Site icon Vistara News

Karnataka Budget Session 2024 : ರಾಜ್ಯಪಾಲರ ಮೂಲಕವೇ ಕೇಂದ್ರಕ್ಕೆ ಕೌಂಟರ್‌ ಕೊಟ್ಟ ಕಾಂಗ್ರೆಸ್‌!

Karnataka Budget session 2024 Thawar Chand Gehlot

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಬಜೆಟ್‌ ಅಧಿವೇಶನ (Karnataka Budget Session 2024) ಸೋಮವಾರ (ಫೆ. 12) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಅವರ ಭಾಷಣದ ಮೂಲಕ ಆರಂಭವಾಗಿದೆ. ತೆರಿಗೆ ಮತ್ತು ಅನುದಾನ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ಸರ್ಕಾರ (Congress Government) ರಾಜ್ಯಪಾಲರ ಭಾಷಣದಲ್ಲೂ (Governor Speach) ಅದೇ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಗವರ್ನರ್‌ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೌಂಟರ್‌ (Central governments Non Cooperation) ಕೊಟ್ಟಿದೆ.

ಫೆಬ್ರವರಿ 12ರಿಂದ ಫೆಬ್ರವರಿ 23ರವರೆಗೆ ಅಧಿವೇಶನ ನಡೆಯಲಿದ್ದು, ಫೆಬ್ರವರಿ 16ರಂದು ಕರ್ನಾಟಕ ರಾಜ್ಯ ಬಜೆಟ್ ​(Karnataka budget) ಮಂಡನೆಯಾಗಲಿದೆ. ಇದು 16ನೇ ವಿಧಾನಸಭೆಯ 3ನೇ ಅಧಿವೇಶನವಾಗಿದೆ. ಫೆ.16ರಂದು ಮುಖ್ಯಮಂತ್ರಿಯವರು 2024-25ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಾಲ ಪ್ರಶೋತ್ತರ ಕಲಾಪ ನಿಗದಿಪಡಿಸಲಾಗಿದೆ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಅವರು ತಿಳಿಸಿದ್ದರು..

ಇದನ್ನೂ ಓದಿ | CM Siddaramaiah: 5 ವರ್ಷದಲ್ಲಿ 73 ಸಾವಿರ ಕೋಟಿ ರೂ. ಕಡಿತ; ಕೇಂದ್ರದ ವಿರುದ್ಧ ಸಿಎಂ ಗರಂ

ಬರ ಪರಿಹಾರ, ತೆರಿಗೆ ಪಾಲು ನೀಡದ ಕೇಂದ್ರ : ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ

ತೆರಿಗೆ ಕಟ್ಟುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆ ಪಾಲು ಪಡೆಯುವ. ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ರಾಜ್ಯ ತೀವ್ರ ಬರದಿಂದ ತತ್ತರಿಸುತ್ತಿದ್ದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ ಎಂಬ ಅಂಶವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಮಾತನಾಡುತ್ತಾ ಹೇಳಿದರು. ಈ ಮೂಲಕ ರಾಜ್ಯ ಸರ್ಕಾರವು ರಾಜ್ಯಪಾಲರ ಮೂಲಕವೇ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ಉಲ್ಲೇಖ ಮಾಡಿದ ರಾಜ್ಯಪಾಲರು ಗ್ಯಾರಂಟಿಗಳಿಂದ ಆರ್ಥಿಕತೆಗೆ ಉತ್ತೇಜನ ನೀಡಲಾಗಿದೆ ಎಂದು ಹೇಳಿದರು.

