Site icon Vistara News

Budget Session : ಏಯ್‌ ಬಾರೋ, ಬಾ ಬಾ.. ಧಮ್ಮಿದ್ರೆ ಬಾರೋ; ಮೇಲ್ಮನೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ಮಾರಾಮಾರಿ

Budget session N Ravi kumar

ಬೆಂಗಳೂರು: ಚಿಂತಕರ ಚಾವಡಿ ಎಂದೇ ಕರೆಯಲಾಗುವ ವಿಧಾನ ಪರಿಷತ್‌ನಲ್ಲಿ (Legislative Council) ಕಾಂಗ್ರೆಸ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ (Abdul Jabbar Congress) ಅವರು ಬಿಜೆಪಿಯ ಎನ್‌. ರವಿ ಕುಮಾರ್ (N Ravi kumar BJP) ಅವರ ಮೇಲೆ ಏಕವಚನ ಪ್ರಯೋಗ ನಡೆಸಿದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಬುಧವಾರ ವಿಧಾನ ಪರಿಷತ್‌ನಲ್ಲಿ (Budget Session) ʻಪಾಕಿಸ್ತಾನ್‌ ಜಿಂದಾಬಾದ್‌ʼ (Pakistan Zindabad) ಘೋಷಣೆ ವಿಚಾರದಲ್ಲಿ ನಡೆದ ಮಾತಿನ ಸಮರದ ನಡುವೆ ಬೈದಾಟ ಆರಂಭಗೊಂಡು ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಪರಿಸ್ಥಿತಿಯಲ್ಲೂ ನಿರ್ಮಾಣವಾಯಿತು. ಏಯ್‌ ಬಾರೋ.. ಧಮ್ಮಿದ್ರೆ ಬಾರೋ, ನೋಡೇ ಬಿಡೋಣ ಎಂಬೆಲ್ಲ ಪದ ಪ್ರಯೋಗಗಳು ನಡೆದವು.

ಒಂದು ಹಂತದ ಜಗಳ ನಡೆದು ಕಲಾಪವನ್ನು ಮುಂದೂಡಿ ಮರಳಿ ಸೇರಿದಾಗ ಬಿಜೆಪಿಯ ಎನ್‌. ರವಿ ಕುಮಾರ್‌ ಮಾತು ಆರಂಭಿಸಿದರು.

ʻʻನಿನ್ನೆ ವಿಧಾನ ಸೌಧದಲ್ಲಿ ನಡೆದ ಘಟನೆ ಬಗ್ಗೆ ಮನೆಯಲ್ಲಿ ಚರ್ಚೆ ಆಗುತ್ತಿದೆ. ನಮ್ಮ ಅಭ್ಯರ್ಥಿ ಗೆದ್ದ ವೇಳೆ ಇರಬಹುದು, ಕಾಂಗ್ರೆಸ್ ನ ಅಜಯ್‌ ಮಾಕೆನ್‌ ಗೆದ್ದ ವೇಳೆ ಈ ತರಹ ಘೋಷಣೆ ಕೂಗಿಲ್ಲ. ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಈ ರೀತಿಯ ಘೋಷಣೆ ಕೂಗಿದ್ದಾರೆ. ವಿಧಾನ ಸೌಧದಲ್ಲಿ ನೂರಾರು ಅಧಿಕಾರಿಗಳ ಇದ್ದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅವಮಾನ. ವಿಭಜನೆ ಆಗಿರುವ ಪಾಕಿಸ್ತಾನ ಪರ ಘೋಷಣೆ ಕೂಗುವುದು ಎಷ್ಟು ಸರಿ? ದೇಶವೇ ತಲೆ ತಗ್ಗಿಸುವ ಕೆಲಸʼʼ ಎಂದು ರವಿ ಕುಮಾರ್‌ ಹೇಳಿದರು.

ರವಿಕುಮಾರ್ ಮಾತನಾಡುವ ವೇಳೆ ಕಾಂಗ್ರೆಸ್ ಯುಬಿ ವೆಂಕಟೇಶ್ ʻʻನೀವೆ ಕಳುಹಿಸಿ ಕೊಟ್ಟಿದ್ರಿ ಅನ್ಸುತ್ತೆʼʼ ಎಂದು ಕೆಣಕಿದರು. ಆಗ ರವಿ ಕುಮಾರ್‌ ಅವರು ಚರ್ಚೆಯ ನಡುವೆ, ಕಾಂಗ್ರೆಸ್ ಸರ್ಕಾರವನ್ನು ದೇಶ ದ್ರೋಹಿ ಎಂದರು.

