುಂದಾದವು.

ಸ್ಪೀಕರ್ ಸಂಧಾನ ಸಭೆಯಲ್ಲಿ ಭಾಗಿಯಾದ ವಿಪಕ್ಷ ನಾಯಕ ಆರ್ ಅಶೋಕ್, ಜೆಡಿಎಸ್ ಉಪನಾಯಕಿ ಶಾರದಾ ಪೂರ್ಯನಾಯಕ್, ವಿಜಯೇಂದ್ರ, ಆರಗ ಜ್ಞಾನೇಂದ್ರ, ಸಚಿವ ಜಮೀರ್ ಅಹ್ಮದ್ ಭಾಗಿಯಾದರು. ಆದರೆ, ಬಿಜೆಪಿ ಶಾಸಕರು ಜಮೀರ್‌ ವಜಾಗೊಳಿಸುವಂತೆ ಆಗ್ರಹ ಮುಂದುವರಿಸಿದರು. ಸ್ಪೀಕರ್‌ ಖಾದರ್‌ ಅವರು ಒಪ್ಪಲಿಲ್ಲ. ಹೀಗಾಗಿ ಧರಣಿ ಮುಂದುವರಿಸಲು ಬಿಜೆಪಿ-ಜೆಡಿಎಸ್‌ ನಾಯಕರು ನಿರ್ಧರಿಸಿದರು.

ಕಲಾಪ ಮರು ಆರಂಭಗೊಳ್ಳುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರ ನಡುವೆ ವಾಗ್ವಾದ ನಡೆಯಿತು. ಈ ನಡುವೆ, ಸ್ಪೀಕರ್‌ ಯು.ಟಿ ಖಾದರ್‌ ಅವರು, ನೊಟೀಸ್ ಕೊಡಿ, ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

ಆದರೆ, ಬಿಜೆಪಿ ನಾಯಕರು ತಮ್ಮ ಪಟ್ಟು ಸಡಿಸಲಿಲ್ಲ. ಜಮೀರ್‌ ವಜಾ ಮಾಡಬೇಕು. ಇಲ್ಲದಿದ್ದರೆ ಸದನ ನಡೆಸಲು ಅವಕಾಶ ನೀಡುವುದಿಲ್ಲ ಅಂತ ಬಿಗಿಪಟ್ಟು ಹಿಡಿದರು.

420 ಜಮೀರ್‌ಗೆ ಧಿಕ್ಕಾರ ಎಂದು ಕೂಗುತ್ತಾ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.

ಅಶೋಕ್‌-ಕಾಂಗ್ರೆಸ್‌ ನಾಯಕರ ನಡುವೆ ವಾಗ್ಯುದ್ಧ

ಜಮೀರ್‌ ಅಹಮದ್‌ ಖಾನ್‌ ಅವರು ಹಿಂದೂಗಳ ಅವಹೇಳನ ಮಾಡಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಿ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು. ಈ ವೇಳೆ ಬಿಜೆಪಿಯವರು ಕೋಮುವಾದಿಗಳು ಎಂದ ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿದರು. ಈ ರೀತಿ ಹೇಳಿಕೆ ಕೊಟ್ಟ ಕಾಂಗ್ರೆಸ್‌ನವರು ಕೋಮುವಾದಿಗಳು ಎಂದು ಬಿಜೆಪಿಯವರು ಹೇಳಿದರು. ಇದರ ನಡುವೆ ಜಮೀರ್‌ ಅವರು ಸದನದಲ್ಲು ಉತ್ತರ ನೀಡಲು ಮುಂದಾದರು. ಬಿಜೆಪಿ-ಜೆಡಿಎಸ್ ಪ್ರತಿಭಟನೆ ನಡುವೆ ಜಮೀರ್ ಉತ್ತರ ಕೇಳಿಸಲೇ ಇಲ್ಲ.

