Site icon Vistara News

Karnataka Budget Session 2024: ಕೆಟ್ಟು ನಿಂತ ಕಾಂಗ್ರೆಸ್‌ ಸರ್ಕಾರ; ದಲಿತರ ಹಣ ಬೇರೆಡೆ ಬಳಸಿದ್ದೇಕೆ?: ಆರ್. ಅಶೋಕ್‌

Karnataka Budget Session 2024 R Ashok opposes use of Dalit money for other schemes

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಹಣವಿಲ್ಲದೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಏನು ಹೇಳಿಸಬೇಕೆಂದು ತಿಳಿಯದೆ ಕೇಂದ್ರ ‌ಸರ್ಕಾರದ ಯೋಜನೆಗಳನ್ನೂ ತಮ್ಮದೇ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashok) ಕಿಡಿಕಾರಿದರು. ವಿಧಾನಸಭೆಯಲ್ಲಿ (Karnataka Budget Session 2024) ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಡಿ ಮಾತನಾಡಿದ ಆರ್.‌ ಅಶೋಕ್, ಕಾಂಗ್ರೆಸ್ ಸರ್ಕಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುತ್ತಿದೆ. ಸಚಿವರು ದಾರಿ ಕಾಣದಂತಾಗಿದ್ದು, ಸರ್ಕಾರ ಕೆಟ್ಟು ದುರಸ್ತಿಯಾಗದೆ ಸ್ಥಗಿತಗೊಂಡಿದೆ. ಹಣವನ್ನು ಸಮಾನವಾಗಿ ಹಂಚಬೇಕೆನ್ನುವುದು ಸರ್ಕಾರದ ಉದ್ದೇಶವಂತೆ. ಆದರೆ‌, ತುಳಿತಕ್ಕೊಳಗಾದ ದಲಿತರಿಗೆ ಮೀಸಲಿಟ್ಟ 11,400 ಕೋಟಿ ರೂಪಾಯಿಯನ್ನು ಬೇರೆ ಕಡೆಗೆ ಬಳಸಿದ್ದಾರೆ. ಹಿಂದುಳಿದವರ ಚಾಂಪಿಯನ್‌ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಇಂತಹ ಘನ ಕಾರ್ಯಕ್ಕೆ ಆ ಹಣ ಬಳಸಿದ್ದೇವೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: Karnataka Budget Session 2024: ತಡವಾಗಿ ಬಂದವರ ಮೇಲೆ ಖಾದರ್‌ ಗರಂ; ‌ಸರ್ಕಾರ ಬೀಳಿಸಲು ನಿಂಬೆ ಹಣ್ಣು ಮಂತ್ರ!

ಗೃಹಲಕ್ಷ್ಮಿ ಹಣ ತಲುಪಿಲ್ಲ

ಇನ್ನೂ ಐವತ್ತು ಗ್ಯಾರಂಟಿಯಾದರೂ ಮಾಡಿ. ಆದರೆ, ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಬೇಡಿ. ಮಕ್ಕಳು ಬಸ್ಸಿಲ್ಲದೆ ಜೆಸಿಬಿ, ಕಲ್ಲು ತುಂಬಿಕೊಂಡ ಲಾರಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್ಸುಗಳಿಲ್ಲದೆ, ರೂಟ್‌ಗಳನ್ನು ರದ್ದು ಮಾಡಿ ಜನರಿಗೆ ತೊಂದರೆಯಾಗಿದೆ. ಗುಜರಿಗೆ ಹೋದ ಬಸ್ಸಿಗೆ ಪರ್ಯಾಯವಾಗಿ ಬಸ್ಸು ಖರೀದಿಯಾಗುತ್ತಿದೆಯೇ ಹೊರತು ಹೊಸ ಬಸ್‌ ಖರೀದಿ ಮಾಡಿಲ್ಲ. ಯಾವುದೇ ಕಾರ್ಯಕ್ರಮ ಮಾಡುವಾಗ ಅದರಿಂದ ಏನು ಪರಿಣಾಮ ಎಂದು ಆಲೋಚಿಸಿಲ್ಲ. ಮಹಿಳೆಯರಿಗೆ 2 ಸಾವಿರ ರೂ. ವನ್ನು ಒಂದು ತಿಂಗಳು ಕೊಟ್ಟು, ಮುಂದಿನ ತಿಂಗಳು ಕೊಡಲೇ ಇಲ್ಲ. ಬಾಕಿ ಎಷ್ಟು ಉಳಿಸಿದೆ ಎಂದು ಸರ್ಕಾರ ಸ್ಪಷ್ಟಪಡಿಸಲಿ ಎಂದು ಆರ್.‌ ಅಶೋಕ್‌ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಅಕ್ಕಿ ಬಗ್ಗೆ ಉಲ್ಲೇಖವೇ ಇಲ್ಲ