ರವಿ ಕುಮಾರ್‌ ಅವರ ಮಾತಿಗೆ ಕಾಂಗ್ರೆಸ್ ಸದಸ್ಯರು ‌ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶ ದ್ರೋಹಿ ಸರ್ಕಾರ ಎಂದ ಬಿಜೆಪಿ ಸದಸ್ಯರಿಗೆ ʻʻನಿಮ್ಮ ಕೇಂದ್ರ ಸರ್ಕಾರಕ್ಕೆ ಹೇಳಿ ನಮ್ಮ ಸರ್ಕಾರದ ಮೇಲೆ ಕೇಸ್ ಬುಕ್ ಮಾಡಿʼʼ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸವಾಲು ಹಾಕಿದರು.

ಆಗ ಸದನದಲ್ಲಿ ಮತ್ತೆ ಗದ್ದಲ ಹೆಚ್ಚಾಯಿತು. ಈ ನಡುವೆ ರವಿಕುಮಾರ್ ಮಾತನಾಡುವ ವೇಳೆ ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್‌ ಬಾಯಿ ಮುಚ್ಚು ಎಂದು ಹೇಳಿದರು.

ಇದರಿಂದ ಸಿಟ್ಟುಗೊಂಡ ರವಿ ಕುಮಾರ್‌ ತಮ್ಮ ಜಾಗದಿಂದ ಎದ್ದು ಸದನದ ಬಾವಿ ಬಳಿ ಹೋದರು, ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಅದಕ್ಕೆ ಭಾರತ್ ಮಾತಾಕಿ ಜೈ ಎಂದು ಕಾಂಗ್ರೆಸ್ ಸದಸ್ಯರು ಪ್ರತಿ ಘೋಷಣೆ ಕೂಗಿದರು.

ಅವನ ಬಾಯಿ ಬಂದ್‌ ಮಾಡಿ ಎಂದು ರವಿ ಕುಮಾರ್‌ ವಿರುದ್ಧ ಜಬ್ಬಾರ್‌ ಆಡಿದ ಮಾತು ಬಿಜೆಪಿ ಸದಸ್ಯರನ್ನು ರೊಚ್ಚಿಗೆಬ್ಬಿಸಿತು. ಎಲ್ಲರೂ ಸದನದ ಬಾವಿ ಬಳಿ ಹೋದರು. ಏಕ ವಚನ ಮಾತಾಡಿದರೆ ಸರಿ ಇರಲ್ಲ ಎಂದು ರವಿಕುಮಾರ್ ಎದ್ದು ಹೋದರು. ರವಿಕುಮಾರ್ ಜೊತೆಗೆ ತುಳಸಿ ಮುನಿರಾಜು ಗೌಡ ಮುನ್ನುಗ್ಗಿ ಹೋಗಿ ವಾರ್ನಿಂಗ್ ಕೊಟ್ಟರು. ಆಗ ಸ್ಪೀಕರ್ ಖುರ್ಚಿ ಎದುರು ಕೈಕೈ ಮಿಲಾಯಿಸುವ ಹಂತ ಸೃಷ್ಟಿಯಾಯಿತು. ಆಗ ಮಾರ್ಷಲ್‌ಗಳು ಬಂದು ಎಲ್ಲರನ್ನೂ ಬಿಡಿಸಿದರು.

ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದ ಸಭಾಪತಿ ಮರಳಿ ಸೇರಿದಾಗ ಕಠಿಣ ಎಚ್ಚರಿಕೆ ನೀಡಿದರು. ʻʻಇನ್ನೊಮ್ಮೆ ಸದನದಲ್ಲಿ ಯಾರಾದರೂ ಬೇಕಾಬಿಟ್ಟಿ ಮಾತಡಿದರೆ ನಾನು ಸಹಿಸಲ್ಲ. ಸಭಾಪತಿ ಹೇಳಿದ್ರೂ ಕೇಳುವುದಿಲ್ಲ ಅಂದ್ರೆ ಏನರ್ಥʼʼ ಎಂದರು. ಇನ್ನೊಮ್ಮೆ ಸದನದಲ್ಲಿ ಏಕ ವಚನದಲ್ಲಿ‌ ಮಾತನಾಡದಂತೆ ಎಲ್ಲಾ ಸದಸ್ಯರಿಗೂ ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ : Budget session : ಉಭಯ ಸದನಗಳಲ್ಲಿ ಜಿಂದಾಬಾದ್‌ ಕೋಲಾಹಲ ; ಭಾರತ್‌ ಮಾತಾಕಿ ಜೈ ಘೋಷಣೆ

ಪಾಕ್‌ ಪರ ಘೋಷಣೆ ಸುಳ್ಳಿನ ಸೃಷ್ಟಿ ಎಂದ ಎಚ್‌ಕೆ ಪಾಟೀಲ್‌; ಪರಿಷತ್‌ನಲ್ಲೂ ಕೋಲಾಹಲ

ವಿಧಾನ ಪರಿಷತ್‌ ಕಲಾಪ ಜಿಂದಾಬಾದ್‌ ಘೋಷಣೆಯಿಂದಲೇ ಆರಂಭವಾಗಿತ್ತು. ಬಿಜೆಪಿ ಸದಸ್ಯರು ಭಾರತ್‌ ಮಾತಾಕಿ ಘೋಷಣೆ ಕೂಗಿದರೆ ಕಾಂಗ್ರೆಸ್‌ ಸದಸ್ಯರೂ ಅದೇ ಘೋಷಣೆ ಮೊಳಗಿಸಿದರು.