ಇದನ್ನೂ ಓದಿ : Assembly Session : ಬಿಜೆಪಿಯಲ್ಲಿ ಎರಡು ಗುಂಪಿದೆ, ಸಮನ್ವಯ ಅಸಾಧ್ಯ ಎಂದ ಸಿದ್ದರಾಮಯ್ಯ

ಕೋಮು ಭಾವನೆ ಸೃಷ್ಟಿಸಿವರನ್ನು ಹಿಂದೆ ವಜಾ ಮಾಡಲಾಗಿದೆ.

ಹಿಂದೆ ಕೋಮು ಭಾವನೆ ಸೃಷ್ಟಿಸಿದ ಸಚಿವರನ್ನು ವಜಾ ಮಾಡಿದ ಉದಾಹರಣೆಗಳಿವೆ. ಎಸ್.ಎಂ ಕೃಷ್ಣಾ ಅವರ ಕಾಲದಲ್ಲಿ ವಜಾ ಮಾಡಿದ್ದಾರೆ ಎಂದು ಆರ್‌. ಅಶೋಕ್‌ ಹೇಳಿದರು. ʻʻನೀವು ಸಿದ್ದರಾಮಯ್ಯ, ಶಿವಕುಮಾರ್ ಅಂತ ಹೆಸರಿಟ್ಟುಕೊಂಡಿದ್ದೀರಿ. ಹಿಂದುಗಳಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಆದರೂ ಮೌನವಾಗಿದ್ದೀರಿ. ನಿಮಗೆ ನಾಚಿಕೆ ಆಗಲ್ವಾʼʼ ಎಂದು ಅಶೋಕ್ ಪ್ರಶ್ನಿಸಿದರು.

ಈ ನಡುವೆ ಎದ್ದು ನಿಂತು ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಜಮೀರ್‌ ಅಹಮದ್‌ ಅವರು ಸ್ಪೀಕರ್ ಕುರ್ಚಿ ಬಗ್ಗೆ ಹೇಳಿದ್ದಾರೆ. ಸ್ಪೀಕರ್ ಕುರ್ಚಿಯ ಬಗ್ಗೆ ಅಷ್ಟೇ ಹೇಳಿದ್ದಾರೆ. ಅದನ್ನ ಬಿಟ್ಟು ಯಾವುದೇ ಕೋಮು ಬಾವನೆ ಕದಡುವ ಕೆಲಸ ಆಗಿಲ್ಲ. ಸದನದ ಸಮಯ ವ್ಯರ್ಥ ಮಾಡಬೇಡಿ. ಬರದ ವಿಚಾರ ಚರ್ಚೆ ಮಾಡಬೇಕಿದೆ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕಿದೆ. ಯಾರಿಗೂ ಅಗೌರವ ತರುವ ಕೆಲಸ ಜಮೀರ್ ಮಾಡಿಲ್ಲ. ಸದನ ವ್ಯರ್ಥ ಮಾಡೋದು ಸರಿಯಲ್ಲ. ನೋಟೀಸ್ ಕೊಡದೆ ಚರ್ಚೆ ಮಾಡೋದು ಸರಿಯಲ್ಲ. ಬನ್ನಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಅಂತ ಸಲಹೆ ನೀಡಿದರು.

ವಿರೋಧ ಪಕ್ಷಗಳ ಧರಣಿಗೆ ಸ್ಪೀಕರ್ ಖಾದರ್‌ ಕೂಡಾ ಗರಂ ಆದರು. ʻʻಬರಗಾಲ ಹಾಗೂ ಉತ್ತರ ಕರ್ನಾಟಕ ಚರ್ಚೆ ಮಾಡಿ. ಈ ರೀತಿಯಲ್ಲಿ ಧರಣಿ ಮಾಡಿ ಸಮಯ ಹಾಳು ಮಾಡಬೇಡಿʼʼ ಎಂದು ಬುದ್ಧಿ ಮಾತು ಹೇಳಿದರು.

Exit mobile version