ವಿಧಾನಸಭೆ: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಉಪ್ಪು, ಹುಳಿ, ಖಾರ ಪ್ರಸ್ತಾಪವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot) ಅವರ ಬಜೆಟ್ ಮೇಲಿನ ಭಾಷಣದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy), “ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ” ಎಂದು ಟೀಕೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ (Narendra Swamy), ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದ ಎಚ್‌ಡಿಕೆ ಅವರು ಸಿಎಂ ಆದ ತಕ್ಷಣ ತಾಜ್ ವೆಸ್ಟೆಂಡ್‌ನಲ್ಲಿ ಕಾಲ ಕಳೆದರು ಎಂದು ಕಾಲೆಳೆದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ಈ ವೇಳೆ ಚರ್ಚೆ ಆರಂಭಿಸಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉಪ್ಪು ಹುಳಿ ಹಿಂಡೋದೇ ಕೆಲಸವಾಗಿದೆ. ಉಪ್ಪು, ಹುಳಿ ಇಲ್ಲ ಎಂದು ಎಚ್‌ಡಿಕೆ ಹೇಳಿದ್ದಾರೆ. ಮನೆಯ ಊಟಕ್ಕೆ ಉಪ್ಪು, ಹುಳಿ, ಖಾರ ಕಡಿಮೆ ಇರಬಹುದು. ಆದರೆ, ಕಳೆದ ಬಾರಿ ಚುನಾವಣೆಗೂ ಮೊದಲು ಇವರು ಏನು ಹೇಳಿದ್ದರು? ಎಲ್ಲರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಬಳಿಕ ಸಿಎಂ ಆದ ತಕ್ಷಣ ತಾಜ್ ವೆಸ್ಟೆಂಡ್‌ನಲ್ಲಿ ಕಾಲ ಕಳೆದರು ಎಂದು ವ್ಯಂಗ್ಯವಾಡಿದರು.
ಇದಕ್ಕೂ ಮೊದಲು ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನರೇಂದ್ರ ಸ್ವಾಮಿ ಪ್ರಸ್ತಾಪ ಮಾಡಿದರು. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯಪಾಲರು ಈ ಬಗ್ಗೆ ಅಂಕಿ-ಅಂಶ ಸಹಿತ ವಿವರಣೆ ನೀಡಿದ್ದಾರೆ ಎಂದು ಹೇಳಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಅರವಿಂದ ಬೆಲ್ಲದ್, “ಇದು ಸುಳ್ಳು ಭಾಷಣವಾಗಿದೆ. ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ” ಎಂದು ಹೇಳಿದರು.
ಇದಕ್ಕೆ ಕುಪಿತಗೊಂಡ ನರೇಂದ್ರ ಸ್ವಾಮಿ, ಸುಳ್ಳು ಹೇಳಿದ್ದು ಯಾರು? ನೀವು ಬಿಜೆಪಿಯವರು ಸುಳ್ಳು ಹೇಳುವುದು. 15 ಲಕ್ಷ ರೂಪಾಯಿಯನ್ನು ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದಿರಿ. ಇಲ್ಲಿಯವರೆಗೆ ಯಾರ ಅಕೌಂಟಿಗೂ ಆ ಹಣ ಬೀಳಲಿಲ್ಲ. ಇದು ಸುಳ್ಳಲ್ಲದೆ ಮತ್ತಿನ್ನೇನು? ಎಂದು ನರೇಂದ್ರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದರು.
ಮೋದಿ ಭಾರತ್ ರೈಸ್‌ಗೆ ನರೇಂದ್ರಸ್ವಾಮಿ ಆಕ್ಷೇಪ
ಪ್ರಧಾನಿ ನರೇಂದ್ರ ಮೋದಿ ಅವರ ಭಾರತ್ ರೈಸ್ ಬಗ್ಗೆ ಶಾಸಕ ನರೇಂದ್ರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾವು ನಮ್ಮ ಅನ್ನಭಾಗ್ಯ ಯೋಜನೆಗಾಗಿ ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡಿ ಎಂದು ಮನವಿ ಮಾಡಿದರೆ ಕೊಡಲಿಲ್ಲ. ಕೆಜಿಗೆ 34 ರೂಪಾಯಿಯಂತೆ ಕೊಡುತ್ತೇವೆ ಎಂದು ಹೇಳಿದರೂ ಅವರು ಕೊಡಲಿಲ್ಲ. ಈಗ ಕೆಜಿಗೆ 29 ರೂಪಾಯಿಯಂತೆ ಕೇಂದ್ರ ಸರ್ಕಾರ ಭಾರತ್ ರೈಸ್ ಅನ್ನು ಮಾರಾಟ ಮಾಡುತ್ತಿದೆ. ಇದು ಸರೀನಾ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಆಗ ಸದನದಲ್ಲಿ ಕೆಲ ಕಾಲ ಗದ್ದಲದ ಸ್ಥಿತಿ ನಿರ್ಮಾಣವಾಯಿತು.
ಇದನ್ನೂ ಓದಿ: Karnataka Budget Session 2024: ಆಪರೇಷನ್ ಹಸ್ತಕ್ಕೆ ಒಳಗಾಗಿದ್ದ ಜ್ಯೋತಿ ಗಣೇಶ್! ಸದನದಲ್ಲಿ ಬಾಯಿಬಿಟ್ಟ ಡಿಕೆಶಿ
ಆಗ ಬಿಜೆಪಿ ಸದಸ್ಯರು ಎದ್ದು ನಿಂತು ನೀವು ಕೇಂದ್ರದ ಅಕ್ಕಿಯನ್ನು ನಿಮ್ಮದು ಎಂಬುದಾಗಿ ಸುಳ್ಳು ಹೇಳಿ ಹಂಚುತ್ತಿದ್ದೀರಿ. ಈಗ ರಾಜ್ಯದಲ್ಲಿ ಕೊಡುತ್ತಿರುವ 5 ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿರುವುದು. ಆದರೆ, ನೀವು ನಿಮ್ಮದು ಅಂತ ಹೇಳಿಕೊಳ್ಳುತ್ತಿದ್ದೀರಿ. ಈಗ ಕೊಡುತ್ತಿರುವುದು ಮೋದಿ ಅಕ್ಕಿಯಾಗಿದೆ ಎಂದು ಅರವಿಂದ ಬೆಲ್ಲದ್ ಕಿಡಿಕಾರಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನರೇಂದ್ರ ಸ್ವಾಮಿ, ನಾವು ಕೇಳಿದರೆ ಕೇಂದ್ರ ಯಾಕೆ ಅಕ್ಕಿ ಕೊಡ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಉಭಯ ನಾಯಕರ ನಡುವೆ ತೀವ್ರ ವಾಕ್ಸಮರ ನಡೆಯಿತು.