ಕಾಂಗ್ರೆಸ್ ಸರ್ಕಾರ ವಜಾ ಮಾಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಆಗ ಕಾಂಗ್ರೆಸ್‌ನ ಸಲೀಂ ಅಹಮದ್ನೊ ಟೀಸ್ ನೀಡದೇ ವಿಷಯ ಪ್ರಸ್ತಾಪ ಮಾಡಬಾರದು ಎಂದು ಆಕ್ಷೇಪ ಮಾಡಿದರು.

ಆಗ ಕೋಟ ಶ್ರೀನಿವಾಸ ಪೂಜಾರಿ ಅವರು, ವಿಧಾನಸೌಧದಲ್ಲೇ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆಗ ಎಲ್ಲಿ ಹೋಗಿದ್ದೀರಿ ಎಂದು ಕೇಳಿದರು. ಅದಕ್ಕೆ ಸಲೀಂ ಅಹಮದ್‌ ಅವರು ಯಾರೂ ಅಂಥ ಘೋಷಣೆ ಕೂಗಿಲ್ಲ ಎಂದರು.

ಮೇಲ್ಮನೆ ಸದಸ್ಯ ಎಚ್.ಕೆ. ಪಾಟೀಲ್‌ ಅವರು ಕೂಡಾ ಚುನಾವಣಾ ಸಂದರ್ಭದಲ್ಲಿ ಯಾವ ಅಭ್ಯರ್ಥಿ ಗೆದ್ದಿರುತ್ತಾನೋ ಆ ಅಭ್ಯರ್ಥಿ ಪರ ಘೋಷಣೆ ಕೂಗ್ತಾರೆ. ಪಾಕಿಸ್ತಾನ ಘೋಷಣೆ ಸುಳ್ಳಿ ಸೃಷ್ಟಿ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಕಿಡಿ ಕಾರಿದರು.

ಇದಕ್ಕೆ ಉತ್ತರ ನೀಡಿದ ಎಚ್ಕೆ ಪಾಟೀಲ್, ನನಗೆ ಕೇಳಿದ್ದನ್ನು ಹೇಳಿದ್ದೇನೆ. ಇದರಾಚೆಗೆ ಘೋಷಣೆ ಕೇಳಿದ್ದರೆ ದೂರು ನೀಡಿದ್ದೀರಿ ಕಾನೂನಾತ್ಮಕ ಕ್ರಮ ಕೈಗೊಳ್ತೇವೆ ಎಂದರು.

ಆಗ ಕೋಟ ಶ್ರೀನಿವಾಸ ಪೂಜಾರಿ ಅವರು, ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ? ಸರ್ಕಾರಕ್ಕೆ ನಾಚಿಕೆ ಅನ್ನೋದೇ ಇಲ್ವಾ? ಸಿಎಂ ಬಂದು ಇಲ್ಲಿ ಉತ್ತರ ಕೊಡಬೇಕು. ಇಡೀ ರಾಜ್ಯಕ್ಕೆ ಕೇಳಿದ ಘೋಷಣೆ ಸರ್ಕಾರಕ್ಕೆ ಕೇಳಿಲ್ವಾ? ಕಾಂಗ್ರೆಸ್ ಧೋರಣೆ ಪಾಕಿಸ್ತಾನ ಪರವೋ ಯಾರ ಪರ? ಎಂದು ಕೇಳಿದರು.

ಆಗ ಬಿ.ಕೆ ಹರಿಪ್ರಸಾದ್‌, ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದಿದ್ದು ಯಾರು? ಎಂದು ತಿವಿದರು. ಇದರಿಂದ ಮತ್ತಷ್ಟು ಕೆರಳಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಈ ಸರ್ಕಾರದಂತ ಕೆಟ್ಟ ಸರ್ಕಾರ ಇಲ್ಲ. ಪಾಕಿಸ್ತಾನ ಘೋಷಣೆ ಕೂಗಿದವರ ಪರ ದಾಖಲೆ ಹುಡುಕ್ತಿದ್ದೀರ? ಇಂಥ ಸರ್ಕಾರ ಬೇರೆ ಕಡೆ ಇದ್ದಿದ್ದರೆ ವಜಾ ಆಗ್ತಿತ್ತು.
ಸಿಎಂ ರಾಜೀನಾಮೆ ನೀಡಬೇಕು ಎಂದರು. ಆಗ ಸದನವನ್ನು ಮುಂದಕ್ಕೆ ಹಾಕಲಾಯಿತು.

Exit mobile version