Site icon Vistara News

Budget session : ಉಭಯ ಸದನಗಳಲ್ಲಿ ಜಿಂದಾಬಾದ್‌ ಕೋಲಾಹಲ ; ಭಾರತ್‌ ಮಾತಾಕಿ ಜೈ ಘೋಷಣೆ

Budget session BJP front

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್‌ ಹುಸೇನ್‌ (Nasir Husein) ಅವರ ವಿಜಯೋತ್ಸವದ ಸಂದರ್ಭದಲ್ಲಿ ವಿಧಾನಸೌಧದ (Vidhana Soudha) ಆವರಣದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಘೋಷಣೆ ಕೂಗಿದ ಘಟನೆ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ (Budget Session) ಭಾರಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ.‌ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ, ಭಾರತ ಮಾತಾ ಕಿ ಜೈ ಘೋಷಣೆಗಳ ನಡುವೆ ಭಾರಿ ಗದ್ದಲ ಸೃಷ್ಟಿಯಾಗಿದೆ.

ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯ ಬಗ್ಗೆ ಅಧಿವೇಶನದಲ್ಲೇ ಪ್ರಶ್ನಿಸಲು ತೀರ್ಮಾನ ಮಾಡಿದ್ದ ಬಿಜೆಪಿ ಸದಸ್ಯರು ಭಾರತದ ಧ್ವಜ ಹೊತ್ತು ಮೆರವಣಿಗೆ ಮೂಲಕವೇ ವಿಧಾನ ಸೌಧಕ್ಕೆ ಬಂದರು. ಬಿಜೆಪಿಯ ಎಲ್ಲಾ ಶಾಸಕರು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಬೆಳಗ್ಗೆ ಶಾಸಕರ ಭವನದಿಂದ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸಿದರು. ರಾಜ್ಯ ವಿಧಾನಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದನ್ನು ಖಂಡಿಸಲಾಯಿತು. ರಾಜ್ಯ ಸರಕಾರದ ಜನವಿರೋಧಿ ಕ್ರಮ ವಿರೋಧಿಸಿ ಈ ವಿಶಿಷ್ಟ ರೀತಿಯ ಪ್ರತಿಭಟನೆ ಮಾಡಿದ್ದಾಗಿ ಬಿಜೆಪಿ ತಿಳಿಸಿತು.

ವಿಧಾನ ಸಭೆಯಲ್ಲಿ ಮೊಳಗಿದ ಭಾರತ್‌ ಮಾತಾ ಕೀ ಜೈ, ಸ್ಪೀಕರ್‌ ನಡೆಗೆ ಆಕ್ಷೇಪ

ಬುಧವಾರ ನಿತ್ಯದ ಸಮಯಕ್ಕೆ ಕಲಾಪ ಆರಂಭ ಆಗಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದರೂ ಕಲಾಪವೇ ಶುರುವಾಗಲಿಲ್ಲ. ಈ ಹಂತದಲ್ಲಿ ಜಿಂದಾಬಾದ್ ಜಿಂದಾಬಾದ್ ಭಾರತ್‌ ಮಾತಾ ಕೀ ಜೈ ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌ ಯು.ಟಿ. ಖಾದರ್‌ ಅವರು, ʻʻನನಗೆ ಅಪಮಾನ ಮಾಡಬೇಡಿ. ರಾಷ್ಟ್ರದ್ವಜಕ್ಕೆ ಅವಮಾನ ಮಾಡಬೇಡಿʼʼ ಎಂದು ಹೇಳಿದರು.

ಆಗ ಬಿಜೆಪಿ ಶಾಸಕರು ಸ್ಪೀಕರ್‌ ಮೇಲೆ ಮುಗಿಬಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸಿದ ಖಾದರ್‌ ಅವರು, ʻʻಅಗೌರವಯುತವಾಗಿ ಭಾರತ ಬಾವುಟ ತಂದಿದ್ದಾರೆ ಅಂತ ನನ್ನ ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಮುರಿದ್ರೆ ಕ್ರಮ ಕೈಗೊಳ್ಳಬೇಕಾಗುತ್ತದೆʼʼ ಎಂದು ಎಚ್ಚರಿಸಿದರು.

ಆಗ ಆರ್‌. ಅಶೋಕ್‌ ಅವರು, ಬೆದರಿಕೆಗೆ ಹೆದರಲ್ಲ ಎಂದರು. ಭಾರತ ಬಾವುಟ ಹಿಡಿಯುವುದು ಗೌರವ. ಪಾಕಿಸ್ತಾನಕ್ಕೆ ಜೈ ಅನ್ನೋರನ್ನ ಬಿಡ್ತೀರಾ ಎಂದು ಧ್ವನಿಯೇರಿಸಿದರು.

