ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ (Karnataka Budget Session 2024) ಕೇಸರಿ ಶಾಲು, ಜೈ ಶ್ರೀರಾಂ, ಭಾರತ್ ಮಾತಾ ಕೀ ಜೈ, ಜೈ ಭೀಮ್ ಮೊದಲಾದ ಘೋಷಣೆಗಳು ಮೊಳಗಿ ಹೊಸ ಇತಿಹಾಸವನ್ನೇ ಬರೆದವು. ಸದನದಲ್ಲಿ ಜೈ ಶ್ರೀರಾಂ (Jai Shri Ram) ಘೋಷಣೆ ಮೊಳಗಿಸಿದ್ದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.
ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನಕ್ಕೆ ಬಿಜೆಪಿಯ ವಿಧಾನ ಪರಿಷತ್ ಮತ್ತು ವಿಧಾನಸಭೆ ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಶಾಸಕ ಎಸ್‌ಟಿ ಸೋಮಶೇಖರ್ ಮತ್ತು ಎಂಎಲ್‌ಸಿ ಎಂ.ಟಿ.ಬಿ ನಾಗರಾಜ್ ಅವರನ್ನು ಹೊರತುಪಡಿಸಿ ಎಲ್ಲರೂ ಕೇಸರಿ ಶಾಲಿನಲ್ಲಿದ್ದರು.
ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿ ನಿಲ್ಲಿಸುವಾಗ ಅಂತ್ಯದಲ್ಲಿ ಬೋಲೋ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿದರು. ಆಗ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದರು. ಇದಾದ ಕೂಡಲೇ ಬಿಜೆಪಿ ಶಾಸಕರು ಜೈ ಶ್ರೀರಾಮ್ ಘೋಷಣೆಯನ್ನು ಮೊಳಗಿಸಿದರು. ಮೂರ್ನಾಲ್ಕು ಬಾರಿ ಘೋಷಣೆ ಮೊಳಗಿಸುತ್ತಿದ್ದಂತೆಯೇ ಕಾಂಗ್ರೆಸ್‌ನವರು ಬೋಲೋ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹಾಕಿದರು. ಅದರ ನಡುವೆ ಜೈ ಭೀಮ್, ಜೈ ಬಸವಣ್ಣ ಎಂಬ ಘೋಷಣೆಗಳೂ ಮೊಳಗಿತು.
ಇದನ್ನೂ ಓದಿ: Karnataka Budget Session 2024: ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ಶಾಸಕರು; ಎಡವಿದ ಎಸ್.ಟಿ. ಸೋಮಶೇಖರ್
Karnataka Budget Session 2024: ಜೈ ಭೀಮ್ ಘೋಷಣೆ ಸಮರ್ಥಿಸಿದ ಸಂತೋಷ್ ಲಾಡ್
ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಿದ್ದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರಿಗೆ ಈಗ ಚುನಾವಣೆ ನೆನಪಾಗಿದೆ. ಹೀಗಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ ಎಂದು ಕೆಲವು ನಾಯಕರು ಹೇಳಿದ್ದಾರೆ.
ಸದನದಲ್ಲಿ ಜೈ ಶ್ರೀರಾಮ್ ಮತ್ತು ಜೈಭೀಮ್ ಘೋಷಣೆ ಮೊಳಗಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್ ಅವರು, ʻʻನಾವೇನೂ ಅವರಿಗೆ ಠಕ್ಕರ್ ಕೊಡಲು ಜೈ ಭೀಮ್ ಅಂತ ಹೇಳಿಲ್ಲ. ಹಾಗಂತ ನಾವು ಜೈ ಭೀಮ್ ಅಂತ ಹೇಳಬಾರದಾ.? ಈಗ ಚುನಾವಣೆ ಬಂದಿದೆ. ಹೀಗಾಗಿ ಕೇಸರಿ ಶಾಲು ನೆನಪಾಗಿದೆ. ಚುನಾವಣೆ ಮುಗಿದ ಮೇಲೆ ಅದರ ನೆನಪು ಇರೋದಿಲ್ಲ ಅಷ್ಟೆʼʼ ಎಂದರು.
ಐದು ಗ್ಯಾರಂಟಿ ಜಾರಿಗೊಳಿಸಿದ್ದು ಸುಳ್ಳಾ? ಎಂದು ಕೇಳಿದ ಎಂ.ಬಿ. ಪಾಟೀಲ್
ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ನಾವು ಐದು ಗ್ಯಾರಂಟಿ ಜಾರಿಗೊಳಿಸಿದ್ದು ಸುಳ್ಳಾ.? ಜನರು ಅದರ ಲಾಭ ಪಡೆದಿದ್ದು ಸುಳ್ಳಾ? ಅನ್ನಭಾಗ್ಯ, ಶಕ್ತಿ, ಗೃಹ ಲಕ್ಷ್ಮಿ, ಯುವನಿಧಿ ಸುಳ್ಳಾ.? ಸುಳ್ಳು ಎಲ್ಲಿಂದ ಬರುತ್ತೆ? ಬಿಜೆಪಿಯೇ ಸುಳ್ಳಿನ ಫ್ಯಾಕ್ಟರಿ. ನಾವು ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಲ್ಲಿರೋ ಹಣ ತಂದು ಅಕೌಂಟಿಗೆ ಹಾಕ್ತೀವಿ ಅಂದ್ರು, ಹಾಕಿದ್ರಾ.? ರೈತರ ಹಣ ದ್ವಿಗುಣ ಮಾಡ್ತೀವಿ ಅಂದ್ರು ಮಾಡಿದ್ರಾ.? ಉದ್ಯೋಗ ಸೃಷ್ಟಿ ಅಂದ್ರು ಆಯ್ತಾ.? ಎಂದು ಪ್ರಶ್ನಿಸಿದರು.
ಸದನದಲ್ಲಿ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿಕೊಂಡು ಬಂದದ್ದು, ಜೈ ಶ್ರೀರಾಮ್, ಜೈ ಬಸವಣ್ಣ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಜೈ ಬಸವಣ್ಣ, ಜೈ ವಾಲ್ಮೀಕಿ, ಜೈ ಶ್ರೀರಾಮ್ ಎಲ್ಲವನ್ನೂ ಹೇಳ್ತೀವಿ. ಬಸವಣ್ಣ ಅವರನ್ನು ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿ ಮಾಡಿದ್ದೇವೆ. ಸರ್ವಜನಾಂಗದ ಶಾಂತಿಯ ತೋಟ ಬಸವಣ್ಣನವರ ತತ್ವ ಆದರ್ಶವಾಗಿದೆ. ಕೇಸರಿ ಏನು ಇವರ ಸ್ವತ್ತಲ್ಲ. ನಾವು ಲಿಂಗಾಯತ ಮಠಗಳಲ್ಲಿ ಕೂಡ ಬಳಕೆ ಮಾಡ್ತೀವಿ. ನಮ್ಮ ಮನೆಗಳಲ್ಲಿ ಕೂಡ ಬಳಕೆ ಮಾಡ್ತೀವಿ ಎಂದು ಎಂ.ಬಿ. ಪಾಟೀಲ್ ಹೇಳಿದರು.