ಬೆಳಗಾವಿ: ಕೇಂದ್ರ ಸರ್ಕಾರದಿಂದ ಬರುವ ಒಟ್ಟು ತೆರಿಗೆಯ ರಾಜ್ಯದ ಪಾಲು (States part in total tax) ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ (Central project) ಬರಬೇಕಾದ ಅನುದಾನ 40,000 ಕೋಟಿ ರೂ. ಕಡಿತವಾಗಿದೆ. ಪರಿಣಾಮ ರಾಜ್ಯ ಹಣಕಾಸು ಪರಿಸ್ಥಿತಿ (Financial status) ಮೇಲೆ ಒತ್ತಡ ಹೆಚ್ಚಿದ್ದು, ನಾವು ನಮ್ಮ ಸಂಪನ್ಮೂಲದ ಮೇಲೆಯೇ ಹೆಚ್ಚು ಅವಲಂಬಿಸಬೇಕಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ತಿಳಿಸಿದರು. ರಾಜ್ಯ ಬಜೆಟ್‌ನಲ್ಲಿ ಕೇಂದ್ರದ ಪಾಲು ವರ್ಷದಿಂದ ವರ್ಷಕ್ಕೆ ಇಳಿಯುತ್ತಿರುವುದನ್ನು ಅವರು ಅಂಕಿ ಅಂಶಗಳ ಮೂಲಕ ತೆರೆದಿಟ್ಟರು.
ಗುರುವಾರ ವಿಧಾನ ಪರಿಷತ್ (Assembly Session) ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್, “2018-19ನೇ ಸಾಲಿನಿಂದ 2022-23ರ ಸಾಲಿನವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗಾಗಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಬಿಡುಗಡೆಯಾದ ಅನುದಾನ ಎಷ್ಟು? ಈ ಅನುದಾನದಲ್ಲಿ ಖರ್ಚಾದ ಹಣ ಎಷ್ಟು?” ಎಂದು ಪ್ರಶ್ನಿಸಿದ್ದರು.
ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, “ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಹೋಲಿಕೆ ಮಾಡಿದರೆ, ಕೇಂದ್ರದಿಂದ 5 ವರ್ಷಗಳಲ್ಲಿ ಸುಮಾರು 40,000 ಕೋಟಿ ರೂ. ಅನುದಾನ ಕಡಿತವಾಗಿದೆ. ಇದರಿಂದ ನಮ್ಮ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ” ಎಂದು ಬೇಸರ ವ್ಯಕ್ತಪಡಿಸಿದರು.
2017-18ನೇ ಸಾಲಿನಲ್ಲಿ ಅಂದಿನ ಸರ್ಕಾರ 2.37 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದಾಗ ಕೇಂದ್ರ ಸರ್ಕಾರ 43,369 ಕೋಟಿ ರೂ. (ಶೇ.23.3) ಅನುದಾನ ನೀಡಿತ್ತು. ಪ್ರಸ್ತುತ 3.25 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿದ್ದು, ಕೇಂದ್ರದಿಂದ ನಮಗೆ ಸಿಗುವುದು ಕೇವಲ 56,000 ಕೋಟಿ ರೂ. ಅಂದರೆ ಕೇವಲ ಶೇ. 17.5 ಮಾತ್ರ. ನಮ್ಮ ಬಜೆಟ್ ಗಾತ್ರ ಹೆಚ್ಚುತ್ತಿದೆಯೇ ಹೊರತು, ಕೇಂದ್ರದ ಪಾಲು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಬಜೆಟ್ ಗಾತ್ರಕ್ಕೆ ತಕ್ಕಂತೆ ಅನುದಾನ ನೀಡಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಪುರಸ್ಕೃತ ಯೋಜನೆಯಿಂದ 20,000 ಕೋಟಿ ರೂ. ಹಾಗೂ ಜಿಎಸ್‍ಟಿ ಪರಿಹಾರವಾಗಿ 20,000 ಕೋಟಿ ರೂ. ರಾಜ್ಯಕ್ಕೆ ಬರಬೇಕು. ವರ್ಷದಿಂದ ವರ್ಷಕ್ಕೆ ಕೇಂದ್ರದ ತೆರಿಗೆ ಪಾಲು ಕಡಿಮೆಯಾಗುತ್ತಿದೆಯೇ ಹೊರತು, ಹೆಚ್ಚಳವಾಗುತ್ತಿಲ್ಲ. ನಮ್ಮ ಪಾಲು ಮಾತ್ರ ಹೆಚ್ಚಾಗುತ್ತಲೇ ಇದೆ. ಕೇಂದ್ರ ಸರ್ಕಾರ ನಮಗೆ ಆರ್ಥಿಕ ವರ್ಷದ ಅವಯೊಳಗೆ ನಮ್ಮ ಪಾಲಿನ ಹಣವನ್ನು ಕೊಡಬಹುದು ಎಂದು ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಜಿಎಸ್‌ಟಿ ಪರಿಹಾರ 11,495 ಕೋಟಿ ರೂ. ಬರಬೇಕು
14 ಮತ್ತು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರಕ್ಕೆ 5495 ಕೋಟಿ ರೂ. ವಿಶೇಷ ಅನುದಾನ ಹಾಗೂ 6,000 ಕೋಟಿ ರೂ. ಜಿಎಸ್‍ಟಿ ಪರಿಹಾರ ಸೇರಿದಂತೆ ರಾಜ್ಯಕ್ಕೆ 11,495 ಕೋಟಿ ರೂ. ಅನುದಾನ ಬರಬೇಕು. ಕಳೆದ ಆ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಪತ್ರ ಬರೆದು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡಿಲ್ಲ. ಖಂಡಿತವಾಗಿಯೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್ ಜತೆ ಶಾಸಕರ ಜಗಳ!
ಜಿಎಸ್‍ಟಿ ಪರಿಹಾರವಾಗಿ 2339 ಕೋಟಿ ರೂ. ಹಾಗೂ ಕೇಂದ್ರ ಪುರಸ್ಕೃತ ಯೋಜನೆಗೆ 1,191 ಕೋಟಿ ರೂ. ಬಾಕಿ ಇದ್ದು, ಇದನ್ನು ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಿದ್ದೇವೆ. ಕೇಂದ್ರ ಸರ್ಕಾರ ನಮಗೆ ಅನುದಾನವನ್ನು ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು.
ಈ ವರ್ಷ 76 ಸಾವಿರ ಕೋಟಿ ರೂ. ಅನುದಾನ ದೊರೆಯಬೇಕಿತ್ತು
ಒಂದು ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದಾಗ, ಶೇ. 23ರಷ್ಟು ಕೇಂದ್ರದ ಅನುದಾನ ದೊರೆಯುತ್ತಿತ್ತು. ಈಗ ಮೂರು ಲಕ್ಷ ಕೋಟಿ ರೂ. ಗೂ ಹೆಚ್ಚು ಬಜೆಟ್ ಮಂಡಿಸಿರುವಾಗ 76 ಸಾವಿರ ಕೋಟಿ ರೂ. ಅನುದಾನ ದೊರೆಯಬೇಕು. ದುರ್ದೈವವೆಂದರೆ, ಬಜೆಟ್ ಗಾತ್ರವನ್ನೇ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ನಮ್ಮ ಸಂಪತ್ತಿನ ಮೇಲೆ ನಾವು ಅವಲಂಬಿತವಾಗಿರುವುದರಿಂದ ನಮಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.