ಬಿಜೆಪಿ ಶಾಸಕರು ಸ್ಪೀಕರ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗ ಆಡಳಿತ ಮತ್ತು ವಿಪಕ್ಷ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಸತ್ತಿಗೆ ಸ್ಮೋಕ್‌ ಬಾಂಬ್‌ ಕೊಂಡೊಯ್ದ ಪ್ರಕರಣದ ಬಗ್ಗೆ‌ ಯಾರೋ ಹೇಳಿದಾಗ ಪ್ರತಿಕ್ರಿಯಿಸಿದ ಆರ್‌. ಅಶೋಕ್‌ ಅವರು, ಸಂಸತ್‌ನಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿಲ್ಲ. ವಿಧಾನ ಸೌಧದಲ್ಲಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ : Sedition Case : ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಆರೋಪ ; ಕಾಂಗ್ರೆಸ್‌ ವಾದವೇನು?

ಭಯದ ವಾತಾವರಣ ಸೃಷ್ಟಿ ಎಂದ ಅಶೋಕ್‌

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಆರ್ ಆಶೋಕ್ ಅವರು, ಕರ್ನಾಟಕದ ಏಳುವರೆ ಕೋಟಿ ಜನ ಹೃದಯ ಇರೋದು ಇಲ್ಲಿಯೇ. ಇಂಥ ಜಾಗದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದರು.

ಇಷ್ಟೊಂದು ಜನರು ಪೊಲೀಸರು ಇದ್ದರೂ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಲಾಯಿತು. ನಾವು ಬಜೆಟ್ ಮಂಡಿಸುವಾಗ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದರು. ಈಗ ರಾಜ್ಯದ ಜನರ ಕಿವಿಯಲ್ಲಿ ಹೂ ಇಡಬೇಡಿ. ನಂಬಕ್ಕೆ ಯಾರೂ ರೆಡಿ ಇಲ್ಲ. ಎಲ್ಲ ವಾಹಿನಿಗಳು ವಿಡಿಯೋ ಪ್ರಸಾರ ಮಾಡಿವೆ. ನಮ್ಮ ವಿರುದ್ಧ ಬೇಕಿದ್ರೆ ಕ್ರಮ ಕೈಗೊಳ್ಳಲಿ. ಮಾಧ್ಯಮಗಳ ಮೇಲೂ ಬೇಕಿದ್ರೆ ಪ್ರಕರಣ ದಾಖಲಿಸಿ ಎಂದು ಹೇಳಿದರು.

ʻʻನಮಗೆ ಇವರನ್ನು ನೋಡಿದರೆ ಭಯ ಆಗ್ತಿದೆ. ಇನ್ನಷ್ಟು ಭಯೋತ್ಪಾದಕರು ಒಳಗೆ ಬಂದಿರಬಹುದು. ಇಂಥವರಿಗೆ ರಾಜ್ಯಸಭಾ ಟಿಕೆಟ್‌ ಕೊಟ್ರಿʼʼ ಎಂದು ಅಶೋಕ್‌ ಹೇಳಿದರು.

ಈ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ‌ಸದಸ್ಯರ ಪಟ್ಟು ಹಿಡಿದರು. ಭಾರತ್‌ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.

ಸಚಿವ ಜಮೀರ್ ಅಹಮದ್‌ ಖಾನ್‌ ಅವರು, ಸಂಸತ್‌ನಲ್ಲಿ ಆದ ಸ್ಮೋಕ್ ಬಾಂಬ್ ಘಟನೆ ಪ್ರಸ್ತಾಪ ಮಾಡಿದಾಗ, ಜಮೀರ್ ಗೆ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಬೆಂಬಲಿಸಿದರು. ಅಶೋಕ್‌ ಹೇಳಿಕೆಗೆ ತಿರುಗೇಟು ನೀಡಿದ ದಿನೇಶ್‌ ಗುಂಡೂ ರಾವ್‌ ನೀವೇ ಇದನ್ನೆಲ್ಲ ಮಾಡಿಸಿರಬಹುದು ಎಂದು ಹೇಳಿದರು.

ಆಗ ಸದನದಲ್ಲಿ ಗದ್ದಲ ಉಂಟಾಗಿ ಸುಮಾರು 10 ನಿಮಿಷಗಳ ಕಾಲ ಸದನವನ್ನು ಮುಂದೂಡಲಾಯಿತು.

ಈ ಸಂದರ್ಭದಲ್ಲಿ ಸ್ಪೀಕರ್‌ ಕಚೇರಿಯಲ್ಲಿ ಸಭೆ ನಡೆದು ಮುಂದೆ ನಾಲ್ವರು ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡುವುದು ಮತ್ತು ಸರ್ಕಾರ ಅದಕ್ಕೆ ಉತ್ತರ ಕೊಡುವುದು ಎಂದು ತೀರ್ಮಾನಿಸಲಾಯಿತು.