ಕಳೆದ ಎಂಟು ತಿಂಗಳಲ್ಲಿ ರಾಜ್ಯಕ್ಕೆ 77 ಸಾವಿರ ಕೋಟಿ ಬಂಡವಾಳ ಹರಿದು ಬಂದಿದೆ ಎಂದ ರಾಜ್ಯಪಾಲರು, ನನ್ನ ಸರ್ಕಾರ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ಸಿದ್ಧವಿದೆ. ಆದರೆ ವಿವಿಧ ಮೂಲಗಳಿಂದ ಸಿಗಬೇಕಾದ ಸಂಪನ್ಮೂಲ ಸಿಗುತ್ತಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಅಸಹಕಾರ ತೋರುತ್ತಿದೆ ಎಂದು ಉಲ್ಲೇಖಿಸಿದರು. ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲು ಪಡೆಯಲು ಎಲ್ಲಾ ರೀತಿ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

ರಾಜ್ಯದ 31 ಜಿಲ್ಲೆಗಳಿಗೆ 324 ಕೋಟಿ ರೂ. ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಲಾಗಿದೆ. ಆದರೆ, ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಬರ ತೀವ್ರ ಸ್ವರೂಪದಲ್ಲಿ ಇರುವ ಹಿನ್ನೆಲೆಯಲ್ಲಿ 18171 ಕೋಟಿ ರೂ. ಆರ್ಥಿಕ ನೆರವು ಕೇಳಲಾಗಿದೆ. ಆದರೆ ಇದುವರೆಗೂ ಕೇಂದ್ರದಿಂದ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದಿದ್ದಾರೆ ರಾಜ್ಯಪಾಲರು.

ಕನ್ನಡ ನಾಮಫಲಕ ಕಡ್ಡಾಯ ಜಾರಿಯ ಭರವಸೆ

ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ವಿಚಾರವನ್ನೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ʻʻಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -22 ರೂಪಿಸಲಾಗಿದೆ. ನಾಮಫಲಕಗಳು 60% ಕನ್ನಡದಲ್ಲಿಯೇ ಇರಬೇಕು ಎಂದು ತೀರ್ಮಾನ ಮಾಡಲಾಗಿದೆ. ಕನ್ನಡ ಅಭಿವೃದ್ಧಿ ಕಾಯ್ದೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆʼʼ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ -2 ಯೋಜನೆ ಶೀಘ್ರವೇ ಕಾರ್ಯಾರಂಭ

ರಾಜ್ಯದಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆಯ ಇಂದಿರಾ ಕ್ಯಾಂಟೀನ್-2 ಯೋಜನೆಯ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಲಾಗಿದೆ. 2ನೇ ಹಂತದಲ್ಲಿ ಹೊಸ ಪಟ್ಟಣಗಳಲ್ಲಿ ಹಾಗೂ ಕ್ಯಾಂಟೀನ್ ನಿರ್ಮಾಣವಾಗದೆ ಇರುವ ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್ ಮಾಡಲಾಗುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಮೆನುವಿನೊಂದಿಗೆ 188 ಹೊಸ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಅವುಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಬಜೆಟ್‌ ಅಧಿವೇಶನದ ಲೈವ್‌ ಇಲ್ಲಿ ನೋಡಿ

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಕಲಾಪ ಮುಂದೂಡಿಕೆ

ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಎರಡು ಅಧಿವೇಶನಗಳ ನಡುವೆ ನಿಧನರಾದ ಸದನದ ಸದಸ್ಯರು ಮತ್ತು ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಪರಿಷತ್ ಮಾಜಿ ಸದಸ್ಯರಾದ ಮಾರುತಿರಾವ್ ಡಿ ಮಾಲೆ ಎಸ್ ಎ ಜಿದ್ದಿ, ಹಿರಿಯ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿ,ಜಾನಪದ ವಿದ್ವಾಂಸ ಡಾ. ಅಮೃತಸೋಮೇಶ್ವರ,ಗುರುಲಿಂಗಪ್ಪ ವೀರಸಂಗಪ್ಪ ಕರಡಿಯವರಿಗೆ ಸಂತಾಪ ಸೂಚಿಸಲಾಯಿತು.

ವಿಧಾನ ಸಭೆಯನ್ನು ಮಂಗಳವಾರ ಬೆಳಗ್ಗೆ 9.30ಕ್ಕೆ ಮತ್ತು ವಿಧಾನ ಪರಿಷತ್‌ನ್ನು ಮಂಗಳವಾರ ಬೆಳಗ್ಗೆ 10.30ಕ್ಕೆ ಮುಂದೂಡಲಾಯಿತು.

Exit mobile version