5 ಕೆಜಿ ಅಕ್ಕಿ ನೀಡುತ್ತೇವೆ ಎಂದು ರಾಜ್ಯಪಾಲರ ಭಾಷಣದಲ್ಲಿದೆ. ಅದು ಕೇಂದ್ರ ಸರ್ಕಾರ ನೀಡುತ್ತಿದ್ದು, ಸೌಜನ್ಯಕ್ಕಾದರೂ ಉಲ್ಲೇಖಿಸಬೇಕಿತ್ತು. ಕೇಂದ್ರದ ಯೋಜನೆಗಳೆಲ್ಲ ತಮ್ಮದೇ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ವಿದ್ಯುತ್‌ ಉಚಿತ ಎಂದು ದರ ಹೆಚ್ಚಿಸಲಾಗಿದೆ. ಅಲ್ಲೇ ದುಡ್ಡು ಕಿತ್ತು ಅಲ್ಲೇ ನೀಡುವುದು ಸಿಎಂ ಸಿದ್ದರಾಮಯ್ಯ ಅವರ ಕೆಲಸ. ಯುವನಿಧಿ ಯೋಜನೆಗೆ ಹಣ ಉಳಿಸಲು ವಿಳಂಬ ಮಾಡಿದ್ದಾರೆ. ಬಂದ ತಕ್ಷಣ ಐದು ಗ್ಯಾರಂಟಿ ಚಾಲೂ ಎಂದು ಮತ್ತೆ ಕೊಡಲೇ ಇಲ್ಲ ಎಂದು ಆರ್.‌ ಅಶೋಕ್‌ ಹೇಳಿದರು.

ರಾಜ್ಯದಲ್ಲಿ 10 ಲಕ್ಷ ಲೀಟರ್‌ ಹಾಲು ಉತ್ಪಾದನೆ ಇಳಿಕೆ!

ಉತ್ತರಪ್ರದೇಶದಲ್ಲಿ 10 ಲಕ್ಷ ಕೋಟಿ ರೂ. ಗುಜರಾತಿನಲ್ಲಿ 26 ಲಕ್ಷ ಕೋಟಿ ರೂ. ಕೈಗಾರಿಕಾ ಒಪ್ಪಂದ ನಡೆದಿದೆ. ಅದನ್ನು ತಿಳಿಸದೆ ಬಂಡವಾಳ ಹೂಡಿಕೆಯಲ್ಲಿ ನಾವೇ ಚಾಂಪಿಯನ್ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ 80-85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಏಳು ತಿಂಗಳಿಂದ 10 ಲಕ್ಷ ಲೀಟರ್ ಇಳಿಕೆಯಾಗಿದೆ. ಮೇವು ಕೊರತೆ, ಬರಗಾಲ, ಕಾಲುಬಾಯಿ ರೋಗ ಮೊದಲಾದ ಕಾರಣಗಳಿಂದ ಹೀಗಾಗಿದೆ. ರೈತರಿಗೆ ಏಳು ತಿಂಗಳಿಂದ 617 ಕೋಟಿ ರೂ. ಪ್ರೋತ್ಸಾಹಧನ ನೀಡಿಲ್ಲ. 5 ರೂ. ಪ್ರೋತ್ಸಾಹಧನ ಕಡಿತಗೊಂಡಿದೆ. ಪ್ರಣಾಳಿಕೆಯಲ್ಲಿ 2 ರೂ. ಎಂದು ಹೇಳಿ ಅದನ್ನು ಕೂಡ ನೀಡಿಲ್ಲ ಎಂದು ಆರ್.‌ ಅಶೋಕ್‌ ದೂರಿದರು.

ಕೋಚಿಮುಲ್‌ನಲ್ಲಿ ಒಂದು ಹುದ್ದೆಗೆ 25-50 ಲಕ್ಷ ರೂ. ಹಣ ಪಡೆಯಲಾಗಿದೆ. ಇಡಿ ದಾಳಿ ಮಾಡಿದಾಗ 50 ಕೋಟಿ ರೂ. ಹಣ ಸಿಕ್ಕಿದೆ. ಮಾತೃಭಾಷೆ ಉಳಿವು ಎಂದು ಹೇಳಿ 200 ಹೋರಾಟಗಾರರನ್ನು ಬಂಧಿಸಿದ್ದಾರೆ. ಕೇಂದ್ರದ ಜಲಜೀವನ್ ಮಿಷನ್ ತಮ್ಮದು ಎಂದು ಆರ್.‌ ಅಶೋಕ್‌ ಹೇಳಿದ್ದಾರೆ.

ಮೇಲಿರುವ ರಸ್ತೆಗಳಲ್ಲೇ ಗುಂಡಿಗಳಿರುವಾಗ ಸುರಂಗ ಎಲ್ಲಿ ಮಾಡುತ್ತಾರೆ?