ಪಾಕ್‌ ಪರ ಘೋಷಣೆ ಸುಳ್ಳಿನ ಸೃಷ್ಟಿ ಎಂದ ಎಚ್‌ಕೆ ಪಾಟೀಲ್‌; ಪರಿಷತ್‌ನಲ್ಲೂ ಕೋಲಾಹಲ

ವಿಧಾನ ಪರಿಷತ್‌ನಲ್ಲೂ ಇದೇ ವಿಚಾರ ಪ್ರಸ್ತಾಪವಾಗಿ ಕೋಲಾಹಲ ಉಂಟಾಗಿದೆ. ಬಿಜೆಪಿ ಸದಸ್ಯರು ಭಾರತ್‌ ಮಾತಾಕಿ ಘೋಷಣೆ ಕೂಗಿದರೆ ಕಾಂಗ್ರೆಸ್‌ ಸದಸ್ಯರೂ ಅದೇ ಘೋಷಣೆ ಮೊಳಗಿಸಿದರು.\

ಕಾಂಗ್ರೆಸ್ ಸರ್ಕಾರ ವಜಾ ಮಾಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಆಗ ಕಾಂಗ್ರೆಸ್‌ನ ಸಲೀಂ ಅಹಮದ್ನೊ ಟೀಸ್ ನೀಡದೇ ವಿಷಯ ಪ್ರಸ್ತಾಪ ಮಾಡಬಾರದು ಎಂದು ಆಕ್ಷೇಪ ಮಾಡಿದರು.

ಆಗ ಕೋಟ ಶ್ರೀನಿವಾಸ ಪೂಜಾರಿ ಅವರು, ವಿಧಾನಸೌಧದಲ್ಲೇ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆಗ ಎಲ್ಲಿ ಹೋಗಿದ್ದೀರಿ ಎಂದು ಕೇಳಿದರು. ಅದಕ್ಕೆ ಸಲೀಂ ಅಹಮದ್‌ ಅವರು ಯಾರೂ ಅಂಥ ಘೋಷಣೆ ಕೂಗಿಲ್ಲ ಎಂದರು.

ಮೇಲ್ಮನೆ ಸದಸ್ಯ ಎಚ್.ಕೆ. ಪಾಟೀಲ್‌ ಅವರು ಕೂಡಾ ಚುನಾವಣಾ ಸಂದರ್ಭದಲ್ಲಿ ಯಾವ ಅಭ್ಯರ್ಥಿ ಗೆದ್ದಿರುತ್ತಾನೋ ಆ ಅಭ್ಯರ್ಥಿ ಪರ ಘೋಷಣೆ ಕೂಗ್ತಾರೆ. ಪಾಕಿಸ್ತಾನ ಘೋಷಣೆ ಸುಳ್ಳಿ ಸೃಷ್ಟಿ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಕಿಡಿ ಕಾರಿದರು.

ಇದಕ್ಕೆ ಉತ್ತರ ನೀಡಿದ ಎಚ್ಕೆ ಪಾಟೀಲ್, ನನಗೆ ಕೇಳಿದ್ದನ್ನು ಹೇಳಿದ್ದೇನೆ. ಇದರಾಚೆಗೆ ಘೋಷಣೆ ಕೇಳಿದ್ದರೆ ದೂರು ನೀಡಿದ್ದೀರಿ ಕಾನೂನಾತ್ಮಕ ಕ್ರಮ ಕೈಗೊಳ್ತೇವೆ ಎಂದರು.

ಆಗ ಕೋಟ ಶ್ರೀನಿವಾಸ ಪೂಜಾರಿ ಅವರು, ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ? ಸರ್ಕಾರಕ್ಕೆ ನಾಚಿಕೆ ಅನ್ನೋದೇ ಇಲ್ವಾ? ಸಿಎಂ ಬಂದು ಇಲ್ಲಿ ಉತ್ತರ ಕೊಡಬೇಕು. ಇಡೀ ರಾಜ್ಯಕ್ಕೆ ಕೇಳಿದ ಘೋಷಣೆ ಸರ್ಕಾರಕ್ಕೆ ಕೇಳಿಲ್ವಾ? ಕಾಂಗ್ರೆಸ್ ಧೋರಣೆ ಪಾಕಿಸ್ತಾನ ಪರವೋ ಯಾರ ಪರ? ಎಂದು ಕೇಳಿದರು.

ಆಗ ಬಿ.ಕೆ ಹರಿಪ್ರಸಾದ್‌, ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದಿದ್ದು ಯಾರು? ಎಂದು ತಿವಿದರು. ಇದರಿಂದ ಮತ್ತಷ್ಟು ಕೆರಳಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಈ ಸರ್ಕಾರದಂತ ಕೆಟ್ಟ ಸರ್ಕಾರ ಇಲ್ಲ. ಪಾಕಿಸ್ತಾನ ಘೋಷಣೆ ಕೂಗಿದವರ ಪರ ದಾಖಲೆ ಹುಡುಕ್ತಿದ್ದೀರ? ಇಂಥ ಸರ್ಕಾರ ಬೇರೆ ಕಡೆ ಇದ್ದಿದ್ದರೆ ವಜಾ ಆಗ್ತಿತ್ತು.
ಸಿಎಂ ರಾಜೀನಾಮೆ ನೀಡಬೇಕು ಎಂದರು. ಆಗ ಸದನವನ್ನು ಮುಂದಕ್ಕೆ ಹಾಕಲಾಯಿತು.

Exit mobile version