ಬ್ರ್ಯಾಂಡ್ ಬೆಂಗಳೂರು ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಿದ್ದು, ಸುರಂಗ ರಸ್ತೆ ಬಗ್ಗೆ ಹೇಳಿದ್ದಾರೆ. ಮೇಲಿರುವ ರಸ್ತೆಗಳಲ್ಲೇ ಗುಂಡಿಗಳಿರುವಾಗ ಸುರಂಗ ಎಲ್ಲಿ ಮಾಡುತ್ತಾರೆ ಎಂದು ಯೋಚಿಸಬೇಕು. ಸುರಂಗ ಮಾರ್ಗಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ಇದಕ್ಕೂ ಮೊದಲು ರಸ್ತೆ ದುರಸ್ತಿ ಮಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ. ಬೆಂಗಳೂರಿನಲ್ಲಿ ನೀರು ಪೂರೈಕೆಯಲ್ಲಿ ಶೇ. 30ರಷ್ಟು ಕಡಿತವಾಗಿದೆ. ಹೊಸ ಬೋರ್‌ವೆಲ್ ಕೊರೆದಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ಆರ್.‌ ಅಶೋಕ್‌ ದೂರಿದರು.

ವಿದ್ಯಾರ್ಥಿ‌ ವೇತನಕ್ಕೆ ಕಲ್ಲು

ಬಿಜೆಪಿ ಸರ್ಕಾರ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯನ್ನು ರೂಪಿಸಿದ್ದು, ಅದನ್ನು ಕಾಂಗ್ರೆಸ್‌ ಸರ್ಕಾರ ರದ್ದು ಮಾಡಿದೆ. ಭಾಗ್ಯಲಕ್ಷ್ಮಿ, ಕಿಸಾನ್‌ ಸಮ್ಮಾನ್‌, ಸ್ವಾಮಿ ವಿವೇಕಾನಂದ ಯುವಶಕ್ತಿ, ಭೂಸಿರಿ, ಶ್ರಮಶಕ್ತಿ, ಬಸ್‌ ಪಾಸ್‌ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ರದ್ದುಪಡಿಸಿದೆ. ಕಾರ್ಮಿಕ ಇಲಾಖೆಯಿಂದ 1-5 ತರಗತಿಯ ಮಕ್ಕಳಿಗೆ 5 ಸಾವಿರ ರೂ. ವಿದ್ಯಾರ್ಥಿವೇತನ ನೀಡುತ್ತಿದ್ದು, ಅದನ್ನು 1,100 ರೂ.ಗೆ ಇಳಿಸಲಾಗಿದೆ. 6-7 ತರಗತಿಯ ಮಕ್ಕಳಿಗೆ 5 ಸಾವಿರ ರೂ. ನೀಡುತ್ತಿದ್ದರೆ 1,250 ರೂ.ಗೆ ಇಳಿಸಲಾಗಿದೆ. 8-9 ತರಗತಿಯ ಮಕ್ಕಳಿಗೆ 12 ಸಾವಿರ ರೂ. ನೀಡುತ್ತಿದ್ದರೆ ಈಗ 3 ಸಾವಿರ ರೂ. ನೀಡಲಾಗುತ್ತಿದೆ. ಎಂಬಿಬಿಎಸ್‌ಗೆ 25 ಸಾವಿರ ರೂ. ನೀಡುತ್ತಿದ್ದರೆ ಈಗ 11 ಸಾವಿರ ರೂ.ಗೆ ಇಳಿಸಲಾಗಿದೆ. ಎಂಟೆಕ್‌ಗೆ 60 ಸಾವಿರ ರೂ. ನೀಡುತ್ತಿದ್ದರೆ ಅದನ್ನು 11 ಸಾವಿರ ರೂ.ಗೆ ತಂದಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Congress Karnataka: ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಮತ್ತೊಂದು ಸರ್ವೆ!

ಕೇಂದ್ರದಿಂದ ಅನ್ಯಾಯವಾಗಿಲ್ಲ

ಕೇಂದ್ರ ಸರ್ಕಾರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ರ ಅಭಿವೃದ್ಧಿಗೆ 5,000 ಕೋಟಿ ರೂ. ದೊರೆತಿದೆ. 2009-14 ರ ಅವಧಿಯಲ್ಲಿ ರೈಲ್ವೆ ಯೋಜನೆಗೆ 835 ಕೋಟಿ ರೂ. ಸಿಕ್ಕರೆ, ಮೋದಿ ಅವಧಿಯಲ್ಲಿ 3,424 ಕೋಟಿ ರೂ. ದೊರೆತಿದೆ. ಕರಾವಳಿ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ 1,441 ಕೋಟಿ ರೂ. ದೊರೆತಿದೆ. ಆದ್ದರಿಂದ ಕಾಂಗ್ರೆಸ್ ಹೇಳುವಂತೆ ಕೇಂದ್ರ ಸರ್ಕಾರದಿಂದ ಅನ್ಯಾಯ ಎನ್ನುವುದು ತಪ್ಪು. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ 3-4 ಪಟ್ಟು ಅಧಿಕ ಅನುದಾನ ದೊರೆತಿದೆ ಎಂದರು.

Exit mobile version